ದಾವಣಗೆರೆ: ಕೆಲಸ ಮಾಡುತ್ತಿದ್ದ ಬ್ಯಾಂಕ್ನಿಂದಲೇ ಚಿನ್ನಾಭರಣ ಕದ್ದು ಬೇರೆ ಬ್ಯಾಂಕ್ಗಳಲ್ಲಿ ಅಡವಿಟ್ಟ ಗೋಲ್ಡ್ ಲೋನ್ ಆಫೀಸರ್!
ಬ್ಯಾಂಕ್ನಲ್ಲಿ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ನಿಂದಲೇ 3 ಕೆಜಿಯಷ್ಟು ಚಿನ್ನಾಭರಣ ಕಳವು ಮಾಡಿ ಪೊಲೀಸರ ಅತಿಥಿಯಾದ ವಿದ್ಯಮಾನ ದಾವಣಗೆರೆ ನಗರದ ನಿಟ್ಟುವಳ್ಳಿಯಲ್ಲಿರುವ ಸಿಎಸ್ಬಿ ಬ್ಯಾಂಕ್ನಲ್ಲಿ ನಡೆದಿದೆ. ಆನ್ಲೈನ್ ಬೆಟ್ಟಿಂಗ್ ಚಟಕ್ಕೆ ಹಣ ಹೊಂದಿಸುವುದಕ್ಕಾಗಿ ಆತ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ದಾವಣಗೆರೆ, ಮೇ 15: ವ್ಯಕ್ತಿಯೊಬ್ಬ ತಾನು ಗೋಲ್ಡ್ ಲೋನ್ ಆಫೀಸರ್ (Gold Loan Officer) ಆಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ನಿಂದಲೇ ಕೆಜಿಗಟ್ಟಲೆ ಚಿನ್ನ ಕದ್ದು ಅದನ್ನು ಬೇರೆ ಬೇರೆ ಬ್ಯಾಂಕ್ಗಳಲ್ಲಿ ಅಡವಿಟ್ಟ ವಿಚಿತ್ರ ಪ್ರಕರಣವೊಂದು ದಾವಣಗೆರೆಯಲ್ಲಿ (Davanagere) ನಡೆದಿದೆ. ದಾವಣಗೆರೆಯ ದೇವರಾಜ್ ಅರಸ್ ಬಡಾವಣೆಯ ವಾಸಿಯಾಗಿರುವ ಸಂಜಯ್ ಟಿಪಿ ಎಂಬಾತ ನಿಟ್ಟುವಳ್ಳಿಯಲ್ಲಿರುವ ಸಿಎಸ್ಬಿ ಬ್ಯಾಂಕ್ನಲ್ಲಿ (CSB Bank) ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ. ಒಂದು ದಿನ ಬ್ಯಾಂಕ್ ಆಡಿಟ್ ಮಾಡುವಾಗ ಬಂಗಾರ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಂಕ್ ಮ್ಯಾನೇಜರ್, ಗ್ರಾಹಕರು ಅಡಮಾನ ಇಟ್ಟಿದ್ದ 1.86 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 157 ಗ್ರಾಂ ಬಂಗಾರದ ಆಭರಣ ಕಳ್ಳತನವಾಗಿದೆ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ದೂರು ದಾಖಲಿಸಿಕೊಂಡ ಪೊಲೀಸರು ಬ್ಯಾಂಕಿನಲ್ಲಿ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡುತಿದ್ದ ಸಂಜಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕಳವು ಮಾಡಿದ ಚಿನ್ನಾಭರಣಗಳನ್ನು ದಾವಣಗೆರೆ ನಗರದ ಫೆಡರಲ್ ಬ್ಯಾಂಕ್, ಫೆಡ್ ಬ್ಯಾಂಕ್ ಹಾಗೂ ಪಿ.ಬಿ.ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಪೈನಾನ್ಸ್ ಶಾಖೆಯಲ್ಲಿ ತಂದೆ, ತಾಯಿ ಹಾಗೂ ಸ್ನೇಹಿತರ ಹೆಸರಿನಲ್ಲಿ ಅಡಮಾನ ಇಟ್ಟು ಸಾಲ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದೀಗ, ಆತ ಅಡಮಾನ ಇಟ್ಟಿದ್ದ ಒಟ್ಟು 2.61 ಕೋಟಿ ಮೌಲ್ಯದ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ಕೆಟಿಜೆ ನಗರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಬ್ಯಾಂಕ್ ಆಡಳಿತದ ಅತಿಯಾದ ನಂಬಿಕೆಯೇ ಮುಳುವಾಯ್ತು
