ಧಾರವಾಡ: ಕಂದಾಯ ಇಲಾಖೆ ಎಂದರೆ ಸಾಕು ಒಂದು ಕ್ಷಣ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಈ ಇಲಾಖೆಯಲ್ಲಿ ಯಾವುದಾದರೂ ಕೆಲಸವಾಗಬೇಕೆಂದರೆ ಅದಕ್ಕೆ ವೇಳೆಯ ನಿರ್ಬಂಧವೇ ಇರುವುದಿಲ್ಲ. ಅದರೊಂದಿಗೆ ಲಂಚ ನೀಡದೇ ಯಾವುದೇ ಕೆಲಸವೇ ಆಗುವುದಿಲ್ಲ ಎನ್ನುವ ಆರೋಪವಂತೂ ತುಂಬಾನೇ ಹಳೆಯದ್ದು. ಆದರೆ ಈ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಇನ್ನೊಂದು ಮುಖವನ್ನು ನೋಡಿದಾಗ, ಸರ್ಕಾರಿ ಇಲಾಖೆಗಳ ಪೈಕಿ ಪೊಲೀಸ್ ಇಲಾಖೆ ಹೊರತುಪಡಿಸಿದರೆ ಅತಿ ಹೆಚ್ಚು ಕೆಲಸ ಮಾಡುವ ಇಲಾಖೆಯೆಂದರೆ ಅದು ಕಂದಾಯ ಇಲಾಖೆ. ಸರ್ಕಾರದ ಬಹುತೇಕ ಯೋಜನೆಗಳು ಜಾರಿಯಾಗಬೇಕಾದರೆ ಅದು ಇದೇ ಇಲಾಖೆ ಮೂಲಕವೇ ಆಗಬೇಕು. ಇಂಥಹ ಸಂದರ್ಭಗಳಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಕೊಂಚ ಜಾಣತನ ತೋರಿದರೆ ಎಷ್ಟೋ ಕೆಲಸಗಳು ಅವಧಿಗೂ ಮುನ್ನವೇ ಆಗಿ ಹೋಗುತ್ತವೆ ಎನ್ನುವುದಕ್ಕೆ ಧಾರವಾಡದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಸಾಕ್ಷಿಯಾಗಿದ್ದಾರೆ.
ಅಂಚೆ ಅಣ್ಣನ ಸಹಾಯ ಪಡೆದ ಗ್ರಾಮ ಲೆಕ್ಕಾಧಿಕಾರಿ
ಸರ್ಕಾರದಿಂದ ವಿವಿಧ ಪಿಂಚಣಿ ಹಾಗೂ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಎಷ್ಟೋ ಕಡೆಗಳಲ್ಲಿ ಇವುಗಳ ದುರುಪಯೋಗವೂ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ಪಿಂಚಣಿ ಪಡೆಯುತ್ತಿದ್ದವರು ಮೃತಪಟ್ಟರೂ ಅದನ್ನು ಸಂಬಂಧಿಸಿದ ಇಲಾಖೆಗೆ ತಿಳಿಸದೇ ಅವರ ಮನೆಯವರು ಹಣ ಪಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಂಥಹ ದುರುಪಯೋಗ ತಡೆಯಲು ನೇರವಾಗಿ ಅವರ ಖಾತೆಗೆ ಪಿಂಚಣಿ ಜಮೆ ಮಾಡುವುದಕ್ಕಾಗಿ ಆಧಾರ್ ಜೋಡಣೆ (ಸೀಡಿಂಗ್) ಮಾಡಲು ಜಿಲ್ಲೆಯ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆದೇಶ ನೀಡಿದ್ದಾರೆ.
ಧಾರವಾಡದ ತಹಶೀಲ್ದಾರ ಡಾ.ಸಂತೋಷ ಬಿರಾದಾರ ಅವರು ಪ್ರತಿದಿನ ಕಾರ್ಯಗಳ ಪ್ರಗತಿ ಪರಿಶೀಲನೆ ಮಾಡುತ್ತಿದ್ದಾರೆ. ಈ ವೇಳೆಯಲ್ಲಿ ನಗರದ ಸಪ್ತಾಪೂರ ಹಾಗೂ ಅತ್ತಿಕೊಳ್ಳ ಪ್ರದೇಶದ ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ ಹಟ್ಟಿಯವರ್ ಎಂಬುವವರು ಕೊಂಚ ಜಾಣತನ ಉಪಯೋಗಿಸಿ ಹೊಸ ಉಪಾಯವನ್ನು ಹುಡುಕಿದ್ದಾರೆ. ಅವರ ಕಾರ್ಯ ವ್ಯಾಪ್ತಿ ಪ್ರದೇಶಗಳಲ್ಲಿ 3,000 ಜನ ವಿವಿಧ ಪಿಂಚಣಿ ಪಡೆಯುತ್ತಿದ್ದಾರೆ. ಈ ಎಲ್ಲ ಫಲಾನುಭವಿಗಳ ಮನೆಯನ್ನು ಹುಡುಕಿಕೊಂಡು ಹೋಗಿ ಮಾಹಿತಿ ಕಲೆ ಹಾಕುವುದಕ್ಕೆ ತಿಂಗಳುಗಳೇ ಬೇಕು. ಮೊದಲೇ ನಗರ ಪ್ರದೇಶದಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೆಲಸದ ಭಾರ ಕೊಂಚ ಹೆಚ್ಚೇ ಇರುತ್ತದೆ. ಅಂಥದ್ದರಲ್ಲಿ ಎಲ್ಲರ ಮನೆಗೆ ಹೋಗಿ ಮಾಹಿತಿ ಕೊಡುವುದು ಮತ್ತು ಫಲಾನುಭವಿಗಳು ಇದ್ದರೋ ಇಲ್ಲವೋ ಎನ್ನುವುದನ್ನು ಪತ್ತೆ ಹಚ್ಚುವುದು ಕಷ್ಟಕರ. ಇದೇ ಕಾರಣಕ್ಕೆ ವೆಂಕಟೇಶ, ಬಹುವ್ಯಾಪ್ತಿ ಹೊಂದಿರುವ ಈ ಪ್ರದೇಶಗಳಲ್ಲಿನ ಫಲಾನುಭವಿಗಳ ಆಧಾರ್ ಸೀಡಿಂಗ್ ಕಾರ್ಯವನ್ನು ಕಾಲಮಿತಿಯಲ್ಲಿ ಮಾಡಲು ಅಗತ್ಯ ದಾಖಲೆ, ಮಾಹಿತಿ ನೀಡುವಂತೆ ತಿಳಿಸಿ ಫಲಾನುಭವಿಗಳಿಗೆ ಪತ್ರ ಬರೆದಿದ್ದಾರೆ.
