ನಮ್ಮ ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್: ವ್ಯಾಪಕ ಆಕ್ರೋಶ
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ಆರೋಪ ಕೇಳಿಬಂದಿದೆ. ಸುಮಾರು 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪರಿಚಿತನೋರ್ವ ಅಪ್ಲೋಡ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಳಿಕ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ.

ಬೆಂಗಳೂರು, ಮೇ 21: ನಮ್ಮ ಮೆಟ್ರೋ (Namma Metro) ಸಿಲಿಕಾನ್ ಸಿಟಿ ಜನರ ಜೀವನಾಡಿ. ಈ ವೇಗದೂತ ಮೂಲಕ ಪ್ರತಿನಿತ್ಯ ಲಕ್ಷಾಂತರ ಜನರು ನಗರದ ಮೂಲೆ ಮೂಲೆಗೆ ಸಂಚಾರ ಮಾಡುತ್ತಾರೆ. ಆದರೆ ನಮ್ಮ ಮೆಟ್ರೋ ಹೆಣ್ಣು ಮಕ್ಕಳಿಗೆ ಎಷ್ಟು ಸುರಕ್ಷಿತ ಎಂಬ ಅನುಮಾನಗಳು ಆಗಾಗ ಮೂಡುತ್ತವೆ. ಏಕೆಂದರೆ ಮೆಟ್ರೋದಲ್ಲಿ ಹುಡುಗಿಯರ (girl) ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುವ ಮೂಲಕ ಅಪರಿಚಿತನೋರ್ವ ವಿಕೃತಿ ಮೆರೆದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ಬೆನ್ನಲ್ಲೇ ಇದೀಗ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ (ಸುಮೊಟೋ ಕೇಸ್) ಪ್ರಕರಣ ದಾಖಲಾಗಿದೆ.
“ಮೆಟ್ರೋ ಕ್ಲಿಕ್ಸ್” ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೋದಲ್ಲಿನ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. 5,538 ಹಿಬಾಲಕರನ್ನು ಹೊಂದಿರುವ ಖಾತೆಯಲ್ಲಿ ಸುಮಾರು 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪರಿಚಿತನೋರ್ವ ಹಂಚಿಕೊಂಡಿದ್ದಾನೆ. ಮೆಟ್ರೋ ರೈಲಿನ ಒಳಗೆ, ನಿಲ್ದಾಣಗಳಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ತುಮಕೂರು ಮೆಟ್ರೋ ಸ್ಟುಪಿಡ್ ಐಡಿಯಾ ಎಂದ ತೇಜಸ್ವಿ ಸೂರ್ಯ! ಕೊಟ್ಟ ಕಾರಣ ಇಲ್ಲಿದೆ
ಸದ್ಯ ಅಪರಿಚಿತನ ವಿಕೃತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಲ್ಲಾ ವಿಡಿಯೋಗಳು ಡಿಲೀಟ್ ಆಗಿವೆ. ಐಟಿ ಆ್ಯಕ್ಟ್ 2008 ಸೆಕ್ಷನ್ 67, ಬಿಎನ್ಎಸ್ 78(2)ರಡಿ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್ನು ಘಟನೆ ಬಗ್ಗೆ ಕೆಲ ಜನರು ಧ್ವನಿ ಎತ್ತಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಅಪರಿಚಿತನೋರ್ವ ಇನ್ಸ್ಟಾಗ್ರಾಂನಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದಾನೆ. ನಾಳೆ ಈ ವಿಡಿಯೋಗಳಲ್ಲಿ ನಮ್ಮ ಅಕ್ಕ, ತಂಗಿಯರು ಇರಬಹುದು ಹುಷಾರಾಗಿರಿ. ಮೊದಲು ಈ ಖಾತೆಯನ್ನು ರಿಪೋರ್ಟ್ ಮಾಡಿ. ಬೆಂಗಳೂರು ನಗರ ಪೊಲೀಸರಿಗೂ ಟ್ಯಾಗ ಮಾಡಿ. ಆದಷ್ಟು ಬೇಗ ಈ ಖಾತೆಯನ್ನು ತೆಗೆಸಲೇಬೇಕು’ ಎಂದು ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ: 160 ಮೆಟ್ರೋ ಪಿಲ್ಲರ್ಗಳಿಗೆ ಕಲರ್ ಲೈಟಿಂಗ್ಸ್: ದುಂದುವೆಚ್ಚಕ್ಕೆ ಮುಂದಾದ ಬಿಎಂಆರ್ಸಿಎಲ್, ಪ್ರಯಾಣಿಕರು ಆಕ್ರೋಶ
ಈ ಬಗ್ಗೆ ಮತ್ತೊಬ್ಬರು ಮಾತನಾಡಿದ್ದು, ‘ಈ ರೀತಿಯ ಕೃತ್ಯಗಳನ್ನು ನಾವು ನಾಶ ಮಾಡದಿದ್ದರೆ ಮುಂದೊಂದು ದಿನ ಇದು ನಮ್ಮನ್ನು ನಾಶ ಮಾಡುತ್ತದೆ’ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದ ಪಿಸಿ ಮೋಹನ್ ಟ್ವೀಟ್
An Instagram account is secretly filming women on Namma Metro, and shockingly, 5,000 people are following it. It’s a blatant violation of privacy and dignity, not just creepy but a serious crime. @BlrCityPolice, take immediate action. pic.twitter.com/RwjbHLR8Fd
— P C Mohan (@PCMohanMP) May 20, 2025
ಇನ್ನು ಈ ಬಗ್ಗೆ ಕೇಂದ್ರ ಬಿಜೆಪಿ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿದ್ದು, ಇದು ಆಘಾತಕಾರಿ ಸಂಗತಿಯಾಗಿದೆ. ಇದು ಭಯಾನಕ ಅಪರಾಧ ಮಾತ್ರವಲ್ಲ, ಗಂಭೀರ ಅಪರಾಧವೂ ಆಗಿದೆ. ತಕ್ಷಣ ಬೆಂಗಳೂರು ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:06 am, Wed, 21 May 25








