ಲೇಖನ ಸಾಮಾಗ್ರಿ ಬೆಲೆ ಏರಿಕೆ: ಪೋಷಕರು, ವಿದ್ಯಾರ್ಥಿಗಳಿಗೆ ಬರೆ
ಶಾಲೆಗಳು ಪುನರಾರಂಭವಾಗು ಹೊತ್ತಿನಲ್ಲಿ ಪೆನ್, ಪೆನ್ಸಿಲ್ ಸೇರಿದಂತೆ ವಿವಿಧ ಲೇಖನಿ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಪೆನ್, ಪೆನ್ಸಿಲ್, ನೋಟ್‌ಬುಕ್‌ಗಳು ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಿಂದ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವ್ಯಾಪಾರಿಗಳು ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣ ನೀಡಿದ್ದಾರೆ. ಆದರೆ, ಪೋಷಕರು ಮಕ್ಕಳ ಓದಿಗೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸುವುದು ಅನಿವಾರ್ಯ ಎಂದು ಹೇಳುತ್ತಿದ್ದಾರೆ.

ಬೆಂಗಳೂರು, ಏಪ್ರಿಲ್ 17: ವರ್ಷದ ಆರಂಭದಿಂದ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಲೇ ಇದೆ. ಶೈಕ್ಷಣಿಕ ವರ್ಷದ (Academic year) ಆರಂಭದ ಹೊತ್ತಲ್ಲೆ ಶಾಲೆಯ ಶುಲ್ಕ (School Fees) ಹೆಚ್ಚಳವಾಗಿರುವುದು ಪೋಷಕರ ಮೇಲೆ ಮತ್ತಷ್ಟು ಹೊರೆಯಾಗಿದೆ. ಆದರೆ, ಇದರ ಮಧ್ಯೆ ವಿದ್ಯಾರ್ಥಿಗಳ (Students) ಓದು-ಬರಹಕ್ಕೆ ಬೇಕಾದ ಅಗತ್ಯ ಪರಿಕರಗಳು ದುಬಾರಿ ಆಗುವ ಹೊತ್ತು ಮತ್ತೆ ಬಂದಿದೆ.
ಸದ್ಯ ಶೈಕ್ಷಣಿಕ ವರ್ಷ ಆರಂಭ ಆಗುತ್ತಿದ್ದು, ಶಾಲೆ ಶುಲ್ಕ ಹಾಗೂ ಶಾಲೆ ವಾಹನ ಶುಲ್ಕ ಏರಿಕೆಯಾಗಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ನಡುವೆ ವಿದ್ಯಾರ್ಥಿಗಳ ಓದು ಬರಹಕ್ಕೆ ಅಗತ್ಯವಾಗಿ ಬೇಕಾದ ಲೇಖನ ಸಾಮಾಗ್ರಿಗಳ ಬೆಲೆಯೂ ದುಬಾರಿ ಆಗಿದ್ದು, ಪೋಷಕರು ಹಾಗೂ ವಿಧ್ಯಾರ್ಥಿಗಳಿಗೆ ಹೊರೆಯಾಗಿದೆ.ಪೆನ್, ಪೆನ್ಸಿಲ್, ನೋಟ್ಬುಕ್, ಡ್ರಾಯಿಂಗ್ ಬುಕ್ಸ್, ಪೇಂಟಿಂಗ್ ಪೆನ್, ನೋಟ್ ಪ್ಯಾಡ್ ಇತ್ಯಾದಿ ಉತ್ಪನ್ನಗಳ ಬೆಲೆ ಶೇ 20 ವರೆಗೂ ಏರಿಕೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವ್ಯಾಪಾರಿಯೊಬ್ಬರು, ಪ್ರತಿ 5-6 ತಿಂಗಳಿಗೊಮ್ಮೆ ಶಾಲೆಗಳ ಪುನರ್ ಆರಂಭದ ವೇಳೆ ಬೆಲೆ ಏರಿಕೆ ಆಗುವುದು ಸಹಜ ಎಂದಿದ್ದಾರೆ. ಲೇಖನ ಸಾಮಗ್ರಿಗಳನ್ನು ಉತ್ಪಾದಿಸುವ ಸಂಸ್ಥೆಗಳು ಉತ್ಪಾದನಾ ವೆಚ್ಚ ಹೆಚ್ಚಳ ಮಾಡಿರುವುದರಿಂದ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ. ಇದು ಗ್ರಾಹಕರಿಗೆ ಇದು ಹೊರೆಯಾಗಿದೆ. ಆದರೆ, ಮಕ್ಕಳ ಓದಿನ ವಿಚಾರದಲ್ಲಿ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಇದನ್ನೂ ಓದಿ: ಮೇ ಮೊದಲ ವಾರದಲ್ಲಿ SSLC ಪರೀಕ್ಷೆ ಫಲಿತಾಂಶ ಪ್ರಕಟ, ನೋಡುವುದು ಹೇಗೆ? ಇಲ್ಲಿದೆ ವಿವರ
ಒಟ್ಟಾರೆಯಾಗಿ ಶಾಲೆಗಳು ಪುನರ್ ಆರಂಭವಾಗುತ್ತಿದ್ದು ಲೇಖನ ಸಾಮಾಗ್ರಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಹೊತ್ತಲ್ಲೆ ಬೆಲೆ ಏರಿಸಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ. ಆದರೂ, ಕೊಳ್ಳಲೇಬೇಕಾದ ಅನಿವಾರ್ಯತೆ ಇದ್ದು ಓದಿನ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಪೋಷಕರು ತಯಾರಿಲ್ಲ.
ವರದಿ: ಲಕ್ಷ್ಮಿ ನರಸಿಂಹ