ಮೈಸೂರು ಸ್ಯಾಂಡಲ್​ ಸೋಪ್​ ತಯಾರಿಗೂ ಸಿಗುತ್ತಿಲ್ಲ ಶ್ರೀಗಂಧದ ಎಣ್ಣೆ!: ಆಸ್ಟ್ರೇಲಿಯಾ ಮೊರೆ ಹೋದ ತಯಾರಕರು!

|

Updated on: Dec 18, 2023 | 2:35 PM

ನೈಸರ್ಗಿಕ ಶ್ರೀಗಂಧದ ಎಣ್ಣೆಯನ್ನು ಬಳಸುವ ಮೂಲಕ ಸಾಬೂನು ತಯಾರಿಸುವ ಜಾಗತಿಕ ಮಟ್ಟದ ಏಕೈಕ ಸಂಸ್ಥೆ ಕೆಎಸ್​ಡಿಎಲ್ ಎಂದು ಕಂಪನಿ ಹೇಳಿಕೊಂಡಿದೆ. ಇದೀಗ ಸಾಬೂನು ತಯಾರಿಕೆಗೆ ಬೇಕಾಗಿರುವ ಪ್ರಮುಖ ಕಚ್ಚಾ ವಸ್ತುವಾದ ಶ್ರೀಗಂಧದ ಎಣ್ಣೆಗಾಗಿ ಬೇರೆ ದೇಶದ ಮೊರೆ ಹೋಗಬೇಕಾಗಿ ಬಂದಿದೆ.

ಮೈಸೂರು ಸ್ಯಾಂಡಲ್​ ಸೋಪ್​ ತಯಾರಿಗೂ ಸಿಗುತ್ತಿಲ್ಲ ಶ್ರೀಗಂಧದ ಎಣ್ಣೆ!: ಆಸ್ಟ್ರೇಲಿಯಾ ಮೊರೆ ಹೋದ ತಯಾರಕರು!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 18: ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಸ್ಯಾಂಡಲ್​ ಸೋಪ್ (Sandal Soap) ತಯಾರಿಕೆಗೂ ಈಗ ಶ್ರೀಗಂಧದ ಎಣ್ಣೆಯ ಕೊರತೆ ಉಂಟಾಗಿದೆ! ನೈಸರ್ಗಿಕವಾದ ಶ್ರೀಗಂಧದ ಎಣ್ಣೆಯನ್ನು ಬಳಸಿ ಸಾಬೂನು ತಯಾರಿಸುವ ಕೆಎಸ್​ಡಿಎಲ್​ಗೆ ಇದೀಗ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಶ್ರೀಗಂಧದ ಮರಗಳ ಅತಿಯಾದ ಕಡಿಯುವಿಕೆ, ಕಳ್ಳಸಾಗಾಣಿಕೆಯ ಪರಿಣಾಮ ಇದೀಗ ಸಾಕಷ್ಟು ಪ್ರಮಾಣದಲ್ಲಿ ಶ್ರೀಗಂಧದ ಎಣ್ಣೆ ದೊರೆಯದಾಗಿದೆ. ಹೀಗಾಗಿ ಕಂಪನಿಯು ಆಸ್ಟ್ರೇಲಿಯಾದಿಂದ ಶ್ರೀಗಂಧದ ಎಣ್ಣೆ ಆಮದು ಮಾಡಿಕೊಳ್ಳಲು ಆರಂಭಿಸಿದೆ ಎಂದು ವರದಿಯಾಗಿದೆ.

