ಎಂದಿಗೂ ಕನ್ನಡ ಮಾತನಾಡಲ್ಲ ಅಂತ ದರ್ಪ ತೋರಿದ್ದ SBI ಬ್ಯಾಂಕ್ ಮ್ಯಾನೇಜರ್: ಸಿಎಂ ಖಂಡನೆ ಬೆನ್ನಲ್ಲೇ ಎತ್ತಂಗಡಿ
ಚಂದಾಪುರ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ವಿಚಾರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಹಕರೊಬ್ಬರೊಂದಿಗೆ ಹಿಂದಿಯಲ್ಲಿ ಮಾತನಾಡಿದ ಮ್ಯಾನೇಜರ್, ನಾನು ಯಾವತ್ತೂ ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಮ್ಯಾನೇಜರ್ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕ್ಷಮೆ ಕೇಳುವಂತೆ ಆಗ್ರಹಿಸಿವೆ.
ಬೆಂಗಳೂರು, ಮೇ 21: ಕರ್ನಾಟಕಕ್ಕೆ (Karnataka) ಬಂದು ಇಲ್ಲೇ ಬದುಕು ಕಟ್ಟಿಕೊಂಡರೂ ಈ ನೆಲದ ಕೆಲವು ಪರಭಾಷಿಕರಿಗೆ ಕೊಂಚವೂ ಕೃತಜ್ಞತೆಯೇ ಇಲ್ಲ. ಇತ್ತೀಚಿಗೆ ಕೋರಮಂಗಲದ ಹೋಟೆಲ್ನಲ್ಲಿ ಕನ್ನಡಿಗರ ಬಗ್ಗೆ ಹಿಂದಿಯಲ್ಲಿ ಅತಿ ಕೆಟ್ಟದಾಗಿ ನಿಂದಿಸಿದ ಪದಗಳನ್ನು ಎಲ್ಇಡಿ ಸ್ಕ್ರೀನಲ್ಲಿ ಹಾಕುವ ಮೂಲಕ ಅವಮಾನಿಸಿದ್ದರು. ಇವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಚಂದಾಪುರದ ಎಸ್‌ಬಿಐ ಬ್ಯಾಂಕ್ನ (SBI Bank) ಮಹಿಳಾ ಮ್ಯಾನೇಜರ್ ನಾನು ಯಾವತ್ತೂ ಕನ್ನಡ ಮಾತಾಡಲ್ಲ ಅಂತ ದರ್ಪ ತೋರಿದ್ದಾರೆ. ಈ ಮೂಲಕ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದ್ದಾರೆ.
ಚಂದಾಪುರದ ಎಸ್‌ಬಿಐ ಬ್ಯಾಂಕ್ಗೆ ಕೆಲಸ ನಿಮಿತ್ತ ಗ್ರಾಹಕರೊಬ್ಬರು ಹೋಗಿದ್ದರು. ಬ್ಯಾಂಕ್ ಮ್ಯಾನೇಜರ್ ಪ್ರಿಯಾಂಕಾ, ಗ್ರಾಹಕರ ಜೊತೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ, ಗ್ರಾಹಕ ಕನ್ನಡದಲ್ಲಿ ಮಾತನಾಡಿ ಎಂದಿದ್ದಾರೆ. ಆಗ, ಬ್ಯಾಂಕ್ ಮ್ಯಾನೇಜರ್ ಪ್ರಿಯಾಂಕಾ ಗಾಹಕರಿಗೆ ಹಿಂದಿಯಲ್ಲಿ ಮಾತನಾಡುವಂತೆ ಹೇಳಿದ್ದು, ಇದು ಭಾರತ ಬರೀ ಕರ್ನಾಟಕ ಮಾತ್ರ ಅಲ್ಲ. ನಾನು ಯಾವತ್ತೂ ಕನ್ನಡ ಮಾತಾಡಲ್ಲ ಎಂದು ಹೇಳುವ ಮೂಲಕ ಕನ್ನಡಿಗರನ್ನು ಕೆರಳಿಸುವಂತ ಹೇಳಿಕೆ ನೀಡಿದ್ದಾರೆ.
