ಅರಮನೆ ಮೈದಾನ ಬಳಕೆಗೆ ಸರ್ಕಾರದ ಸುಗ್ರೀವಾಜ್ಞೆ ಅಸ್ತ್ರ ಯಶಸ್ವಿ: ರಾಜ್ಯಪಾಲರಿಂದ ಅಂಕಿತ
ಬೆಂಗಳೂರು ಅರಮನೆಯ 472 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಶಪಡಿಸಿಕೊಳ್ಳಲು ರಾಜ್ಯಪಾಲರು ಆದೇಶಿಸಿದ್ದಾರೆ. ಮೈಸೂರು ರಾಜಮನೆತನದ ವಿರೋಧದ ನಡುವೆಯೂ ಈ ಆದೇಶ ಹೊರಡಿಸಲಾಗಿದೆ. ಟಿಡಿಆರ್ ನೀಡದಿರಲು ಸರ್ಕಾರ ನಿರ್ಧರಿಸಿದೆ. ಕಳೆದ ಸಂಪುಟದಲ್ಲಿ ಟಿಡಿಆರ್ ನೀಡದಿರಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅರಮನೆ ಭೂ ಕಬಳಿಕೆ ಮತ್ತು ನಿಯಂತ್ರಣ ಅಧ್ಯಾದೇಶ 2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
![ಅರಮನೆ ಮೈದಾನ ಬಳಕೆಗೆ ಸರ್ಕಾರದ ಸುಗ್ರೀವಾಜ್ಞೆ ಅಸ್ತ್ರ ಯಶಸ್ವಿ: ರಾಜ್ಯಪಾಲರಿಂದ ಅಂಕಿತ](https://images.tv9kannada.com/wp-content/uploads/2025/01/palacegezetnotification.jpg?w=1280)
ಬೆಂಗಳೂರು, ಜನವರಿ 29: ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದ್ದು, ಬೆಂಗಳೂರು ಅರಮನೆ ಆಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಒಪ್ಪಿಗೆ ಸೂಚಿಸಿದ್ದಾರೆ. ಆ ಮೂಲಕ 472 ಎಕರೆ ಮತ್ತು 16 ಗುಂಟೆ ಬೆಂಗಳೂರು ಅರಮನೆಯ ಭೂಮಿ ಬಳಕೆ ಮತ್ತು ನಿಯಂತ್ರಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ತನ್ನದಾಗಿಸಿಕೊಂಡಿದೆ.
ಕಳೆದ ಸಂಪುಟದಲ್ಲಿ ಟಿಡಿಆರ್ ನೀಡದಿರಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅರಮನೆ ಭೂ ಕಬಳಿಕೆ ಮತ್ತು ನಿಯಂತ್ರಣ ಅಧ್ಯಾದೇಶ 2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಇದನ್ನೂ ಓದಿ: ಅರಮನೆ, ಸರ್ಕಾರದ ಮಧ್ಯೆ ಕಾನೂನು ಸಮರ: ನಾಳೆ ತುರ್ತು ಸಂಪುಟ ಸಭೆ ಕರೆದ ಸಿಎಂ
3 ಸಾವಿರ ಕೋಟಿ ರೂ ಮೌಲ್ಯದ ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ಮೈಸೂರು ರಾಜಮನೆತನ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ನಿರ್ಣಯ ಕೈಗೊಳ್ಳಲಾಗಿತ್ತು.
1996 ರಲ್ಲಿ ಬೆಂಗಳೂರು ಅರಮನೆ ವ್ಯಾಪ್ತಿಯ 472 ಎಕರೆ ಭೂಮಿಯನ್ನ ಸರ್ಕಾರ ವಶಕ್ಕೆ ಪಡೆಯಲು ಒಟ್ಟು 11 ಕೋಟಿ ರೂ. ನಿಗದಿ ಪಡಿಸಿತ್ತು. ಅಂದು ಎಕರೆಗೆ 2.30 ಲಕ್ಷ ರೂ.ನಂತೆ ದರ ನಿಗದಿ ಮಾಡಲಾಗಿತ್ತು. ಆದರೆ ರಾಜಮನೆತನ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು. ಇಂದಿನ ಮಾರುಕಟ್ಟೆ ದರ ಎಕರೆಗೆ 200 ಕೋಟಿ ರೂ. ಆಗುತ್ತದೆ.
ಇದನ್ನೂ ಓದಿ: ಬೆಂಗಳೂರು ಅರಮನೆ ವಿವಾದ; ಅನ್ಯಾಯವಾದರೆ ಕಾನೂನು ಸಮರಕ್ಕೆ ಸಿದ್ಧ ಎಂದ ಪ್ರಮೋದಾದೇವಿ ಒಡೆಯರ್
ರಸ್ತೆ ಅಗಲಿಕರಣಕ್ಕೆ ಬೇಕಾದ 15 ಎಕರೆ 36 ಗುಂಟೆ ಜಾಗವನ್ನೇ ವಶಕ್ಕೆ ಪಡೆಯುವುದಾದರೆ ಎಕರೆಗೆ 200 ಕೋಟಿ ಬೆಲೆ ಆಗುತ್ತದೆ. ಒಟ್ಟು 3,000 ಕೋಟಿ ರೂ. ಆಗಲಿದೆ. ಇದು ಅಭಿವೃದ್ಧಿ ದೃಷ್ಟಿಯಿಂದ ಕಾರ್ಯ ಸಾಧ್ಯವಿಲ್ಲ. ರಾಜ್ಯ ಸರ್ಕಾರ ಅರಮನೆಯ ಭೂಮಿಯನ್ನು ವಶಕ್ಕೆ ಪಡೆಯುವುದಾದರೆ ಟಿಡಿಆರ್ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಜಾಗವನ್ನ ವಶಕ್ಕೆ ಪಡೆಯುವ ಮುಕ್ತ ಅವಕಾಶ ಸರ್ಕಾರ ಇಟ್ಟುಕೊಂಡಿದೆ.
ರಾಣಿ ಪ್ರಮೋದಾದೇವಿ ಒಡೆಯರ್ ಆರೋಪ
ಅರಮನೆ ಮೈದಾನ ಭೂಮಿ ಬಳಕೆಗೆ 3 ಸಾವಿರ ಕೋಟಿ ರೂಪಾಯಿ ಟಿಡಿಆರ್ ಕೊಡುವುದನ್ನು ತಪ್ಪಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ ಎಂದು ರಾಣಿ ಪ್ರಮೋದಾದೇವಿ ಒಡೆಯರ್ ಆರೋಪಿಸಿದ್ದರು. ಬೆಂಗಳೂರು ಅರಮನೆ ಜಾಗ ನಮ್ಮದೇ, ಸುಗ್ರೀವಾಜ್ಞೆ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.