AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾನು ಮುಷ್ತಾಕ್ ಬೂಕರ್ ಪಡೆದ ನೆಪದಲ್ಲಿ ಎರಡು ಮಾತು: ಡಾ. ಟಿಎಸ್ ಗೊರವರ ಬರಹ

ಕರ್ನಾಟಕದ ಹೆಮ್ಮೆಯ ಸಾಹಿತಿ, ಕತೆಗಾರ್ತಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಒಲಿದಿದೆ. ಇಂಗ್ಲೆಂಡ್​ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದರೊಂದಿಗೆ, ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಕತೆಗಳ ಬಗ್ಗೆ ಅವರಿಗಿರುವ ತುಡಿತ, ವ್ಯಾಮೋಹ ಎಂಥದ್ದು ಎಂಬುದನ್ನು ‘ಅಕ್ಷರ ಸಂಗಾತ’ ಸಂಪಾದಕರು, ಸಾಹಿತಿಯೂ ಆಗಿರುವ ಡಾ. ಟಿ.ಎಸ್.ಗೊರವರ ಇಲ್ಲಿ ವಿವರಿಸಿದ್ದಾರೆ.

ಬಾನು ಮುಷ್ತಾಕ್ ಬೂಕರ್ ಪಡೆದ ನೆಪದಲ್ಲಿ ಎರಡು ಮಾತು: ಡಾ. ಟಿಎಸ್ ಗೊರವರ ಬರಹ
ಬಾನು ಮುಷ್ತಾಕ್ ಹಾಗೂ ಒಳಚಿತ್ರದಲ್ಲಿ ಲೇಖಕ ಡಾ. ಟಿಎಸ್ ಗೊರವರ
Ganapathi Sharma
|

Updated on:May 21, 2025 | 2:55 PM

Share

ಹಿರಿಯ ಕಥೆಗಾರ್ತಿ ಬಾನು ಮುಷ್ತಾಕ್ (Banu Mushtaq)​ ಕನ್ನಡ ಕಥಾಲೋಕಕ್ಕೆ ಮೈನವಿರೇಳಿಸುವ ಹಿಗ್ಗಿನ ಸುದ್ದಿಯನ್ನು ಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಜರ್ನಲ್‌ಗಳಿಗೆ ಬರೆಯುತ್ತ, ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕನ್ನಡತಿ ದೀಪಾ ಭಸ್ತಿ ಅನುವಾದಿಸಿರುವ ಬಾನು ಅವರ ಆಯ್ದ 12 ಕತೆಗಳ ಸಂಕಲನ ‘ಹಾರ್ಟ್ ಲ್ಯಾಂಪ್’ ಕೃತಿಗೆ ಬೂಕರ್ ಪ್ರಶಸ್ತಿ (Booker Award) ಒಲಿದಿದೆ. ಈ ಮೂಲಕ ನಮ್ಮ ನೆಲದ ಹೆಮ್ಮೆಯ ಕಥೆಗಾರ್ತಿ ಕನ್ನಡ ಭಾಷೆಯ ಕಸುವು, ಕಂಪು ಮತ್ತು ಅದರ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಗೊಳ್ಳುವಂತೆ ಮಾಡಿದ್ದಾರೆ. ಇದು ಸಣ್ಣ ಸಂಗತಿಯೇನೂ ಅಲ್ಲ. ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ದಾಖಲೆಯಾಗಿದೆ. ಮುಸ್ಲಿಂ ಸಮುದಾಯದಿಂದ ಬಂದ ಬಾನು ಅವರು ಸಾಧಿಸಿದ ಈ ಎತ್ತರ ಎಲ್ಲರೂ ಹೆಮ್ಮೆ ಪಡುವಂತಹದ್ದು. ಪ್ರತಿಭೆ, ಸಾಧನೆ ಅನ್ನುವುದು ಕೆಲವರ ಸ್ವತ್ತು ಮಾತ್ರ ಅಲ್ಲ, ಪರಿಶ್ರಮ, ಪ್ರಯತ್ನಗಳಿದ್ದರೆ ಯಾರಾದರೂ ಸಾಧಿಸಬಹುದು ಎನ್ನುವುದನ್ನು ಅವರು ರುಜುವಾತುಗೊಳಿಸಿದ್ದಾರೆ.

