ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ; ಬೆಂಗಳೂರಿನೊಂದಿಗಿನ ಸಂಪರ್ಕವೇ ಕೊವಿಡ್ ತೀವ್ರತೆಗೆ ಕಾರಣ

|

Updated on: May 07, 2021 | 8:02 AM

ಯಾರು ಕೂಡ ಅನಗತ್ಯವಾಗಿ ಓಡಾಡಬೇಡಿ. ಸಾಧ್ಯವಾದಷ್ಟು ಲಾಕ್​ಡೌನ್​ಗೆ ಸಹಕಾರ ನೀಡಿ ಸೊಂಕು ತಡೆಯಲು ಸಹಕರಿಸಿ ಎಂದು ಡಿಸಿ ವೈ.ಎಸ್ ಪಾಟೀಲ್ ಹಾಗೂ ಎಸ್​ಪಿ ಡಾ. ವಂಶಿಕೃಷ್ಣ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ನಿರಂತರವಾಗಿ ಕೊವಿಡ್​​ನಿಂದ ಕಾಪಾಡಲು ಅಗತ್ಯತೆ ಸೂಚಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ; ಬೆಂಗಳೂರಿನೊಂದಿಗಿನ ಸಂಪರ್ಕವೇ ಕೊವಿಡ್ ತೀವ್ರತೆಗೆ ಕಾರಣ
ಪ್ರಾತಿನಿಧಿಕ ಚಿತ್ರ
Follow us on

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಗೆ ಸಾರ್ವಜನಿಕರು ನಲುಗಿ ಹೋಗಿದ್ದಾರೆ. ಪ್ರತಿದಿನ ಎರಡು ಸಾವಿರ ಗಡಿ ದಾಟಿ ಸೊಂಕಿತರು ಪತ್ತೆಯಾಗುತ್ತಿದ್ದು, ಜಿಲ್ಲಾದ್ಯಂತ ಆತಂಕ ಸೃಷ್ಟಿಯಾಗಿದೆ. ಸಾವಿನ ಸಂಖ್ಯೆಯಲ್ಲೂ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪ್ರತಿದಿನ 10ರಿಂದ15 ಸೊಂಕಿತರು ಸಾವಿಗೀಡಾಗುತ್ತಿದ್ದಾರೆ.ತುಮಕೂರಿಗೆ ಕೂದಲಳತೆ ದೂರದಲ್ಲಿರುವ ರಾಜಧಾನಿ ಬೆಂಗಳೂರು ಸದ್ಯ ಜಿಲ್ಲೆಗೆ ಕಂಟಕವಾಗಿ ಪರಿಣಮಿಸಿದೆ. ಬೆಂಗಳೂರಿನ ಸೊಂಕು ತುಮಕೂರು ಜಿಲ್ಲೆಗೆ ಅತಿ ವೇಗವಾಗಿ ಹರಡಿದ್ದು, ಸೋಂಕು ಗಣನೀಯವಾಗಿ ಹೆಚ್ಚಾಗಿ ಹಳ್ಳಿ ಹಳ್ಳಿಗಳಲ್ಲಿ ವ್ಯಾಪಿಸಿದೆ.

ಸೊಂಕಿತರು ಅತಿ ಹೆಚ್ಚಾಗಿ ಇರುವುದು ತುಮಕೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ. ತುಮಕೂರು ನಗರ ಅತಿದೊಡ್ಡ ನಗರವಾಗಿದ್ದು, ಸದ್ಯ ಕೊರೊನಾ ಹಾಟ್ ಸ್ಟಾಟ್ ಆಗಿದೆ‌. ನಗರದಲ್ಲಿ ಒಟ್ಟು 22 ಬಡವಾಣೆಗಳು ಕೊರೊನಾ ಅಲೆಗೆ ಗುರಿಯಾಗಿದ್ದು, ಎಗ್ಗಿಲ್ಲದೇ ಮುನ್ನುಗ್ಗಿ ಅಟ್ಟಹಾಸ ಮೆರೆಯುತ್ತಿದೆ. ಸದ್ಯ ತುಮಕೂರು ನಗರ ಗ್ರಾಮಾಂತರ ಸೇರಿ ಒಟ್ಟು 7133 ಸೊಂಕಿತರು ಇದ್ದಾರೆ. ಈಗಾಗಲೇ 295 ಜನರು ಅಸುನಿಗಿದ್ದಾರೆ.

