ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಸಿಹಿ ಸುದ್ದಿ ಬಂದಿದೆ. ಎರಡು ದಶಕಗಳಿಂದ ಮುಚ್ಚಿರುವ ಕಾರ್ಖಾನೆಗೆ ಗ್ರಹಚಾರ ಬಡಿದಿತ್ತು ಎನ್ನುವುದು ಬಯಲಾಗಿದೆ. ದೇವರ ಅನುಗ್ರಹ ಇಲ್ಲದೆ ಇರುವುದು ಮತ್ತು ದೈವದ ಅವಕೃಪೆಯೇ ಬೃಹತ್ ಕಾರ್ಖಾನೆ ಮುಚ್ಚಲು ಕಾರಣ ಎನ್ನುವುದು ಆರೂಢ ಪ್ರಶ್ನೆಯಿಂದ ಬಯಲಾಗಿದೆ.
ಸಕ್ಕರೆ ಕಾರ್ಖಾನೆ ಮುಚ್ಚಿದರೆ ಎಲ್ಲರೂ ಸರ್ಕಾರದ ಮೊರೆ ಹೋಗುತ್ತಾರೆ. ಆದರೆ ಉಡುಪಿಯಲ್ಲಿ ಮಾತ್ರ ಮುಚ್ಚಿದ ಕಾರ್ಖಾನೆಯ ಆಡಳಿತ ಮಂಡಳಿಯವರು ದೇವರ ಮೊರೆ ಹೋಗಿದ್ದಾರೆ. ಹಾಳುಬಿದ್ದ ದೇವಾಲಯಗಳಲ್ಲಿ ದೈವ-ದೇವರ ದೋಷ ಹುಡುಕಲು ಆರೂಢ ಪ್ರಶ್ನೆ ನಡೆಸುತ್ತಾರೆ. ಏನೇ ಪ್ರಯತ್ನ ನಡೆಸಿದರು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರುತ್ಥಾನ ಮಾಡಲು ಸಾಧ್ಯವಾಗಿಲ್ಲ. ಸರ್ಕಾರದಿಂದ ಅನುದಾನವೂ ಬರುತ್ತಿಲ್ಲ. ರೈತರು ಕಬ್ಬು ಬೆಳೆಯುತ್ತಿಲ್ಲ. ಇನ್ನೇನು ತುಕ್ಕು ಹಿಡಿದ ಕಾರ್ಖಾನೆ ಕುಸಿದೇ ಬಿಟ್ಟಿತ್ತು ಎನ್ನುವ ಹಂತ ತಲುಪಿದೆ. ದೈವದ ಶಾಪ ಮತ್ತು ದೇವರ ಅವಕೃಪೆಯಿಂದಲೇ ಹೀಗಾಗಿದೆ ಎಂದು ಭಾವಿಸಿರುವ ನೂತನ ಆಡಳಿತ ಮಂಡಳಿಯವರು ಕೇರಳದ ಪ್ರಸಿದ್ಧ ತಂತ್ರಿಗಳನ್ನು ಕರೆದು ಆರೂಢ ಪ್ರಶ್ನೆ ಇಟ್ಟಿದ್ದಾರೆ. ಈ ಪ್ರಶ್ನಾ ಚಿಂತನೆಯಲ್ಲಿ ಅನೇಕ ದೋಷಗಳು ಕಂಡು ಬಂದಿದ್ದು, ಶಾಪಗ್ರಸ್ತ ಭೂಮಿಯಲ್ಲಿ ದೈವದ ಸಾನಿಧ್ಯವು ಪತ್ತೆಯಾಗಿದೆ. ದೇವರು ಮತ್ತು ದೈವಕ್ಕೆ ಭಕ್ತಿ ತೋರಿಸಿ ಮುನ್ನಡೆದರೆ ಕಾರ್ಖಾನೆ ಮತ್ತೆ ಆರಂಭವಾಗುತ್ತದೆ ಎಂಬ ಭರವಸೆ ಆರೂಢ ಪ್ರಶ್ನೆಯಲ್ಲಿ ಕಂಡು ಬಂದಿದೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಪೂಜೆ ಸಿಗದೆ ಬೇಸರಗೊಂಡ ದೈವ ಕರಾವಳಿಯ ಕಾರಣಿಕದ ದೈವಗಳಲ್ಲಿ ಒಂದಾದ ಪಂಜೂರ್ಲಿಯ ಸಾನಿಧ್ಯ ಕಾರ್ಖಾನೆ ಒಳಪಟ್ಟ ಭೂಪ್ರದೇಶದಲ್ಲಿದೆ ಎನ್ನುವುದು ಗೊತ್ತಾಗಿದೆ. ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಹುಡುಕಿದಾಗ ಸನ್ನಿಧಾನವೂ ಸಿಕ್ಕಿದೆ. ಅಂತೆಯೇ ಗಣಪತಿಯ ಆರಾಧನೆ ನಡೆಸಬೇಕು ಎಂದು ಆರೂಢ ಪ್ರಶ್ನೆಯಲ್ಲಿ ಕಂಡುಬಂದಿದೆ. ದೋಷ ಪರಿಹಾರಕ್ಕಾಗಿ ದುರ್ಗಾ ಹೋಮ, ಗಣಪತಿ ಹೋಮ, ಪಾರಾಯಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅಪ್ಪಣೆಯಾಗಿದೆ. ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಪ್ರಾಯಶ್ಚಿತ್ತ ಕಾರ್ಯಗಳನ್ನು ನಡೆಸಿದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುತ್ತದೆ ಎಂಬ ದೇವರ ಅಭಯವು ಸಿಕ್ಕಿದೆ.
ಇದನ್ನೂ ಓದಿ
ಮಧ್ಯಾಹ್ನ ಟೈಮ್ ಆಯ್ತು ಊಟಕ್ಕೆ ಹೋಗೋಣ ಬನ್ನಿ.. ಆ ಮೇಲೆ ಮಾತನಾಡ್ತೀನಿ ಎಂದ ಸಿದ್ದರಾಮಯ್ಯ
ಚೆನ್ನಾಗಿ ಕಾಣಿಸಬೇಕು ಅಂತಾ ಸಿದ್ದರಾಮಯ್ಯ ಕಲರ್ ಬಟ್ಟೆ ತಗೊಂಡಿದ್ದಾರೆ ಎಂದ ಸಚಿವ ಕಾರಜೋಳ