ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಸುರಿದ ನಿರಂತರ ಮಳೆಯ ಪರಿಣಾಮ ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಲೆ ದಿಢೀರ್ ಏರಿಕೆ ಕಂಡಿದೆ. ಮಳೆಗೆ ರೇಷ್ಮೆ ಬೆಳೆ ಹಾಳಾಗಿರುವ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ರೇಷ್ಮೆ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮವಾಗಿ ರೇಷ್ಮೆ ಬೆಳೆಯ ಬೆಲೆ ಹೆಚ್ಚಾಗಿದೆ. ಕಳೆದ ತಿಂಗಳು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ 52 ಹಳ್ಳಿಗಳ 352 ಬೆಳೆಗಾರರು 316 ಎಕರೆ ಜಮೀನಿನಲ್ಲಿ ಬೆಳೆದಿದ್ದ ಹಿಪ್ಪುನೇರಳೆ ಬೆಳೆಗೆ ಹಾನಿಯಾಗಿದೆ.
ಕೋಲಾರ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ರೇಷ್ಮೆ ಉತ್ಪಾದನೆ ಕೂಡಾ ತೀವ್ರ ಕುಸಿತಕಂಡಿದೆ. ನಿರಂತರ ಮಳೆಯಿಂದ ರೈತರು ಬೆಳೆದಂತಹ ರೇಷ್ಮೆ ಬೆಳೆ ಹಾಳಾಗಿರುವ ಪರಿಣಾಮ ಮಾರುಕಟ್ಟೆಯಲ್ಲಿ ರೇಷ್ಮೆಗೆ ಬಂಗಾರದ ಬೆಲೆ ಬಂದಿದೆ. ಕೋಲಾರದ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಮಿಶ್ರತಳಿ ರೇಷ್ಮೆಗೆ ಬೆಲೆ ₹ 700 ಇದ್ದರೆ, ಬೈವೋಲ್ಟೀನ್ ಬೆಲೆಯು ಕೆಜಿಗೆ ₹ 800 ದಾಟಿದೆ. ಉತ್ತಮ ಗುಣಮಟ್ಟದ ರೇಷ್ಮೆ ಬೆಳೆ ಬೆಳೆದಿರುವ ರೈತರಿಗೆ ಸುಗ್ಗಿಕಾಲ ಎನ್ನುವಂತಾಗಿದೆ. ದೇಶದಲ್ಲಿ ಚೀನಾ ರೇಷ್ಮೆಯ ಆಮದು ಸ್ಥಗಿತ ಮಾಡಿರುವುದು ಮಾತ್ರವಲ್ಲದೆ, ನವೆಂಬರ್ನಲ್ಲಿ ಕೋಲಾರ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಹಿಪ್ಪುನೇರಳೆ ಬೆಳೆಯೂ ನಾಶವಾಗಿದೆ. ಇದರ ಪರಿಣಾಮ ರೇಷ್ಮೆ ಉತ್ಪಾದನೆ ಕುಸಿತ ಕಂಡಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ರೈತರು ಬೆಳೆದ ರೇಷ್ಮೆಗೆ ಉತ್ತಮ ದರ ಬಂದಿದೆ.
ಕೋಲಾರ ಜಿಲ್ಲೆಯ 19,700 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆಯಲಾಗುತ್ತಿದೆ. 18,780 ರೈತರು ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಪರಿಣಾಮವಾಗಿ ಕಳೆದೊಂದು ತಿಂಗಳಿನಿಂದ ರೇಷ್ಮೆ ಬೆಲೆಯು ಗಣನೀಯವಾಗಿ ಏರಿಕೆ ಕಂಡಿದೆ. ಬೆಲೆ ಏರಿಕೆಗೆ ಚಳಿಗಾಲವು ಮತ್ತೊಂದು ಪ್ರಮುಖ ಕಾರಣವಾಗಿದೆ. ಚಳಿಗಾಲದಲ್ಲಿ ಹಿಪ್ಪುನೇರಳೆ ಉತ್ಪಾದನೆ ಕುಂಠಿತಗೊಂಡ ಪರಿಣಾಮ ರೇಷ್ಮೆಗೂಡು ಉತ್ಪಾದನೆ ಕಡಿಮೆಯಾಗಿದೆ. ಬೆಲೆ ಏರಿಕೆಗೆ ಚಳಿಗಾಲ ಕೂಡಾ ಒಂದು ಕಾರಣ ಎನ್ನುವಂತಾಗಿದೆ.
5 ಟನ್ ಬೇಡಿಕೆ, 2 ಟನ್ ಉತ್ಪಾದನೆ
ಕೋಲಾರದ ರೇಷ್ಮೆ ಮಾರುಕಟ್ಟೆಯಲ್ಲಿ ಪ್ರತಿ ನಿತ್ಯ 5 ಟನ್ ರೇಷ್ಮೆಗೂಡಿಗೆ ಬೇಡಿಕೆಯಿದೆ, ಆದರೆ, ಚಳಿಗಾಲದ ಜೊತೆಗೆ ಕಳೆದ ತಿಂಗಳ ಮಳೆಯಿಂದಾಗಿ ಹಿಪ್ಪುನೇರಳೆ ಬೆಳೆ ಕೊಳೆತು ಬೆಳೆ ಹಾಳಾಗಿದೆ. ಮಾರುಕಟ್ಟೆಗೆ ನಿತ್ಯ 2 ಟನ್ ಮಾತ್ರ ಪೂರೈಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಪ್ರತಿ ಕೆಜಿಗೆ 700 ರಿಂದ 800 ರೂಪಾಯಿ ಮುಟ್ಟಿದೆ.
