ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚುತ್ತಿದೆ. ಈ ಪ್ಲಾಟ್ಫಾರ್ಮ್ನಲ್ಲಿ ಕನ್ನಡ ಸಿನಿಮಾಗಳಿಗೆ ಆದ್ಯತೆ ಸಿಗುತ್ತಿಲ್ಲ ಎನ್ನುವ ಕೊರಗು ಕರುನಾಡಿನ ವೀಕ್ಷಕರಿಗೆ ಈ ಮೊದಲಿನಿಂದಲೂ ಇದೆ. ಕೆಲವರು ಇದಕ್ಕೆ ಒಟಿಟಿ ಪ್ಲಾಟ್ಫಾರ್ಮ್ನವರನ್ನು ಬೈದರೆ, ಇನ್ನೂ ಕೆಲವರು ಕನ್ನಡ ಸಿನಿಮಾ ನಿರ್ಮಾತೃಗಳನ್ನು ತೆಗಳುತ್ತಿದ್ದಾರೆ. ಅಷ್ಟಕ್ಕೂ ಕನ್ನಡ ಚಿತ್ರಗಳು ಒಟಿಟಿಯತ್ತ ಹೆಚ್ಚು ಹೆಜ್ಜೆ ಹಾಕದಿರಲು ಕಾರಣವೇನು? ಅಸಲಿಗೆ ಇಲ್ಲಿ ಆಗುತ್ತಿರುವುದೇನು? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.
ರಿಸ್ಕ್ ತೆಗೆದುಕೊಳ್ಳಲು ನಿರ್ಮಾಪಕರ ಅಂಜಿಕೆ
ನೀವು ಒಂದು ತರಕಾರಿ ಅಂಗಡಿ ಇಟ್ಟಿದ್ದೀರಿ ಎಂದಿಟ್ಟುಕೊಳ್ಳಿ. ಓರ್ವ ರೈತ ಬಂದು ನಾನು ತರಕಾರಿ ಬೆಳೆಯುತ್ತೇನೆ. ಅದನ್ನು ನೀವು ಕೊಂಡುಕೊಳ್ಳುತ್ತೀರಾ ಎಂದು ಕೇಳುತ್ತಾನೆ. ಬೆಳೆದ ತರಕಾರಿ ಗುಣಮಟ್ಟ ನೋಡಿ ನಾನು ಕೊಂಡುಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ ಎಂದು ನೀವು ಹೇಳುತ್ತೀರಿ. ಇದು ಸಹಜ ಕೂಡ.
ಒಟಿಟಿ ವಿಚಾರದಲ್ಲಿ ಆಗುತ್ತಿರುವುದು ಹೀಗೆಯೇ. ನಿರ್ಮಾಪಕರು ಯಾವುದಾದರೂ ಕತೆ ಸಿದ್ಧಪಡಿಸಿಕೊಂಡು ಒಟಿಟಿ ಪ್ಲಾಟ್ಫಾರ್ಮ್ ಅವರ ಬಳಿ ಹೋದರೆ, ನೀವು ಸಿನಿಮಾ ರೆಡಿ ಮಾಡಿ ತನ್ನಿ. ಅದನ್ನು ನೋಡಿ ನಾವು ಕೊಂಡುಕೊಳ್ಳಬೇಕೋ ಅಥವಾ ಬೇಡವೋ ಎಂದು ನಿರ್ಧರಿಸುತ್ತೇವೆ ಎನ್ನುತ್ತಾರೆ.
ಒಂದು ಸಣ್ಣ ಸಿನಿಮಾ ಮಾಡಲೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲೇಬೇಕು. ನೀವು ಹಣ ಖರ್ಚು ಮಾಡಿ ಸಿನಿಮಾ ರೆಡಿ ಮಾಡಿದಿರಿ ಎಂದಿಟ್ಟುಕೊಳ್ಳಿ. ಆದರೆ, ಮುಂದೇನು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಏಕೆಂದರೆ, ಒಟಿಟಿ ಆ್ಯಂಗಲ್ನಿಂದ ಸಿದ್ಧಪಡಿಸಿದ ಸಿನಿಮಾ ಥಿಯೇಟರ್ನಲ್ಲಿ ಓಡುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಇದರಿಂದ ನಿರ್ಮಾಪಕರು ಕೈ ಸುಟ್ಟಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹೀಗಾಗಿ, ಅನೇಕ ನಿರ್ಮಾಪಕರು ಈ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಕೊಂಚ ಹಿಂಜರಿಯುತ್ತಾರೆ. ಒಟಿಟಿಯಲ್ಲಿ ಕನ್ನಡ ಸಿನಿಮಾಗಳು ಕಡಿಮೆ ಸಿಗಲು ಇದು ಪ್ರಮುಖ ಕಾರಣ.