ಆರೋಪಿಯು ವಿವಿಧ ಬ್ಯಾಂಕ್ಗಳಲ್ಲಿ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡಿದ್ದ. ಹಾಗಾಗಿ ಸಂಜಯ್ ಮೇಲೆ ಬ್ಯಾಂಕಿನವರಿಗೆ ಸಾಕಷ್ಟು ನಂಬಿಕೆ ಇತ್ತು. ಅದಕ್ಕಾಗಿ ಅವರು ಬ್ಯಾಂಕಿನಲ್ಲಿ ಬಂಗಾರದ ಆಭರಣಗಳನ್ನು ಚೆಕ್ ಮಾಡಲು ಅಕ್ಕಸಾಲಿಗರನ್ನು ಕೂಡ ಇಟ್ಟುಕೊಂಡಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಸಂಜಯ್, ಗ್ರಾಹಕರ ಹೆಸರಿನಲ್ಲಿ ನಕಲಿ ಬಂಗಾರದ ಆಭರಣಗಳನ್ನು ಅಡಮಾನ ಇಟ್ಟುಕೊಂಡು ಸಾಲ ಮಂಜೂರು ಕೂಡ ಮಾಡಿಕೊಂಡು ಬ್ಯಾಂಕಿನವರಿಗೆ ನಂಬಿಕೆಗೆ ದ್ರೋಹ ಮಾಡಿದ್ದಾನೆ. ಬಿಸಿಎ ಓದಿರುವ ಸಂಜಯ್ ಆನ್ ಲೈನ್ ಬೆಟ್ಟಿಂಗ್ ಚಾಳಿಗೆ ಬಿದಿದ್ದ. ಅಷ್ಟೇ ಅಲ್ಲದೇ ಪದೇ ಪದೇ ಗೋವಾಕ್ಕೆ ಹೋಗಿ ಕ್ಯಾಸಿನೋಗಳಲ್ಲಿ ಗೇಮ್ ಆಟವಾಡುತ್ತಿದ್ದ. ಸಂಜಯ್ ತಾನು ಐಷಾರಾಮಿ ಜೀವನ ನಡೆಸಬೇಕೆಂದು ಕನಸು ಕಂಡಿದ್ದ. ತಾನು ಕಳ್ಳತನ ಮಾಡಿದ ಹಣವನ್ನೆಲ್ಲಾ ಆನ್ ಲೈನ್ ಬೆಟ್ಟಿಂಗ್ನಲ್ಲೇ ಕಳೆದಿದ್ದಾನೆ.
ಇದನ್ನೂ ಓದಿ: ದಾವಣಗೆರೆ ರೌಡಿಶೀಟರ್ ಸಂತೋಷ್ ಹತ್ಯೆ ಪ್ರಕರಣ: ಆರೋಪಿಗಳು ಪೊಲೀಸರ ಮುಂದೆ ಶರಣು
ಒಟ್ಟಿನಲ್ಲಿ ಬ್ಯಾಂಕಿನವರು ಇಟ್ಟಿದ್ದ ನಂಬಿಕೆಗೆ ಸಂಜಯ್ ದ್ರೋಹ ಮಾಡಿ ಇದೀಗ ಜೈಲು ಸೇರಿದ್ದಾನೆ. ಕಷ್ಟ ಎಂದು ಬ್ಯಾಂಕಿನಲ್ಲಿ ಬಂಗಾರ ಅಡವಿಟ್ಟವರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರಲ್ಲದೆ, ಕೆಟಿಜೆ ನಗರ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ವಿಶೇಷ ಅಂದರೆ, ಬ್ಯಾಂಕ್ನವರು ದೂರು ನೀಡಿದ್ದು1 ಕೋಟಿ 86 ಲಕ್ಷ ರೂಪಾಯಿ ಮೌಲ್ಯದ 3 ಕೆಜಿ 157 ಗ್ರಾಂ ಚಿನ್ನದ ಕಳುವಾಗಿದೆ ಎಂದು. ಆದರೆ, ಪೊಲೀಸರು ಆರೋಪಿ ಕಡೆಯಿಂದ ವಶ ಪಡಿಸಿಕೊಂಡಿದ್ದು 2.61 ಕೋಟಿ ರೂ. ಮೌಲ್ಯದ 3 ಕೆಜಿ 643 ಗ್ರಾಂ ಚಿನ್ನ. ಹೆಚ್ಚುವರಿ ಚಿನ್ನದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:06 am, Thu, 15 May 25







