PM Narendra Modi In Karnataka Live News Updates: ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಎಣಿಕೆ ಪ್ರಾರಂಭವಾಗಿದ್ದು, ರಾಜ್ಯ ಬಿಜೆಪಿ ಘಟಕ ಪಕ್ಷ ಸಂಘಟನೆ ಮತ್ತು ಮತಬೇಟೆಯನ್ನು ಜೋರಾಗಿಯೇ ನಡೆಸಿದೆ. ರಾಜ್ಯ ಕೇಸರಿ ಪಡೆಯ ಹೈಕಮಾಂಡ್ ನಾಯಕರು ಒಬ್ಬರ ಹಿಂದೆ ಒಬ್ಬರಂತೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ 2023 ಆರಂಭವಾದಾಗಿನಿಂದ ರಾಜ್ಯಕ್ಕೆ ಈಗಾಗಲೇ 2 ಬಾರಿ ಬಂದಿದ್ದು, ಇದು ಪ್ರಧಾನಿಯ 3ನೇ ಭೇಟಿಯಾಗಿದೆ. ನರೇಂದ್ರ ಮೋದಿ ಅವರು ಇಂದು 6 ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ತುಮಕೂರಿನಲ್ಲಿ ಹೆಚ್ಎಎಲ್ ನೂತನ ಘಟಕ ಮತ್ತು ಇತರೆ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಬೆಂಗಳೂರಿಗೆ ವಾಪಸ್ ಆದ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಧಾನಿಯವರನ್ನು ಬೀಳ್ಕೊಟ್ಟರು. ಪ್ರಧಾನಿ ಮೋದಿ ನಿರ್ಗಮನ ಹಿನ್ನಲೆ ಮೋದಿ ವಿಮಾನ ಟೇಕಾಫ್ವರೆಗೆ ಇತರೆ ವಿಮಾನ ಹಾರಾಟಕ್ಕೆ ಏರ್ ಟ್ರಾಫಿಕ್ ಕಂಟ್ರೋಲರ್ ನಿರ್ಬಂಧ ವಿಧಿಸಿತು.
ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ, ಇದರಿಂದ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯದ ಕೊಡುಗೆ ಸಾಕಷ್ಟಿದೆ ಎಂದು ಕರ್ನಾಟಕದ ಸಿರಿಧಾನ್ಯಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ರಾಗಿ ಮುದ್ದೆ, ರೊಟ್ಟಿ ಸ್ವಾದ ಅರಿತವನೇ ಬಲ್ಲ ಎಂದು ಹೇಳಿದರು.
ಆದಿವಾನಿ, ಮಧ್ಯಮವರ್ಗ, ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರಿಗೂ ಸರ್ವಸ್ಪರ್ಶಿ ಬಜೆಟ್, ಸಮರ್ಥ ಭಾರತ, ಸಂಪನ್ನ ಭಾರತ, ಸಶಕ್ತ ಭಾರತ ನಿರ್ಮಾಣದ ಬಜೆಟ್, ಬಜೆಟ್ನಲ್ಲಿ ಆಧಾರ ಮತ್ತು ಆದಾಯ ಬಗ್ಗೆ ಗಮನಹರಿಸಲಾಗಿದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ಕೇಂದ್ರ ಬಜೆಟ್ ಅನ್ನು ಸಮರ್ಥಿಸಿಕೊಂಡರು. 17 ಸಾವಿರ ಕೋಟಿ ಬಜೆಟ್ನಲ್ಲಿ ಕರ್ನಾಟಕದ ಎಲ್ಲ ಬಡವರಿಗೆ ಮನೆ ಸಿಗಲಿದೆ. ಮಹಿಳೆಯರ ಕಲ್ಯಾಣಕ್ಕಾಗಿ ನಮ್ಮ ಬಿಜೆಪಿ ಸರ್ಕಾರದ ಮೊದಲ ಆದ್ಯತೆ ನೀಡುತ್ತದೆ. ಬಜೆಟ್ನಲ್ಲಿ ಮಹಿಳಾ ಸಮ್ಮಾನ್ ಪತ್ರ ಯೋಜನೆ ಜಾರಿಗೊಳಿಸಿದ್ದೇವೆ. ಮಹಿಳೆಯರ ಠೇವಣಿ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ
ಕಳೆದ 8 ವರ್ಷಗಳಲ್ಲಿ ಎಲ್ಲ ವರ್ಗಗಳಿಗೂ ಸರ್ಕಾರಿ ಯೋಜನೆ ತಲುಪಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಮ್ಮ ಸರ್ಕಾರದಲ್ಲಿ ಕಾರ್ಮಿಕರಿಗೆ ಪೆನ್ಶನ್ ಸಿಕ್ಕಿದೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಸಣ್ಣ ರೈತರಿಗೆ ಅನುಕೂಲ ಆಗುತ್ತಿದೆ. ದೇಶದ ನಿರ್ಮಾಣಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಸಾಕಷ್ಟಿದೆ. ಹೀಗಾಗಿ ಇದೇ ಮೊದಲ ಬಾರಿಗೆ ವಿಶ್ವಕರ್ಮ ಸಮಾಜದವರಿಗೆ ಯೋಜನೆ ರೂಪಿಸಲಾಗಿದೆ. ಕುಂಬಾರ, ಕಮ್ಮಾರ್, ಅಕ್ಕಸಾಲಿಗ, ಶಿಲ್ಪಿಗಳ ಕೌಶಲ್ಯವನ್ನು ಸಮೃದ್ಧಗೊಳಿಸಲಾಗುವುದು ಎಂದರು.
