CBSE Exams Postponed: ಇರಾನ್-ಇಸ್ರೇಲ್ ಸಂಘರ್ಷ; ಈ ರಾಷ್ಟ್ರಗಳಲ್ಲಿ CBSE 10, 12 ನೇ ತರಗತಿ ಪರೀಕ್ಷೆ ಮುಂದೂಡಿಕೆ
ಇರಾನ್-ಇಸ್ರೇಲ್ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದ ಏಳು ದೇಶಗಳಲ್ಲಿ CBSE 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮಾರ್ಚ್ 2 ರಿಂದ ಆರಂಭವಾಗಬೇಕಿದ್ದ ಪರೀಕ್ಷೆಗಳು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರದ್ದುಗೊಂಡಿವೆ. ಹೊಸ ದಿನಾಂಕಗಳನ್ನು ಶೀಘ್ರದಲ್ಲೇ cbse.gov.in ನಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ನಕಲಿ ಸುದ್ದಿಗಳನ್ನು ನಂಬದೆ ಅಧಿಕೃತ ಮಾಹಿತಿ ಪಡೆಯುವಂತೆ ಮಂಡಳಿ ಸೂಚಿಸಿದೆ.

ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ನಡೆಯಬೇಕಿದ್ದ ಸಿಬಿಎಸ್‌ಇ (Central Board of Secondary Education) 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿರುವ ಸಿಬಿಎಸ್‌ಇ ಮಂಡಳಿ, ಗಲ್ಫ್ ದೇಶಗಳಲ್ಲಿ ಪರೀಕ್ಷೆ ಬರೆಯಲಿದ್ದ ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ನಾಳೆಯಿಂದ(ಮಾರ್ಚ್ 2) ಆರಂಭವಾಗಬೇಕಿದ್ದ ಪರೀಕ್ಷೆಗಳು ಮಧ್ಯಪ್ರಾಚ್ಯದ ಇರಾನ್, ಬಹ್ರೇನ್, ಕುವೈತ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಓಮನ್, ಕತಾರ್ ಈ ಏಳು ಪ್ರಮುಖ ದೇಶಗಳಲ್ಲಿ ಮುಂದೂಡಲಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕವೇ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
Important Update on CBSE Class X and Class XII Exams in the Middle East Regions pic.twitter.com/6rVteajQFV
— CBSE HQ (@cbseindia29) March 1, 2026
ಅಧಿಕೃತ ಪ್ರಕಟಣೆಯಲ್ಲಿ, “ವಿದ್ಯಾರ್ಥಿಗಳ ಸುರಕ್ಷತೆಯೇ ನಮಗೆ ಅತ್ಯಂತ ಮುಖ್ಯ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 2ರ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು” ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ; ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್!
ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳು ಅಥವಾ ನಕಲಿ ಸುತ್ತೋಲೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಂಡಳಿ ಮನವಿ ಮಾಡಿದೆ. ಪರೀಕ್ಷೆಗಳ ಕುರಿತು ನಿಖರ ಮತ್ತು ಅಧಿಕೃತ ಮಾಹಿತಿಗಾಗಿ ಕೇವಲ ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ cbse.gov.in ಅನ್ನು ಮಾತ್ರ ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ನಿರ್ಧಾರವು ತಾತ್ಕಾಲಿಕವಾದದ್ದಾಗಿದ್ದು, ಪರಿಸ್ಥಿತಿ ಸಾಮಾನ್ಯಗೊಂಡ ಬಳಿಕ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:
