700ಕ್ಕೆ 1163 ಅಂಕ! ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಕಪಟ್ಟಿಯಲ್ಲಿ ಮತ್ತೊಂದು ಎಡವಟ್ಟು
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಮತ್ತೊಂದು ಅಂಕಪಟ್ಟಿ ಎಡವಟ್ಟು ಮಾಡಿದೆ. ಬಿಬಿಎ ವಿದ್ಯಾರ್ಥಿಗಳ ಫಲಿತಾಂಶದಲ್ಲಿ 700 ಗರಿಷ್ಠ ಅಂಕಗಳ ಬದಲಿಗೆ 1163 ಅಂಕಗಳನ್ನು ಮುದ್ರಿಸಿರುವುದು ಬೆಳಕಿಗೆ ಬಂದಿದೆ. ಇದು ತಾಂತ್ರಿಕ ದೋಷದಿಂದಾಗಿದೆ ಎಂದು ವಿವಿ ಹೇಳಿದ್ದು, ದೋಷಪೂರಿತ ಅಂಕಪಟ್ಟಿಗಳನ್ನು ಸರಿಪಡಿಸಿ ಶೀಘ್ರದಲ್ಲೇ ಮರುಮುದ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಬಳ್ಳಾರಿ, ಮಾರ್ಚ್ 7: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (Vijayanagara Sri Krishnadevaraya University) ಮತ್ತೊಂದು ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ. ಗರಿಷ್ಠ 700 ಅಂಕಗಳಿರುವಲ್ಲಿ ಅದನ್ನೂ ಮೀರಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ 996, 1080, 1100, 840 ಮತ್ತು 1163 ಅಂಕಗಳನ್ನು ಮುದ್ರಿಸಿದ್ದು, ಇದನ್ನು ನೋಡಿ ವಿದ್ಯಾರ್ಥಿಗಳೇ ಶಾಕ್ ಆಗಿದ್ದಾರೆ. ಬಿಬಿಎ (BBA) ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ತಪ್ಪು ಕಂಡುಬಂದಿದ್ದು, ಅಂಕಪಟ್ಟಿ ಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರು ಇದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಬಿಬಿಎ ಪದವಿ ಕೋರ್ಸ್‌ನಲ್ಲಿ ಏಳು ವಿಷಯಗಳು ಇದ್ದು, ಪ್ರತಿ ವಿಷಯಕ್ಕೂ ಗರಿಷ್ಠ 100 ಅಂಕಗಳಿರುತ್ತವೆ. ಹೀಗಾಗಿ ಒಟ್ಟು ಗರಿಷ್ಠ ಅಂಕ 700 ಮಾತ್ರವಾಗುತ್ತದೆ. ಆದರೆ ಕೆಲ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕಕ್ಕಿಂತಲೂ ಹೆಚ್ಚು ಅಂಕಗಳನ್ನು ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಬಳ್ಳಾರಿಯ ಖಾಸಗಿ ಎಸ್ಜಿಟಿ ಪದವಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ಎಡವಟ್ಟು ಮಾಡಲಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ಈ ಖಾಸಗಿ ಕಾಲೇಜಿನ ಎಂಟು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ರೀತಿಯ ಎಡವಟ್ಟು ಕಂಡುಬಂದಿದೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಎಡವಟ್ಟು ಇದೇ ಮೊದಲಲ್ಲ!
ಗಮನಾರ್ಹ ಸಂಗತಿ ಎಂದರೆ, ಇದೇ ವಿಶ್ವವಿದ್ಯಾಲಯದಿಂದ ಈ ಹಿಂದೆ ಮಾಕ್ ಮಾರ್ಕ್ಸ್ ಕಾರ್ಡ್‌ನಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಯ ಚಿತ್ರ ಹಾಗೂ ಸಿನಿಮಾ ನಟರ ಫೋಟೋಗಳು ಮುದ್ರಿತವಾಗಿದ್ದ ಘಟನೆ ಕೂಡ ಸುದ್ದಿಯಾಗಿತ್ತು. ಇದೀಗ ಮತ್ತೊಮ್ಮೆ ಅಂಕಪಟ್ಟಿ ಮುದ್ರಣದಲ್ಲಿ ಎಡವಟ್ಟು ಸಂಭವಿಸಿರುವುದು ಪ್ರಶ್ನೆಗಳನ್ನು ಹುಟ್ಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಎನ್.ಎಂ. ಸಾಲಿ ಅವರು, ‘ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಿದೆ. ಎಂಟು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ರೀತಿಯ ತಪ್ಪು ಕಂಡುಬಂದಿದ್ದು, ಸಮಸ್ಯೆಯನ್ನು ಈಗಾಗಲೇ ಸರಿಪಡಿಸುವ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ ದೋಷಪೂರಿತ ಅಂಕಪಟ್ಟಿಗಳನ್ನು ಮರುಮುದ್ರಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಅಂಕಪಟ್ಟಿಯಲ್ಲಿ ತನ್ನ ಬದಲಿಗೆ ಸ್ವಾಮೀಜಿ ಫೋಟೋ, ದಂಗಾದ ವಿದ್ಯಾರ್ಥಿ!
ಈ ಘಟನೆ ಈಗ ವಿದ್ಯಾರ್ಥಿಗಳಲ್ಲಿ ಗೊಂದಲ ಮತ್ತು ಆತಂಕ ಉಂಟುಮಾಡಿದ್ದು, ವಿಶ್ವವಿದ್ಯಾಲಯದ ಮೌಲ್ಯಮಾಪನ ಮತ್ತು ಅಂಕಪಟ್ಟಿ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.