ದೇಹದ ಬೊಜ್ಜು ನೀವು ತಂದೆಯಾಗುವ ಅವಕಾಶವನ್ನೇ ಕಿತ್ತುಕೊಂಡೀತು ಎಚ್ಚರ!

|

Updated on: Oct 17, 2023 | 7:24 PM

ಸ್ಥೂಲಕಾಯ ಹೊಂದಿರುವ ಪುರುಷರು ತೆಳ್ಳಗಿರುವ ಬೇರೆ ಪುರುಷರಿಗಿಂತಲೂ ಕಡಿಮೆ ವೀರ್ಯಾಣುವನ್ನು ಹೊಂದಿರುತ್ತಾರೆ. ಸ್ಥೂಲಕಾಯತೆಯ ಸಮಸ್ಯೆ ಹಾರ್ಮೋನುಗಳಿಗೆ ಸಂಬಂಧಿಸಿದೆ. ಹಾರ್ಮೋನುಗಳ ಅಸಮತೋಲನವು ವೀರ್ಯದ ಉತ್ಪಾದನೆ ಮತ್ತು ಕಾರ್ಯಚಟುವಟಿಕೆಗೆ ಅಡ್ಡಿಯುಂಟುಮಾಡುತ್ತದೆ.

ದೇಹದ ಬೊಜ್ಜು ನೀವು ತಂದೆಯಾಗುವ ಅವಕಾಶವನ್ನೇ ಕಿತ್ತುಕೊಂಡೀತು ಎಚ್ಚರ!
ಕೊಲೆಸ್ಟ್ರಾಲ್
Image Credit source: iStock
Follow us on

ಸ್ಥೂಲಕಾಯತೆಯು ಬಹುತೇಕರು ಅನುಭವಿಸುತ್ತಿರುವ ಸಮಸ್ಯೆಯಾಗಿದೆ. ಈ ಬೊಜ್ಜಿನ ಸಮಸ್ಯೆ ಹೃದ್ರೋಗದಿಂದ ಕ್ಯಾನ್ಸರ್ ವರೆಗಿನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ, ಇದು ಪುರುಷರಲ್ಲಿ ಬಂಜೆತನವನ್ನು ಕೂಡ ಉಂಟುಮಾಡುವ ಸಾಧ್ಯತೆಯಿದೆ ಎಂಬ ವಿಷಯ ನಿಮಗೆ ಆಘಾತ ಉಂಟುಮಾಡಬಹುದು. ಆದರೆ, ಇದು ಸತ್ಯ! ಸಂಶೋಧನೆಯ ಪ್ರಕಾರ, ಅಧಿಕ ತೂಕ ಅಥವಾ ಸ್ಥೂಲಕಾಯತೆಯು (Obesity) ಮನುಷ್ಯನ ಸಂತಾನೋತ್ಪತ್ತಿಯ ಆರೋಗ್ಯದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಬೊಜ್ಜಿನ ಬಗ್ಗೆ ನಿರ್ಲಕ್ಷ್ಯ ಬೇಡ. ಇದರಿಂದ ನೀವು ತಂದೆಯಾಗುವ ಅವಕಾಶವೇ ಇಲ್ಲವಾದೀತು.

