ನಮ್ಮ ಬದುಕಿನಲ್ಲಿ ಅಪ್ಪಳಿಸುವ ಯಾವ ಅಲೆಗಳು ತೆರೆಯುವುದೂ ಅರಿವಿನ ದಾರಿಯನ್ನೇ. ನಮ್ಮೊಳಗನ್ನು ಕದಡಿ, ಗದಬಡಿಸಿ ಸೂಕ್ಷ್ಮ ತಿಳಿಯನ್ನು ಮನಸಿನ ದಂಡೆಯ ಮೇಲೆ ಹರವುವ ಆ ಅಲೆಗಳಿಗೆ ತೆರೆದುಕೊಳ್ಳದಿದ್ದರೆ ಮನುಷ್ಯನ ಬದುಕು ಸಾರ್ಥಕಗೊಳ್ಳುವುದಾದರೂ ಹೇಗೆ?
ಅಂತೂ ಜಗತ್ತು ಕೊರೋನಾದ ಭಯಗ್ರಸ್ಥ ವಾತಾವರಣದಲ್ಲಿಯೇ ಸಾಮಾಜಿಕ ಅಂತರ ಕಾಪಾಡಿಕೊಂಡು ಕ್ರಿಸ್ಮಸ್ಸಿನ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದೆ. ವಿವಿಧ ಕ್ಷೇತ್ರದ ಖ್ಯಾತನಾಮರು ವೈನ್ ಹೀರುತ್ತಲೊ, ಕೇಕ್ ಸವಿಯುತ್ತಲೋ, ಉಡುಗೊರೆಗಳ ವಿನಿಮಯ ಮಾಡಿಕೊಳ್ಳುತ್ತಲೋ ಮುಳುಗಿದ್ದಾರೆ. ಹಾಗಿದ್ದರೆ ಅಕ್ಷರ ಲೋಕದವರು? ಸೃಜನಶೀಲವ್ಯಕ್ತಿಗಳಿಗೆ ನೆನಪೇ ಸಂಜೀವಿನಿ. tv9 ಕನ್ನಡ ಡಿಜಿಟಲ್ನೊಂದಿಗೆ ಮಾತಿಗೆ ಸಿಕ್ಕವರು ಕನ್ನಡದ ಕಥೆಗಾರ್ತಿ ಸುನಂದಾ ಕಡಮೆ ಮತ್ತು ಕವಯತ್ರಿ ಜ.ನಾ.ತೇಜಶ್ರೀ.
ಕಾವ್ಯಲೋಕದೊಂದಿಗೆ ಗಾಢವಾಗಿ ಅಂಟಿಕೊಂಡಿರುವ ಜ.ನಾ.ತೇಜಶ್ರೀ ಇದೀಗ ಮೊದಲ ಕಥಾಸಂಕಲನವನ್ನು ಹೊರತರುವ ಸಂಭ್ರಮದಲ್ಲಿದ್ದಾರೆ. ‘ಡಿಸೆಂಬರ್ ಬಂದರೆ ನನಗೆ ಮಾಯಾಲೋಕದಲ್ಲಿದ್ದೀನಿ ಅನ್ನಿಸೋದಕ್ಕೆ ಶುರುವಾಗುತ್ತೆ. ನಾನು ಓದಿದ್ದು ಕೆಲಸ ಮಾಡಿದ್ದು ಹಾಸನದ ಸಂತ ಫಿಲೋಮಿನಾ ಸಂಸ್ಥೆಯಲ್ಲಿ. ಆಗ ನನಗೆ ಹನ್ನೊಂದು ವರ್ಷ. ಸಿಸ್ಟರ್ಗಳು ಹಾಕುವ ಟೋಪಿಯ (Nuns veil) ಬಗ್ಗೆ ಬಹಳೇ ಕುತೂಹಲವಿತ್ತು. ಒದೆ ಬಿದ್ದರೂ ಸರಿ ಅದರೊಳಗೇನಿದೆ ಅಂತ ತಿಳಿದುಕೊಳ್ಳಬೇಕು ಅನ್ನುವ ಹುಚ್ಚು. ಹೀಗೇ ಒಂದು ದಿನ ಮೆರೆಲ್ಲಾ ಸಿಸ್ಟರ್ ಟೋಪಿಯನ್ನು ಎಲ್ಲರೆದುರೇ ಹಿಂದಿನಿಂದ ಎಳೆದುಬಿಟ್ಟೆ. ಹಾವಿನಂತೆ ಅವರ ದಪ್ಪ, ಕಪ್ಪು ಕೂದಲು ಬಿಚ್ಚಿಕೊಂಡು ಟೋಪಿ ಕೆಳಗುರುಳಿತು. ಓಹ್ ಅವರಿಗೂ ನಮ್ಮ ಹಾಗೆ ಕೂದಲುಗಳಿವೆ ಎಂದು ಒಳಗೊಳಗೆ ಖುಷಿಯೇನೋ ಆಯಿತು. ಆದರೆ ಅವರು ಶಿಸ್ತು-ಸಿಟ್ಟಿಗೆ ಹೆಸರಾಗಿದ್ದ ಸಿಸ್ಟರ್! ನಾನು ಮಾಡಿದ ರೀತಿಗೆ ಅವರು ಬಯ್ಯಬಹುದಿತ್ತು ಹೊಡೆಯಬಹುದಿತ್ತು ಹೆಡ್ ಸಿಸ್ಟರ್ ಬಳಿ ಕರೆದೊಯ್ಯಬಹುದಿತ್ತು. ಆದರೆ ಬಹಳ ಮೃದುವಾಗಿ, ‘ಮೊದಲೇ ಹೇಳಿದ್ದರೆ ನಾನೇ ತೋರಿಸುತ್ತಿದ್ದೆ ಅಲ್ಲವಾ’ ಎಂದು ಅವರು ಹೇಳಿದ ರೀತಿಯಿಂದ ನನಗೆ ತಪ್ಪಿನ ಅರಿವಾಯಿತು. ಈಗಲೂ ಅವರೆಲ್ಲಿದ್ದಾರೋ ನೋಡಬೇಕು ಅಂತ ತುಂಬಾ ಅನ್ನಿಸುತ್ತಿರುತ್ತೆ.’
‘ಕ್ರೋಷಾ, ಹೊಲಿಗೆ, ಕೈತೋಟ ಇದೆಲ್ಲ ಯಾಕೆ ಕಲಿಯಬೇಕು ಅನ್ನುತ್ತಿದ್ದೆ. ‘ನಮ್ಮ ಬದುಕಿನಲ್ಲಿ ಯಾವುದು ಯಾವಾಗ ಉಪಯೋಗಕ್ಕೆ ಬರುತ್ತದೆ ಅನ್ನುವುದು ಗೊತ್ತೇ ಇರುವುದಿಲ್ಲ. ಕಲಿಯುವಾಗ ಕಲಿತುಬಿಡಬೇಕು’ ಎನ್ನುತ್ತಿದ್ದರು. ಇಂಥ ವಿಚಾರಗಳನ್ನು ಬದುಕಿನ ಭಾಗವೆಂಬಂತೆ ನೋಡಿದಾಗ ಯಾವುದು ಯಾವಾಗ ಹೇಗೆ ಸ್ಫೂರ್ತಿ ಕೊಡಬಲ್ಲುದು, ಆಸರೆಯಾಗಬಲ್ಲುದು ಅನ್ನುವುದು ನನಗೆ ಬೇರೆ ಬೇರೆ ಸಂದರ್ಭದಲ್ಲಿ ಅರ್ಥವಾಗುತ್ತಾ ಹೋಯಿತು.’
‘ಪ್ರತೀ ಶನಿವಾರ ‘ಎಳೆಯರ ಗೆಳೆಯ’ ಏಸುವಿನ ಬದುಕು ಸಂಘರ್ಷಗಳನ್ನಾಧರಿಸಿ ಪುಟ್ಟ ಕಥಾಚಿತ್ರ ಪುಸ್ತಕ ಪ್ರಕಟವಾಗುತ್ತಿತ್ತು. ನಾಲ್ಕೇ ಪುಟ, ಇಪ್ಪತ್ತೇ ಪೈಸೆ. ಅದನ್ನು ಕೊಳ್ಳಲು ನಾನು ಅನೇಕ ಸಲ ಅಪ್ಪನೊಂದಿಗೆ ಜಗಳವಾಡಿದ್ದಿದೆ. ಆ ವಾರ ಅದು ಸಿಗದಿದ್ದರೆ ಬದುಕೇ ಅಪೂರ್ಣ ಅನ್ನಿಸೋದು. ಓದಿದ ನಂತರ ನನ್ನ ಸೂಟ್ಕೇಸಿನಲ್ಲಿ ‘ಚಂದಮಾಮಾ’ ಜೊತೆಗೆ ‘ಎಳೆಯರ ಗೆಳೆಯ’ನೂ ಇರುತ್ತಿದ್ದ. ಇದೊಂಥರಾ ಕಲ್ಪನಾ ಶಕ್ತಿ, ಚಿತ್ರಕ ಶಕ್ತಿಯ ಸೆಳೆತ. ನಾನೂ ಬರೆಯಬೇಕು ಎಂಬ ಹಂಬಲವನ್ನು ಹುಟ್ಟುಹಾಕಿದಂಥ ಸಂಗತಿಗಳಿಗೂ ಸಂಬಂಧಿಸಿದ್ದು.’