ಈ ಬಾರಿಯ ಬಜೆಟ್ ದೇಶಕ್ಕೆ ಅತಿ ಹೆಚ್ಚು ಶಕ್ತಿ ನೀಡಲಿದ್ದು, ಸಶಕ್ತ ಭಾರತ ನಿರ್ಮಾಣಕ್ಕಾಗಿ ಬಜೆಟ್ ಮಂಡಿಸಲಾಗಿದೆ. ಬಡವರು, ಮಧ್ಯಮ ವರ್ಗದ ಬಜೆಟ್ ಬಗ್ಗೆ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಇಡೀ ವಿಶ್ವದಲ್ಲಿ ಚರ್ಚೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಸರ್ವರ ಹಿತ ಕಾಯುವ ಬಜೆಟ್ ಆಗಿದೆ, ಸರ್ವ ಸುಖಕಾರಿ, ಸರ್ವಸ್ಪರ್ಷಿ ಬಜೆಟ್, ದೇಶದ ಮಹಿಳೆಯರ ಶಕ್ತಿ ಪ್ರಬಲಗೊಳಿಸುವ ಬಜೆಟ್, ಭಾರತದ ಕೃಷಿ ಆಧನಿಕರಣ ಮಾಡುವ ಬಜೆಟ್, ಶ್ರೀಅನ್ನ ಮೂಲಕ ಸಣ್ಣ ರೈತರಿಗೆ ಶಕ್ತಿ ನೀಡುವ ಬಜೆಟ್, ಸ್ವರೋಜ್ಗಾರ್ಗೆ ಬಲ ನೀಡುವ ಬಜೆಟ್, ಕರ್ನಾಟಕದ ಪ್ರತಿ ಕುಟುಂಬಕ್ಕೂ ಯೋಜನೆಗಳ ಲಾಭ ಸಿಗಲಿದೆ ಎಂದು ಹೇಳುವ ಮೂಲಕ ಈ ಬಾರಿ ಬಜೆಟ್ ಟೀಕಿಸಿದ ವಿರೋಧ ಪಕ್ಷಗಳಿಗೆ ಟಾಂಗ್ ಕೊಟ್ಟರು.
ತುಮಕೂರು ದೇಶದ ಅತಿ ದೊಡ್ಡ ಔದ್ಯೋಗಿಕ ಜಿಲ್ಲೆಯಾಗಿ ಬೆಳೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತುಮಕೂರು ಕೈಗಾರಿಕಾ ಟೌನ್ಶಿಪ್ಗೆ ಶಿಲಾನ್ಯಾಸ ನೆರವೇರಿಸಿದ್ದೇವೆ. ಕರ್ನಾಟಕದ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರದಿಂದ ಯೋಜನೆ ಮಾಡಲಾಗಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ನಾವು ಹೆಚ್ಚು ಒತ್ತು ನೀಡುತ್ತಿದ್ದೇವೆ. ಮೂರುವರೆ ವರ್ಷದಲ್ಲಿ 3 ಕೋಟಿ ಕುಟುಂಬಗಳಿಗೆ ನಲ್ಲಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ 3 ಕೋಟಿ ಕುಟುಂಬಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಬಜೆಟ್ನಲ್ಲಿ ಅನುದಾನ ನೀಡಿದ್ದೇವೆ ಎಂದರು.
ತುಮಕೂರು: 2014ರ ಬಳಿಕ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಬದಲಾವಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮುಂದಿನ ದಿನಗಳಲ್ಲಿ 4 ಲಕ್ಷ ಕೋಟಿ ವ್ಯಾಪಾರ ವ್ಯವಹಾರ ನಡೆಯಲಿದೆ. ತುಮಕೂರು ಸುತ್ತಮುತ್ತ ಕೂಡ ವ್ಯಾಪಾರಕ್ಕೆ ಬಹಳ ಅನುಕೂಲವಾಗಲಿದೆ. ಕಳೆದ 8 ವರ್ಷಗಳಲ್ಲಿ ಸರ್ಕಾರಿ ಕಾರ್ಖಾನೆಗಳನ್ನು ಸುಧಾರಣೆಗೊಳಿಸಿದ್ದೇವೆ. ಅದರ ಜೊತೆಗೆ ಖಾಸಗಿ ಕಾರ್ಖಾನೆಗಳಿಗೂ ನಾವು ಹೆಚ್ಚು ಒತ್ತು ನೀಡುತ್ತಿದ್ದೇವೆ. ಕೆಲವರು ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಗಳನ್ನು ಮಾಡುತ್ತಿವೆ. ಸುಳ್ಳು ಎಷ್ಟು ಬಾರಿಯಾದರೂ ಹೇಳಿಕೊಂಡು ತಿರುಗಾಡಲಿ. ಕೊನೆಗೆ ಒಮ್ಮೆ ಸತ್ಯದ ಎದುರು ಸುಳ್ಳು ಸೋಲಲೇಬೇಕು ಎಂದು ವಿಪಕ್ಷ ನಾಯಕರ ಸುಳ್ಳು ಆರೋಪಗಳಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದ ಯುವಕರಿಗೆ ಉದ್ಯೋಗ ನೀಡಲು ಕೋಟ್ಯಂತರ ವೆಚ್ಚದ ಘಟಕ ಲೋಕಾರ್ಪಣೆ ಮಾಡಲಾಗಿದೆ. ಕರ್ನಾಟಕ ಅತಿ ಹೆಚ್ಚು ಯುವಕರ ಟ್ಯಾಲೆಂಟ್ ಹೊಂದಿರುವ ರಾಜ್ಯ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಾರೆ. ಇದಕ್ಕೆ ಇಂದು ಉದ್ಘಾಟನೆಗೊಂಡ ಹೆಚ್ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಉದಾಹರಣೆಯಾಗಿದೆ ಎಂದರು. ಭಾರತೀಯರ ರಕ್ಷಣೆಗೆ ವಿದೇಶಿಯರ ಮೇಲಿನ ಅವಲಂಬನೆ ಕಡಿಮೆ ಆಗಿದೆ. ನಮ್ಮ ಸಾಮರ್ಥ್ಯವನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಭಾರತ ಮುನ್ನುಗ್ಗುತ್ತಿದೆ. ಆತ್ಮನಿರ್ಭರ್ ಭಾರತ ಮೂಲಕ ಹೆಲಿಕಾಪ್ಟರ್ಗಳ ತಯಾರಿಸಲಾಗುತ್ತದೆ ಎಂದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಆತ್ಮೀಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೊದಿ, ಸಿದ್ಧಗಂಗಾ ಮಠ ಹಾಗೂ ಶಿವಕುಮಾರ ಸ್ವಾಮೀಜಿ ಹಾಗೂ ಗುಬ್ಬಿಯ ಚೆನ್ನಬಸವೇಶ್ವರ ಅವರನ್ನು ನೆನಪಿಸಿಕೊಂಡರು. ಕರ್ನಾಟಕದಲ್ಲಿ ತುಮಕೂರು ಜಿಲ್ಲೆಗೆ ವಿಶೇಷ ಸ್ಥಾನವಿದೆ. ತುಮಕೂರಿನ ಸಿದ್ಧಗಂಗಾ ಮಠದ ಆಧ್ಯಾತ್ಮಿಕವಾಗಿ ಪ್ರಸಿದ್ಧಿ ಪಡೆದಿದೆ. ತ್ರಿವಿಧ ದಾಸೋದ ಅನ್ನ, ದಾಸೋಹ, ಜ್ಞಾನ ದಾಸೋಹ ನೀಡುತ್ತಿದೆ ಎಂದರು.
ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರಿನಲ್ಲಿ ಜಲಜೀವನ್ ಅಭಿಯಾನದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು. 430 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವ ಯೋಜನೆ ಇದಾಗಿದ್ದು, ತಿಪಟೂರಿನ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಮತ್ತು ಚಿಕ್ಕನಾಯಕನಹಳ್ಳಿಯ 147 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. 115 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು. ಮೂರು ಹಂತಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಮಾಡುವ ಯೋಜನೆ ಇದಾಗಿದ್ದು, ಇದನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ಪ್ರದೇಶದ ಅಭಿವೃದ್ಧಿ ಮಾಡಲಾಗುತ್ತದೆ. ಸುಮಾರು 8,484 ಎಕರೆ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಅಭಿವೃದ್ಧಿ ಮಾಡುವ ಯೋಜನೆ ಹೊಂದಲಾಗಿದೆ.
ಹೆಚ್ಎಎಲ್ ನೂತನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಕ್ಷಣಾ ವಲಯದಲ್ಲಿ ಈ ಹಿಂದೆ ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ರಫ್ತು ಮಾಡುವ ದೇಶವಾಗಿ ಭಾರತ ಬದಲಾಗಿದೆ. ಈ ಹಿಂದಿನ ಯಾವುದೇ ಪ್ರಧಾನಿ ಮನೆಮನೆಗೆ ನೀರು ಕೊಟ್ಟಿರಲಿಲ್ಲ. ರಾಜ್ಯದಲ್ಲಿ 3 ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರವನ್ನು ಟೀಕಿಸುವವರಿಗೆ ಒಂದು ಉತ್ತರ ಎಂದರು.
ಕರ್ನಾಟಕದ ಇತಿಹಾಸಲದಲ್ಲಿ, ಕಲ್ಪತರು ನಾಡಿನಲ್ಲಿ, ನಡೆದಾಡುವ ದೇವರ ಪುಣ್ಯಭೂಮಿಯಲ್ಲಿ ಔದ್ಯೋಗಿಕ ಕ್ರಾಂತಿಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹೆಚ್ಎಎಲ್ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಸಾಮಾನ್ಯವಾಗಿ ಇಂತಹ ಯೋಜನೆಗಳು ಒಬ್ಬ ಪ್ರಧಾನಿ ಮಂತ್ರಿ ಅಡಿಗಲ್ಲು ಹಾಕಿದರೆ ಅದರ ಉದ್ಘಾಟನೆ ಮತ್ತೊಬ್ಬ ಪ್ರಧಾನಿ ಬಂದಾಗ ಆಗುತ್ತದೆ. ಆದರೆ ಪ್ರಧಾನಿ ಮೋದಿ ಅವರು 2016ರಲ್ಲಿ ಶಿಲನ್ಯಾಸ ನೆರೆವೇರಿಸಿದ್ದರು. ಈ ಯೋಜನೆ ಕಾಮಗಾರಿಗೆ ವೇಗವನ್ನು ನೀಡಿದರು. ಅದರಂತೆ ಇಂದು ಅವರೇ ಉದ್ಘಾಟನೆ ನರೆವೇರಿಸಿದ್ದಾರೆ ಎಂದರು. ಇಂತಹ ಸಂಸ್ಥೆಯ ಘಟಕ ತುಮಕೂರಿನಲ್ಲಿ ಸ್ಥಾಪನೆ ಹೆಮ್ಮೆಯ ವಿಚಾರ. HAL ಹೆಲಿಕಾಪ್ಟರ್ ಕಾರ್ಖಾನೆ ಘಟಕ ಮೋದಿ ಉದ್ಘಾಟಿಸಿದ್ದು ಸೌಭಾಗ್ಯ. ಈ ಹಿಂದೆ ಅವರೇ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದರು, ಈಗ ಅವರಿಂದಲೇ ಉದ್ಘಾಟನೆ ಮಾಡಿದ್ದು ನಮ್ಮ ಹೆಮ್ಮೆ ಎಂದು ಮೋದಿ ಅವರನ್ನು ಹಾಡಿಹೊಗಳಿದರು.
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿಲನ್ಯಾಸ ನೆರವೇರಿಸಿದ್ದ ಹೆಚ್ಎಎಲ್ ನೂತನ ಘಟಕ ಇಂದು ಉದ್ಘಾನೆಗೊಂಡಿದ್ದು, ಇದರಿಂದಾಗಿ ಸೇನೆಗೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕರ್ನಾಟಕ ಅಂದ್ರೆ ಶಾಂತಿ ಮತ್ತು ಅಭಿವೃದ್ಧಿ, ವಿಜ್ಞಾನ ತಂತ್ರಜ್ಞಾನ. ಇಂದು ಹೊಸ ಸೂರ್ಯ ಕರ್ನಾಟಕದಲ್ಲಿ ಉದಾಯಿಸಿದ್ದಾನೆ. ಕರ್ನಾಟಕ ಉತ್ಪನ್ನಗಳ ತಯಾರಿಕೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ ಎಂದರು.
ಇದೀಗ ಉದ್ಘಾಟನೆಗೊಂಡ ತುಮಕೂರಿ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ನಿರ್ಮಾಣವಾಗಿರುವ ಏಷ್ಯದ ಅತಿದೊಡ್ಡ ಹೆಚ್ಎಎಲ್ ಘಟಕವನ್ನು 2750 ಕೋಟಿ ರೂಪಾಯಿ ವೆಚ್ಚದಲ್ಲಿ 615 ಎಕರೆಯಲ್ಲಿ ನಿರ್ಮಾಣ ಮಾಡಲಾಗಿದೆ. ಏಷ್ಯದ ಅತಿ ದೊಡ್ಡ ಕಾರ್ಖಾನೆ ಇದಾಗಿದ್ದು, ವರ್ಷಕ್ಕೆ 30 ಹೆಲಿಕಾಪ್ಟರ್ ನಿರ್ಮಾಣ ಮಾಡುವ ಗುರಿ ಹೊಂದಿದೆ.
ತುಮಕೂರಿ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ನಿರ್ಮಾಣವಾಗಿರುವ ಏಷ್ಯದ ಅತಿದೊಡ್ಡ ಹೆಚ್ಎಎಲ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. 2016ರಲ್ಲಿ ಮೋದಿ ಅವರೇ ಇದಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಇದೀಗ ಅವರೇ ಉದ್ಘಾಟನೆ ಮಾಡಿದ್ದು ವಿಶೇಷ.
ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ತಲುಪಿದರು. ಈ ವೇಳೆ ಮೋದಿ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥ್, ಕೇಂದ್ರ ಸಚಿವ ನಾರಾಯಣಸ್ವಾಮಿ, ಎಸಿಎಸ್ ರಾಕೇಶ್ ಸಿಂಗ್, ಎಡಿಜಿಪಿ ಅಲೋಕ್ ಕುಮಾರ್ ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಮೊಬಿಲಿಟಿ ರ್ಯಾಲಿಗೆ ಚಾಲನೆ ನೀಡಿದರು.
Karnataka | Prime Minister Narendra Modi flags off Green Mobility Rally, in Bengaluru. He inaugurated the India Energy Week 2023 in the city today. pic.twitter.com/6vJRPR9swh
— ANI (@ANI) February 6, 2023
ಭಾರತದಲ್ಲಿ ಇಂಧನ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಗಮನಿಸಿ, ಬಳಸಿಕೊಳ್ಳಿ. ನಿಮ್ಮ ಹೂಡಿಕೆಗೆ ಭಾರತವು ಅತ್ಯಂತ ಪ್ರಶಸ್ತ ತಾಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಪ್ಲಾಸ್ಟಿಕ್ ಬಾಟಲಿಗಳಿಂದ ನಾವು ರೂಪಿಸಿರುವ ಸಮವಸ್ತ್ರಗಳು ಯಾವುದೇ ರೀತಿಯಲ್ಲಿ ಗುಣಮಟ್ಟ ಅಥವಾ ಫ್ಯಾಷನ್ ವಿಚಾರದಲ್ಲಿ ಕಡಿಮೆಯಾಗಿಲ್ಲ. 10 ಕೋಟಿ ಪ್ಲಾಸ್ಟಿಕ್ ಬಾಟಲಿಗಳನ್ನು ಹೀಗೆ ಮರುಬಳಕೆ ಮಾಡಲಾಗುವುದು. ಇದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ -ಮೋದಿ
ಮುಂದಿನ ಕೆಲವೇ ದಿನಗಳಲ್ಲಿ ಎಲ್ಲ ಕುಟುಂಬಗಳಲ್ಲಿ ಸೋಲಾರ್ ಒಲೆಗಳು ಬಳಕೆಗೆ ಬರಲಿವೆ. ಇದರಿಂದ ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ. -ಮೋದಿ
ಇ-20 ಗುರಿಗಳನ್ನು ಇಂದು ಪರಿಚಯಿಸಲಾಗುತ್ತಿದೆ. ಆರಂಭದಲ್ಲಿ ಇದು ಕೆಲವೇ ನಗರಗಳಲ್ಲಿ ಮಾತ್ರವೇ ಇರುತ್ತದೆ. ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ಇದನ್ನು ವಿಸ್ತರಿಸಲಾಗುತ್ತದೆ. ವಿದ್ಯುತ್ ಉತ್ಪಾದನೆ, ವಿತರಣೆ, ಬಳಕೆಯಲ್ಲಿ ಉಳಿತಾಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ಸಿಗಲಿದೆ. ಸೋಲಾರ್ ಶಕ್ತಿಯಿಂದ ಮನೆ, ಗ್ರಾಮ, ಏರ್ಪೋರ್ಟ್, ಕೃಷಿ ಮುನ್ನಡೆಯುತ್ತಿರುವ ಹಲವು ಉದಾಹರಣೆಗಳಿವೆ -ಮೋದಿ
ಭಾರತದಲ್ಲಿ ಸೌರಶಕ್ತಿ ಉತ್ಪಾದನೆ ಶೇ 20ರಷ್ಟು ಹೆಚ್ಚಾಗಿದೆ. ಪವನ ವಿದ್ಯುತ್ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ. ಈ ದಶಕದ ಅಂತ್ಯದಲ್ಲಿ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಅರ್ಧದಷ್ಟನ್ನು ಪರಿಸರಸ್ನೇಹಿ ಮೂಲಗಳಿಂದಲೂ ಉತ್ಪಾದಿಸುವ ಗುರಿ ಇರಿಸಿಕೊಂಡಿದ್ದೇವೆ. -ಮೋದಿ
ಇವಿ ಬ್ಯಾಟರಿಗಳ ದರ ಕಡಿಮೆ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ. 50 ಗಿಗಾವ್ಯಾಟ್ಗಳಷ್ಟು ಸಾಮರ್ಥ್ಯದ ಅತ್ಯಾಧುನಿಕ ಕೆಮಿಸ್ಟ್ರಿ ಸೆಲ್ ತಯಾರಿಕೆಗಾಗಿ ವಿಶೇಷ ಪ್ರೋತ್ಸಾಹ ನೀಡಿದ್ದೇವೆ. ದೇಶದಲ್ಲಿ ಬ್ಯಾಟರಿ ಉತ್ಪಾದನೆಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗಿದೆ. -ಮೋದಿ
ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. 2030ರ ಹೊತ್ತಿಗೆ 4 ಎಂಎಂಟಿ ಯಷ್ಟು ಗ್ರೀನ್ ಹೈಡ್ರೋಜನ್ ಉತ್ಪಾದಿಸುತ್ತೇವೆ. ಇದಕ್ಕಾಗಿ 8 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದ್ದೇವೆ. -ಮೋದಿ
ನಮ್ಮ ಪೆಟ್ರೋಲಿಯಂ ಸಂಸ್ಕರಣಾಗಾರಗಳ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ. ಇಲ್ಲಿ ಸ್ಟಾರ್ಟಪ್ಗಳಿಗೆ ಹೆಚ್ಚು ಉತ್ತೇಜನವಿದೆ. ನೀವು ಇಲ್ಲಿನ ಇಂಧನ ಕ್ಷೇತ್ರದ ವಿಕಸನದ ಸಹಭಾಗಿಗಳಾಗಬಹುದು. ನೈಸರ್ಗಿಕ ಅನಿಲ ಕ್ಷೇತ್ರದಲ್ಲಿಯೂ ಸುಧಾರಣೆಗೆ ಸತತ ಪ್ರಯತ್ನ ನಡೆಯುತ್ತಿದೆ. ನಮ್ಮ ‘ಒನ್ ನೇಷನ್, ಒನ್ ಗ್ರಿಡ್’ ಆಶಯ ಸಾಕಾರಗೊಳಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ. ಎನರ್ಜಿ ಟರ್ಮಿನಲ್ಗಳ ಸಾಮರ್ಥ್ಯ ವೃದ್ಧಿಸಲಾಗುತ್ತಿದೆ. – ಮೋದಿ
ಭಾರತದಲ್ಲಿ ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ವಿಶ್ವದ ಒಟ್ಟು ಬೇಡಿಕೆಯಲ್ಲಿ ಶೇ 5ರಷ್ಟು ಇದೆ. ಇದು ಮುಂದಿನ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಭಾರತದ ಅಭಿವೃದ್ಧಿಗೆ 4 ಮುಖ್ಯ ಸ್ತಂಭಗಳಿವೆ.