ಮುಂಬೈನ ಚೆಂಬೂರ್‌ನಲ್ಲಿರುವ ನೋವಾ ಐವಿಎಫ್‌ನಲ್ಲಿ ಫರ್ಟಿಲಿಟಿ ಕನ್ಸಲ್ಟೆಂಟ್ ಡಾ. ಸೌಮ್ಯಾ ಶೆಟ್ಟಿ ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್​ಗೆ ಸಂದರ್ಶನ ನೀಡಿದ್ದಾರೆ. ಸ್ಥೂಲಕಾಯ ಹೊಂದಿರುವ ಪುರುಷರು ತೆಳ್ಳಗಿರುವ ಬೇರೆ ಪುರುಷರಿಗಿಂತಲೂ ಕಡಿಮೆ ವೀರ್ಯಾಣುವನ್ನು ಹೊಂದಿರುತ್ತಾರೆ. ಸ್ಥೂಲಕಾಯತೆಯ ಸಮಸ್ಯೆ ಹಾರ್ಮೋನುಗಳಿಗೆ ಸಂಬಂಧಿಸಿದೆ. ಹಾರ್ಮೋನುಗಳ ಅಸಮತೋಲನವು ವೀರ್ಯದ ಉತ್ಪಾದನೆ ಮತ್ತು ಕಾರ್ಯಚಟುವಟಿಕೆಗೆ ಅಡ್ಡಿಯುಂಟುಮಾಡುತ್ತದೆ ಎಂದಿದ್ದಾರೆ.

ಅಡಿಪೋಸ್ ಅಂಗಾಂಶವನ್ನು ಸಾಮಾನ್ಯವಾಗಿ ಕೊಬ್ಬು ಎಂದು ಕರೆಯಲಾಗುತ್ತದೆ. ಇದು ಮುಖ್ಯವಾಗಿ ಸ್ತ್ರೀ ಹಾರ್ಮೋನ್ ಆಗಿರುವ ಈಸ್ಟ್ರೊಜೆನ್ ಅನ್ನು ಉತ್ಪಾದಿಸುತ್ತದೆ. ಬೊಜ್ಜು ಹೊಂದಿರುವ ವ್ಯಕ್ತಿಗಳಲ್ಲಿ ಹೆಚ್ಚುವರಿ ದೇಹದ ಕೊಬ್ಬು ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟಗಳ ನಡುವಿನ ಅಸಮತೋಲನಕ್ಕೆ ಕಾರಣವಾಗಬಹುದು. ಈ ಹಾರ್ಮೋನ್ ಅಸಮತೋಲನವು ವೀರ್ಯಾಣು ಬೆಳವಣಿಗೆಯ ಪ್ರಕ್ರಿಯೆಯಾದ ಸ್ಪರ್ಮಟೊಜೆನೆಸಿಸ್ ಮೇಲೆ ನೆಗೆಟಿವ್ ಪರಿಣಾಮ ಬೀರಬಹುದು. ಇದು ಪುರುಷರಲ್ಲಿ ಫಲವತ್ತತೆ ಕಡಿಮೆಯಾಗಲು ಕಾರಣವಾಗುತ್ತದೆ. ಇದರ ಜೊತೆಗೆ ಧೂಮಪಾನ ಅಥವಾ ಅನಾರೋಗ್ಯಕರ ಜೀವನಶೈಲಿ, ಅತಿಯಾದ ಮದ್ಯಪಾನವು ಸ್ಥೂಲಕಾಯದ ವ್ಯಕ್ತಿಗಳಲ್ಲಿ ಹೆಚ್ಚಾಗಿರುತ್ತದೆ. ಇದು ಕೂಡ ಪುರುಷ ಬಂಜೆತನಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: Weight Loss Tips: ಹೊಟ್ಟೆಯ ಕೊಬ್ಬು ಕರಗಿಸಲು ಮನೆಯಲ್ಲೇ ಸುಲಭವಾಗಿ ಮಾಡುವ ವ್ಯಾಯಾಮಗಳಿವು

ಅಧಿಕ ಕೊಬ್ಬಿನಾಂಶ ಇರುವವರಲ್ಲಿ ಎದೆ ನೋವು, ಹೃದಯಾಘಾತ, ಸ್ಟ್ರೋಕ್, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಕೂಡ ಕಂಡುಬರುತ್ತದೆ. ಅಧಿಕ ಕೊಲೆಸ್ಟ್ರಾಲ್ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ 2 ಮುಖ್ಯ ಮೂಲಗಳಿಂದ ಬರುತ್ತದೆ. ನಿಮ್ಮ ಲಿವರ್ ಮತ್ತು ನಿಮ್ಮ ಆಹಾರಗಳಿಂದ ಕೊಬ್ಬು ಸಂಗ್ರಹವಾಗುತ್ತದೆ. ನಿಮ್ಮ ಲಿವರ್, ನಿಮ್ಮ ದೇಹದಲ್ಲಿನ ಇತರ ಜೀವಕೋಶಗಳು ನಿಮ್ಮ ರಕ್ತದಲ್ಲಿ ಸುಮಾರು ಶೇ. 80ರಷ್ಟು ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತವೆ.

ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್​ನ ಉಳಿದ ಶೇ. 20ರಷ್ಟು ಭಾಗ ನೀವು ತಿನ್ನುವ ಆಹಾರದಿಂದ ಬರುತ್ತದೆ. ಟ್ರಾನ್ಸ್ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಹೆಚ್ಚಿನ ಆಹಾರಗಳು ಅನಾರೋಗ್ಯಕರ ಕೊಲೆಸ್ಟ್ರಾಲ್ ಮಟ್ಟಗಳಿಗೆ ಕಾರಣವಾಗಬಹುದು.

ಅಧಿಕ ಕೊಲೆಸ್ಟ್ರಾಲ್ ತಡೆಯುವುದು ಹೇಗೆ?:

ಕೆಲವು ಸಂದರ್ಭಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಆನುವಂಶಿಕವಾಗಿರುತ್ತದೆ. ಆದರೆ, ಕೆಲವು ಜೀವನಶೈಲಿಯ ಬದಲಾವಣೆಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಮತ್ತು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತವೆ. ಆರೋಗ್ಯಕರ ಕೊಬ್ಬುಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನಂಶವಿರುವ ಡೈರಿ ಉತ್ಪನ್ನಗಳನ್ನು ಸೇವಿಸಿ. ಹೃದಯಕ್ಕೆ ಆರೋಗ್ಯಕರವಾದ ಆಹಾರವನ್ನು ಸೇವಿಸಿದರೆ ಸ್ಥೂಲಕಾಯದ ಸಮಸ್ಯೆಯನ್ನು ಕೊಂಚ ಮಟ್ಟಿಗೆ ತಡೆಯಬಹುದು.

ಇದನ್ನೂ ಓದಿ: ಚೀಸ್ ತಿನ್ನುವುದರಿಂದ ಹೃದಯರಕ್ತನಾಳದ ತೊಂದರೆ ನಿವಾರಣೆಯಾಗುತ್ತಾ?

ಹಾಗೇ, ಕರಿದ ಆಹಾರಗಳು, ಟ್ರಾನ್ಸ್ ಕೊಬ್ಬಿನ ಆಹಾರಗಳು ಮತ್ತು ಭಾಗಶಃ ಹೈಡ್ರೋಜನೀಕರಿಸಿದ ತೈಲಗಳನ್ನು ಹೊಂದಿರುವ ಆಹಾರಗಳನ್ನು ತ್ಯಜಿಸಬೇಕು. ಸಾಲ್ಮನ್ ಮೀನು ಮತ್ತು ಅಗಸೆಬೀಜಗಳಂತಹ ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ಹೆಚ್ಚು ಓಟ್ಸ್, ಮಸೂರ, ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಮೂಲಕ ನಿಮ್ಮ ಕರಗುವ ಫೈಬರ್ ಸೇವನೆಯನ್ನು ಹೆಚ್ಚಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ, ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ, ವಾಕಿಂಗ್ ಮಾಡಿ. ನೀವು ಧೂಮಪಾನ ಮಾಡುತ್ತಿದ್ದರೆ ಅದರಿಂದ ಆದಷ್ಟೂ ದೂರವಿರಲು ಪ್ರಯತ್ನಿಸುವುದರಿಂದ ಅಧಿಕ ಕೊಬ್ಬು ಶೇಖರವಾಗುವುದನ್ನು ತಡೆಯಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