ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿವಾದ: CET ಪರೀಕ್ಷೆಗೆ ವಸ್ತ್ರ ಸಂಹಿತೆ ಏನು ಹೇಳುತ್ತೆ?
ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ(ಏಪ್ರಿಲ್ 17) ಶಿವಮೊಗ್ಗ ಮತ್ತು ಬೀದರ್ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಸೂಚಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಬ್ರಾಹ್ಮಣ ಸಮುದಾಯ ಸಿಡಿದೆದ್ದಿದೆ. ಅಷ್ಟಕ್ಕೂ ಈ ಸಿಇಟಿ ವಸ್ತ್ರ ಸಂಹಿತೆ ಏನ್ ಹೇಳುತ್ತೆ? ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಏಪ್ರಿಲ್ 18): ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಪರೀಕ್ಷೆಗಳು (Karnataka CET Exam 2025) ಮುಗಿದಿವೆ. ಇದೇ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿವೆ. ಆದ್ರೆ, ಕೊನೆಯ ದಿನವಾದ ಏಪ್ರಿಲ್ 17ರಂದು ಶಿವಮೊಗ್ಗ ಮತ್ತು ಬೀದರ್ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆಸಿರುವುದು ಭಾರೀ ವಿವಾದಕ್ಕೆ (Janivara controversy) ಕಾರಣವಾಗಿದೆ. ಬೀದರ್ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲು ಒಪ್ಪದೇ ಗಣಿತ ಪರೀಕ್ಷೆಯಿಂದ ಹೊರಗುಳಿದಿದ್ದಾನೆ. ಇದರಿಂದ ಆತನ ಎಂಜಿನಿಯರಿಂಗ್ ಭವಿಷ್ಯ ಅತಂತ್ರಗೊಂಡಿದೆ. ಮತ್ತೊಂದೆಡೆ ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿ ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷಾ ಸಿಬ್ಬಂದಿ ಅದನ್ನು ಕತ್ತರಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಆಕ್ರೋಶಗಳು ವ್ಯಕ್ತವಾಗಿವೆ. ಹಾಗಾದ್ರೆ, ಸಿಇಟಿ ವಸ್ತ್ರ ಸಂಹಿತೆ ಏನು ಹೇಳುತ್ತೆ? ಯಾವ ಡ್ರೆಸ್ ಧರಿಸಲು ಪುರುಷರಿಗೆ ಮಹಿಳೆಯರಿಗೆ ಅವಕಾಶ ಇದೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ಪುರುಷರ ವಸ್ತ್ರ ಸಂಹಿತೆ
- ಪರೀಕ್ಷೆ ದಿನ ಪೂರ್ಣ ತೋಳಿನ ಬಟ್ಟೆ ಧರಿಸುವ ಹಾಗಿಲ್ಲ
- ಕಾಲರ್ ರಹಿತ ನಾರ್ಮಲ್ ಶರ್ಟ್/ ಟೀ ಶರ್ಟ್ ಗೆ ಆದ್ಯತೆ
- ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬು ಕಡಿಮೆಯಿರುವ ಪ್ಯಾಂಟ್)
- ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ಅವಕಾಶ ಇಲ್ಲ
- ಪರೀಕ್ಷಾ ಹಾಲ್ ಒಳಗೆ ಶೂ ಧರಿಸುವ ಹಾಗಿಲ್ಲ
- ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣ ಧರಿಸುವ ಹಾಗಿಲ್ಲ
- ಕಿವಿಯೋಲೆ ಕಡಗ ಧರಿಸುವ ಹಾಗಿಲ್ಲ.
ಇದನ್ನೂ ಓದಿ: ಕರ್ನಾಟಕ ಸಿಇಟಿ ಪರೀಕ್ಷೆ ಮತ್ತು ಜನಿವಾರ ವಿವಾದ: ಈವರೆಗೆ ನಡೆದಿದ್ದೇನು? ಇಲ್ಲಿದೆ ವಿವರ
ಮಹಿಳೆಯರ ವಸ್ತ್ರ ಸಂಹಿತೆ
- ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ ಹೂ ಬಟನ್ ಹೊಂದಿರುವ ಬಟ್ಟೆ ಧರಿಸುವುದು ನಿಷೇಧ.