1) ದೇಶೀಯ ಉತ್ಪಾದನೆಯ ಹೆಚ್ಚಳ.
2) ಪೂರೈಕೆಯಲ್ಲಿ ವೈವಿಧ್ಯ.
3) ಜೈವಿಕ ಇಂಧನ, ಸೋಲಾರ್ನಂಥ ಪರ್ಯಾಯ ಇಂಧನ ಬಳಕೆಯಲ್ಲಿ ವೃದ್ಧಿ.
4) ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ವಾಹನಗಳ ಬಳಕೆಗೆ ಒತ್ತು. ಈ ನಾಲ್ಕೂ ಅಂಶಗಳಲ್ಲಿ ಭಾರತ ವೇಗವಾಗಿ ಕೆಲಸ ಮಾಡುತ್ತಿದೆ – ಮೋದಿ
ವಿಶ್ವದಲ್ಲಿಯೇ ಅತಿಹೆಚ್ಚು ಆಕಾಂಕ್ಷೆ ಹೊಂದಿರುವವರ ನಾಡಾಗಿ ನಮ್ಮ ಭಾರತ ವಿಕಸಿತಗೊಳ್ಳುತ್ತಿದೆ. ಭಾರತದಲ್ಲಿ ಇಂಧನದ ಬೇಡಿಕೆ ಹೆಚ್ಚಾಗುತ್ತಿದೆ. ಅಭಿವೃದ್ಧಿಯ ವೇಗ ಗಮನಿಸಿದರೆ ಬರುವ ವರ್ಷಗಳಲ್ಲಿ ಭಾರತದಲ್ಲಿ ಹಲವು ಹೊಸ ನಗರಗಳು ರೂಪುಗೊಳ್ಳಲಿವೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು ಇದೇ ಮಾತು ಹೇಳಿದೆ. ಇದೇ ದಶಕದಲ್ಲಿ ಭಾರತದಲ್ಲಿ ಇಂಧನದ ಬೇಡಿಕೆಯು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಲಿದೆ. ಹೀಗಾಗಿಯೇ ನಿಮ್ಮಂಥ ಹೂಡಿಕೆದಾರರು ಹಾಗೂ ಸಹವರ್ತಿಗಳಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ. -ಮೋದಿ
ಇಂದು ದೇಶದಲ್ಲಿ ಕೋಟ್ಯಂತರ ಜನರ ಬದುಕಿನ ರೀತಿ ಬದಲಾಗಿದೆ. ಹಳ್ಳಿಹಳ್ಳಿಗಳಲ್ಲಿ ಇಂಟರ್ನೆಟ್ ತಲುಪಿದೆ. ಇದಕ್ಕಾಗಿ 5 ಲಕ್ಷ ಕಿಮೀಗೂ ಹೆಚ್ಚು ಉದ್ದದಷ್ಟು ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. ಬ್ರಾಡ್ಬಾಂಡ್ ಬಳಕೆದಾರರ ಸಂಖ್ಯೆ 13 ಪಟ್ಟು ಹೆಚ್ಚಾಗಿದೆ. ಇಂಟರ್ನೆಟ್ ಬಳಕೆ ಪ್ರಮಾಣ 3 ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಬಡವರ್ಗದಲ್ಲಿದ್ದವರು ಮಧ್ಯಮವರ್ಗಕ್ಕೆ ಬಂದಿದ್ದಾರೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ಮುಂಚೂಣಿಗೆ ಬಂದಿದೆ. -ಮೋದಿ
ಭಾರತದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಸ್ಥಿರ ಸರ್ಕಾರವಿದೆ. ಹೀಗಾಗಿಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಪೂರಕವಾಗುವ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮಹತ್ವದ ಬದಲಾವಣೆಗಳು ಕಂಡು ಬಂದಿವೆ. ಅವುಗಳ ಫಲಾನುಭವಿಗಳ ಸಂಖ್ಯೆಯು ಹಲವು ಅಭಿವೃದ್ಧಿ ಹೊಂದಿದ ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. -ಮೋದಿ
ಐಎಂಎಫ್ 2023ರ ಪ್ರಗತಿಯ ಮುನ್ಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ. ಮಹಾಮಾರಿ ಹಾಗೂ ಯುದ್ಧದ ಪ್ರಭಾವದ ನಡುವೆಯೂ ಭಾರತವು ಜಾಗತಿಕ ಆಶಾಕಿರಣ (ಬ್ರೈಟ್ ಸ್ಪಾಟ್) ಆಗಿದೆ. ಆಂತರಿಕ ಸತ್ವದಿಂದಾಗಿ ಭಾರತವು ಬಾಹ್ಯ ಒತ್ತಡಗಳನ್ನು ತಡೆದುಕೊಂಡಿದೆ. -ಮೋದಿ
ಇದು ಭಾರತದಲ್ಲಿ ಜಿ-20 ಅಧ್ಯಕ್ಷತೆ ದೊರೆತ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮ. ತಂತ್ರಜ್ಞಾನದ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇಂಧನ ಕ್ಷೇತ್ರಕ್ಕೆ ಇಂದಿನ ದಿನಮಾನಗಳಲ್ಲಿ ಬಹಳ ಮಹತ್ವವಿದೆ. ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ಇಂದು ವಿಶ್ವದ ಅತ್ಯಂತ ಮುಂದುರವರಿದ ಶಕ್ತಿಗಳ ಪೈಕಿ ಒಂದಾಗಿದೆ. -ಮೋದಿ
ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ವಿಷಾದ ವ್ಯಕ್ತಪಡಿಸಿದರು. ಭೂಕಂಪ ಸಂತ್ರಸ್ತರಿಗೆ ಭಾರತವು ಸಾಧ್ಯವಾಗುವ ಎಲ್ಲ ರೀತಿಯಲ್ಲಿಯೂ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.
