DK Shivakumar
ಕಾಂಗ್ರೆಸ್ ಪಕ್ಷದ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದ ಶಾಸಕರು. ಇವರ ಅಭಿಮಾನಿಗಳು ಇವರನ್ನು ಕನಕಪುರ ಬಂಡೆ ಎಂದೇ ಕೊಂಡಾಡುತ್ತಾರೆ. ಸದ್ಯ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಬ್ರ್ಯಾಂಡ್ ಬೆಂಗಳೂರು ಕನಸು ಹೊತ್ತು ಬೆಂಗಳೂರಿನ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ 2023ರ ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದ ಇವರು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪ್ರಥಮ ಪುತ್ರರಾಗಿ 15ನೇ ಮೇ, 1962ರಂದು ಡಿಕೆಶಿ ಜನಿಸಿದರು. ಇವರು ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಯುವ ಕಾಂಗ್ರೆಸ್‍ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದ್ರು.
ಮೇಕೆದಾಟು ಯೋಜನೆಗಾಗಿ 160 ಕಿ.ಮೀ ಪಾದಯಾತ್ರೆ, 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಾತಂತ್ರ್ಯ ನಡಿಗೆ, ರಾಹುಲ್ ಗಾಂಧಿ ಅವರ ಜೊತೆ ಭಾರತ್ ಜೋಡೋ ಯಾತ್ರೆ, ನಾ ನಾಯಕಿ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡುವಂತಹ ಯಶಸ್ವಿ ಕಾರ್ಯಕ್ರಮಗಳನ್ನು ಮಾಡಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ರಾಜ್ಯದಲ್ಲಿ 136 ಸ್ಥಾನಗಳನ್ನು ಪಡೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.