- ಪರೀಕ್ಷೆ ದಿನ ಪೂರ್ಣ ತೋಳಿನ ಬಟ್ಟೆಯನ್ನು ಜೀನ್ಸ್ ಧರಿಸಬಾರದು.
- ಬದಲಾಗಿ ಅರ್ಧ ತೋಳಿನ ಬಟ್ಟೆ ಮುಜುಗರ ಆಗದಿರುವಂತಹ ಬಟ್ಟೆ ಧರಿಸಬೇಕು ದಪ್ಪ ಹೀಲ್ಸ್ ಬಳಸುವುದು ನಿಷೇಧ.
- ದಪ್ಪವಾದ ಶೂ ದಪ್ಪವಾದ ಚಪ್ಪಲಿ, ಅತಿ ತೆಳುವಾದ ಶೂ ಅತಿ ತೆಳುವಾದ ಚಪ್ಪಲಿ ನಿಷೇಧ.
- ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣ ಧರಿಸುವುದು ನಿಷೇಧ.
- ಕಿವಿ ಓಲೆ ಉಂಗುರ ಧರಿಸುವ ಹಾಗಿಲ್ಲ.
- ಮಂಗಳ ಸೂತ್ರ ಮತ್ತು ಕಾಲುಂಗುರ ಧರಿಸಲು ಅವಕಾಶ.
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ (ಕೆಎಎಸ್) ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ ಮತ್ತು ಕಾಲುಂಗುರ ತೆಗೆಸಿರುವ ಪ್ರಕರಣ ನಡೆದಿದ್ದವು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಕೆಇಎ ಮಂಗಳಸೂತ್ರ ಮತ್ತು ಕಾಲುಂಗುರಕ್ಕೆ ಅವಕಾಶ ನೀಡಿತ್ತು. ಆದ್ರೆ, ಇದೀಗ ಜನಿವಾರ ವಿವಾದ ಹುಟ್ಟುಹಾಕಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಪ್ರತಿಕ್ರಿಯಿಸಿದ್ದು, ಸಿಇಟಿ ಪರೀಕ್ಷೆ ವೇಳೆ ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಯಬೇಕು ಎಂದು ಹೇಳಿದ್ದು ತಪ್ಪು. ಯಾವುದೇ ಜಾತಿ, ಧರ್ಮದ ವಿರುದ್ಧ ನಾವು ಮಾರ್ಗಸೂಚಿ ಸಿದ್ಧ ಮಾಡುವುದಿಲ್ಲ. ಈಗ ತಪ್ಪು ಆಗಿದೆ. ಇಂತಹ ತಪ್ಪು ಮುಂದೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ವಿಷಯಗವನ್ನ ಮತ್ತಷ್ಟು ದೊಡ್ಡದು ಮಾಡುವುದು ಬೇಡ. ಯಾರೂ ಇಂತಹ ಕೆಲಸ ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಡಿಸಿಗಳಿಗೆ ಈಗಾಗಲೇ ತನಿಖೆಗೆ ಆದೇಶ ಮಾಡಿದ್ದೇನೆ. ವರದಿ ಅನ್ವಯ ಕ್ರಮ ಖಂಡಿತವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಜನಿವಾರದ ವಿಚಾರದಲ್ಲಿ ಅಧಿಕಾರಿಗಳು ನಡೆದಕೊಂಡ ನಡೆಗೆ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಹಾಸಭಾದ ಅಧ್ಯಕ್ಷ ಎಸ್ ರಘುನಾಥ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಗೂ ಕರೆ ನೀಡಿದ್ದಾರೆ. ಇನ್ನು ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಸುಧಾಕರ್ ಮಾತನಾಡಿ, ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆದರೆ ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Fri, 18 April 25