ಅಡುಗೆಮನೆಗಳಲ್ಲಿ ಸುಲಭವಾಗಿ ಬಳಸಲು ಸಾಧ್ಯವಿರುವ ವಿಶಿಷ್ಟ ಟ್ವಿನ್ ಕುಕ್ಟಾಪ್ ಸೋಲಾರ್ ಕುಕ್ಕರ್ ಒಂದನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಇಂಡಿಯನ್ ಆಯಿಲ್ ಈ ಸೋಲಾರ್ ಕುಕ್ಕರ್ಗಳನ್ನು ಅಳವಡಿಸಿದೆ.
ಇಂಡಿಯನ್ ಆಯಿಲ್ನ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತ್ಯಾಜ್ಯ ಪೆಟ್ ಬಾಟಲಿಗಳಿಂದ ತಯಾರಿಸಿದ ಪೇಟ ಮತ್ತು ಹಾಫ್ ಕೋಟ್ ನೀಡಿದರು. ತ್ಯಾಜ್ಯ ಪೆಟ್ ಬಾಟಲಿಗಳಿಂದ ಸಶಸ್ತ್ರಪಡೆಗಳಿಗೆ ಸಮವಸ್ತ್ರ ರೂಪಿಸುವ ಯೋಜನೆಯನ್ನು ಇಂಡಿಯನ್ ಆಯಿಲ್ ರೂಪಿಸಿ, ಅನುಷ್ಠಾನಗೊಳಿಸುತ್ತಿದೆ.
ಪರಿಸರ ಇಂಧನದ ಹಲವು ಸಾಧ್ಯತೆಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರವನ್ನು ಸಮಾವೇಶದಲ್ಲಿ ಪ್ರದರ್ಶಿಸಲಾಯಿತು.
Watch LIVE ?
PM @narendramodi inaugurates India Energy Week 2023 in Bengaluru, Karnataka
Watch on #PIB‘s?
Facebook: https://t.co/ykJcYlNrjj
YouTube: https://t.co/59TgSKFxWHhttps://t.co/IzHu6s688u— PIB India (@PIB_India) February 6, 2023
ಕರ್ನಾಟಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಮಾದರಿಯ ವಾಹನಗಳು ಪರಿಚಯವಾಗಲಿದೆ. ಎಥೆನಾಲ್ ಬೆರೆತ ಇಂಧನದ ವಿಚಾರದಲ್ಲಿ ಕರ್ನಾಟಕ ಮಹತ್ವದ ಸಾಧನೆ ಮಾಡಿದೆ. ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಅಭಿವೃದ್ಧಿ ಇಂಧನ ಅತ್ಯಗತ್ಯ. ಪ್ರಧಾನಿ ಮೋದಿ ಅವರು ಇಂಧನದಲ್ಲಿ ಬದಲಾವಣೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅತಿಹೆಚ್ಚು ಶಕ್ತಿ, ಅತಿ ಕಡಿಮೆ ಮಾಲಿನ್ಯ ಎನ್ನುವ ಮೋದಿ ಕನಸನ್ನು ಕರ್ನಾಟಕ ನನಸು ಮಾಡುತ್ತದೆ ಎಂದು ಭರವಸೆ ನೀಡಿದರು.
Hon’ble Prime Minister Shri @NarendraModi ji Inaugurates “India Energy Week – 2023”, Bengaluru. https://t.co/KODMx1hBRB
— Basavaraj S Bommai (@BSBommai) February 6, 2023
ಕರ್ನಾಟಕವು ಅತಿಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದನಿಸುತ್ತಿದೆ. 15 ಸಾವಿರ ಮೆಗಾವಾಟ್ ವಿದ್ಯುತ್ ಪರಿಸರ ಸ್ನೇಹಿ ವಿಧಾನಗಳಲ್ಲಿ ಉತ್ಪಾದನೆಯಾಗುತ್ತಿದೆ. ಒಟ್ಟು ವಿದ್ಯುತ್ ಉತ್ಪಾದನೆಯ ಅರ್ಧದಷ್ಟು ಪರಿಸರ ಸ್ನೇಹಿ ವಿಧಾನದಲ್ಲಿಯೇ ಉತ್ಪಾದನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸರ ಇಂಧನಗಳ ಹೊಸ ಅವತಾರಗಳಿಗೆ ಕರ್ನಾಟಕ ತೆರೆದುಕೊಳ್ಳಲಿದೆ. ಹೈಡ್ರೋಜನ್ ಮತ್ತು ಅಮೋನಿಯಾ ಉತ್ಪಾದನೆಗೆ ವಿಶೇಷ ಒತ್ತು ಸಿಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಕೊವಿಡ್ ನಂತರ ಬದುಕಿನ ಹಲವು ಮುಖಗಳು ಬದಲಾಗಿವೆ. ಇದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಹೊಸ ಗುರಿಗಳನ್ನು ಕೊಟ್ಟಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರು ಮೋದಿ. ‘ನೆಟ್ ಝೀರೊ’ ಎನ್ನುವುದು ಇಡೀ ಜಗತ್ತಿನ ಎದುರು ಇರುವ ದೊಡ್ಡ ಸವಾಲು. 2047ಕ್ಕೆ ಭಾರತವು ಈ ಗುರಿ ಮುಟ್ಟಬೇಕು ಎಂದು ಪ್ರಧಾನಿ ಸೂಚಿಸಿದ್ದರು. ದೇಶವು ಈ ಗುರಿ ಮುಟ್ಟಲು ಕರ್ನಾಟಕವು ತನ್ನ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪರಿಸರ ಮಾಲಿನ್ಯ ತಗ್ಗಿಸುವುದನ್ನು ನಮ್ಮ ಸರ್ಕಾರ ಆದ್ಯತೆಯಾಗಿ ಪರಿಗಣಿಸಿದೆ. ಹಸಿರು ಇಂಧನದ ಬಗ್ಗೆ ಬಜೆಟ್ ಭಾಷಣದಲ್ಲಿಯೂ ಪ್ರಸ್ತಾಪಿಸಲಾಗಿತ್ತು. ದೊಡ್ಡ ಮೊತ್ತದ ಅನುದಾನವನ್ನು ಈ ಕ್ಷೇತ್ರಕ್ಕೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಶೂನ್ಯ ಇಂಗಾಲ ಹೊರಸೂಸುವಿಕೆ ಆಶಯ ಸಾಕಾರಗೊಳಿಸಲು ನಾವು ಶ್ರಮಿಸಬೇಕಿದೆ. ಅದು ನಮ್ಮ ಆದ್ಯತೆಯಾಗಬೇಕು ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ತಮ್ಮ ಸ್ವಾಗತ ಭಾಷಣ ಮುಗಿಸಿದರು.