ಬಾನು ಅವರು ಸವೆಸಿದ ಹಾದಿ ಹೂ, ಬಳ್ಳಿಗಳು ಚಾಚಿಕೊಂಡು ಘಮಗುಡುವ ದಾರಿಯಂತೇನೂ ಇರಲಿಲ್ಲ. ಆ ಹಾದಿಗುಂಟ ಸಂಪ್ರದಾಯವಾದಿಗಳು ಅಸ್ತವ್ಯಸ್ತವಾಗಿ ಚೆಲ್ಲಿದ ಮುಳ್ಳುಗಳಿದ್ದವು. ಪುರುಷಪ್ರಧಾನ ವ್ಯವಸ್ಥೆಯ ವ್ಯಂಗ್ಯದ ಮೊನಚು ಈಟಿಗಳಿದ್ದವು. ಹೆಣ್ಣೆಂಬ ತಾತ್ಸಾರದ ಜೇಡ ಹೆಣೆದ ಬಿಡಿಸಿಕೊಳ್ಳಲಾರದಂಥ ಬಲೆಗಳಿದ್ದವು. ತಾಯಿ, ಅಜ್ಜಿ ಮತ್ತು ಇಡೀ ಕುಟುಂಬ ಬಾನು ಅವರಿಗೆ “ಅವಳು ಒಂದು ದಿನ ಅವರಪ್ಪನ ಮಾನವನ್ನು ಸಾರ್ವಜನಿಕವಾಗಿ ಹರಾಜು ಹಾಕುತ್ತಾಳೆ..” ಎಂದು ತೋರುತ್ತಿದ್ದ ಸಿಟ್ಟಿನ ತಾಪವಿತ್ತು. ಈ ಎಲ್ಲವನ್ನೂ ದಾಟಿಕೊಂಡು ಬರುವುದು ಅಷ್ಟು ಸುಲಭದ್ದಾಗಿರಲಿಲ್ಲ.

ಸಾಹಿತ್ಯಕ ವಾತಾವರಣವೇ ಇಲ್ಲದ ಕುಟುಂಬದಿಂದ ಬಂದ ಬಾನು ಅವರು ವರ್ಣಮಾಲೆ ಕಲಿತಾಗಲೇ ಬರೆಯುವದನ್ನು ಕಲಿತೆ ಎನ್ನುತ್ತಾರೆ. ತಮ್ಮ ಇಡೀ ಕುಟುಂಬದಲ್ಲಿ ಮೊದಲ ಪದವೀಧರ ಮಹಿಳೆ ಅವರು. ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಾನುರವರ ಅಪ್ಪ ಅಂತಃಕರುಣಿಯಾಗಿದ್ದರು. ಮಗಳಿಗೆ ಧೈರ್ಯ, ಪ್ರೀತಿ, ವಾತ್ಸಲ್ಯ ತೋರುತ್ತ ಅವಳ ಓದು, ಸಾಧನೆಗೆ ಬೆಂಬಲವಾಗಿ ನಿಂತರು. ತಮ್ಮ ಸೃಜನಶೀಲ ಪ್ರಯೋಗಗಳಿಗೆ ಧೈರ್ಯದಂತಿದ್ದ ಅಪ್ಪನನ್ನು ಬಾನುರವರು ಯಾವಾಗಲೂ ನೆನೆಯುತ್ತಾರೆ. ಇಂಥ ಅಪ್ಪಂದಿರು ಸಿಗುವುದು ಅಪರೂಪ. ಎಷ್ಟೋ ಕುಟುಂಬಗಳು ತಂದೆಯ ಬೇಜವಾಬ್ದಾರಿ ಕಾರಣದಿಂದಲೇ ಎಂದೂ ಒಂದಾಗದಂತೆ ಚೆಲ್ಲಾಪಿಲ್ಲಿಯಾಗಿ ಹೋಗಿವೆ. ಹಾಗಾಗಿ ಬಾನು ಅವರ ತಂದೆಯೂ ಅಭಿನಂದನಾರ್ಹರು.

ಇದನ್ನೂ ಓದಿ
Image
ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್
Image
ಪ್ರತಿಷ್ಠಿತ ಬೂಕರ್​​ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಹಿತಿ ಬಾನು ಮುಷ್ತಾಕ್
Image
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
Image
ಬೂಕರ್ ಪ್ರಶಸ್ತಿಯ ಶಾರ್ಟ್ ಲಿಸ್ಟ್​ನಲ್ಲಿ ಸ್ಥಾನ ಪಡೆದ ಹಾಸನದ ಸಾಹಿತಿ