ಕೆಎಸ್​ಡಿಎಲ್ 500 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಉತ್ಪಾದನೆ ಮತ್ತು ಮಾರುಕಟ್ಟೆ ಕಾರ್ಯತಂತ್ರವನ್ನು ಮರುರೂಪಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ನೈಸರ್ಗಿಕ ಶ್ರೀಗಂಧದ ಎಣ್ಣೆಯನ್ನು ಬಳಸುವ ಮೂಲಕ ಸಾಬೂನು ತಯಾರಿಸುವ ಜಾಗತಿಕ ಮಟ್ಟದ ಏಕೈಕ ಸಂಸ್ಥೆ ಕೆಎಸ್​ಡಿಎಲ್ ಎಂದು ಕಂಪನಿ ಹೇಳಿಕೊಂಡಿದೆ. ಇದೀಗ ಸಾಬೂನು ತಯಾರಿಕೆಗೆ ಬೇಕಾಗಿರುವ ಪ್ರಮುಖ ಕಚ್ಚಾ ವಸ್ತುವಾದ ಶ್ರೀಗಂಧದ ಎಣ್ಣೆಗಾಗಿ ಬೇರೆ ದೇಶದ ಮೊರೆ ಹೋಗಬೇಕಾಗಿ ಬಂದಿದೆ. ಕಂಪನಿಯು ಆಸ್ಟ್ರೇಲಿಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕಳೆದ ವರ್ಷ 4,000 ಕೆಜಿ ಶ್ರೀಗಂಧದ ಎಣ್ಣೆ ಆಮದು ಮಾಡಿಕೊಂಡಿದೆ. ಈ ವರ್ಷ 7,000 ಕೆಜಿ ಶ್ರೀಗಂಧದ ಎಣ್ಣೆಯನ್ನು ಆಮದುಮಾಡಿಕೊಳ್ಳಲು ಉದ್ದೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಈ ಮಧ್ಯೆ, ಶ್ರೀಗಂಧದ ಗಿಡಗಳನ್ನು ನೆಟ್ಟು ಬೆಳೆಸುವ ವಿಚಾರವಾಗಿ ರಾಜ್ಯ ಸರ್ಕಾರವು ಅಭಿಯಾನ ಹಮ್ಮಿಕೊಂಡಿದೆ. 700 ರೈತರೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ. ಶ್ರೀಗಂಧವನ್ನು ಬೆಳೆಯಲು 4,000 ಎಕರೆ ಭೂಮಿಯನ್ನು ಗುರುತಿಸಲಾಗಿದೆ.

ಈ ಹಿಂದೆ ಶ್ರೀಗಂಧವನ್ನು ಎಲ್ಲಿ ಬೆಳೆದರೂ ಅದು ರಾಜ್ಯದ ಆಸ್ತಿಯಾಗಿತ್ತು. ಈಗ ಸರ್ಕಾರ ಆ ಷರತ್ತನ್ನು ತೆಗೆದು ರೈತರಿಗೆ ತಮ್ಮ ಹೊಲಗಳಲ್ಲಿ ಗಿಡ ನೆಟ್ಟು ಬೆಳೆಸಲು ಅನುಕೂಲ ಮಾಡಿಕೊಟ್ಟಿದೆ. ಅವರು ಮರಗಳನ್ನು 20 ವರ್ಷಗಳ ಅವಧಿಯ ನಂತರ ಅರಣ್ಯ ಇಲಾಖೆ ಅಥವಾ ಕೆಎಸ್‌ಡಿಎಲ್‌ಗೆ ಮಾರಾಟ ಮಾಡಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: KSDLನಿಂದ ಹೊಸ ಸಾಬೂನು: ಉತ್ತರ ಭಾರತದ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ವಿಸ್ತರಿಸುವ ಗುರಿ

ಕಂಪನಿಯು 2026 ರ ಮಾರ್ಚ್ ವೇಳೆಗೆ 4,000 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ. ಯೋಜನೆಯು ಹೊಸ ಕೊಡುಗೆಗಳೊಂದಿಗೆ ಇತರ ಮಾರುಕಟ್ಟೆಗಳಿಗೆ ವಿಸ್ತರಿಸುವುದು, ದೃಢವಾದ ಕಚ್ಚಾ ವಸ್ತುಗಳ ಪೂರೈಕೆ ಸರಪಳಿ ಮತ್ತು ಉತ್ಪಾದನಾ ನೆಲೆಯನ್ನು ಬೆಳೆಸುವುದು ಮತ್ತು ಹೊಸ ಉತ್ಪನ್ನ ವಿಭಾಗಗಳನ್ನು ಆರಂಭಿಸುವುದನ್ನು ಒಳಗೊಂಡಿದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