ಜೈವಿಕ ಇಂಧನಕ್ಕೆ ಭಾರತ ಸರ್ಕಾರವು ಉತ್ತೇಜನ ನೀಡುತ್ತಿದೆ. ಕೆಲವು ಪೆಟ್ರೋಲ್ ಪಂಪ್ಗಳಲ್ಲಿ ಜೈವಿಕ ಇಂಧನ ಬೆರೆತ ಪೆಟ್ರೋಲಿಯಂ ಉತ್ಪನ್ನಗಳು ಲಭ್ಯವಾಗಲಿವೆ. ಇಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಹೊಸ ತಂತ್ರಜ್ಞಾನದ ಮೂಲಕ ನಿರ್ಮಾಣವಾದ ಪರಿಸರ ಸ್ನೇಹಿ ವಾಹನಗಳಿಗೂ ಪ್ರಧಾನಿ ಇಂದು ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಇಂಧನ ಸಚಿವರು ಹೇಳಿದರು.
ಸೂರ್ಯನ ಬೆಳಕಿನಿಂದ ಅಡುಗೆ ಮಾಡುವ ಸೋಲಾರ್ ಕುಕ್ಟಾಪ್ಗಳ ಬಳಕೆಗೆ ಇಂದು ಚಾಲನೆ ಸಿಗಲಿದೆ. ಈ ತಂತ್ರಜ್ಞಾನವನ್ನು ಭಾರತ ಹಂಚಿಕೊಳ್ಳಲಿದೆ. ಇದನ್ನು ಯಥಾವತ್ತಾಗಿ ಏಷ್ಯಾದ ಇತರ ದೇಶಗಳೂ ಬಳಸಬಹುದಾಗಿದೆ. ತ್ಯಾಜ್ಯ ಪೆಟ್ ಬಾಟಲಿಗಳಿಂದ ಹಲವು ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಪರಿಸರ ಮಾಲಿನ್ಯ ತಗ್ಗಿಸಲು ಇದು ನೆರವಾಗಲಿದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದರು.
ಭಾರತದಲ್ಲಿ ಎಲ್ಲರಿಗೂ ಕೈಗೆಡುಕುವ ದರದಲ್ಲಿ ಇಂಧನ ಒದಗುವಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 2030ರ ಒಳಗೆ ಭಾರತದಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಪರಿಶ್ರಮ ಹಾಕುತ್ತಿದೆ. ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸರ ಸ್ನೇಹಿ ಇಂಧನಕ್ಕೆ ನಾವು ಆದ್ಯತೆ ನೀಡಿದ್ದೇವೆ. ಆದರೆ ಅಭಿವೃದ್ಧಿಯ ವಿಚಾರದಲ್ಲಿ ರಾಜಿಯಾಗುತ್ತಿಲ್ಲ ಎಂದು ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ವಿವರಿಸಿದರು.
ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದರು. ವಿವಿಧ ದೇಶಗಳ ಇಂಧನ ಸಚಿವರು, ಹಲವು ಜಾಗತಿಕ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಪರಿಸರ ಸ್ನೇಹಿ ಇಂಧನ ಬಳಕೆಗೆ ಹೊಸ ವೇಗ ನೀಡುವ ಪ್ರಯತ್ನ ಇದು ಎಂದು ಸಚಿವರು ಹೇಳಿದರು. ಅಮೃತ ಕಾಲ ಮತ್ತು ವಸುಧೈವ ಕುಟುಂಬಕಂ ಆಶಯಗಳನ್ನು ಮತ್ತೊಮ್ಮೆ ವಿವರಿಸಿದರು.
ಮಾದಾವರದಲ್ಲಿರುವ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಧನ ಸಪ್ತಾಹ ಕಾರ್ಯಕ್ರಮದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಗೆಹ್ಲೋಟ್ ಆಗಮಿಸಿದರು. ಕಾರ್ಯಕ್ರಮದಲ್ಲಿ ಹಲವು ದೇಶಗಳ ಇಂಧನ ಸಚಿವರು ಪಾಲ್ಗೊಂಡಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹೆಚ್ಎಎಲ್ನಿಂದ ಬೆಂಗಳೂರು ಉತ್ತರ ತಾಲೂಕಿನ ಮಾದಾವರ ಬಳಿ ಇರುವ ಬಿಐಇಸಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನಕ್ಕೆ ಆಗಮಿಸಿದರು. ಪ್ರಧಾನಿ ಮೋದಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ಗೆ ಆಗಮಿಸಿದ್ದಾರೆ. HAL ಏರ್‌ಪೋರ್ಟ್‌ನಲ್ಲಿ ಮೋದಿಗೆ ಸಚಿವ ಭೈರತಿ ಬಸವರಾಜ, ಸಂಸದ ಪಿ.ಸಿ.ಮೋಹನ್, ಶಾಸಕ ಅರವಿಂದ ಲಿಂಬಾವಳಿ, ಸಿಎಸ್ ವಂದಿತಾ ಶರ್ಮಾ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ಬೆಂಗಳೂರು ನಗರ ಡಿಸಿ ದಯಾನಂದ ಮತ್ತು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ವಾಗತಿಸಿದರು.
ತುಮಕೂರು: ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಹಾಗೂ ಗಣ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಉಪಹಾರಕ್ಕೆ ಚಿತ್ರಾನ್ನ ವ್ಯವಸ್ಥೆ ಮಾಡಲಾಗಿದೆ. 11 ಗಂಟೆ ನಂತರ ಊಟಕ್ಕೆ ಪಲಾವ್, ಮೊಸರು ಬಜ್ಜಿ, ಪಾಯಸ ನೀಡಲಾಗುವುದು. ಸಂಜೆಯವರೆಗೂ ಊಟದ ವ್ಯವಸ್ಥೆ ಇರುತ್ತದೆ. ಊಟಕ್ಕೆಂದು ಮಾರಶೆಟ್ಟಿಹಳ್ಳಿ ಪಾರ್ಕಿಂಗ್ ಬಳಿ 64 ಕೌಂಟರ್, ಸೋಪನಹಳ್ಳಿ ಪಾರ್ಕಿಂಗ್ ಬಳಿ 24 ಕೌಂಟರ್ ತೆರೆಯಲಾಗಿದೆ. ಒಟ್ಟು 300 ಬಾಣಸಿಗರಿಂದ ಅಡುಗೆ ತಯಾರಿಸಲಾಗಿದೆ.