ಕುರ್ಚಿಗೆ ಮೊಳೆ ಹೊಡೆದುಕೊಂಡು ಕೂತಿದ್ದಿಯೇನು?
ನಾವು ಏನು ನೋಡುತ್ತೇವೆ, ಏನು ಮಾತನಾಡುತ್ತೇವೆ, ಏನು ಕೇಳುತ್ತೇವೆ, ಏನು ಓದುತ್ತೇವೆ ಇವೆಲ್ಲವೂ ನಮ್ಮ ಮನಸ್ಸಿನ ಕ್ಯಾನ್ವಾಸಿನೊಳಗೆ ಅವಿತಿಟ್ಟುಕೊಳ್ಳುತ್ತಿರುತ್ತವೆ. ಅವು ಸಂದರ್ಭಕ್ಕೆ ತಕ್ಕಂತೆ ಪುಟ್ಟಪುಟ್ಟ ಚಿತ್ರಿಕೆಗಳಾಗಿ ಹೊಮ್ಮುತ್ತವೆ, ಚಿಮ್ಮುತ್ತವೆ. ತಪ್ಪೋ ಸರಿಯೋ ಎನ್ನುವುದು ಮುಂದಿನ ಮಾತು. ಅದಕ್ಕೇ ಅಲ್ಲವೆ, ಪರಿಸರದ ಪ್ರಭಾವದಿಂದಲೇ ನಾವು ಬೆಳೆಯುವುದು. ಯೋಚಿಸುವುದನ್ನು ಕಲಿಯುವುದು, ಪ್ರಶ್ನಿಸುವ ಮೂಲಕ ನಮ್ಮ ವಿಚಾರಗಳಿಗೆ ರೂಪು ಕೊಡಲು ಪ್ರಯತ್ನಿಸುವುದು? ಹುಬ್ಬಳ್ಳಿಯಲ್ಲಿ ನೆಲೆಸಿರುವ ಸುನಂದಾ ಕಡಮೆ ಅಂಕೋಲೆಯಿಂದ ಹುಬ್ಬಳ್ಳಿಗೆ ಓದಲು ಬಂದಾಗಿನ ಘಟನೆಯೊಂದನ್ನು ಹೀಗೆ ಮೆಲುಕು ಹಾಕುತ್ತಾರೆ.
‘ಪಿಯುಸಿ ಓದಲು ಹುಬ್ಬಳ್ಳಿಯ ವುಮೆನ್ಸ್ ಕಾಲೇಜಿಗೆ ಬಂದೆ. ನನ್ನ ಸುತ್ತಮುತ್ತಲೂ ಇಂಗ್ಲಿಷ್ ಮಾತನಾಡುವವರೇ ಇದ್ದಿದ್ದರಿಂದ ಕನ್ನಡ ಮಾತನಾಡುವ, ಕನ್ನಡ ಓದುವ ಹವ್ಯಾಸವುಳ್ಳ ಕ್ರಿಶ್ಚಿಯನ್ ಸ್ನೇಹಿತೆ ಎಸ್ತರಾ ಪೌಲ್ ಆಪ್ತಳಾದಳು. ಒಮ್ಮೆ ಕ್ರಿಸ್ಮಸ್ ಮುನ್ನಾದಿನ ನನ್ನನ್ನು ಚರ್ಚಿಗೆ ಕರೆದುಕೊಂಡು ಹೋದಳು. ಅಲ್ಲಿ ಏಸುಕ್ರಿಸ್ತನ ಕುರಿತು ಸಣ್ಣ ಪ್ರಶ್ನೋತ್ತರ ಕಾರ್ಯಕ್ರಮ ಏರ್ಪಡಿಸಿದ್ದರು. ಏಸುವಿಗೆ ಎಷ್ಟು ಜನ ಶಿಷ್ಯರಿದ್ದರು? ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇರಲಿಲ್ಲ. ಎಸ್ತರಾ ಮೆಲ್ಲಗೆ ಉಸುರಿದ್ದನ್ನೇ ನಾನು ಹೇಳಿದೆ. ಏಸುಕ್ರಿಸ್ತನ ಪ್ರತಿಮೆಯೊಂದು ಬಹುಮಾನ ರೂಪದಲ್ಲಿ ಸಿಕ್ಕಿತು.’
