ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬುಧವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿ ಬಗ್ಗೆ ಮಾತನಾಡಿದ ಅವರು, ಈ ವರ್ಷ 5 ವರ್ಷ 5 ತಿಂಗಳಾಗಿದ್ದರೂ ಅವಕಾಶ ನೀಡಲಾಗುತ್ತದೆ ಎಂದರು. ಪೋಷಕರ ಬೇಡಿಕೆ ಮೇರೆಗೆ ಈ ವರ್ಷ ಮಾತ್ರ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಆದರೆ, ಮುಂದಿನ ವರ್ಷದಿಂದ ಯಥಾ ಪ್ರಕಾರ 6 ವರ್ಷವೇ ಇರಲಿದೆ.

ಬೆಂಗಳೂರು, ಏಪ್ರಿಲ್ 16: ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ (Karnataka Education Department) ತುಸು ಸಡಿಲಗೊಳಿಸಿದೆ. 5 ವರ್ಷ 5 ತಿಂಗಳಾಗಿದ್ದರೂ ಶಾಲೆಗೆ ಸೇರಿಸಲು ಈ ವರ್ಷ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಘೋಷಿಸಿದರು. ಎಸ್ಇಪಿ ವರದಿ ಆಧಾರದ ಮೇಲಿನ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ. ಆದರೆ, ಒಂದನೇ ತರಗತಿ ಸೇರ್ಪಡೆಗೆ ಯುಕೆಜಿ ಆಗಿರಬೇಕು. ಆದರೆ, ಇದು ಈ ವರ್ಷಕ್ಕೆ ಮಾತ್ರ ಅನ್ವಯ. ಮುಂದಿನ ವರ್ಷದಿಂದ ಕಡ್ಡಾಯ ವಯೋಮಿತಿ 6 ವರ್ಷವೇ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಎಲ್ಕೆಜಿ, ಯುಕೆಜಿ ಆಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ. ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಇದೊಂದು ವರ್ಷ ಮಾತ್ರ ಅವಕಾಶ. ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬೇಡಿ: ಪೋಷಕರಿಗೆ ಮಧು ಬಂಗಾರಪ್ಪ ಮನವಿ
ವಯಸ್ಸಿನ ಮಿತಿಯ ಬಗ್ಗೆ ಎಲ್ಲರೂ ಒತ್ತಡ ಹೇರುತ್ತಾ ಇದ್ದರು. ಈ ವಿಚಾರದಲ್ಲಿ ಪೋಷಕರಿಗೆ ಒಂದು ಮನವಿಯನ್ನು ಮಾಡುತ್ತಿದ್ದೇನೆ. ಮಕ್ಕಳನ್ನು ಯಂತ್ರದ ತರ ಓದಿಸಬೇಡಿ. ಹಾಗೆ ಮಾಡಿದರೆ ಮಕ್ಕಳಲ್ಲಿ ಒತ್ತಡ ಹೆಚ್ಚಾಗುತ್ತದೆ ಎಂದರು.
ವಯೋಮಿತಿ ವಿಚಾರದಲ್ಲಿ ಪೋಷಕರು ಗೊಂದಲದಲ್ಲಿದ್ದಾರೆ. ದೇಶದಲ್ಲಿ ಎಲ್ಲ ಕಡೆಗಳಲ್ಲಿ ಒಂದನೇ ತರಗತಿ ಸೇರ್ಪಡೆಗೆ ಆರು ವರ್ಷ ವಯೋಮಿತಿ ಇದೆ. ಎರಡು ತಿಂಗಳು ಮಾತ್ರ ಸಡಿಲಿಕೆ ಮಾಡಬಹುದಷ್ಟೆ. ನಮ್ಮದು ಎಸ್‌ಇಪಿ ಇರುವುದರಿಂದ, ಅವರ ಬಳಿ ಕೇಳಿದಾಗ, ಮಕ್ಕಳು ಕಡಿಮೆ ವಯಸ್ಸಿನಲ್ಲೇ ಸೇರಿಕೊಳ್ಳುತ್ತಿದ್ದಾರೆ ಎಂದಿದ್ದರು ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಕೆಇಎ ಎಷ್ಟೇ ರೂಲ್ಸ್ ಮಾಡಿದ್ರೂ ನೋ ಯೂಸ್! ಸಿಇಟಿ ವಿದ್ಯಾರ್ಥಿಗಳದ್ದು ಅದೇ ರಾಗ, ಅದೇ ಹಾಡು
ಆರು ವರ್ಷ ಕಡ್ಡಾಯಗೊಳಿಸಿದ್ದ ಸರ್ಕಾರ
ಒಂದನೇ ತರಗತಿಯ ಪ್ರವೇಶ ಪಡೆಯಲು ಮಕ್ಕಳಿಗೆ 6 ವರ್ಷ ಆಗಿರಬೇಕು ಎಂದು ಕರ್ನಾಟಕ ಶಿಕ್ಷಣ ಇಲಾಖೆ ಮೊದಲಿಗೆ 2022ರ ಜುಲೈನಲ್ಲಿ ಆದೇಶ ಹೊರಡಿಸಿತ್ತು. ಅದರಂತೆ 2023 – 24 ನೇ ಸಾಲಿನಲ್ಲಿ ಹೊಸ ನಿಯಮ ಜಾರಿಗೆ ಬರಬೇಕಿತ್ತು. ಆದರೆ ಪೋಷಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾದ ಕಾರಣ, ಹೊಸ ನಿಯಮದ ಜಾರಿಯನ್ನು ಸರ್ಕಾರ ಮುಂದೂಡಿತ್ತು. ನಂತರ ನಿಯಮದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ, 2025-26ನೇ ಸಾಲಿನಿಂದ ಜಾರಿಗೆ ಬರಲಿದೆ ಎಂದು ಪ್ರಕಟಿಸಿತ್ತು. ಅದರಂತೆ ಈ ಶೈಕ್ಷಣಿಕ ವರ್ಷದಿಂದ 6 ವರ್ಷ ಕಡ್ಡಾಯವಾಗಿದೆ. ಆದರೆ, ಪೋಷಕರಿಂದ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣ ಇದೀಗ ಸರ್ಕಾರ ಪಟ್ಟು ಸಡಿಲಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Wed, 16 April 25