ಇನ್ನು, ಬ್ಯಾಂಕ್ ಮ್ಯಾನೇಜರ್ ದರ್ಪ ತೋರಿರುವ ದೃಶ್ಯವನ್ನು ಗ್ರಾಹಕ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬ್ಯಾಂಕ್ ಮ್ಯಾನೇಜರ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು, ಈ ವಿಚಾರ ತಿಳಿಯುತ್ತಿದ್ದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಚಂದಾಪುರ SBI ಬ್ಯಾಂಕ್ ಶಾಖೆಗೆ ತೆರಳಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಮ್ಯಾನೇಜರ್ ಪ್ರಿಯಾಂಕಾ ಸ್ಥಳಕ್ಕೆ ಬರಬೇಕು. ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆ ಕಾರ್ಯಕರ್ತರು ಬ್ಯಾಂಕ್ ಒಳಗೆ ನುಗ್ಗಿ ದಾಖಲೆ ಪತ್ರಗಳನ್ನು ಹರಿದು ಹಾಕಿ ಅಕ್ರೋಶ ವ್ಯಕ್ತಪಡಿಸಿದರು.
ಕ್ಷಮೆ ಕೇಳಿದ ಬ್ಯಾಂಕ್ ಮ್ಯಾನೇಜರ್
ಕನ್ನಡಿಗರ ಆಕ್ರೋಶಕ್ಕೆ ಬ್ಯಾಂಕ್ನ ಮಹಿಳಾ ಮ್ಯಾನೇಜರ್ರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ. ಹೊರ ರಾಜ್ಯಕ್ಕೆ ವರ್ಗಾವಣೆಗೊಳಿಸಿ ಮಂಗಳವಾರ ರಾತ್ರಿಯೇ ಆದೇಶ ಹೊರಡಿಸಲಾಗಿದೆ. ಕನ್ನಡಿಗರ ಪ್ರತಿಭಟನೆಯ ಭೀತಿಯಿಂದ ಬ್ಯಾಂಕ್ ಮ್ಯಾನೇಜರ್ ಕ್ಷಮೆ ಕೇಳಿದ್ದಾರೆ.
The arrogant SBI manager who was saying She will never speak Kannada now apologised. #ServeInMyLanguage #StopHindiImposition #KannadaInKarnataka https://t.co/8rvQjGVEls pic.twitter.com/Kn4ChBjw4D
— Safa 🇮🇳 (@safaspeaks) May 21, 2025
ಒಂದು ತಿಂಗಳಲ್ಲಿ ಕನ್ನಡ ಕಲಿಯಬೇಕು
ಒಂದು ತಿಂಗಳ ಸಮಯವಕಾಶ ಕೊಡುತ್ತೇವೆ. ಎಲ್ಲ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ಗಳು ಕನ್ನಡ ಕಲಿಯಬೇಕು. ಕನ್ನಡದಲ್ಲಿ ವ್ಯವಹರಿಸಬೇಕು. ಇಲ್ಲದಿದ್ದರೆ ಎಲ್ಲ ಶಾಖೆಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಅಂತ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಲ್ಲಿ ಮನವಿ ಮಾಡುತ್ತೇವೆ ಎಂದು ಕರವೇ ಕಾರ್ಯಕರ್ತ ಬಸವರಾಜು ಪಡುಕೋಟೆ ಹೇಳಿದರು.
ಸಿದ್ದರಾಮಯ್ಯ ಖಂಡನೆ
“ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿರುವ ಎಸ್‌ಬಿಐ ಶಾಖಾ ವ್ಯವಸ್ಥಾಪಕರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರನ್ನು ಕಡೆಗಣಿಸುತ್ತಿರುವುದು ತೀವ್ರವಾಗಿ ಖಂಡನೀಯ. ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್‌ಬಿಐನ ತ್ವರಿತ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗಿದೆ ಎಂದು ಪರಿಗಣಿಸಬಹುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ ಕೇಸ್: ಮ್ಯಾನೇಜರ್ ಬಂಧನ, ಜಿಎಸ್ ಸೂಟ್ ಹೋಟೆಲ್ ಸೀಜ್
“ಆದಾಗ್ಯೂ, ಅಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಭಾರತದಾದ್ಯಂತ ಎಲ್ಲಾ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ನಾನು ಹಣಕಾಸು ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸುತ್ತೇನೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು” ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Wed, 21 May 25