ಅಕ್ಟೋಬರ್ ತಿಂಗಳಲ್ಲಿ ಕೋಲಾರ ರೇಷ್ಮೆ ಮಾರುಟಕ್ಟೆಯಲ್ಲಿ ಪ್ರತಿ ಕೆಜಿ ಮಿಶ್ರತಳಿ ರೇಷ್ಮೆಗೆ ಬೆಲೆ ಗರಿಷ್ಠ 500-600 ರೂಪಾಯಿಯಿತ್ತು. ಆದರೆ ನವೆಂಬರ್ ತಿಂಗಳಲ್ಲಿ ಮಳೆಯ ನಂತರ ಒಂದು ಕೆಜಿ ರೇಷ್ಮೆಗೂಡು 700 ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಬೈವೋಲ್ಟಿನ್ 600 ರಿಂದ 800 ರೂಗೆ ಮಾರಾಟವಾಗುತ್ತಿದೆ. ಕೊರೊನಾ ಹಾಗೂ ಚೀನಾದಲ್ಲಿಯೂ ಈ ವರ್ಷ ಹೆಚ್ಚು ಮಳೆ ಸುರಿದಿರುವ ಕಾರಣ ಅಲ್ಲಿಂದ ಬರುವ ರೇಷ್ಮೆಯ ಆಮದು ಸಹ ಸ್ಥಗಿತಗೊಂಡಿದೆ. ಬೆಲೆ ಏರಿಕೆಗೆ ಇದೂ ಒಂದು ಕಾರಣವಾಗಿದೆ. ಚಳಿಗಾಲದಲ್ಲಿ ರೇಷ್ಮೆಗೆ ಸುಣ್ಣಘಟ್ಟು ರೋಗ ಹೆಚ್ಚಾಗಿದ್ದು, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹಿಪ್ಪುನೇರಳೆ ಬೆಳೆ ರೋಗಕ್ಕೆ ತುತ್ತಾಗಿದೆ. ಬೆಲೆ ಏರಿಕೆಗೆ ಮತ್ತೊಂದು ಕಾರಣ ಜಿಲ್ಲೆಯಲ್ಲಿ ಇಳುವರಿ ಪ್ರಮಾಣ ಕಡಿಮೆಯಾಗಿದ್ದು.
ಬೆಲೆ ಏರಿಕೆಯಿಂದ ಎಲ್ಲಾ ರೇಷ್ಮೆ ಬೆಳೆಗಾರರು ಸಂತೋಷ ಪಡುವಂಥ ಸ್ಥಿತಿ ಇಲ್ಲ, ಅದೃಷ್ಟವಿದ್ದವರಿಗೆ ಮಾತ್ರ ಬೆಲೆ ಏರಿಕೆಯ ಲಾಭ ಎನ್ನುವಂತಾಗಿದೆ. ಏಕಕಾಲಕ್ಕೆ ಮಳೆ ಹಾಗೂ ಚಳಿ ಜೊತೆಗೆ ಹಿಪ್ಪುನೇರಳೆಯಲ್ಲಿ ರೋಗಗಳು ಕಾಣಿಸಿಕೊಂಡಿರುವ ಕಾರಣ ರೇಷ್ಮೆಗೂಡು ಉತ್ಪಾದನೆ ಕುಸಿತಕಂಡಿದೆ. ಕೋಲಾರ ಮಾರುಕಟ್ಟೆಗೆ ನಿತ್ಯ 5 ಟನ್ ಗೂಡಿಗೆ ಬೇಡಿಕೆಯಿದ್ದರೂ, 2 ಟನ್ ಮಾತ್ರ ಪೂರೈಕೆಯಾಗುತ್ತಿದೆ ಹಾಗಾಗಿ ರೇಷ್ಮೆಗೆ ಅತಿಹೆಚ್ಚು ಬೆಲೆ ಸಿಗುತ್ತಿದೆ ಎನ್ನುವುದು ರೇಷ್ಮೆ ಇಲಾಖೆ ಉಪನಿರ್ದೇಶಕ ರಾಧಾಕೃಷ್ಣ ಅವರ ಮಾತು.
ವರದಿ: ರಾಜೇಂದ್ರ ಸಿಂಹ
ಇದನ್ನೂ ಓದಿ: ವಾರಣಾಸಿಗೆ ಕರ್ನಾಟಕ ರೇಷ್ಮೆ ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆ; ಉತ್ತರ ಪ್ರದೇಶ ಸರ್ಕಾರದ ಜತೆ ಕರ್ನಾಟಕ ಸರ್ಕಾರ ಮಾತುಕತೆ