ಎಲ್ಲ ಪೋಷಕರು-ಅಧಿಕಾರಿಗಳು ಈ ಲೇಖನ ಓದಬೇಕು: ಇಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಲಿ, ನತದೃಷ್ಟ ಮಾತಾಪಿತೃಗಳ ಸಂಖ್ಯೆ ಕಡಿಮೆಯಾಗಲಿ

| Updated By: ಸಾಧು ಶ್ರೀನಾಥ್​

Updated on: Dec 27, 2022 | 12:40 PM

retransferment of property: ತಂದೆ ತಾಯಿಯನ್ನ ನೋಡಿಕೊಳ್ಳದ ಮಕ್ಕಳಿಂದ ಆಸ್ತಿ ವಾಪಸ್. ನೊಂದ ಮೂವರಿಗೆ ಆಸ್ತಿ ವಾಪಸ್ ಕೊಡಿಸಿದ ಸಹಾಯಕ ಆಯುಕ್ತರು. ಕಣ್ಣೀರು ಹಾಕುತ್ತಲೇ ಆಸ್ತಿ ಪತ್ರ ವಾಪಸ್​ ಪಡೆದ ಹಿರಿಯ ಜೀವಿಗಳು. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದಲ್ಲಿ

ಎಲ್ಲ ಪೋಷಕರು-ಅಧಿಕಾರಿಗಳು ಈ ಲೇಖನ ಓದಬೇಕು: ಇಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಲಿ, ನತದೃಷ್ಟ ಮಾತಾಪಿತೃಗಳ ಸಂಖ್ಯೆ ಕಡಿಮೆಯಾಗಲಿ
ಎಲ್ಲ ಪೋಷಕರು-ಸರ್ಕಾರಿ ಅಧಿಕಾರಿಗಳು ತಪ್ಪದೇ ಈ ಲೇಖನ ಓದಬೇಕು
Follow us on

ತಮ್ಮ ಮಕ್ಕಳ ಜೀವನಕ್ಕೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಪೋಷಕರು ಕಷ್ಟಪಟ್ಟು ಆಸ್ತಿಯನ್ನ ಮಾಡಿರುತ್ತಾರೆ. ಮಕ್ಕಳಿಗೆ (children) ಏನಾದರೂ ಮಾಡಿದ್ರೆ ಮುಂದೆ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತಾ ಪೋಷಕರು (parents) ಅಂದುಕೊಂಡಿರುತ್ತಾರೆ. ಆದ್ರೆ ಇಲ್ಲಿ ಆಗಿದ್ದೇ ಬೇರೆಯಾಗಿದೆ. ತಂದೆ ಮಾಡಿದ ಆಸ್ತಿಯನ್ನ (property) ಪಡೆದ ಮಕ್ಕಳು ತಮ್ಮ ಜನ್ಮದಾತರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಆದ್ರೆ ಹಾಗೆ ಪೋಷಕರನ್ನ ನಿರ್ಲಕ್ಷ್ಯ ಮಾಡಿದವರ ಕಥೆಯಾದರೂ ಏನಾಗಿದೆ ಅಂತೀರಾ? ಈ ಸ್ಟೋರಿ ನೋಡಿ. ಇದು ಎಲ್ಲ ಪೋಷಕರು ಮತ್ತು ಸರ್ಕಾರಿ ಅಧಿಕಾರಿಗಳು ತಪ್ಪದೇ ಓದಬೇಕು. ಮಾನವೀಯ ಕಳಕಳಿಯುಳ್ಳ ಅಧಿಕಾರಿ ತನ್ನ ಅಧಿಕಾರವನ್ನು ಜನೋಪಯೋಗಿಯಾಗಿ ಬಳಸಿದರೆ ಏನಾಗುತ್ತೆ ಎಂಬುದಕ್ಕೆ ಇದೊಂದು ಮಾದರಿ. ಇಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಲಿ, ನತದೃಷ್ಟ ಮಾತಾಪಿತೃಗಳ ಸಂಖ್ಯೆ ಕಡಿಮೆಯಾಗಲಿ ಎಂದು ಆಶಿಸುತ್ತಾ.

ತಂದೆ ತಾಯಿಯನ್ನ ನೋಡಿಕೊಳ್ಳದ ಮಕ್ಕಳಿಂದ ಆಸ್ತಿ ವಾಪಸ್. ನೊಂದ ಮೂವರಿಗೆ ಆಸ್ತಿ ವಾಪಸ್ ಕೊಡಿಸಿದ (retransferment of property) ಸಹಾಯಕ ಆಯುಕ್ತರು. ಕಣ್ಣೀರು ಹಾಕುತ್ತಲೇ ಆಸ್ತಿ ಪತ್ರ ವಾಪಸ್​ ಪಡೆದ ಹಿರಿಯ ಜೀವಿಗಳು. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದಲ್ಲಿ (Yadgir). ಹೌದು ಯಾವುದೇ ತಂದೆ-ತಾಯಿ ಆಗಲಿ ಮುಪ್ಪಿನ ಕಾಲದಲ್ಲಿ ಮಕ್ಕಳು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಅನ್ನೋ ಸಹಜ ಇಚ್ಛೆಯನ್ನ ಇಟ್ಟುಕೊಂಡಿರುತ್ತಾರೆ. ಅದೆ ರೀತಿ ಮುಂದೆ ಮಕ್ಕಳು ಜೀವನ ನಡೆಸಲು ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಪೋಷಕರು ಕಷ್ಟಪಟ್ಟು ಆಸ್ತಿಯನ್ನ ಮಾಡಿಡುತ್ತಾರೆ.