ಒಟಿಟಿಯವರ ಆಲೋಚನೆ
ಕೊರೊನಾ ಬರುವುದಕ್ಕೂ ಮೊದಲು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಸಾಕಷ್ಟು ಪರಭಾಷೆ ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲೂ ತೆಲುಗು-ತಮಿಳು ಸ್ಟಾರ್ ನಟರ ಚಿತ್ರ ರಿಲೀಸ್ ಆಗುತ್ತಿದೆ ಎಂದರೆ ಕನ್ನಡ ಚಿತ್ರಗಳಿಗೆ ಜಾಗ ಸಿಗುತ್ತಿರಲಿಲ್ಲ. ಆದರೆ, ಕನ್ನಡದ ಸಿನಿಮಾ ಕನ್ನಡ ಭಾಷೆಯಲ್ಲೇ ಹೊರ ರಾಜ್ಯಗಳಲ್ಲಿ ಅಬ್ಬರದಿಂದ ತೆರೆಕಂಡ ಉದಾಹರಣೆ ಬೆರಳೆಣಿಕೆ ಮಾತ್ರ. ಇದಕ್ಕೆಲ್ಲ ಕಾರಣ ಪ್ರೇಕ್ಷಕರ ಮನಸ್ಥಿತಿ. ಒಟಿಟಿಯವರು ಸ್ಟ್ರೆಟಜಿ ಕೂಡ ಇದೇ.
ಒಟಿಟಿಯಲ್ಲಿ ಕನ್ನಡದ ಸಿನಿಮಾ ರಿಲೀಸ್ ಆದರೆ, ಅದಕ್ಕೆ ವೀಕ್ಷಕರು ಸಿಗೋದು ಕರ್ನಾಟಕದಲ್ಲಿ ಮಾತ್ರ. ಇನ್ನು ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿರುವ ಅಲ್ಪಸ್ವಲ್ಪ ಕನ್ನಡಿಗರು ಕನ್ನಡ ಸಿನಿಮಾ ವೀಕ್ಷಿಸಬಹುದು. ಆದರೆ, ಪರಭಾಷೆಗಳಲ್ಲಿ ಹಾಗಲ್ಲ. ತೆಲುಗು ಸಿನಿಮಾ ರಿಲೀಸ್ ಆದರೆ, ತೆಲುಗು ವೀಕ್ಷಕರ ಜೊತೆಗೆ ಕನ್ನಡ, ತಮಿಳು ಹಾಗೂ ಉತ್ತರ ಭಾರತದವರು ಕೂಡ ನೋಡುತ್ತಾರೆ. ಹೀಗಾಗಿ, ಒಟಿಟಿಯವರು ಯಾವುದು ಹೆಚ್ಚು ಬೇಡಿಕೆ ಸೃಷ್ಟಿಸಿಕೊಳ್ಳುತ್ತಿದೆಯೋ ಅದನ್ನೇ ಮಾರುಕಟ್ಟೆಯಲ್ಲಿಡುತ್ತಿದ್ದಾರೆ.
ಇದನ್ನೂ ಓದಿ: ಕನ್ನಡ ಸಿನಿಮಾ OTT ಪ್ಲಾಟ್ಫಾರ್ಮ್ಗಳಲ್ಲಿ ವಿಫಲವಾಗಲು ಏನು ಕಾರಣ?
ಕಂಟೆಂಟ್ಗೆ ಆದ್ಯತೆ
ಒಟಿಟಿಯಲ್ಲಿ ಸಿನಿಮಾಗಳ ಆಯ್ಕೆ ಪ್ರಕ್ರಿಯೆಗೆ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ. ಈ ತಂಡದ ಮೂಲಕ ಸಿನಿಮಾ ಆಯ್ಕೆ ನಡೆಯುತ್ತದೆ. ಚಿತ್ರ ಮಂದಿರಗಳಲ್ಲಾದರೆ ಹೀರೋ ಯಾರು ಎಂದು ನೋಡಿ ಸಿನಿಮಾ ನೋಡಬೇಕೋ ಬೇಡವೋ ಎಂದು ಪ್ರೇಕ್ಷಕರು ನಿರ್ಧರಿಸುತ್ತಾರೆ. ಆದರೆ, ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಹಾಗಾಗುವುದಿಲ್ಲ. ಕಂಟೆಂಟ್ ಹೇಗಿದೆ ಎನ್ನುವುದರ ಮೇಲೆ ಜನರು ಸಿನಿಮಾವನ್ನು ಅಳೆಯುತ್ತಾರೆ. ಈ ಮೊದಲಿನಿಂದಲೂ ಕನ್ನಡದವರು ಚಿತ್ರಮಂದಿರದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಆದರೆ, ಈಗ ನಿಧಾನವಾಗಿ ಕನ್ನಡ ನಿರ್ದೇಶಕರ ಮನಸ್ಥಿತಿ ಕೂಡ ಬದಲಾಗುತ್ತಿದ್ದು, ಒಟಿಟಿ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾಗಳು ಸಿದ್ಧ ಮಾಡುತ್ತಿದ್ದಾರೆ. ಹೀಗಾಗಿ, ಇನ್ನು ಕೆಲವೇ ವರ್ಷಗಳಲ್ಲಿ ಒಟಿಟಿಯಲ್ಲಿ ಕನ್ನಡ ಚಿತ್ರಗಳ ಅಬ್ಬರ ಆರಂಭವಾಗಲಿದೆ ಎಂಬುದು ನಿರ್ದೇಶಕಿ ರಿಷಿಕಾ ಶರ್ಮಾ ಅಭಿಪ್ರಾಯ.
