ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕನಸಿನ ಕೂಸು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ. ಆದ್ರೆ ವಿಶ್ವವಿದ್ಯಾಯದ ಕನಸು 14 ವರ್ಷಗಳಾದ್ರೂ ಕನಸಾಗಿಯೇ ಉಳಿದಿದೆ. ಹೌದು, ವಿಶ್ವವಿದ್ಯಾಲಯದ ನಿರ್ಮಾಣ ಕಾರ್ಯ ಆರಂಭವಾದ ಮೇಲೆ ರಾಜ್ಯದಲ್ಲಿ ಐದು ಸರ್ಕಾರಗಳು ಬದಲಾದ್ವು. ನಾಲ್ಕು ಸರ್ಕಾರಗಳು ವಿವಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಿದ್ವು. ಆದರೆ ಕಳೆದ 14 ವರ್ಷಗಳಿಂದ ಕನಸಾಗಿದ್ದ ವಿಶ್ವವಿದ್ಯಾಲಯ ಕನಸಾಗಿಯೇ ಉಳಿದಿದೆ. ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಕೇವಲ ಆಶ್ವಾಸನೆಗಳಲ್ಲೇ ದಿನದೂಡಿವೆ.
ರಾಗಾವಿವಿಗೆ 2006-07ರಲ್ಲಿ ಚಾಲನೆ
ರಾಮನಗರದ ಅರ್ಚಕರಹಳ್ಳಿ ಗ್ರಾಮದ ಬಳಿ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣಕ್ಕೆ 2006-07 ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದರು. ರಾಮನಗರದ ಅರ್ಚಕರಹಳ್ಳಿ ಬಳಿ ೨೧೬.೧೬ ಎಕರೆ ವಿಸ್ತೀರ್ಣದಲ್ಲಿ ಆರೋಗ್ಯ ವಿಶ್ವ ವಿದ್ಯಾಲಯ ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಯೋಜನೆ ಘೊಷಣೆ ಮಾಡಿದ್ದರು. ಇದಕ್ಕಾಗಿ ಬಜೆಟ್‌ನಲ್ಲಿ 330 ಕೋಟಿ ರೂ. ಹಣ ಮಂಜೂರು ಮಾಡಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರು.
ಮೈಸೂರು ಭಾಗಕ್ಕೆ ಭಾರೀ ಅನುಕೂಲ
ಈ ಯೋಜನೆಯಂತೆ ಇಲ್ಲಿ ಆಡಳಿತ ಭವನ, ವೈಧ್ಯಕೀಯ, ದಂತ, ನರ್ಸಿಂಗ್ ಕಾಲೇಜುಗಳು, 750 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ಮತ್ತು 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರ್ಥಿನಿಲಯ, ವಸತಿ ಗೃಹಗಳು ಸೇರಿದಂತೆ 12 ಬೃಹತ್ ಕಟ್ಟಡಗಳನ್ನ ಕಟ್ಟಬೇಕು. ಈ ಯೋಜನೆ ಜಾರಿಯಿಂದ ಹಳೇ ಮೈಸೂರು ಭಾಗದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳ ಜನತೆಗೆ ಅನುಕೂಲವಾಗಲಿದೆ ಎನ್ನುವುದು ಲೆಕ್ಕಾಚಾರವಾಗಿತ್ತು.
ಪೇಪರ್ ಟೈಗರ್ ಆಗಿಯೇ ಉಳಿದ ವಿವಿ
ಮೊದಲಿಗೆ 2006ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದರು. ಬಳಿಕ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದರು. ಇದಾದ ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಇನ್ನೇನು ವಿಶ್ವವಿದ್ಯಾಲಯ ಕೆಲವೇ ದಿನಗಳಲ್ಲಿ ಕಾರ್ಯ ಮಾಡಲಿದೆ ಎಂದು ಭರವಸೆ ನೀಡಿದ್ದರು. ಮತ್ತೆ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ವಿವಿ ಕಾರ್ಯಾರಂಭ ಗ್ಯಾರಂಟಿ ಎನ್ನಲಾಗಿತ್ತು. ಆದ್ರೆ ವಿವಿ ಮಾತ್ರ ಪೇಪರ್ ಟೈಗರ್ ಆಗಿಯೇ ಉಳಿಯಿತು.
ಆದ್ರೆ ಈಗ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಸಹ ಕಳೆದ ಆರು ತಿಂಗಳಿನಿಂದಲೂ ವಿವಿ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಆದರೆ ವಿವಿಯ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ. ಆದ್ರೂ ಜಿಲ್ಲೆಯ ಜನ ಆಶಾವಾದಿಯಾಗಿದ್ದಾರೆ. ಇಂದಲ್ಲ ನಾಳೆ ಕಾಮಗಾರಿ ಆರಂಭವಾಗುತ್ತೆ, ವಿವಿ ಕನಸು ನನಸಾಗುತ್ತೆ ಎನ್ನೋ ಭರವಸೆ ಅವರದ್ದು.-ಪ್ರಶಾಂತ್ ಹುಲಿಕೆರೆ.