ಸದ್ಯ ಇರುವ ಸಕ್ರಿಯ ಪ್ರಕರಣಗಳು:
ತುಮಕೂರು -7133
ಚಿಕ್ಕನಾಯಕನಹಳ್ಳಿ-527
ಗುಬ್ಬಿ-1011
ತುರುವೇಕೆರೆ-816
ಕೊರಟಗೆರೆ-655
ಮಧುಗಿರಿ-990
ಪಾವಗಡ-992
ಶಿರಾ-1543
ತಿಪಟೂರು-577
ಕುಣಿಗಲ್-1149
ಒಟ್ಟು-15393

ಇನ್ನೂ ಇದೆಲ್ಲಾವೂ ಕೂಡ ಏಪ್ರಿಲ್ ತಿಂಗಳಿನಿಂದ ಈಚೆಗೆ ಹೆಚ್ಚಾಗಿದ್ದು, ನಿಜಕ್ಕೂ ಭಯಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿಗೆ ಪ್ರತಿದಿನ 50-60 ಸಾವಿರ ಮಂದಿ ಉದ್ಯೋಗಕ್ಕೆ ಹೋಗಿದ್ದೆ ಸೊಂಕು ಹೆಚ್ಚಲು ಕಾರಣ ಎನ್ನುವುದು ಹಲವರ ಅಭಿಪ್ರಾಯ. ಮೊದಲ ಅಲೆಯಲ್ಲಿ ತತ್ತರಿಸಿದ್ದ ತುಮಕೂರು ಜಿಲ್ಲೆ ಈಗಷ್ಟೇ ಚೇತರಿಸಿಕೊಂಡಿತ್ತು. ಆದರೆ ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ ಮತ್ತೆ ಆತಂಕ ಶುರುವಾಗಿದೆ.

ಕೊವಿಡ್ ಟೆಸ್ಟ್ ರಿಪೋರ್ಟ್ ಒಂದು ವಾರ ಅಥವಾ ಹತ್ತು ದಿನಗಳು ಕಳೆದರೂ ಕೂಡ ಬರುತ್ತಿಲ್ಲ. ಟೆಸ್ಟ್ ಕೊಟ್ಟ ಬಳಿಕ ಆ ಸೊಂಕಿತ ವ್ಯಕ್ತಿ ಸಾಕಷ್ಟು ಜನರ ಜೊತೆ ಮಾತನಾಡಿ ಸಂಪರ್ಕ ಇಟ್ಟುಕೊಂಡಿರುತ್ತಾನೆ. ಹೀಗಾಗಿ ರಿಪೋರ್ಟ್ ಬರೋವಷ್ಟರಲ್ಲಿಯೇ ಸಾಕಷ್ಟು ಜನರು ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುತ್ತಾರೆ. ಇದು ಕೂಡ ಸೊಂಕು ಹೆಚ್ಚಳಕ್ಕೆ ಕಾರಣವಾಗಿದೆ. ಇದರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರನ್ನ ನಿರ್ಲಕ್ಷ್ಯ ಮಾಡಿದ್ದು ಕೂಡ ಜಿಲ್ಲೆಯಲ್ಲಿ ಇಷ್ಟರಮಟ್ಟಿಗೆ ಸೊಂಕು ಹೆಚ್ಚಳಕ್ಕೆ ಕಾರಣವಾಗಿದೆ.

ದಿನದಿಂದ ದಿನಕ್ಕೆ ಸೊಂಕು ಹೆಚ್ಚಳವಾಗಿತ್ತಿದ್ದರೂ ಜಿಲ್ಲಾಡಳಿತ ಜಿಲ್ಲಾದ್ಯಂತ ಕೊವಿಡ್ ಕೇರ್ ಸೆಂಟರ್ ಆರಂಭಿಸದೇ ಇದಿದ್ದೇ ಕಾರಣವಾಗಿದೆ, ಏಪ್ರಿಲ್ ಮೊದಲ ವಾರದಲ್ಲಿ ಕೊವಿಡ್ ಕೇರ್ ಸೆಂಟರ್ ಆರಂಭಿಸಿದ್ದರೇ ಈ ಲಕ್ಷಣಗಳು ಇರುವವರನ್ನು ದಾಖಲಿಸಿ ಚಿಕಿತ್ಸೆ ನೀಡಬಹುದಿತ್ತು. ಆಗ ಸೊಂಕು ಹರಡುವುದನ್ನ ತಡೆಯಬಹುದಿತ್ತು. ಆದರೆ ಕಳೆದ ಹತ್ತು ದಿನಗಳ ಹಿಂದೆ ಕೊವಿಡ್ ಕೇರ್ ಸೆಂಟರ್ ಆರಂಭವಾಗಿದ್ದು, ಈಗ ಸ್ವಲ್ಪಮಟ್ಟಿಗೆ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ.

ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ವೆಂಟಿಲೇಟರ್ ಐಸಿಯು ಸೇರಿದಂತೆ ಒಟ್ಟು 250 ಬೆಡ್​ಗಳಿವೆ,ಇದನ್ನ 500-1000 ಬೆಡ್​ಗೆ ಹೆಚ್ಚಿಸಿದ್ದರೇ ಸೊಂಕು ಹರಡಯವುದನ್ನ ತಡೆಯಬಹುದಿತ್ತು. ಆದರೆ ಈ ಕೆಲಸ ಮಾಡದೇ, ಇರೋದನ್ನೇ ಬಳಸಿಕೊಂಡು ಒದ್ದಾಟ ನಡೆಸುತ್ತಿರೋದರಿಂದ ಸೊಂಕಿತರಿಗೆ ಸಮರ್ಪಕವಾಗಿ ಬೆಡ್ ಸಿಗದೇ ಪರದಾಟ ನಡೆಸುತ್ತಿದ್ದಾರೆ. ತಾಲೂಕು ಆಸ್ಪತ್ರೆಗಳಲ್ಲಿ ಕೂಡ ನೂರು ಬೆಡ್​ಗೆ ಹೆಚ್ಚಿಸಿದ್ದರೇ ತಾಲೂಕುಗಳಲ್ಲಿ ಕೂಡ ಸೊಂಕು ಸ್ವಲ್ಪ ಮಟ್ಟಿಗೆ ತಡೆಯಬಹುದಿತ್ತು. ಇನ್ನೂ ಸೊಂಕಿತರನ್ನ ಹಳ್ಳಿಗಳಲ್ಲಿ ಓಡಾಡುವುದಕ್ಕೆ ಬಿಟ್ಟಿದ್ದು ಕೂಡ ಸೊಂಕು ಹರಡಲು ಕಾರಣವಾಗಿದೆ.

ಯಾರು ಕೂಡ ಅನಗತ್ಯವಾಗಿ ಓಡಾಡಬೇಡಿ. ಸಾಧ್ಯವಾದಷ್ಟು ಲಾಕ್​ಡೌನ್​ಗೆ ಸಹಕಾರ ನೀಡಿ ಸೊಂಕು ತಡೆಯಲು ಸಹಕರಿಸಿ ಎಂದು ಡಿಸಿ ವೈ.ಎಸ್ ಪಾಟೀಲ್ ಹಾಗೂ ಎಸ್​ಪಿ ಡಾ. ವಂಶಿಕೃಷ್ಣ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ನಿರಂತರವಾಗಿ ಕೊವಿಡ್​​ನಿಂದ ಕಾಪಾಡಲು ಅಗತ್ಯತೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಸದ್ಯ ಸೊಂಕು ತಡೆಯಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಪ್ರತಿಯೊಂದು ಹಳ್ಳಿಗಳಲ್ಲಿ ಕೊವಿಡ್ ಟೆಸ್ಟ್ ಮಾಡಿಸಿ ಮುಂಜಾಗ್ರತಾ ಕ್ರಮಗಳಿಂದ ಇರಲು ಸೂಚಿಸಲಾಗಿದೆ. ಅಲ್ಲದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಚಿಕಿತ್ಸೆ ನೀಡಲು ಆದೇಶ ಮಾಡಲಾಗಿದ್ದು, ಒಟ್ಟು 18 ಕ್ಕೂ ಹೆಚ್ಚು ಜನರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಒಟ್ಟಾರೆ ಕೊರೊನಾ ಸೋಂಕಿನಿಂದ ಜನರು ಎಚ್ಚೆತ್ತುಕೊಳ್ಳಲಿ ಎನ್ನುವುದೇ ನಮ್ಮ ಆಶಯ.

ಇದನ್ನೂ ಓದಿ:

ಉಡುಪಿಯಲ್ಲಿ ಕೊರೊನಾ ಸೋಂಕು ಹೆಚ್ಚಳ ; ಕೊವಿಡ್ ಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆಗೆ ಬರುವಂತೆ ಜಿಲ್ಲಾಧಿಕಾರಿಂದ ಸೂಚನೆ

ಕೋಲಾರ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ; ಸಿಟಿ ಸ್ಕ್ಯಾನ್​ ಮಾಡಿಸಲು ಆಸ್ಪತ್ರೆ ಮುಂದೆ ಕ್ಯೂ ನಿಂತ ಸಾರ್ವಜನಿಕರು