ಹೀರೋಗಳ ಬೆಂಬಲ
ಕನ್ನಡ ಸಿನಿಮಾಗಳನ್ನು ಒಟಿಟಿಯಲ್ಲಿ ರಿಲೀಸ್ ಮಾಡುವ ನಿಟ್ಟಿನಲ್ಲಿ ಕನ್ನಡದ ಹೀರೋಗಳು ತುಂಬಾ ಶ್ರಮವಹಿಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಪುನೀತ್ ರಾಜ್ಕುಮಾರ್. ಇವರ ಒಡೆತನದ ಪಿಆರ್ಕೆ ಸ್ಟುಡಿಯೋಸ್ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಆದ್ಯತೆ ನೀಡುತ್ತಿದೆ. ಅದನ್ನು ಒಟಿಟಿಯಲ್ಲಿ ರಿಲೀಸ್ ಮಾಡುವ ಕಾರ್ಯದಲ್ಲೂ ತೊಡಗಿದೆ. ಇತ್ತೀಚೆಗೆ ಪಿಆರ್ಕೆ ನಿರ್ಮಾಣದ ಫ್ರೆಂಚ್ ಬಿರಿಯಾನಿ ಹಾಗೂ ಲಾ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿತ್ತು. ಇನ್ನು ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಕನ್ನಡ ಸಿನಿಮಾಗಳನ್ನು ಒಟಿಟಿಯಲ್ಲಿ ರಿಲೀಸ್ ಮಾಡೋಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರ ನಿರ್ಮಾಣದ ಭೀಮಸೇನ ನಳ ಮಹರಾಜ ಪ್ರೈಮ್ನಲ್ಲಿ ರಿಲೀಸ್ ಆಗಿ ಭೇಷ್ ಎನಿಸಿಕೊಂಡಿತ್ತು.
ಕ್ಯಾಮೆರಾ
ಒಟಿಟಿಯಲ್ಲಿ ನೀವು ಸಿನಿಮಾ ರಿಲೀಸ್ ಮಾಡುತ್ತೀರಿ ಎಂದಾದರೆ ಅದಕ್ಕೆ 4ಕೆ ರೆಸಲ್ಯೂಷನ್ ಇರುವ ಕ್ಯಾಮೆರಾವನ್ನೇ ಬಳಕೆ ಮಾಡಬೇಕು. ಇನ್ನು, ಕೆಲ ನಿರ್ದೇಶಕರಿಗೆ ಸಿಂಕ್ ಸೌಂಡ್ (ಡಬ್ಬಿಂಗ್ ಇಲ್ಲದೆ ಶೂಟಿಂಗ್ ವೇಳೆಯೇ ರೆಕಾರ್ಡಿಂಗ್ ಸೌಂಡ್ ರೆಕಾರ್ಡ್ ಮಾಡುವುದು. ಇದು ಹೆಚ್ಚು ಕಷ್ಟ ಮತ್ತು ಬಜೆಟ್ ಫ್ರೆಂಡ್ಲಿ ಅಲ್ಲ) ವಿಚಾರ ಗೊತ್ತಿರುವುದಿಲ್ಲ. ಈಚೆಗೆ ಈ ಅಂಶಗಳ ಬಗ್ಗೆ ನಿರ್ದೇಶಕರು ಹಾಗೂ ನಿರ್ಮಾಪಕರು ಹೆಚ್ಚೆಚ್ಚು ಜಾಗೃತರಾಗುತ್ತಿದ್ದಾರೆ.
