ನಾಳೆ ಕರ್ನಾಟಕದ 5 ಅಮೃತ್ ರೈಲ್ವೆ ನಿಲ್ದಾಣ ಸೇರಿ 103 ಸ್ಟೇಷನ್ಗಳ ಲೋಕಾರ್ಪಣೆ
ಪ್ರಧಾನಿ ನರೇಂದ್ರ ಮೋದಿ ನಾಳೆ (ಮೇ 22) 18 ರಾಜ್ಯಗಳಲ್ಲಿ ರೈಲ್ವೆ ಪ್ರಯಾಣಕ್ಕೆ ಪುಷ್ಟಿ ನೀಡಲಿದ್ದಾರೆ. ದೇಶದ 103 ಅಮೃತ್ ರೈಲ್ವೆ ನಿಲ್ದಾಣಗಳು ವಿಮಾನ ನಿಲ್ದಾಣದಂತಹ ಆಕರ್ಷಕ ಸೌಲಭ್ಯಗಳನ್ನು ಪಡೆಯುತ್ತಿವೆ. ಇವುಗಳಲ್ಲಿ ಕರ್ನಾಟಕದ 5 ರೈಲ್ವೆ ನಿಲ್ದಾಣಗಳು ಕೂಡ ಸೇರಿವೆ. ಮುನಿರಾಬಾದ್, ಬಾಗಲಕೋಟೆ, ಗದಗ, ಗೋಕಾಕ್ ರಸ್ತೆ ಮತ್ತು ಧಾರವಾಡದ ಅಮೃತ್ ಸ್ಟೇಷನ್ಗಳು ನಾಳೆ ಲೋಕಾರ್ಪಣೆಯಾಗಲಿವೆ.

ನವದೆಹಲಿ, ಮೇ 21: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೇ 22ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ 103 ಪುನರಾಭಿವೃದ್ಧಿಗೊಂಡ ಅಮೃತ್ ರೈಲ್ವೆ ನಿಲ್ದಾಣಗಳನ್ನು (Amrit Stations) ಉದ್ಘಾಟಿಸಲಿದ್ದಾರೆ. ಈ ಉಪಕ್ರಮವು ಕರ್ನಾಟಕದ 5 ಸ್ಟೇಷನ್ಗಳು ಸೇರಿದಂತೆ 18 ರಾಜ್ಯಗಳಲ್ಲಿ ಪ್ರಯಾಣಿಕರ ಸೌಲಭ್ಯಗಳು ಮತ್ತು ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ರಾಜಸ್ಥಾನದ ಬಿಕಾನೇರ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ 103 ಅಮೃತ್ ನಿಲ್ದಾಣಗಳನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 1,100 ಕೋಟಿ ರೂ.ಗಳಿಗಿಂತ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಮಹತ್ವಾಕಾಂಕ್ಷೆಯ ಯೋಜನೆಯು 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 86 ಜಿಲ್ಲೆಗಳನ್ನು ವ್ಯಾಪಿಸಿದ್ದು, ಅಮೃತ್ ಭಾರತ್ ನಿಲ್ದಾಣ ಯೋಜನೆ (ABSS) ಅಡಿಯಲ್ಲಿ ರೈಲು ನಿಲ್ದಾಣಗಳನ್ನು ಆಧುನೀಕರಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯು ಪ್ರಾದೇಶಿಕ ವಾಸ್ತುಶಿಲ್ಪದ ಅಂಶಗಳೊಂದಿಗೆ ಸಮಕಾಲೀನ ಮೂಲಸೌಕರ್ಯವನ್ನು ಸಂಯೋಜಿಸುವುದು, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವುದನ್ನು ಒತ್ತಿಹೇಳುತ್ತದೆ. ಅಂಗವಿಕಲರು ಸೇರಿದಂತೆ ಎಲ್ಲಾ ಪ್ರಯಾಣಿಕರ ಅಗತ್ಯಗಳನ್ನು ಪೂರೈಸುವ ಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರಯಾಣದ ಅನುಭವವನ್ನು ಹೆಚ್ಚಿಸುವುದು ಈ ಯೋಜನೆಯ ಮೊದಲ ಗುರಿಯಾಗಿದೆ.
