ಬೆಂಗಳೂರು ತುಮಕೂರು ಮೆಟ್ರೋ ಸಂಚಾರ ಬಹುತೇಕ ಪಕ್ಕಾ: ಕಾರ್ಯಸಾಧ್ಯತಾ ಪರೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ
ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಜನರ ಬೇಡಿಕೆ ಸಹ ಹೆಚ್ಚಾಗುತ್ತಿದೆ. ರಾಜಧಾನಿಗೆ ಹೊಂದಿಕೊಂಡಿರುವ ಜಿಲ್ಲೆಗಳಿಗೂ ಸುಗಮ ಸಂಪರ್ಕ ಬೇಕೆಂಬ ಕೂಗು ಹೆಚ್ಚಾಗಿರುವ ಬೆನ್ನಲ್ಲೇ, ಕಲ್ಪತರು ನಾಡು ತುಮಕೂರಿಗೆ ಮೆಟ್ರೋ ವಿಸ್ತರಣೆ ಯೋಜನೆಗೆ ಬಿಎಂಆರ್ಸಿಎಲ್ ವೇಗ ನೀಡಿದ್ದು, ಈಗಾಗಲೇ ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಬೆಂಗಳೂರು, ಮೇ 16: ಬೆಂಗಳೂರು ಹಾಗೂ ತುಮಕೂರು ನಮ್ಮ ಮೆಟ್ರೋ (Namma Metro) ಯೋಜನೆ ಕನಸು ನನಸಾಗುವ ಸಾಧ್ಯತೆ ಹೆಚ್ಚಾಗಿದೆ. ಎರಡು ನಗರಗಳ ನಡುವಿನ ಮೆಟ್ರೋ ಯೋಜನೆ ಬಗ್ಗೆ ಹೊಸ ಮಾಹಿತಿ ಸಿಕ್ಕಿದ್ದು, ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಈಗಾಗಲೇ ಖಾಸಗಿ ಕಂಪನಿ ಬಿಎಂಆರ್ಸಿಎಲ್ಗೆ (BMRCL) ಸಲ್ಲಿಸಿದೆ. ಆ ವರದಿಯನ್ನು ಬಿಎಂಆರ್ಸಿಎಲ್ ಸರ್ಕಾರಕ್ಕೆ ಸಲ್ಲಿಸಿದೆ. 56.6 ಕಿ.ಮೀ. ಮೆಟ್ರೋ ಮಾರ್ಗದಲ್ಲಿ, 25 ಎತ್ತರಿಸಿದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಗ್ರೀನ್ ಲೈನ್ನಲ್ಲಿ ಬರುವ ಮಾದಾವರ (BIEC) ನಿಲ್ದಾಣದಿಂದ ಪ್ರಾರಂಭವಾಗುವ ಮೆಟ್ರೋ ಮಾರ್ಗವು ಶಿರಾ ಗೇಟ್ ವರೆಗೆ ಮೆಟ್ರೋ ಮಾರ್ಗ ಹಾದು ಹೋಗಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಮಾಹಿತಿ ನೀಡಿದ್ದಾರೆ.
ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಣೆಯಾಗಿದ್ದೇ ಆದಲ್ಲಿ, ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಮತ್ತೊಂದು ಜಿಲ್ಲೆಗೆ ಮೆಟ್ರೋ ಸಂಚಾರ ಮಾಡುವಂತಾಗಲಿದೆ. ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಚಾರ ಮಾಡುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
ಎಲ್ಲೆಲ್ಲಿ ಹಾದುಹೋಗಲಿದೆ ಬೆಂಗಳೂರು ತುಮಕೂರು ಮೆಟ್ರೋ?
ಮಾದಾವರ ನಿಲ್ದಾಣದಿಂದ ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ.ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಯನಪಾಳ್ಯ ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ, ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್ ಹಾಗೂ ನಾಗಣ್ಣನ ಪಾಳ್ಯಕ್ಕೆ ಕೊನೆಗೊಂಡು ಶಿರಾ ಗೇಟ್ ವರೆಗೆ ಈ ಮಾರ್ಗ ಹಾದು ಹೋಗಲಿದೆ. ಇದರಿಂದ ತುಮಕೂರು ರಸ್ತೆಯ ಅಸಂಖ್ಯಾತ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ.
ಇದನ್ನೂ ಓದಿ: ಬೆಂಗಳೂರಿನ 6 ಮೆಟ್ರೋ ನಿಲ್ದಾಣಗಳಲ್ಲಿ ಎಐ ಆಧಾರಿತ ಸಿಸಿಟಿವಿ ಕಣ್ಗಾವಲು
ಒಟ್ಟಿನಲ್ಲಿ ಬೆಂಗಳೂರು ತುಮಕೂರು ಮೆಟ್ರೋ ಮಾರ್ಗದ ಕಾರ್ಯಸಾಧ್ಯತಾ ಪರೀಕ್ಷೆಯ ವರದಿಯನ್ನು ಬಿಎಂಆರ್ಸಿಎಲ್ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಸದ್ಯದಲ್ಲೇ ರಾಜ್ಯ ಸರ್ಕಾರವು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಯಿದೆ. ಅದಾದ ನಂತರ ಕೇಂದ್ರದ ಅನುಮೋದನೆ ದೊರೆಯಬೇಕಾಗುತ್ತದೆ. ಅಂತಿಮವಾಗಿ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದಷ್ಟೆ ಬಾಕಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 am, Fri, 16 May 25