ಪಿಂಚಣಿ ಸೌಲಭ್ಯವನ್ನು ಈ ಹಿಂದೆ ಫಲಾನುಭವಿಗಳು ಅಂಚೆಯ ಮೂಲಕ ಪಡೆಯುತ್ತಿದ್ದರು. ಪೋಸ್ಟ್ ಮ್ಯಾನ್ ಫಲಾನುಭವಿಗಳ ಮನೆಗೆ ತೆರಳಿ ಪಿಂಚಣಿ ಹಣ ನೀಡುತ್ತಿದ್ದರು. ಇದನ್ನು ಗಮನಿಸಿರುವ ಈ ಗ್ರಾಮ ಲೆಕ್ಕಾಧಿಕಾರಿ ತನ್ನ ಪ್ರದೇಶ ವ್ಯಾಪ್ತಿಯ ಪ್ರತಿಯೊಬ್ಬ ಪಿಂಚಣಿ ಫಲಾನುಭವಿಯ ನಿಖರ ವಿಳಾಸ ಹಾಗೂ ದಾಖಲೆ ಪಡೆಯಲು ಪತ್ರ ಬರೆದು ಅಂಚೆಯ ಮೂಲಕ ಕಳುಹಿಸಿದ್ದಾರೆ. ಇದರಿಂದಾಗಿ ಫಲಾನುಭವಿ ವಲಸೆ ಹೋಗಿದ್ದರೆ, ನಿಧನವಾಗಿದ್ದರೆ ಮತ್ತು ವಿಳಾಸ ಬದಲಾಗಿದ್ದರೆ ಸರಳವಾಗಿ ಮತ್ತು ಖಚಿತವಾಗಿ ತಿಳಿದು ಬರುತ್ತದೆ.
ಅಂಚೆ ಅಣ್ಣನಿಂದ ನಿಖರ ಮಾಹಿತಿ ಲಭ್ಯವಾದ ಬಳಿಕ ಆ ಮನೆಗೆ ಭೇಟಿ
ಅಂಚೆ ಅಣ್ಣ ಪ್ರತಿಯೊಂದು ಮನೆಯ ಫಲಾನುಭವಿಗಳ ಮಾಹಿತಿಯನ್ನು ಹೊತ್ತು ತರುತ್ತಾರೆ. ಯಾವ ಮನೆಯಲ್ಲಿ ಫಲಾನುಭವಿಗಳು ಇಲ್ಲವೋ ಆ ಮನೆಗೆ ಒಯ್ದಿದ್ದ ಪತ್ರವನ್ನು ಮರಳಿ ತಂದಿರುತ್ತಾನೆ. ಮಾಹಿತಿಯನ್ನು ಆಧರಿಸಿ ಆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಿಬ್ಬಂದಿ, ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡುತ್ತದೆ. ಆ ಮೂಲಕ ಸೌಲಭ್ಯಗಳ ದುರುಪಯೋಗವನ್ನು ತಡೆಯಲು ಸಹಾಯ ಮಾಡುತ್ತದೆ. ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳ ರಾಯಭಾರಿಗಳಾಗಿ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಿವಿಧ ಯೋಜನೆ, ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯಗಳನ್ನು ವಹಿಸಲಾಗುತ್ತಿದೆ. ನಿಗದಿತ ಗುರಿ ಸಾಧಿಸುವ ಉದ್ದೇಶದಿಂದ ಪತ್ರ ಮೂಲಕ ಫಲಾನುಭವಿಗಳ ಸಂಪರ್ಕ ಸಾಧಿಸಲು ಈ ಗ್ರಾಮ ಲೆಕ್ಕಾಧಿಕಾರಿ ಹೊಸ ಮಾರ್ಗ ಕಂಡುಕೊಂಡಿದ್ದು, ಇತರರಿಗೆ ಮಾದರಿಯಾಗಿದೆ.
ಇದನ್ನೂ ಓದಿ
Published On - 4:07 pm, Thu, 25 March 21