ಬೆಂಗಳೂರು ಅರಮನೆ ವಿವಾದ; ಅನ್ಯಾಯವಾದರೆ ಕಾನೂನು ಸಮರಕ್ಕೆ ಸಿದ್ಧ ಎಂದ ಪ್ರಮೋದಾದೇವಿ ಒಡೆಯರ್
ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳುವುದಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಇಂದು (ಶುಕ್ರವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೈಸೂರಿನ ಮಹಾರಾಣಿ ಪ್ರಮೋದಾದೇವಿ ಒಡೆಯರ್ ಬೆಂಗಳೂರು ಅರಮನೆ ವಿಚಾರದಲ್ಲಿ ನಮಗೆ ಅನ್ಯಾಯವಾದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದಿದ್ದಾರೆ.
ಮೈಸೂರು: ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಟಿಡಿಆರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದರು. ಈ ಸಂಪುಟ ಸಭೆಯಲ್ಲಿ ರಸ್ತೆ ಅಗಲೀಕರಣಕ್ಕೆ ಬೆಂಗಳೂರಿನ ಅರಮನೆಯ ಜಾಗವನ್ನು ಬಳಸಿಕೊಳ್ಳುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ. ಇದಕ್ಕೆ ಮೈಸೂರು ಮಹಾರಾಣಿ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ನಮಗೆ ಅನ್ಯಾಯವಾದರೆ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ಮೈಸೂರು ರಾಜಮನೆತನ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರು ಅರಮನೆ ರಸ್ತೆ ಅಗಲೀಕರಣ ಯೋಜನೆ ವಿಚಾರವಾಗಿ ಟಿಡಿಆರ್ ವಿಸ್ತರಣೆಗೆ ಸಂಪುಟ ನಿರಾಕರಿಸಿದೆ. ವಾರಸುದಾರರಿಗೆ ಟಿಡಿಆರ್ ನೀಡದಿರಲು ಸಚಿವ ಸಂಪುಟ ನಿರ್ಧರಿಸಿದೆ.
ಇದನ್ನೂ ಓದಿ: ಅರಮನೆ, ಸರ್ಕಾರದ ಮಧ್ಯೆ ಕಾನೂನು ಸಮರ: ನಾಳೆ ತುರ್ತು ಸಂಪುಟ ಸಭೆ ಕರೆದ ಸಿಎಂ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಮೋದಾದೇವಿ ಒಡೆಯರ್, ಬೆಂಗಳೂರು ಅರಮನೆ ಜಾಗ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ನಮಗೆ ಅನ್ಯಾಯ ಆದರೆ ಕಾನೂನು ಸಮರ ಇದ್ದೇ ಇರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ಹಿಂದೆ ನಮ್ಮ ಯಜಮಾನರು ಹೋರಾಟ ಮಾಡುತ್ತಿದ್ದರು. ಈಗ ನಾವು ಆ ಹೋರಾಟ ಮುಂದುವರೆಸುತ್ತೇವೆ ಎಂದು ಮೈಸೂರಿನಲ್ಲಿ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ.