‘ಹೀಗೇ ಒಂದು ದಿನ, ಎಸ್ತರಾ ಟ್ಯೂಷನ್ ಮುಗಿದರೂ ಏನೋ ಬರೆಯುತ್ತ ಕುಳಿತಿದ್ದಳು. ಕಾಯ್ದು ಕಾಯ್ದು ಕೊನೆಗೆ, ‘ಏಸುಕ್ರಿಸ್ತನ ಕೈಗೆ ಮೊಳೆ ಬಡೆದಿರುತ್ತಾರಲ್ಲ ಹಾಗೇನಾದರೂ ಕುರ್ಚಿಗೆ ಮೊಳೆ ಬಡೆದಿದಾರಾ ನಿನಗೆ?’ ಸಣ್ಣಗೆ ತಮಾಷೆ ಮಾಡಿದೆ. ಇದ್ದಕ್ಕಿದ್ದಂತೆ ಆಕೆ ಒಂದು ವಾರ ಮಾತು ಬಿಟ್ಟುಬಿಟ್ಟಳು. ನಾನು ತುಂಬಾ ಚಡಪಡಿಸಿ ಒಂದು ದಿನ ಒತ್ತಾಯಿಸಿದೆ. ಆಗ ಆಕೆ, ‘ಏಸು ದುಷ್ಟರನ್ನೂ ಶಿಷ್ಟರನ್ನಾಗಿ ಮಾಡುತ್ತಾನೆ. ಆದರೆ ನಿಮ್ಮಲ್ಲಿ ದುಷ್ಟರನ್ನು ಸಂಹಾರ ಮಾಡುವವರು ದೇವರು ಹೇಗಾಗುತ್ತಾರೆ?’ ಆಕೆಯ ಪ್ರಶ್ನೆ ದಿಗ್ಭ್ರಮೆಗೀಡುಮಾಡಿತು. ಆದರೆ ಮಾನವೀಯತೆಯ ಬಗ್ಗೆ ಯೋಚಿಸಲು ಮೆಟ್ಟಿಲಾಗಿದ್ದೇ ಈ ವಿಚಾರ. ಅದೇ ಹೊತ್ತಿಗೆ ಗೌರೀಶ ಕಾಯ್ಕಿಣಿಯವರು ಸ್ಥಳೀಯ ಪತ್ರಿಕೆಯೊಂದರಲ್ಲಿ ‘ವಾಲ್ಮೀಕಿ ತೂಕಡಿಸಿದಾಗ’ ಎಂಬ ಲೇಖನ ಬರೆದರು. ಅದು ಆಗ ಬಹಳ ಚರ್ಚೆಗೂ ಗ್ರಾಸವಾಯಿತು. ಹೀಗೆ ಈ ಘಟನೆ ಮತ್ತು ಲೇಖನದ ವಿಚಾರಗಳು ನನ್ನನ್ನು ಬೇರೊಂದು ರೀತಿಯಲ್ಲಿ ನನ್ನ ಅರಿವನ್ನು ವಿಸ್ತರಿಸಿದವು. ಕ್ರಮೇಣ ನನಗೆ ದೇವರ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಸಿಕ್ಕಿತು. ದೇವರು ಎಂದರೆ ನಮ್ಮನ್ನು ಮೀರಿದ ಶಕ್ತಿ ಎಂಬ ಮನವರಿಕೆಯಾಯಿತು. ಈಗಲೂ ನನಗೆ ಧ್ಯಾನದಲ್ಲಿ ನಂಬಿಕೆ ಇದೆ. ಧ್ಯಾನಿಸದಿದ್ದರೆ ಬರೆವಣಿಗೆ ಹುಟ್ಟುವುದಾದರೂ ಹೇಗೆ?’
ನಿಜ. ಅವರವರ ಭಾವಕ್ಕೆ ಬುದ್ಧಿಗೆ ಭಕುತಿಗೆ ನಿಲುಕುವ ದೇವರನ್ನು ಮತ್ತವನ ಸ್ವರೂಪವನ್ನು ಆರಾಧಿಸುವ ಹಕ್ಕು ಎಲ್ಲರಿಗೂ ಇದೆ. ನಮ್ಮ ಅರಿವನ್ನು ಹಿಗ್ಗಿಸುವ ಮೂಲಕ ಮತ್ತಷ್ಟು ಮತ್ತಷ್ಟು ಮನುಷ್ಯರಾಗಲು ಇಂಥ ಘಟನೆಗಳಿಗೆ ತೆರೆದುಕೊಳ್ಳುವ ಅವಕಾಶಗಳು ಮತ್ತೆ ಮತ್ತೆ ಸಿಗುತ್ತಲೇ ಇರಬೇಕಲ್ಲ?
ಹೊಸ ವರುಷದ ಹೊಸ್ತಿಲಲ್ಲಿರುವ ಎಲ್ಲ ಸೃಜನಶೀಲ ಮನಸ್ಸುಗಳಲ್ಲಿ ಚೈತನ್ಯ ಸ್ಫುರಿಸಲಿ.
Published On - 4:14 pm, Fri, 25 December 20