ವಿಜಯನಗರ: ಪರೀಕ್ಷೆ ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಘಟ್ಟ. ಇಂದಿನಿಂದ(ಮಾರ್ಚ್ 09) 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ(PUC Exam) ಆರಂಭವಾಗಿದೆ. ಆದ್ರೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹೆಚ್ಪಿಎಸ್ ಕಾಲೇಜಿನ 48 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ. ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳನ್ನ ಕಾಲೇಜು ಸಿಬ್ಬಂದಿ ಹೊರ ಹಾಕಿದ್ದಾರೆ. ಸದ್ಯ 48 ವಿದ್ಯಾರ್ಥಿಗಳು ಪಿಯು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ರಾಜ್ಯಾದ್ಯಂತ ಇಂದಿನಿಂದ ಪಿಯು ಪರೀಕ್ಷೆ ಆರಂಭವಾಗಿದೆ. ಈ ಬಾರಿ ಒಟ್ಟು 7 ಲಕ್ಷದ 26 ಸಾವಿರದ 195 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆಯಲಿದೆ. ಆದ್ರೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಇರುವ ಹೆಚ್ಪಿಎಸ್ ಕಾಲೇಜಿನ 48 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಕಾಲೇಜು ಆಡಳಿತ ಮಂಡಳಿಯಿಂದ ನಿನ್ನೆಯೇ ಹಾಲ್ ಟಿಕೆಟ್ ಪಡೆದು ಇಂದು ಮೊದಲ ದಿನದ ಕನ್ನಡ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳನ್ನ ಹೊರ ಹಾಕಲಾಗಿದೆ. ಹೀಗಾಗಿ ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಹಾಜರಾತಿ ಕಡಿಮೆ ಇದೆ ಈ ಹಿನ್ನೆಲೆ ಪರೀಕ್ಷೆ ಬರೆಯಲು ಅನುಮತಿಕೊಡಲ್ಲ ಎಂದು ಕಾಲೇಜು ಸಿಬ್ಬಂದಿ ಕಾರಣ ನೀಡಿದ್ದು ಪರೀಕ್ಷೆಗೆ ಅನುಮತಿ ಇಲ್ಲ ಎಂದು ಹಾಲ್ ಟಿಕೆಟ್ ಕೊಡುವಾಗಲೇ ಹೇಳಬೇಕಿತ್ತು ಎಂದು ಪೋಷಕರು, ಸಾರ್ವಜನಿಕರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸೂಕ್ತ ಕ್ರಮ ಕೈಗೊಂಡು ಪರೀಕ್ಷೆ ಬರೆಯಲು ಜೊತೆಗೆ ಮುಂದಿನ ವಿಷಯಗಳ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ಈ ಹಿಂದೆ 5 ಅಥವಾ 6 ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದ್ರೆ ಈ ಬಾರಿ 20 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಇರಲಿದೆ. ಎಲ್ಲ ವಿಷಯಗಳಲ್ಲೂ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಇರಲಿದೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಗ್ರೇಸ್ ಮಾರ್ಕ್ಸ್ಗೆ ಸಂಬಂಧಿಸಿಯೂ ತಿದ್ದುಪಡಿ ಮಾಡಲಾಗಿದೆ.
ಇನ್ನು ಇಂದಿನಿಂದ ಪರೀಕ್ಷೆ ಶುರುವಾಗಿದ್ದು, ಮಾರ್ಚ್ 29ಕ್ಕೆ ಎಕ್ಸಾಂ ಮುಗಿಯಲಿದೆ. ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:40 pm, Thu, 9 March 23