ಬೆಂಗಳೂರು ಅರಮನೆ ರಸ್ತೆ ಟಿ.ಡಿ.ಆರ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದ ಸುಗ್ರೀವಾಜ್ಞೆಗೆ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಸಂಪುಟ ನಿರ್ಧಾರದ ಬಗ್ಗೆ ನೋಡಿದೆ. 1996ರಲ್ಲಿನ ಅಕ್ವಿಜೇಶನ್ ಆ್ಯಂಡ್ ಸ್ಟೇ ಆರ್ಡರ್ ಕೂಡ ನಮ್ಮ ಬಳಿಯಿದೆ. ಸುಪ್ರೀಂ ಕೋರ್ಟ್ ಕೂಡ ಬೆಂಗಳೂರು ಅರಮನೆ ಜಾಗದ ಬಗ್ಗೆ ಹೇಳಿದೆ. ಕರ್ನಾಟಕದ ಸರ್ಕಾರದ ಅಣತಿಯಂತೆ ಇದುವರೆಗೂ ಅಲ್ಲಿ ಎಲ್ಲವೂ ನಡೆದಿದೆ. ಯಾವುದೂ ಕೂಡ ಅವರಿಗೆ ಗೊತ್ತಿಲ್ಲದ ರೀತಿ ನಡೆದಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಅರಮನೆ ಮೈದಾನದ ಜಾಗ ಬಳಸಿಕೊಳ್ಳುವುದಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ನಿರ್ಣಯ
ಸರ್ಕಾರ ಸ್ಟೇ ಇಲ್ಲ ಅಂದಿದೆ. ಆದರೆ ಸ್ಟೇ ಇದೆ ಹಾಗೂ ಮಾಲೀಕತ್ವ ಇದೆ. ಈಗಲೂ ನಾವೇ ಬೆಂಗಳೂರು ಅರಮನೆ ಜಾಗದ ಓನರ್ ಆಗಿದ್ದೇವೆ. ನಾನು ಕೆಲವು ಹೆಸರನ್ನು ಹೇಳುತ್ತೇನೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಅವರ ಅಕ್ಕ- ತಂಗಿಯರು ಕೂಡ ಓನರ್ ಶಿಪ್‌ನಲ್ಲಿದ್ದಾರೆ. ಇನ್ನೂ ಅನೇಕರ ಹೆಸರಿದೆ. ಅಲ್ಲಿನ ರಸ್ತೆಗೆ ಹೋಗಿರುವ ಪ್ರಾಪರ್ಟಿ ಕೂಡ ನಮ್ಮದೇ ಆಗಿದೆ. ರಸ್ತೆಗೆ 15 ಎಕರೆ 36 ಗುಂಟೆ ಬಳಸಿದ್ದಾರೆ. ಟಿ.ಡಿ.ಆರ್ ಕೊಡಬಾರದು ಅಂತ ಈ ರೀತಿ ಮಾಡಿದ್ದಾರೆ. ಟಿ.ಡಿ.ಆರ್ ಹೇಗೆ ಬಂತು ಅಂದರೆ ಜನರಿಗೆ ರಸ್ತೆ ಬೇಕು ಹಾಗಾಗಿ ನಿಮ್ಮ ಜಾಗ ಬಳಸಿಕೊಳ್ಳುತ್ತೇವೆ. ನಿಮಗೆ ಟಿ.ಡಿ.ಆರ್ ಕೊಡುತ್ತೇವೆ ಅಂತ ಬಿಬಿಎಂಪಿ ಹೇಳಿತ್ತು. ಟಿ.ಡಿ.ಆರ್ ಕೊಡುತ್ತೇವೆ ಅಂತ ಕೋರ್ಟ್‌ಗೆ ಹೋಗಿದ್ದರು. 2014ರಲ್ಲಿ ಇದು ಚರ್ಚೆ ಆಗಿದೆ. ಎಲ್ಲ ವಾದ ಪ್ರತಿವಾದ ಕೇಳಿ ಟಿ.ಡಿ.ಆರ್ ಒಪ್ಪಿದ್ದರು. ಟಿ.ಡಿ.ಆರ್ ಮೌಲ್ಯ ಅಂದು ಫಿಕ್ಸ್ ಆಗಿರಲಿಲ್ಲ. ಇವತ್ತು 3 ಸಾವಿರ ಕೋಟಿ ಬರುತ್ತದೆ ಅಂತ ಈಗ ಬೇರೆ ರೀತಿ ಮಾಡುತ್ತಿದ್ದಾರೆ. ಆವಾಗಲೇ ನಮಗೆ ಟಿ.ಡಿ.ಆರ್ ಕೊಟ್ಟಿದ್ದರೆ ಇಷ್ಟು ಮೊತ್ತ ಆಗುತ್ತಿರಲಿಲ್ಲ. ನಾವು ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