ರಿಸ್ಕ್ ಕಡಿಮೆ ಮಾಡಬಹುದು
ನೀವು ಒಟಿಟಿಯವರನ್ನು ಅಪ್ರೋಚ್ ಮಾಡುವಾಗ ನಿಮ್ಮ ಕಥೆ, ಸಿನಿಮಾದ ಗುಣಮಟ್ಟ ಅವರ ಪ್ಲಾಟ್ಫಾರ್ಮ್ಗೆ ಹೊಂದಾಣಿಕೆ ಆಗುತ್ತದೆಯೇ ಎಂಬುದನ್ನು ಒಮ್ಮೆ ಪರಾಮರ್ಶಿಸಿಕೊಳ್ಳುವುದು ಒಳಿತು. ಎಲ್ಲವೂ ಹೊಂದಾಣಿಕೆ ಆಗುತ್ತದೆ ಎಂದರೆ, ಅವರನ್ನು ಅಪ್ರೋಚ್ ಮಾಡಬೇಕು. ಈ ವೇಳೆ ನಿಮ್ಮ ಕತೆ ಇಷ್ಟವಾದರೆ ಅವರು ರಿಲೀಸ್ ಮಾಡಲು ಒಪ್ಪಲೂ ಬಹುದು. ಉತ್ತಮ ಗುಣಮಟ್ಟ ಮತ್ತು ನೀವು ವಿವರಿಸದ ರೀತಿಯಲ್ಲೇ ಸಿನಿಮಾ ನಿರ್ಮಾಣ ಮಾಡಿಕೊಟ್ಟರೆ ಅವರು ಖಂಡಿತವಾಗಿಯೂ ನಿಮ್ಮ ಸಿನಿಮಾ ಒಪ್ಪುತ್ತಾರೆ.
ಸರತಿ ಸಾಲಿನಲ್ಲಿ ನಿಂತಿವೆ ಕಥೆಗಳು
ಪ್ರತಿ ಒಟಿಟಿ ಪ್ಲಾಟ್ಫಾರ್ಮ್ಗಳು ಸಿನಿಮಾಗಳ ಆಯ್ಕೆಗೂ ಮೊದಲು ಒಂದು ತಂಡ ರಚನೆ ಮಾಡಿರುತ್ತಾರೆ. ಅವರು ಕಥೆ ಕೇಳಿ/ಸಿನಿಮಾ ನೋಡಿ ಆಯ್ಕೆ ಮಾಡುತ್ತಾರೆ. ಮೂಲಗಳ ಪ್ರಕಾರ ಎಲ್ಲ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲೂ ಕನ್ನಡ ಸಿನಿಮಾಗಳು ಹಾಗೂ ಕಥೆಗಳು ಸರತಿ ಸಾಲಿನಲ್ಲಿ ನಿಂತಿವೆಯಂತೆ. ಇವುಗಳನ್ನು ಫೈನಲ್ ಮಾಡಿ ಒಟಿಟಿಗೆ ತರುವುದಕ್ಕೆ ಕೊಂಚ ಸಮಯ ಹಿಡಿಯಬಹುದು. ಹೀಗಾಗಿ 2021ರಲ್ಲಿ ಒಟಿಟಿ ವೇದಿಕೆಯಲ್ಲಿ ಕನ್ನಡ ಚಿತ್ರಗಳ ಸಂಖ್ಯೆ ಹೆಚ್ಚಬಹುದು ಎನ್ನುವ ಆತ್ಮವಿಶ್ವಾಸ ರಿಶಿಕಾ ಅವರದ್ದು.
ವೀವ್ಸ್ ಮೇಲೆ
ಕೆಲವೊಮ್ಮೆ ಹೊಸಬರು ಸಿನಿಮಾ ನಿರ್ಮಾಣ ಮಾಡುತ್ತಾರೆ. ಚಿತ್ರದಲ್ಲಿ ಇರುವ ಮುಖಗಳು ಕೂಡ ಹೊಸತೇ ಆಗಿರುತ್ತವೆ. ಇಂಥ ಸಂದರ್ಭದಲ್ಲಿ ಒಟಿಟಿಯವರು ಕೆಲವೊಮ್ಮೆ ವೀವ್ಸ್ ಆಧಾರದ ಮೇಲೆ ಸಂಭಾವನೆ ನೀಡುತ್ತಾರೆ. ಇದು ಕೆಲವೊಮ್ಮೆ ನಿರ್ಮಾಪಕರ ಪಾಲಿಗೆ ಕಂಟಕ. ಏಕೆಂದರೆ, ಸಿನಿಮಾವನ್ನು ಯಾರೂ ನೋಡಿಲ್ಲ ಎಂದಾದರೆ, ನಿರ್ಮಾಪಕನಿಗೆ ಆದಾಯ ಬರುವುದಿಲ್ಲ.
ಫಿಲಂ ಫೇರ್ ಒಟಿಟಿ ಪ್ರಶಸ್ತಿ 2020: ‘ಪಾತಾಳ್ ಲೋಕ್’ ಮತ್ತು ‘ದಿ ಫ್ಯಾಮಿಲಿ ಮ್ಯಾನ್’ಗೆ ತಲಾ ಐದು ಪ್ರಶಸ್ತಿಗಳು!
Published On - 4:35 pm, Fri, 1 January 21