ತುಮಕೂರು: ಹೆಚ್ಎಎಲ್ ಘಟಕದ ಆವರಣದಲ್ಲಿ ಮೋದಿ ಕುಳಿತುಕೊಳ್ಳುವ ವೇದಿಕೆ 10 ಅಡಿ ಎತ್ತರದಲ್ಲಿದೆ. ಭದ್ರತಾ ದೃಷ್ಟಿಯಿಂದ ವೇದಿಕಯಿಂದ 80 ಅಡಿ ದೂರದಷ್ಟು ಡಿ ಜೋನ್ ನಿರ್ಮಾಣವಾಗಿದೆ. ಡಿ ಜೋನ್ ನಂತರ ಮಾಧ್ಯಮ ಹಾಗೂ ವಿವಿಐಪಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. 1500 ಜನ ವಿಐಪಿ, ವಿವಿಐಪಿ ಕುಳಿತುಕೊಳ್ಳಲು ವಿಶೇಷ ಆಹಾನ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಆಸನದ ವ್ಯವಸ್ಥೆ ನಂತರ ಜನ ಸಾಮಾನ್ಯರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆಯ ಎಡ- ಬಲ ಭಾಗದಲ್ಲೂ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರತಿ 2 ಸಾವಿರ ಜನರಿಗೆ ನೋಡಲು ಅನುಕೂಲವಾಗುವಂತೆ ಎಲ್.ಇಡಿ ವಾಲ್ ಅಳವಡಿಸಲಾಗಿದೆ. ಒಟ್ಟು 60 ಎಲ್.ಇ.ಡಿ ವಾಲ್‌ಗಳ ಆಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಐದು ಎಂಟ್ರಿ ಮಾರ್ಗಗಳಿವೆ.
ತುಮಕೂರು: ನೂತನ ಹೆಚ್ಎಎಲ್ ತಯಾರಿಕಾ ಘಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಗುಬ್ಬಿ ತಾಲೂಕಿನಿಂದ ಕೆಬಿ ಕ್ರಾಸ್, ಕೆಬಿ ಕ್ರಾಸ್ ನಿಂದ ಗುಬ್ಬಿ ಕಡೆಗೆ ಸಂಚರಿಸುವ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಇಂದು ಬೆಳಗ್ಗೆ 6 ರಿಂದ ಸಂಜೆ 8 ಗಂಟೆ ವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಇರಲಿದೆ.
ತುಮಕೂರು: ಪ್ರಧಾನಿ ಮೋದಿಯ ತುಮಕೂರು ಕಾರ್ಯಕ್ರಮಕ್ಕೆ ಬಾರಿ ಭದ್ರತೆ ಕೈಗೊಳ್ಳಲಾಗಿದೆ. ಎಡಿಜಿಪಿ, ಐಜಿಪಿ, 7 ಎಸ್‌ಪಿ, 20 ಡಿವೈಎಸ್‌ಪಿ, 55 ಪೊಲೀಸ್ ಇನ್ಸ್ಪೆಕ್ಟರ್, 1250 ಪೊಲೀಸ್ ಸಿಬ್ಬಂದಿ, 400 ಹೋಮ್ ಗಾರ್ಡ್, 150 ಸಬ್ ಇನ್ಸ್ಪೆಕ್ಟರ್, 14 ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿ, 12 KSRP ತುಕಡಿ 3 ಸಾವಿರ ಪೊಲೀಸರು ಸೇರಿದಂತೆ ಎಎನ್‌ಎಫ್ ಗರುಡ ಪಡೆ ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. 500 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರ ಆಳವಡಿಸಲಾಗಿದೆ.
ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ತುಮಕೂರು ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ರಾಜ್ಯ ಬಿಜೆಪಿ ಘಟಕ ಕೆಎಸ್ಆರ್ಟಿಸಿಯ 300ಕ್ಕೂ ಹೆಚ್ಚು ಬಸ್ಗಳನ್ನು ಬುಕ್ ಮಾಡಿದೆ. ಕಾರ್ಯಕ್ರಮದಲ್ಲಿ ಸುಮಾರು 80 ರಿಂದ 1 ಲಕ್ಷ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ತುಮಕೂರು ಜಿಲ್ಲೆಯಲ್ಲಿ ಬಸ್ ವ್ಯತ್ಯಯವಾಗು ಸಾಧ್ಯತೆ ಇದೆ.
ಜಿಲ್ಲೆಯ ಡಿಪೋಗಳಿಲ್ಲಿ 609 ಕೆಎಸ್ಆರ್ಟಿಸಿ ಬಸ್ಗಳಿದ್ದು, ಇದರಲ್ಲಿ ಸದ್ಯ 300 ಬಸ್ಗಳನ್ನು ಬುಕ್ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಬೆಂಗಳೂರು, ಮೈಸೂರು, ಚಿತ್ರದುರ್ಗ, ಹಾಸನ ಹಾಗೂ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ತೆರಳಲು ಜನರು ಪರದಾಡುವ ಸಾದ್ಯತೆ ಇದೆ.
ತುಮಕೂರು: ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಬಳಿ HALನ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಡಿಕೆಯಿಂದ ಮಾಡಿದ ಪೇಟಾ ಮತ್ತು ಅಡಿಕೆ ಹಾರ ಪ್ರಧಾನಿ ಮೋದಿಗೆ ತೊಡಿಸಲಿದ್ದಾರೆ. ಗುಬ್ಬಿ ಬಿಜೆಪಿ ಮುಖಂಡ ಬೆಟ್ಟಸ್ವಾಮಿಯವರ ಕಡೆಯಿಂದ ಮೋದಿಗೆ ಕೊಡುಗೆ ನೀಡಲಾಗುವುದು.
ಬೆಂಗಳೂರು: ಇಂದು (ಫೆ.6) ಬೆಳಗ್ಗೆ 10.55ಕ್ಕೆ ಬೆಂಗಳೂರಿಗೆ ಬರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಬಳಿಯಿರುವ ಬಿಐಇಸಿಯಲ್ಲಿ ಇಂಧನ ಸಪ್ತಾಹ (India energy week) ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ 30 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ. 650ಕ್ಕೂ ಹೆಚ್ಚು ಪ್ರಾಯೋಜಕರು, 8 ಸಾವಿರ ವಿದೇಶಿ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಆಯೋಜಕರಿಂದ ಪಾಸ್ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕಾರ್ಯಕ್ರಮ ಉದ್ಘಾಟನೆ ನಂತರ ದೇಶ-ವಿದೇಶಿ ಗಣ್ಯರ ಜತೆ ಮಾತುಕತೆ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮಾದವಾರದಿಂದ ತುಮಕೂರಿಗೆ ತೆರಳಲಿದ್ದಾರೆ.
Published On - 8:53 am, Mon, 6 February 23