AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 166 ಸೂಕ್ಷ್ಮ ಪ್ರದೇಶಗಳು ಗುರುತು: ರಾಜಕಾಲುವೆ ಒತ್ತುವರಿ ತೆರವಿಗೆ ಸಿದ್ದರಾಮಯ್ಯ ಸೂಚನೆ

ಬೆಂಗಳೂರಿನಲ್ಲಿನ ರಾಜಕಾಲುವೆ ಒತ್ತುವರಿ ತೆರವಿಗೆ ಮತ್ತು ಪ್ರವಾಹದ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಒತ್ತುವರಿಯನ್ನು ತೆರವುಗೊಳಿಸಲು ಮತ್ತು ಚರಂಡಿ ವ್ಯವಸ್ಥೆಯನ್ನು ಸುಧಾರಿಸಲು ಸೂಚನೆ ನೀಡಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿನ ನೀರು ನಿಲ್ಲುವ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ. ಬಿಬಿಎಂಪಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 166 ಸೂಕ್ಷ್ಮ ಪ್ರದೇಶಗಳು ಗುರುತು: ರಾಜಕಾಲುವೆ ಒತ್ತುವರಿ ತೆರವಿಗೆ ಸಿದ್ದರಾಮಯ್ಯ ಸೂಚನೆ
ಸಿಎಂ ಸಿದ್ದರಾಮಯ್ಯ
ವಿವೇಕ ಬಿರಾದಾರ
|

Updated on:May 21, 2025 | 9:21 PM

Share

ಬೆಂಗಳೂರು, ಮೇ 21: ಮಾನ್ಯತಾ ಟೆಕ್ಪಾರ್ಕ್ ಬಳಿ ರಾಜಕಾಲುವೆ (Rajakaluve) ಪರಿಶೀಲನೆ ನಡೆಸಿದ್ದು ಅಲ್ಲಿ ರಾಜಕಾಲುವೆ ಒತ್ತುವರಿ ಗಮನಿಸಲಾಗಿದೆ. ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಿದ್ದೇನೆ. ಮಾನ್ಯತಾ ಟೆಕ್ಪಾರ್ಕ್ ಸಿಇಒ ಅವರು ಸ್ವಂತ ರಸ್ತೆಯಲ್ಲಿ 90ದಿನಗಳಲ್ಲಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿಯಲು ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

ಬೆಂಗಳೂರು ನಗರದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಬುಧವಾರ (ಮೇ. 21) ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್ ಹಾಗೂ ಇತರ ಜನಪ್ರತಿನಿಧಿಗಳು ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್‌ಬಿಆರ್ ಬಡಾವಣೆಯ ಐದನೇ ಹಂತದ ರಾಜಕಾಲುವೆ ಸಮಸ್ಯೆಯಿದ್ದು, ಅಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗೆ ಅಲ್ಲಿ ತಡೆಗೋಡೆ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ. ಚರಂಡಿಗೆ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ
Image
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
Image
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
Image
ಕನ್ನಡ ಮಾತನಾಡಲ್ಲ ಅಂತ ದರ್ಪ ತೋರಿದ್ದ SBI ಬ್ಯಾಂಕ್​ ಮ್ಯಾನೇಜರ್ ಎತ್ತಂಗಡಿ
Image
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್

ಸಾಯಿ ಲೇಔಟ್‌ಗೆ ಭೇಟಿ ನೀಡಿದ್ದು, ಅದು ರಾಜಕಾಲುವೆಗಿಂತ ತಗ್ಗು ಪ್ರದೇಶದಲ್ಲಿದೆ. ರೈಲ್ವೆ ಸೇತುವೆ ಬಳಿ ವೆಂಟ್ ಕಿರಿದಾಗಿದ್ದು, ಅದನ್ನು ಅಗಲಗೊಳಿಸಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ. ಅನೇಕ ವರ್ಷದಿಂದ ಈ ಸಮಸ್ಯೆಯಿದೆ. ವೆಂಟ್‌ಗಳ ನಿರ್ಮಾಣ ಮತ್ತು ಅಗಲಗೊಳಿಸಲು ಈಗಾಗಲೇ ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ. ಬಿಬಿಎಂಪಿ ಇದಕ್ಕಾಗಿ ಒಟ್ಟು 13 ಕೋಟಿ ರೂ. ಬಿಡುಗಡೆಗೆ ಸೂಚನೆ ನೀಡಿದ್ದೇನೆ. ಈಗಾಗಲೇ 6 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, 3 ಕೋಟಿ ರೂ. ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಹಾದೇವಪುರದ ಪಣತ್ತೂರು ಗಾರ್ಡನ್‌ನಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಪ್ರತಿ ವರ್ಷ ಸಮಸ್ಯೆ ಆಗುತ್ತಿದೆ. ರೈಲ್ವೇ ಲೈನ್ ಕೆಳಗಡೆ ಅಗಲ ಬಹಳ ಕಡಿಮೆಯಿದೆ. ಇದನ್ನು ವಿಸ್ತರಿಸಲು ಹಾಗೂ ರಸ್ತೆ ಅಗಲೀಕರಣ ಕಾರ್ಯ ಈಗಾಗಲೇ ನಡೆಯುತ್ತಿದ್ದು, ಶೇ.20ರಷ್ಟು ಕಾಮಗಾರಿ ಬಾಕಿಯಿದೆ. ಇಲ್ಲಿ ಟ್ರೆಂಚ್ಲೆಸ್ ತಾಂತ್ರಿಕತೆ ಬಳಸಿ ಕೆಲಸ ಮಾಡುತ್ತಿದ್ದು, 45ದಿನಗಳ ಒಳಗಾಗಿ ಉಳಿದಿರುವ ಎಲ್ಲಾ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇನೆ ಎಂದರು.

ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನಾಲ್ಕು ಕಡೆಗಳಿಂದ ನೀರು ಬರುತ್ತಿದ್ದು, ಅಲ್ಲಿಂದ ಎಲ್ಲಾ ನೀರು ಹೆಚ್ಎಸ್ಆರ್ ಲೇಔಟ್ ಕಡೆ ಹರಿದು ಬರುತ್ತದೆ. ಮೆಟ್ರೋ, ಬಿಬಿಎಂಪಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಮನ್ವಯದಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಈ ಮೂರು ವಿಭಾಗಗಳು ಈ ಕುರಿತು ಯೋಜನೆ ರೂಪಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಗುರಪ್ಪನಪಾಳ್ಯದಲ್ಲಿ ತಡೆಗೋಡೆ ಕುಸಿದು ಬಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿರುವ ಎಲ್ಲಾ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸಲಾಗುವುದು. ಹಾನಿ ಕುರಿತು ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ಗಳಲ್ಲಿ ನಿರ್ಮಾಣಕ್ಕೆ ಇನ್ನು ಮುಂದೆ ಅನುಮತಿ ನೀಡದಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಸೂಚನೆ ನೀಡಿದ್ದೇನೆ. 166 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ತಗ್ಗು ಪ್ರದೇಶಗಳೆಂದು ಗುರುತಿಸಿ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೆಂಗಳೂರಿನಲ್ಲಿ 2022ರಲ್ಲಿ 299 ಮಿಮೀ ಮಳೆಯಾಗಿತ್ತು. 10 ವರ್ಷಗಳಲ್ಲಿ ಇದು ಎರಡನೇ ಬಾರಿ ಹೆಚ್ಚಿನ ಮಳೆಯಾಗಿದೆ. ಮೇ. 19 ರಂದು ಮಧ್ಯರಾತ್ರಿ 132 ಮಿಮೀ ಮಳೆ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ರಾಜಕಾಲುವೆ ಸುಮಾರು 860 ಕಿಮೀ ಇದೆ. 491 ಕಿಮೀ ರಾಜಕಾಲುವೆಯಲ್ಲಿ ಲೈನಿಂಗ್ ಕೆಲಸ ಮುಗಿದಿದೆ. 125 ಕಿಮೀ ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದು, ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು. ಇನ್ನುಳಿದ 173 ಕಿಮೀ ರಾಜಕಾಲುವೆ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ನಿಂದ 2 ಸಾವಿರ ಕೋಟಿ ರೂ. ಸಾಲ ಪಡೆದು ಕಾಮಗಾರಿಗೆ ಕೈಗೊಂಡಿದ್ದೇವೆ. ಇದರ ಟೆಂಡರ್ ಮುಗಿದಿದ್ದು, ಮೂರು ವರ್ಷಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದೇನೆ.

ಇದನ್ನೂ ನೋಡಿ: ಮಳೆಹಾನಿ ಪ್ರದೇಶಗಳ ಪರಿಶೀಲನೆಗೆ ಸಿಎಂ ಬಂದುಹೋದರು, ನಮ್ಮೊಂದಿಗೆ ಮಾತಾಡಲಿಲ್ಲ: ಸಾಯಿ ಲೇಔಟ್ ನಿವಾಸಿಗಳು

ಒತ್ತುವರಿ ಮಾಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ, ಮುಲಾಜಿಲ್ಲದೆ ತೆರವುಗೊಳಿಸಲು ಸ್ಪಷ್ಟ ಸೂಚನೆ ನೀಡಿದ್ದೇನೆ. ಬೆಂಗಳೂರಿನಲ್ಲಿ ನೆರೆ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ರಾಜಕಾಲುವೆ ಅಭಿವೃದ್ದಿಯಂತಹ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸಿ ಕಾಮಗಾರಿಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:44 pm, Wed, 21 May 25