ಆದ್ರೆ ಮುಂದೆ ಆಸ್ತಿಯನ್ನ ಪಡೆದು ಮಕ್ಕಳು ತಮಗೆ ಜನ್ಮ ನೀಡಿದವರನ್ನು ಜಸ್ಟ್ ಇಗ್ನೋರ್​​ ಮಾಡಿಬಿಡುತ್ತಾರೆ. ಇಂತಹ ಅನೇಕಾನೇಕ ಘಟನೆಗಳು ಆಗಾಗ ನಡೆದಿವೆ. ಆದ್ರೆ ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪೋಷಕರಿಗೆ ನ್ಯಾಯ ಸಿಕ್ಕಿದೆ. ಇದಕ್ಕೆ ಕಾರಣ ಅಂದ್ರೆ ಹಿರಿಯ ನಾಗರೀಕರ ಪೋಷಣೆ ಪಾಲಕರ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ನ್ಯಾಯ ಮಂಡಳಿ 2007ರ ಕಾಯ್ದೆ ( Maintenance and Welfare of Parents and Senior Citizens Act, 2007). ಇದೇ ಕಾಯ್ದೆಯಿಂದ ಯಾದಗಿರಿಯಲ್ಲಿ ಇವತ್ತು ಮೂರು ಜನ ಪೋಷಕರು ತಮ್ಮ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಆಸ್ತಿಯನ್ನ ವಾಪಸ್ ಪಡೆದಿದ್ದಾರೆ.

ಇದನ್ನೂ ಓದಿ:

ಹಾಸ್ಟೆಲುಗಳಲ್ಲಿದ್ದು KAS ಮಾಡಿದ ನಾಗರಾಜ್, ತಹಶೀಲ್ದಾರ್​ ಆಗಿ ತಮ್ಮ ಕೋಲಾರದಲ್ಲಿ ದೇವರ ಕೆಲಸ ಮಾಡ್ತಿದಾರೆ ನೋಡಿ!

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ ಗ್ರಾಮದ ರವೀಂದ್ರನಾಥ ಹಿರೇಮಠ ಅವರಿಗೆ ಮೂವರು ಪುತ್ರರು. ಒಬ್ಬ ಪುತ್ರಿ ಇದ್ದಾರೆ. ಪತ್ನಿ ತೀರಿಕೊಂಡಿದ್ದಾರೆ. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲ. ಇದರಿಂದ ತಾವು ದಾನವಾಗಿ ನೀಡಿದ ಶಿರವಾಳ ಗ್ರಾಮದ ಸರ್ವೆ ಸಂಖ್ಯೆ 47ರ 10 ಎಕರೆ 12 ಗುಂಟೆ, ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದ ಸರ್ವೆ ಸಂಖ್ಯೆ 199ರ 28 ಎಕರೆ 35 ಗುಂಟೆ ಮಕ್ಕಳ ಹೆಸರಿನಲ್ಲಿ ಖರೀದಿಸಿದ ಜಮೀನು ವಾಪಸ್‌ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಉಪವಿಭಾಗಾಧಿಕಾರಿ ಶಾಲಂ ಹುಸೇನ್‌ ಅವರು ವಿಚಾರಣೆ ನಂತರ ದಾನ ಪತ್ರವನ್ನು ಶೂನ್ಯಗೊಳಿಸಿ ಆದೇಶ ನೀಡಿದ್ದಾರೆ. ಹೀಗಾಗಿ ರವೀಂದ್ರನಾಥ್ ಅವರಿಗೆ ಆಸ್ತಿಯನ್ನ ವಾಪಸ್ ಕೊಡಿಸಿದ್ದಾರೆ.