ಮುಂದೆ ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕರ್ತೆಯಾಗಿ, ರಾಜ್ಯ ಮಟ್ಟದ ಸಂಚಾಲಕಿಯಾಗಿದ್ದ ಬಾನು ಅವರು ಸಾಮಾಜಿಕ ವ್ಯವಸ್ಥೆ, ಲಿಂಗ ತಾರತಮ್ಯ, ಯಾಜಮಾನ್ಯ ಸಂಸ್ಕೃತಿ, ವರ್ಗಾಧಾರಿತ ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತಾ, ಸಾಮಾಜಿಕ ಕಾರ್ಯಕರ್ತೆಯಾಗಿ ಹೋರಾಡುತ್ತ, ಬರೆಯುತ್ತಲೇ ಬಂದರು. ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿದ್ದರು. ವಕೀಲೆಯಾಗಿ, ಹಾಸನ ನಗರಸಭೆಗೆ ಎರಡು ಅವಧಿಗೆ ನಗರಸಭಾ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಅವರ ವೃತ್ತಿ, ಸಾಮಾಜಿಕ ಚಳವಳಿಗಳಲ್ಲಿ ಪಾಲ್ಗೊಳ್ಳುವಿಕೆ ಸಮಾಜವನ್ನು ಗ್ರಹಿಸುವ ದೃಷ್ಟಿಕೋನವನ್ನು ನೀಡುವುದರ ಜೊತೆಗೆ ಅಪಾರವಾದ ಲೋಕಾನುಭವವನ್ನು ನೀಡಿದವು. ಹೂ ಹಗುರ ಭಾವನೆಗಳನ್ನೇ ಬರೆಯುತ್ತಾ ಬಂದಿರುವ ಲೇಖಕರಿಗೆ ಪಾಠದಂತಿರುವ ಬಾನುರವರು ಸಾಮಾಜಿಕ ವ್ಯವಸ್ಥೆ ಸೃಷ್ಟಿಸಿದ ಅರಾಜಕತೆಯ ಸ್ಥಿತ್ಯಂತರಗಳಿಗೆ ಬೆನ್ನು ಹಾಕದೆ ಅವುಗಳೊಂದಿಗೆ ಮುಖಾಮುಖಿಯಾಗುತ್ತ, ಅವುಗಳನ್ನೇ ಕತೆಯಾಗಿಸುತ್ತ ಬಂದರು. ಬಂಡಾಯವೇ ಅವರ ಮನೋಧರ್ಮವೂ ಮತ್ತು ಬರಹದ ಶಕ್ತಿಯೂ ಆಗಿದೆ.

