ಮೆಟ್ರೋ ನಿಲ್ದಾಣಗಳ ಶೌಚಾಲಯ ಬಳಕೆಗೂ ಶುಲ್ಕ: ಬಿಎಂಆರ್‌ಸಿಎಲ್ ನಿರ್ಧಾರಕ್ಕೆ ವ್ಯಾಪಕ ವಿರೋಧ
ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಹೆಚ್ಚಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಬಿಎಂಆರ್‌ಸಿಎಲ್ ಇದೀಗ 12 ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯ ಬಳಕೆಗೆ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡಿದೆ. ಶೌಚಾಲಯಗಳ ನಿರ್ವಹಣೆ ಹೊಣೆಯನ್ನು ಸುಲಭ್ ಇಂಟರ್ನ್ಯಾಷನಲ್‌ಗೆ ವಹಿಸಲಾಗಿದ್ದು, ಶುಲ್ಕ ಸಂಗ್ರಹಕ್ಕೆ ಕಾರಣವಾಗಿದೆ. ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಬೆಂಗಳೂರು, ಮೇ 22: ಬೆಂಗಳೂರಿನ ಸಾಮಾನ್ಯ ಸಾರ್ವಜನಿಕ ಶೌಚಾಲಯಗಳ ಮಾದರಿಯಲ್ಲೇ ಕೆಲವು ಪ್ರದೇಶಗಳಲ್ಲಿ ಮೆಟ್ರೋ ನಿಲ್ದಾಣಗಳ ಶೌಚಾಲಯಗಳ ಬಳಕೆಗೂ ಶುಲ್ಕ ವಿಧಿಸಲು ಬಿಎಂಆರ್‌ಸಿಎಲ್ (BMRCL) ಮುಂದಾಗಿದೆ. ಮೆಟ್ರೋ (Namma Metro) ಪ್ರಯಾಣ ದರ ಏರಿಕೆ ಬೆನ್ನಲ್ಲೇ ಶೌಚಾಲಯಕ್ಕೂ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡಿರುವುದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸದ್ಯ, ಬೆಂಗಳೂರಿನ 12 ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ವರದಿಯಾಗಿದೆ.
ಆಯ್ದ ಮೆಟ್ರೋ ನಿಲ್ದಾಣಗಳ ಸಾರ್ವಜನಿಕ ಪ್ರದೇಶಗಳಲ್ಲಿರುವ ಶೌಚಾಲಯಗಳ ನಿರ್ವಹಣೆ ಹೊಣೆಯನ್ನು ಸುಲಭ್ ಇಂಟರ್ನ್ಯಾಷನಲ್‌ಗೆ ವಹಿಸಲಾಗಿದೆ. ಹೀಗಾಗಿ ಬಳಕೆದಾರರ ಶುಲ್ಕ ಸಂಗ್ರಹ ಆರಂಭವಾಗಿದ್ದು, ಮೂತ್ರ ವಿಸರ್ಜನೆಗೆ 2 ಮತ್ತು ಶೌಚಾಲಯ ಬಳಕೆಗೆ 5 ರೂ. ಶುಲ್ಕ ಸಂಗ್ರಹಿಸಲಾಗುತ್ತಿದೆ.
ಯಾವೆಲ್ಲ ಮೆಟ್ರೋ ನಿಲ್ದಾಣಗಳ ಶೌಚಾಲಯಗಳಲ್ಲಿ ಶುಲ್ಕ ಸಂಗ್ರಹ?
ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ್ ನಗರ, ಯಲಚೇನಹಳ್ಳಿ, ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣ – ಸೆಂಟ್ರಲ್ ಕಾಲೇಜು, ಡಾ ಬಿಆರ್ ಅಂಬೇಡ್ಕರ್ ನಿಲ್ದಾಣ – ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಕ್ರಾಂತಿವೀರ ರೈಲ್ವೆ ನಿಲ್ದಾಣಗಳ ಶೌಚಾಲಯಗಳಲ್ಲಿ ಶುಲ್ಕ ಸಂಗ್ರಹ ಮಾಡಲಾಗುತ್ತದೆ.
ಬಿಎಂಆರ್‌ಸಿಎಲ್ ಹೇಳಿದ್ದೇನು?
ಮೆಟ್ರೋ ಪ್ರಯಾಣಿಕರು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ಹೆಚ್ಚಾಗಿ ಬಳಸುವ ಶೌಚಾಲಯಗಳ ಉತ್ತಮ ನಿರ್ವಹಣೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಮೂಲಗಳು ತಿಳಿಸಿವೆ.
ಪ್ರಯಾಣಿಕರು ಮೆಟ್ರೋ ಕಾರ್ಡ್ ಅಥವಾ ಟೋಕನ್ ಸ್ವೈಪ್ ಮಾಡಿ ಒಳ ಪ್ರವೇಶಿಸಿದ ನಂತರ ಬಳಕೆಗೆ ಲಭ್ಯವಿರುವ ಶೌಚಾಲಯಗಳಲ್ಲಿ ಶುಲ್ಕ ಪಡೆಯುತ್ತಿಲ್ಲ. ಅವುಗಳು ಉಚಿತವಾಗಿಯೇ ಇರಲಿವೆ. ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರವೇಶಾವಕಾಶ ಇರುವ ಶೌಚಾಲಯಗಳಿಗೆ ಮಾತ್ರ ಶುಲ್ಕ ಸಂಗ್ರಹಿಸಲಾಗುತ್ತದೆ. ನಿರ್ವಹಣೆಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಸ್ಪಷ್ಟಪಡಿಸಿವೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರೇ ಗಮನಿಸಿ: ಶುಕ್ರವಾರ ಸಂಚಾರ ಸಮಯದಲ್ಲಿಲ್ಲ ಬದಲಾವಣೆ
ಆದಾಗ್ಯೂ, ಬಿಎಂಆರ್‌ಸಿಎಲ್ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಹೆಚ್ಚು ಮಾಡಲಾಗಿದೆ. ಇದೀಗ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ ಸಂಗ್ರಹ ಸರಿಯಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