ಜಿಲ್ಲೆಯ ಗುರುಮಠಕಲ್ ತಾಲೂಕಿನ ಧರ್ಮಪುರ ಗ್ರಾಮದ ಶಂಕ್ರಮ್ಮ ಎಂಬ ವೃದ್ಧೆಗೆ ನಾಲ್ಕು ಮಕ್ಕಳಿದ್ದಾರೆ. ಮುಂಬೈ, ಹೈದರಾಬಾದ್‌ ಕಡೆ ವಾಸ ಮಾಡುತ್ತಿದ್ದಾರೆ. ಮಕ್ಕಳು ನನ್ನ ಯೋಗಕ್ಷೇಮ ನೋಡಿಕೊಳ್ಳದ ಕಾರಣ ತಮ್ಮ ಪತಿಯ ಹೆಸರಿನಿಂದ ತಮ್ಮ ಮಕ್ಕಳ ಹೆಸರಿಗೆ ಆಗಿರುವ ಚಿನ್ನಾಕಾರ ಸಮೀಪದ ನಾಲ್ಕು ಎಕರೆ ಜಮೀನು ತಮಗೆ ವಾಪಸ್‌ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಅದಕ್ಕೆ ಸ್ಪಂದಿಸಿದ ಸಹಾಯಕ ಆಯುಕ್ತರು ಮೂರು ಬಾರಿ ವಿಚಾರಣೆಯನ್ನ ನಡೆಸಿದರು. ಬಳಿಕ ಮಕ್ಕಳಿಗೆ ನೋಟಿಸ್ ಕೂಡ ಜಾರಿ ಮಾಡಿದ್ರು. ಆದ್ರೆ ನೋಟಿಸ್ ಗೆ ಉತ್ತರಿಸದೆ ಹಾಗೂ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಶಂಕ್ರಮ್ಮಗೆ ಆಸ್ತಿಯನ್ನ ವಾಪಸ್ ಕೊಡಿಸಿದ್ದಾರೆ. ಇನ್ನು ತಮಗೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಮೋಸದಿಂದ ಆಸ್ತಿಯನ್ನ ತಮ್ಮ ಹೆಸರಿಗೆ ಬರೆಸಿಕೊಂಡಿದ್ದ ಮಕ್ಕಳು ತಾಯಿಯನ್ನ ಏಕಾಂಗಿಯನ್ನಾಗಿ ಮಾಡಿ ಬೇರೆ ಬೇರೆ ಕಡೆ ಜೀವನ ನಡೆಸುತ್ತಿದ್ದಾರೆ. ಇತ್ತ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ತಾಯಿ ಶಂಕ್ರಮ್ಮ ಇಳಿ ವಯಸ್ಸಿನಲ್ಲೂ ಕೂಲಿ ನಾಲಿ ಮಾಡಿಕೊಂಡು ತಮ್ಮ ಜೀವನಕ್ಕೆ ತಾವೇ ಆಧಾರವಾಗಿದ್ದರು. ಈಗ ಮಕ್ಕಳಿಂದ ಮತ್ತೆ ವಾಪಸ್ ಆಸ್ತಿಯನ್ನ ಪಡೆದು ಮಕ್ಕಳಿಗೆ ಪಾಠ ಕಲಿಸಿದ್ದಾರೆ.

ಇನ್ನೊಂದು ಕಡೆ ಯಾದಗಿರಿ ತಾಲೂಕಿನ ಬೆಳಗುಂದಿ ಗ್ರಾಮದ ಬಸವರಾಜ್ ಎಂಬ ವೃದ್ಧನಿಗೆ ಒಬ್ಬನೆ ಮಗನಿದ್ದರೂ ತಂದೆಯನ್ನ ನೋಡಿಕೊಳ್ಳದೆ ದೂರ ಆಗಿದ್ದಾನೆ. ತಂದೆಯ ಆಧಾರ್​ ಕಾರ್ಡ್ ಮಾಡಿಸುವುದಾಗಿ ಹೇಳಿ ಮೋಸದಿಂದ ತಂದೆಯ ಸಹಿ ಪಡೆದು 8 ಎಕರೆ ಆಸ್ತಿಯನ್ನ ತನ್ನ ಹೆಸರಿಗೆ ಮಾಡಿಸಿಕೊಂಡು ಜನ್ಮ ಕೊಟ್ಟ ತಂದೆಗೆ ಮೋಸ ಮಾಡಿದ್ದ. ಆದ್ರೆ ಸಹಾಯಕ ಆಯುಕ್ತರು ವಿಚಾರಣೆ ನಡೆಸಿ, ವಾಪಸ್ ಬಸವರಾಜ್ ಗೆ 8 ಜಮೀನು ಕೊಡಿಸಿ, ಧನ್ಯೋಸ್ಮೀ ಎಂದಿದ್ದಾರೆ ಯಾದಗಿರಿ ಕಂದಾಯ ಇಲಾಖೆಯ ಸಹಾಯಕ ಆಯುಕ್ತ ಶಾ ಆಲಂ ಹುಸೇನ್ (Shah Alam Hussain, Assistant Commissioner of Yadgir).

ಒಟ್ನಲ್ಲಿ ಜನ್ಮ ಕೊಟ್ಟ ತಂದೆ ತಾಯಿಗೇ ಮೋಸ ಮಾಡಿದ ಮಕ್ಕಳಿಗೆ ಹಿರಿಯರು ಕಾನೂನಿನ ಸಹಾಯದಿಂದ ತಕ್ಕ ಪಾಠ ಕಲಿಸಿದಂತಾಗಿದೆ. ಈ ಪ್ರಕರಣದಿಂದ ಮುಂದೆ ತಂದೆ ತಾಯಂದಿರಿಗೆ ಮಕ್ಕಳು ನಿರ್ಲಕ್ಷ್ಯ ಮಾಡದೆ ಚೆನ್ನಾಗಿ ನೋಡಿಕೊಳ್ಳುವಂತಾಗಲಿ.

ವರದಿ: ಅಮೀನ್ ಹೊಸುರ್, ಟಿವಿ 9, ಯಾದಗಿರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