ಈಗ್ಗೆ ಮೂರು ವರ್ಷಗಳ ಹಿಂದೆ ನಮ್ಮ ‘ಅಕ್ಷರ ಸಂಗಾತ’ ಪತ್ರಿಕೆ ನಡೆಸುತ್ತಿದ್ದ ಕಥಾ ಸ್ಪರ್ಧೆಗೆ ಬಾನು ಮುಷ್ತಾಕ್ ತೀರ್ಪುಗಾರರಾಗಿದ್ದರು. ಕಥನಗಾರಿಕೆಯ ಕುರಿತಾಗಿ ಅವರು ಹೇಳಿದ ಮಾತುಗಳು ಮಹತ್ವದ್ದಾಗಿರುವದರಿಂದ ಇಲ್ಲಿ ಉಲ್ಲೇಖಿಸಬೇಕು ಅನಿಸುತ್ತಿದೆ : “ಕಥೆಯ ಬಗ್ಗೆ ನನಗೆ ವಿಪರೀತ ವ್ಯಾಮೋಹ. ಕಳೆದುಹೋಗಿದ್ದ ಗೆಳೆಯನೊಬ್ಬ ಅಚಾನಕವಾಗಿ ಎದುರಾಗಿ ಒಮ್ಮೆಲೆ ಆವರಿಸಿಕೊಳ್ಳುವಂತೆ, ಕಂದನ ಹಾಲುಗಲ್ಲದ ಮೇಲೆ ಚಿಮ್ಮಿದ ಮೊಲೆ ಹಾಲಿನಂತೆ, ಕಂಬನಿ, ನಗು, ಸಂಘರ್ಷ, ದ್ವೇಷ, ಅಸೂಯೆ, ಪ್ರೀತಿ ಮೊದಲಾದ ಭಾವಗಳನ್ನು ಪದಗಳಲ್ಲಿ ದಾಖಲಿಸಿದಂತೆ. ಒಟ್ಟಾರೆ ಇದೊಂದು ಅತ್ಯಂತ ಕ್ಲಿಷ್ಟಕರವಾದ ಜವಾಬುದಾರಿ. ಅಷ್ಟೇ ಅಲ್ಲದೆ ಎದೆಯಾಳದ ಒಳಸುಳಿಗಳ ಕುಸುರಿ ಕೆಲಸದ ಅನಾವರಣ ಮತ್ತು ಮಿಣುಕು ಹುಳುಗಳ ಚಿನ್ನಾಟ. ಹೀಗಾಗಿ ಕಥೆಗಳ ಬಗ್ಗೆ ನಾನು ಯಾವುದೇ ಫರ್ಮಾನುಗಳನ್ನು ಹೊರಡಿಸುವದಿಲ್ಲ. ಮತ್ತು ಯಾವುದೇ ಸೂತ್ರದಲ್ಲಿ ಬಂಧಿಸುವದಿಲ್ಲ. ಪಾತ್ರಗಳ ಪರಮಾಧಿಕಾರವನ್ನು ಅವರ ಎದೆಯ ಜಗ್ಗಾಟವನ್ನು ಕುತೂಹಲದಿಂದ ನೋಡುತ್ತೇನೆ. ಬೇರೆಯವರ ಬದುಕಿನಲ್ಲಿ ಇಣುಕುವ ನನ್ನ ಹವ್ಯಾಸ ನನ್ನಲ್ಲಿ ಅಪರಾಧಿ ಪ್ರಜ್ಞೆಯನ್ನು ಮೂಡಿಸುವದಿಲ್ಲ. ಬದಲಿಗೆ ಅವರ ಸಂಘರ್ಷದ ಸಂದರ್ಭದಲ್ಲಿ ನನ್ನ ಎದೆಯ ಬಡಿತ ತಪ್ಪುವುದು, ನನ್ನ ಕಂಠ ರುದ್ಧವಾಗುವುದು, ನನ್ನ ಕಂಬನಿ ಇಣುಕುವುದು, ತುಟಿಗಳು ಬಿರಿದು ನಗೆಯನ್ನು ಜಾರಿಸುವುದು ಮೊದಲಾದ ಸಹಜ ಕ್ರಿಯೆಗಳಲ್ಲಿ ಮಗ್ನಳಾಗುತ್ತೇನೆ. ಕಥೆಯ ಓದು ಮುಗಿದು ಹೋದರೂ ನನ್ನಲ್ಲಿ ಉಳಿಯುವ ಮತ್ತು ಬೆಳೆಯುವ ಕಥೆ ಆಕಾಶದ ಅಗಲಕ್ಕೂ ಹರಡಿದಾಗ, ಚಂದ್ರನ ಬೆನ್ನೇರಿದಾಗ, ಸೂರ್ಯನ ಸುಂದರ ಮುಖದ ಕಿರಣಗಳು ಸುಡುವುದನ್ನು ಒಂದಿನಿತು ಕಡಿಮೆ ಮಾಡಿದಾಗ ನಾನಿನ್ನೂ ಆ ಕಥೆಯ ಬಂಧದೊಳಗೆ ಗಿರಿಗಿರಿ ಸುತ್ತುತ್ತಿರುತ್ತೇನೆ.”

ಇದನ್ನೂ ಓದಿ: ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್: ವ್ಯಕ್ತಿ ಚಿತ್ರಣ ಇಲ್ಲಿದೆ

ಈ ಮಾತುಗಳೇ ಅವರ ಕಥನಗಾರಿಕೆ, ಬರಹದ ಆಶಯ, ಕಾಣ್ಕೆ ಮತ್ತು ಬದುಕಿನ ತುಡಿತಗಳನ್ನು ಬಿಂಬಿಸುತ್ತದೆ. ಜೊತೆಗೆ ನಮ್ಮ ಸಮಕಾಲೀನ ಸಾಹಿತ್ಯಲೋಕ ಕ್ರಮಿಸಬೇಕಾದ ಗಮ್ಯದ ಕಡೆಗೂ ಬೆರಳು ತೋರಿಸುವಂತಿದೆ.

ಬೂಕರ್ ನೆಪದಲ್ಲಿ ಬಾನು ಮುಷ್ತಾಕ್‌ರ ಕಥೆಗಳನ್ನು ಮತ್ತೊಮ್ಮೆ ಓದೋಣ. ಅವರ ಕಾಳಜಿಗಳನ್ನು ನಮ್ಮದಾಗಿಸಿಕೊಳ್ಳೋಣ. ಅವರಿಗೆ ಹೃದಯತುಂಬಿ ಅಭಿನಂದಿಸೋಣ.

ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Wed, 21 May 25

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