ಖಾಸಗಿ ಎಂಜಿನಿಯರಿಂಗ್ ಕಾಲೇಜು ಶುಲ್ಕ ಶೇ 7.5 ಹೆಚ್ಚಳ ಸಾಧ್ಯತೆ: ವಿದ್ಯಾರ್ಥಿಗಳಿಗೆ ದರ ಏರಿಕೆ ಶಾಕ್
ದುಬಾರಿ ದುನಿಯಾದಲ್ಲಿ ಜೀವನ ಸಾಗಿಸಲು ಹೆಣಗಾಟ ನಡೆಸುತ್ತಿರುವ ಮಧ್ಯಮ ವರ್ಗದ ಜನರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಲೇ ಇದೆ. ಬೆಲೆ ಏರಿಕೆಯಿಂದಾಗಿ ಸುಧಾರಿಸಿಕೊಳ್ಳಲು ಆಗದ ರೀತಿಯಲ್ಲಿ ಜನರು ಕಂಗಾಲಾಗಿದ್ದಾರೆ. ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಸಹ ಪೋಷಕರಿಗೆ ಹೊರೆ ಹೆಚ್ಚಾಗಲಿದ್ದು, ಖಾಸಗಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ ಮತ್ತಷ್ಟು ದುಬಾರಿ ಆಗಲಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸುಳಿವು ನೀಡಿದ್ದು, ವಿಧ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿದೆ.

ಬೆಂಗಳೂರು, ಮೇ 14: ಖಾಸಗಿ ಅನುದಾನರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಎಂಜಿನಿಯರಿಂಗ್ ಕೋರ್ಸ್ಗಳು ಮತ್ತಷ್ಟು ದುಬಾರಿ ಆಗುವ ಕಾಲ ಸನ್ನಿಹಿತವಾಗಿದೆ. ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು (Private Engineering Colleges) ಶೇ 20ರಷ್ಟು ಶುಲ್ಕ ಹೆಚ್ಚಿಸುವಂತೆ ಸರಕಾರವನ್ನು ಆಗ್ರಹಿಸಿದ್ದವು. ಅಂತಿಮವಾಗಿ ಶೇ 7.5ರಷ್ಟು ಶುಲ್ಕ (Engineering Fee Hike) ಏರಿಕೆ ಮಾಡಲು ಸರಕಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಪರಿಣಾಮವಾಗಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸ್ ದುಬಾರಿಯಾಗಲಿದೆ.
ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ ಮತ್ತು ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಜತೆ ಸಭೆ ನಡೆಸಿರುವ ಉನ್ನತ ಶಿಕ್ಷಣ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. ಸಭೆಯ ಕುರಿತು ಉನ್ನತ ಶಿಕ್ಷಣ ಸಚಿವ ಎಂ. ಸಿ ಸುಧಾಕರ್ ಕೂಡ ಮಾಹಿತಿ ನೀಡಿದ್ದಾರೆ.
ವಾರ್ಷಿಕವಾಗಿ ನಡೆಯುವ ಸಹಜ ಪ್ರಕ್ರಿಯೆ: ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟನೆ
ಅಧ್ಯಾಪಕರ ವೇತನ ಹೆಚ್ಚಳ, ಕಾಲೇಜುಗಳ ಮೂಲಸೌಕರ್ಯ ಸುಧಾರಣೆ, ನಿರ್ವಹಣೆ ಮತ್ತು ಗುಣಮಟ್ಟವನ್ನು ಪರಿಗಣಿಸಿ 2025-26ನೇ ಸಾಲಿನಲ್ಲೂ ಶೇ 20ರಷ್ಟು ಹೆಚ್ಚಳಕ್ಕೆ ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ ಮನವಿ ಸಲ್ಲಿಸಿತ್ತು. ಆದರೆ ಶೇಕಡಾ 7.5 ರಷ್ಟು ಏರಿಕೆಗೆ ಮಾತ್ರ ಇಲಾಖೆ ಅಸ್ತು ಎಂದಿದೆ. ಇದು ವಾರ್ಷಿಕವಾಗಿ ನಡೆಯುವ ಸಹಜ ಪ್ರಕ್ರಿಯೆ ಎಂದೂ ಸ್ಪಷ್ಟನೆ ನೀಡಿದೆ. ಆದರೆ ಈಗಾಗಲೇ ಹಲವು ರೀತಿಯ ಬೆಲೆ ಏರಿಕೆಯಿಂದ ನಲುಗುತ್ತಿರುವ ಪೋಷಕರಿಗೆ ಶೇ 7.5 ರ ಶುಲ್ಕ ಹೆಚ್ಚಳ ಮತ್ತಷ್ಟು ಹೊರೆ ಆಗಲಿದೆ ಎಂದು ವಿಧ್ಯಾರ್ಥಿ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.
ಎಷ್ಟಾಗಲಿದೆ ಹೊಸ ಶುಲ್ಕ?
ಪ್ರಸ್ತುತ ಸರ್ಕಾರಿ ಕೋಟಾದ ಸೀಟುಗಳಿಗೆ ಖಾಸಗಿ ಕಾಲೇಜುಗಳ ಶುಲ್ಕ 1.06 ಲಕ್ಷ ರೂ., ಕಾಮೆಡ್-ಕೆ (ಟೈಪ್-1) ಶುಲ್ಕ 1.86 ಲಕ್ಷ ರೂ. ಹಾಗೂ (ಟೈಪ್-2) 2.61 ಲಕ್ಷ ರೂ. ಇದೆ. ಇವುಗಳು ಶೇ 7.5 ಶುಲ್ಕ ಹೆಚ್ಚಳ ಪ್ರಕಾರ ಕ್ರಮವಾಗಿ ಏರಿಕೆ ಆಗಲಿವೆ. ಇದು ಇಂಜಿನಿಯರಿಂಗ್ ಕನಸು ಕಾಣುವ ವಿಧ್ಯಾರ್ಥಿಗಳ ಪೋಷಕರಿಗೆ ಇನ್ನಷ್ಟು ಹೊರೆ ಅಗವುದಂತೂ ನಿಜ.
ಇದನ್ನೂ ಓದಿ: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸುವ ಲಿಂಕ್ ಇಲ್ಲಿದೆ
ಸದ್ಯ, ಶುಲ್ಕ ಹೆಚ್ಚಳ ಕ್ರಮಕ್ಕೆ ವಿದ್ಯಾರ್ಥಿಗಳಿಂದ, ವಿದ್ಯಾರ್ಥಿ ಸಂಘಟನೆಗಳಿಂದ ಹಾಗೂ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಿಧ್ಯಾರ್ಥಿಗಳು ಹಾಗೂ ಪೋಷಕರ ವಿರೋಧಕ್ಕೆ ಉನ್ನತ ಶಿಕ್ಷಣ ಇಲಾಖೆ ಮಣಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








