ಹಾವೇರಿ: ಈಗ ಎಲ್ಲೆಲ್ಲೂ ಕೊರೊನಾ ಎರಡನೇ ಅಲೆಯ ಅಬ್ಬರ ಶುರುವಾಗಿದೆ. ಆದರೆ ಕೊರೊನಾ ಅಬ್ಬರದ ನಡುವೆಯೂ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳದ ಶರೀಫ ಶಿವಯೋಗಿಗಳ ಜಾತ್ರೆ ಅದ್ದೂರಿಯಾಗಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಕೊರೊನಾ ಅಲೆಯ ಅಬ್ಬರ ಮರೆತು ಜಾತ್ರೆಯನ್ನು ಸಂಭ್ರಮವಾಗಿ ಆಚರಿಸಿದರು.
ಗುರುಶಿಷ್ಯ ಪರಂಪರೆಯ ಪ್ರತೀಕ
ಶಿಶುವಿನಹಾಳ ಜಗತ್ತಿಗೆ ಸಾಮರಸ್ಯದ ಸಂದೇಶ ಸಾರಿದ ಸಂತ ಶಿಶುವಿನಹಾಳ ಶರೀಫರ ಜನ್ಮಸ್ಥಳ. ಶರೀಫರು ಐಕ್ಯರಾಗಿರುವ ಸ್ಥಳವನ್ನು ಶರೀಫಗಿರಿ ಅಂತಾ ಕರೆಯಲಾಗುತ್ತದೆ. ತತ್ವಪದಗಳ ಮೂಲಕ ಶಿಶುವಿನಹಾಳ ಶರೀಫರು ಜಗತ್ತಿಗೆ ಸಾಮರಸ್ಯದ ಸಂದೇಶ ಸಾರಿದವರು. ಶರೀಫರು ಮುಸ್ಲಿಂ ಧರ್ಮದವರಾದರೂ ಶರೀಫರ ಗುರುಗಳಾದ ಗುರುಗೋವಿಂದ ಭಟ್ಟರು ಬ್ರಾಹ್ಮಣ ಸಮುದಾಯದವರು. ಇಬ್ಬರೂ ಯಾವುದೇ ಜಾತಿ ಬೇಧವಿಲ್ಲದೆ ಜಗತ್ತಿಗೆ ಸಾಮರಸ್ಯ ಸಂದೇಶದ ಮೂಲಕ ನಾವೆಲ್ಲರೂ ಒಂದು ಎಂಬುದನ್ನ ಸಾರಿದ್ದರು. ಹೀಗಾಗಿ ಪ್ರತಿವರ್ಷ ಶರೀಫಗಿರಿಯಲ್ಲಿ ಗುರುಶಿಷ್ಯ ಪರಂಪರೆಯ ಪ್ರತೀಕವಾಗಿ ರಥೋತ್ಸವ ನಡೆಸಲಾಗುತ್ತದೆ. ರಥದಲ್ಲಿ ಗುರುಶಿಷ್ಯರ ಬೆಳ್ಳಿಯ ಮೂರ್ತಿಗಳನ್ನಿಟ್ಟು ರಥೋತ್ಸವ ನಡೆಸಲಾಗುತ್ತದೆ. ಜಾತ್ರೆಗೆ ಬಂದ ಭಕ್ತರು ರಥವನ್ನು ಎಳೆದು ರಥೋತ್ಸವದ ಸಂಭ್ರಮ ಆಚರಿಸುತ್ತಾರೆ. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸುತ್ತಾರೆ.
ದೈಹಿಕ ಅಂತರ ಕಾಪಾಡದ ಭಕ್ತರು
ರಥೋತ್ಸವದ ಹಿನ್ನೆಲೆಯಲ್ಲಿ ಶರೀಫಗಿರಿಗೆ ಆಗಮಿಸುವ ಸಾವಿರಾರು ಭಕ್ತರು ಶಿಶುವಿನಹಾಳ ಶರೀಫರು ಮತ್ತು ಗುರುಗೋವಿಂದ ಭಟ್ಟರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಸಕ್ಕರೆ ಊದಿಸಿ ಭಕ್ತಿಗೆ ಪಾತ್ರರಾಗುತ್ತಾರೆ. ಹಾವೇರಿ, ಧಾರವಾಡ, ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸಿದರು. ಭಕ್ತರು ಸರದಿ ಸಾಲಿನಲ್ಲಿ ನಿಂತು ಶರೀಫರ ಕರ್ತೃಗದ್ದುಗೆಗೆ ಪೂಜೆ ಸಲ್ಲಿಸಿ ಪುನೀತರಾದರು. ರಥೋತ್ಸವದ ವೇಳೆ ಭಕ್ತರು ಶರೀಫರು ಮತ್ತು ಗುರುಗೋವಿಂದ ಭಟ್ಟರ ತತ್ವಪದಗಳನ್ನು ಮೆಲುಕು ಹಾಕಿದರು. ರಥೋತ್ಸವಕ್ಕೆ ಡೊಳ್ಳು ಕುಣಿತದ ಸದ್ದು ಮತ್ತಷ್ಟು ಸಾಥ್ ನೀಡಿತು. ಆದರೆ ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರ ಪೈಕಿ ಬೆರಳೆಣಿಕೆಯಷ್ಟು ಜನರು ಮಾತ್ರ ಮಾಸ್ಕ್ ಧರಿಸಿದರೆ, ಬಹುತೇಕರು ಮಾಸ್ಕ್ ಧರಿಸದೆ ಕೊರೊನಾ ಬಗ್ಗೆ ಮೈಮರೆತಿದ್ದರು. ದೈಹಿಕ ಅಂತರವಂತೂ ಸಂಪೂರ್ಣ ಮಾಯವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಕೊರೊನಾ ಎರಡನೇ ಅಲೆಯ ಅಬ್ಬರದ ನಡುವೆಯೂ ರಥೋತ್ಸವವನ್ನು ಸಂಭ್ರಮವಾಗಿ ಆಚರಿಸಿದರು.
ಇದನ್ನೂ ಓದಿ
ಫಲಾನುಭವಿಗಳ ನಿಖರ ಪತ್ತೆಗೆ ಹೊಸ ಉಪಾಯ; ಧಾರವಾಡದಲ್ಲಿ ಹೊಸ ದಾರಿ ಕಂಡುಕೊಂಡ ಗ್ರಾಮ ಲೆಕ್ಕಾಧಿಕಾರಿ