ಕದನ ವಿರಾಮದಲ್ಲಿ ಅಮೆರಿಕದ ಪಾತ್ರವಿಲ್ಲ; ಸಂಸದರಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನದ ಸಂಘರ್ಷದ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇಂದು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ವಿವರಿಸಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು. ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಾಂಪ್ರದಾಯಿಕ ಹೋರಾಟ ಹಾಗೇ ಉಳಿದಿದೆ. ಆದರೆ, ಯಾವುದೇ ಪರಮಾಣು ದಾಳಿಯ ಸೂಚನೆಯಿಲ್ಲ ಎಂದು ಸಮಿತಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ, ಮೇ 19: ಭಾರತ ಮತ್ತು ಪಾಕಿಸ್ತಾನ (Indian-Pakistan Conflict) ನಡುವೆ ಕದನ ವಿರಾಮ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸುವ ಮತ್ತು ಪರಮಾಣು ಯುದ್ಧವನ್ನು ತಪ್ಪಿಸುವ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ ಹೇಳಿಕೆಗಳ ನಡುವೆ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ (Vikram Misri) ಇಂದು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಸದಸ್ಯರಿಗೆ ಪಾಕಿಸ್ತಾನದಿಂದ ಯಾವುದೇ ಪರಮಾಣು ದಾಳಿಯ ಸೂಚನೆಯಿಲ್ಲ. ಕದನವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆಯನ್ನೂ ವಹಿಸಿಲ್ಲ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮಕ್ಕೆ ನಾನೇ ಮಧ್ಯಸ್ಥಿಕೆ ವಹಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಈ ಮೂಲಕ ಜಾಗತಿಕವಾಗಿ ಮತ್ತೊಮ್ಮೆ ಅಮೆರಿಕದ ಸ್ಥಾನವನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಅಮೆರಿಕದ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ.
ಮೂಲಗಳು ಹೇಳುವಂತೆ, ಆಪರೇಷನ್ ಸಿಂಧೂರ್ ನಂತರ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ನಡೆದ ಸಾಂಪ್ರದಾಯಿಕ ಹೋರಾಟ ಮಾತ್ರ ಇದಾಗಿದ್ದು, ಅಮೆರಿಕ ಹೇಳಿಕೊಳ್ಳುತ್ತಿರುವಂತೆ ಯಾವುದೇ ಪರಮಾಣು ದಾಳಿಯ ಸೂಚನೆ ಇಲ್ಲ ಎಂದು ಸಮಿತಿಗೆ ತಿಳಿಸಲಾಗಿದೆ.
ಇದನ್ನೂ ಓದಿ: ಭಾರತ ಧರ್ಮಛತ್ರವಲ್ಲ; ಶ್ರೀಲಂಕಾ ವಲಸಿಗನಿಗೆ ಆಶ್ರಯ ನಿರಾಕರಿಸಿದ ಸುಪ್ರೀಂ ಕೋರ್ಟ್
ಇಸ್ಲಾಮಾಬಾದ್‌ನಿಂದ ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಂದ (ಡಿಜಿಎಂಒ) ಕದನ ವಿರಾಮದ ಮನವಿ ಬಂದಿದೆ ಎಂದು ವಿಕ್ರಮ್ ಮಿಶ್ರಿ ಸಮಿತಿಗೆ ತಿಳಿಸಿದ್ದಾರೆ. ಅವರು ದೆಹಲಿಯಲ್ಲಿರುವ ಭಾರತದ ಡಿಜಿಎಂಒ ಅವರನ್ನು ಸಂಪರ್ಕಿಸಿದ್ದರು. ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಅಮೆರಿಕದ ಯಾವುದೇ ಹಸ್ತಕ್ಷೇಪ ಇರಲಿಲ್ಲ ಎಂದು ಸಮಿತಿಗೆ ಅವರು ತಿಳಿಸಿದ್ದಾರೆ.
Delhi | Foreign Secretary Vikram Misri arrives at Parliament House Annexe for the Standing Committee meeting on External Affairs pic.twitter.com/JPzgevgpMs
— ANI (@ANI) May 19, 2025
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7ರ ಮುಂಜಾನೆ ಭಯೋತ್ಪಾದಕ ಮೂಲಸೌಕರ್ಯದ ಮೇಲೆ ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ನಿಖರವಾದ ದಾಳಿಗಳನ್ನು ನಡೆಸಿತು. ನಂತರ ಪಾಕಿಸ್ತಾನವು ಮೇ 8, 9 ಮತ್ತು 10ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಭಾರತೀಯ ಪಡೆಗಳು ಹಲವಾರು ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಉಗ್ರ ಪ್ರತಿದಾಳಿ ನಡೆಸಿದವು. ನಂತರ, ಮೇ 10ರಂದು ಕದನ ವಿರಾಮ ಘೋಷಿಸಲಾಯಿತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ನಾನೇ ‘ಮಧ್ಯವರ್ತಿ’ ಎಂಬುದನ್ನು ಮಾತ್ರವಲ್ಲದೆ, ‘ಪರಮಾಣು ಸಂಘರ್ಷ’ವನ್ನು ಕೂಡ ತಪ್ಪಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲೆಡೆ ಪುನರುಚ್ಚರಿಸುತ್ತಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರದ ಬಗ್ಗೆ ಮತ್ತೊಮ್ಮೆ ಜೈಶಂಕರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ಪಾಕಿಸ್ತಾನದಲ್ಲಿ ಅದೇ ಹೆಡ್ಲೈನ್!
ಕಳೆದ ವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ನಂತರ, ಟ್ರಂಪ್ ಎರಡು ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿಕೊಂಡಿದ್ದರು. ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, “ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ರಾತ್ರಿಯ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆಯನ್ನು ಬಳಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು” ಎಂದು ಹೇಳಿದ್ದರು.
Parliamentary Standing Committee on External Affairs unanimously condemns trolling of Foreign Secy Vikram Misri, praises his work: Sources. pic.twitter.com/n1qqf23VLb
— Press Trust of India (@PTI_News) May 19, 2025
ಆದರೆ, ಭಾರತವು ಕಳೆದ ವಾರ ಅವರ ಹೇಳಿಕೆಗಳಿಗೆ 6 ಅಂಶಗಳ ದೃಢವಾದ ನಿರಾಕರಣೆಯನ್ನು ನೀಡಿತು. ಇಬ್ಬರು ಡಿಜಿಎಂಒಗಳು ಫೋನ್‌ನಲ್ಲಿ ಮಾತನಾಡಿ ಯುದ್ಧವನ್ನು ನಿಲ್ಲಿಸಲು ಒಪ್ಪಿಕೊಂಡಿದ್ದರಿಂದಲೇ ಕದನವಿರಾಮವಾಗಿದೆ. ಇದರಲ್ಲಿ ಅಮೆರಿಕದ ಪಾತ್ರವಿಲ್ಲ ಎಂದಿತ್ತು. ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ ಮಿಲಿಟರಿ-ಮಿಲಿಟರಿ ಮಾರ್ಗಗಳ ಮೂಲಕ ನೇರವಾಗಿ ಕದನ ವಿರಾಮವನ್ನು ಸಾಧಿಸಲಾಗಿದೆ. ಇದರಲ್ಲಿ ಯುಎಸ್ ಸೇರಿದಂತೆ ಯಾವುದೇ ಮೂರನೇ ವ್ಯಕ್ತಿಯ ಭಾಗವಹಿಸುವಿಕೆ ಇಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








