ಬೆಂಗಳೂರಿನ ಅರಮನೆ ಜಮೀನು ವಿವಾದ: ರಾಜಮನೆತನಕ್ಕೆ ಟಿಡಿಆರ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ
ಬೆಂಗಳೂರು ಅರಮನೆ ಮೈದಾನದ ಭೂವಿವಾದದಲ್ಲಿ ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ರಾಜಮನೆತನಕ್ಕೆ 3000 ಕೋಟಿ ರೂ. ಮೌಲ್ಯದ ಟಿಡಿಆರ್ ನೀಡುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆ ಮೂಲಕ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಿದ ಸುಪ್ರೀಂ, ಟಿಡಿಆರ್ ಅನ್ನು ತಕ್ಷಣ ನೀಡುವಂತೆ ಸೂಚಿಸಿದೆ.

ಬೆಂಗಳೂರು, ಮೇ 22: ಬೆಂಗಳೂರು ಅರಮನೆ ಮೈದಾನದ ಭೂ ವಿವಾದ ಪ್ರಕರಣಕ್ಕೆ (bengaluru palace land case) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ ಆಗಿದೆ. ಅರಮನೆ ಮೈದಾನದ 15 ಎಕರೆಗೂ ಹೆಚ್ಚು ಭೂಮಿಗೆ ಮೂರು ಸಾವಿರ ಕೋಟಿಯ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು ಅಂದರೆ ಟಿಡಿಆರ್ ನೀಡಲು ರಾಜಮನೆತನಕ್ಕೆ ಸುಪ್ರೀಂಕೋರ್ಟ್ (Supreme Court) ಆದೇಶಿಸಿದೆ. ನ್ಯಾ ಅರವಿಂದ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠದಿಂದ ಕೂಡಲೇ ರಾಜಮನೆತನಕ್ಕೆ ಟಿಡಿಆರ್ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ಆದೇಶ ಹೊರಡಿಸಲಾಗಿದೆ.
ಒಂದು ವಾರದೊಳಗೆ ಟಿಡಿಆರ್ ಠೇವಣಿ ಇಡುವಂತೆ ರಾಜ್ಯ ಸರ್ಕಾರಕ್ಕೆ ಈ ಹಿಂದೆ ಸೂಚಿಸಲಾಗಿತ್ತು. ಅದರಂತೆ ಬರೋಬ್ಬರಿ 3400 ಕೋಟಿ ರೂ. ಮೊತ್ತದ ಟಿಡಿಆರ್ ಅನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ನಲ್ಲಿ ಇಡಲಾಗಿತ್ತು. ಇದನ್ನು ರಾಜಮನೆತನದ ಪರ ವಕೀಲರು ವಿರೋಧಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನ ಅರಮನೆ ಜಮೀನು ವಿವಾದ; ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ಒಪ್ಪದ ಸುಪ್ರೀಂ ಕೋರ್ಟ್
ಈ ಟಿಡಿಆರ್ಗಳನ್ನು ರಾಜಮನೆತನಕ್ಕೆ ನೀಡಬಾರದು ಎಂದು ರಾಜ್ಯ ಸರ್ಕಾರವು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು. ಇದೀಗ ಅಂತಿಮವಾಗಿ ರಾಜಮನೆತನಕ್ಕೆ ಟಿಡಿಆರ್ ನೀಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಬೆಂಗಳೂರು ಅರಮನೆ ಮೈದಾನದ ಬಳಿ ರಸ್ತೆ ಅಗಲೀಕರಣಕ್ಕಾಗಿ ಒಟ್ಟು 15.36 ಎಕರೆ ಜಮೀನು ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಎಕರೆಗೆ 200 ಕೋಟಿ ರೂಪಾಯಿಯಂತೆ 3ಸಾವಿರದ 400 ಕೋಟಿ ಟಿಡಿಆರ್ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ ಟಿಡಿಆರ್ ನೀಡಲು ಒಪ್ಪದ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ ಹೂಡಿತ್ತು. ಹೀಗಾಗಿ ಸುಗ್ರೀವಾಜ್ಞೆ ಮತ್ತು ಪರಿಹಾರ ನೀಡದ್ದಕ್ಕೆ ರಾಜಮನೆತನ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ರಸ್ತೆ ಅಗಲೀಕರಣಕ್ಕೆ ಅರಮನೆ ಜಾಗ ಸ್ವಾಧೀನ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೋಷಾವೇಷ
ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಜಮೀನನ್ನೂ ಸಂಪೂರ್ಣವಾಗಿ ಬಳಸಿಕೊಂಡಿಲ್ಲ, ಬಳಸಿಕೊಳ್ಳದ ಜಮೀನಿಗೆ ಟಿಡಿಆರ್ ನೀಡುವುದಾದರೂ ಹೇಗೆ? ಅಂತಾ ವಾದಿಸಿದ್ದರು. ವಾದ ಆಲಿಸಿದ್ದ ಸುಪ್ರೀಂಕೋರ್ಟ್ ಟಿಡಿಆರ್ ಅನ್ನ ಕೋರ್ಟ್‌ನಲ್ಲೇ ಠೇವಣಿ ಇಡುವಂತೆ ಈ ಹಿಂದೆ ಸೂಚಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:25 pm, Thu, 22 May 25