ಇದನ್ನೂ ಓದಿ: ಜಿನೀವಾದಲ್ಲಿ ವಿಶ್ವ ಆರೋಗ್ಯ ಸಭೆ; ಜಾಗತಿಕ ಆರೋಗ್ಯ ಉಪಕ್ರಮಗಳಿಗೆ ಭಾರತದ ಕೊಡುಗೆ ಎತ್ತಿ ತೋರಿಸಿದ ಪ್ರಧಾನಿ ಮೋದಿ
ಉದ್ಘಾಟನೆಗೆ ನಿಗದಿಯಾಗಿರುವ ನಿಲ್ದಾಣಗಳಲ್ಲಿ 5 ಕರ್ನಾಟಕದ ನಿಲ್ದಾಣಗಳು ಕೂಡ ಸೇರಿವೆ. ಮುನಿರಾಬಾದ್, ಬಾಗಲಕೋಟೆ, ಗದಗ, ಗೋಕಾಕ್ ರಸ್ತೆ ಮತ್ತು ಧಾರವಾಡದ ಅಮೃತ್ ಸ್ಟೇಷನ್ಗಳು ನಾಳೆ ಲೋಕಾರ್ಪಣೆಯಾಗಲಿವೆ. ಪ್ರಯಾಣಿಕರ ಅನುಕೂಲತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಈ ನಿಲ್ದಾಣಗಳು ಆಧುನಿಕ ನವೀಕರಣಗಳಿಗೆ ಒಳಗಾಗಿವೆ.
23.24 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾದ ಗದಗ ರೈಲ್ವೆ ನಿಲ್ದಾಣವು ವಿಶಾಲವಾದ ಪ್ರವೇಶ ಮಂಟಪವನ್ನು ಹೊಂದಿರುವ ಆಧುನಿಕ ಕಟ್ಟಡವಾಗಿದೆ. ಇದಕ್ಕೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ನಿರ್ಮಿಸಲಾಗಿದೆ. ಆಟೋಗಳು, ದ್ವಿಚಕ್ರ ವಾಹನಗಳು ಮತ್ತು 4 ಚಕ್ರಗಳ ವಾಹನಗಳಿಗೆ ಮೀಸಲಾದ ಪಾರ್ಕಿಂಗ್ ಕೂಡ ಇದೆ. ಅಂಗವಿಕಲರಿಗೆ ಹೊಸ ಶೆಲ್ಟರ್‌ಗಳು, ಶೌಚಾಲಯ ಬ್ಲಾಕ್‌ಗಳು ಇವೆ. 12 ಮೀಟರ್ ಅಗಲದ ಸ್ಕೈವಾಕ್, ಜೊತೆಗೆ ಕಾರ್ಯಾಚರಣಾ ಲಿಫ್ಟ್‌ಗಳು ಮತ್ತು ಸಂಪೂರ್ಣವಾಗಿ ಸ್ಥಾಪಿಸಲಾದ ಎಸ್ಕಲೇಟರ್‌ಗಳ ವ್ಯವಸ್ಥೆ ಇದೆ. ಪ್ರತಿದಿನ 40ಕ್ಕೂ ಹೆಚ್ಚು ರೈಲುಗಳಿಗೆ ಸೇವೆ ಸಲ್ಲಿಸುವ ಗದಗ ನಿಲ್ದಾಣವು ಹುಬ್ಬಳ್ಳಿ, ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ನಂತಹ ನಗರಗಳನ್ನು ಸಂಪರ್ಕಿಸುವ ನಿರ್ಣಾಯಕ ಜಂಕ್ಷನ್ ಆಗಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ; ಈ ವರ್ಷದ ಥೀಮ್ ಏನು?
17.1 ಕೋಟಿ ಹೂಡಿಕೆಯೊಂದಿಗೆ ಧಾರವಾಡ ನಿಲ್ದಾಣದವನ್ನು ನವೀಕರಿಸಲಾಗಿದೆ. ಇಲ್ಲಿನ ಎಲ್ಲಾ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವ 12 ಮೀಟರ್ ಅಗಲದ ಸ್ಕೈವಾಕ್ ನಿರ್ಮಿಸಲಾಗಿದೆ. ಮೂರು ಲಿಫ್ಟ್‌ಗಳು ಮತ್ತು ಎರಡು ಎಸ್ಕಲೇಟರ್‌ಗಳು, ಆಧುನಿಕ ಫಲಕಗಳು, ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳು, ಡಿಜಿಟಲ್ ಗಡಿಯಾರಗಳು ಮತ್ತು ಹೊಸ ಪೀಠೋಪಕರಣಗಳ ವ್ಯವಸ್ಥೆ ಇದೆ. ಅಂಗವಿಕಲರಿಗೆ ನವೀಕರಿಸಿದ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಲೋಂಡಾ-ಹುಬ್ಬಳ್ಳಿ ಮಾರ್ಗದಲ್ಲಿ ಕಾರ್ಯತಂತ್ರದ ನೆಲೆಯಾಗಿರುವ ಧಾರವಾಡ ನಿಲ್ದಾಣವು ಪ್ರಯಾಣಿಕರನ್ನು ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ಪುಣೆ ಮತ್ತು ಗೋವಾದಂತಹ ಪ್ರಮುಖ ನಗರಗಳಿಗೆ ಸಂಪರ್ಕಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:35 pm, Wed, 21 May 25








