Engineer’s Day 2023: ಇಂಜಿನಿಯರ್ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಇತಿಹಾಸ, ಪ್ರಾಮುಖ್ಯತೆ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 13, 2023 | 5:22 PM

ಇಂಜಿನಿಯರಿಂಗ್ ಕ್ಷೇತ್ರ ಮತ್ತು ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಡಾ. ಸರ್ ಎಂ. ವಿಶ್ವೇಶ್ವರಯ್ಯನವರ ಸಾಧನೆಯನ್ನು ಶ್ಲಾಘಿಸಲು ಹಾಗೂ ದೇಶದ ಅಭಿವೃದ್ಧಿಯ ಕಾರ್ಯದಲ್ಲಿ ಇಂಜಿನಿಯರ್​​ಗಳ ಕೊಡುಗೆಯನ್ನು ಗೌರವಿಸಲು ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 15ರಂದು ರಾಷ್ಟ್ರೀಯ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತೆ.

Engineers Day 2023: ಇಂಜಿನಿಯರ್ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಇತಿಹಾಸ, ಪ್ರಾಮುಖ್ಯತೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯ ಕಾರ್ಯದಲ್ಲಿ ಇಂಜಿನಿಯರ್​​ಗಳ ಕೊಡುಗೆ ಮಹತ್ವದ್ದಾಗಿದೆ. ಇಂಜಿನಿಯರ್​​ಗಳನ್ನು ಆಧುನಿಕ ಸಮಾಜದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ರಸ್ತೆಗಳು, ಸೇತುವೆಗಳು, ಕಟ್ಟಡ ನಿರ್ಮಾಣ ಕಾರ್ಯಗಳಿಂದ ಹಿಡಿದು ವಿವಿಧ ಯಂತ್ರೋಪಕರಣಗಳನ್ನು ರೂಪಿಸುವವರೆಗೆ ನಾವು ಅವಲಂಬಿಸಿರುವ ಪ್ರತಿಯೊಂದು ಮೂಲಸೌಕರ್ಯವನ್ನು ವಿನ್ಯಾಸಗೊಳಿಸುವಲ್ಲಿ ಇಂಜಿನಿಯರ್​​ಗಳು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಒಬ್ಬ ಶ್ರೇಷ್ಠ ಇಂಜಿನಿಯರ್ ಎಂದಾಗ ನಮಗೆ ಮೊದಲಿಗೆ ನೆನಪಿಗೆ ಬರುವಂತಹದ್ದೇ ಸರ್. ಎಂ. ವಿಶ್ವೇಶ್ವರಯ್ಯನವರು. ಆಧುನಿಕ ಮೈಸೂರಿನ ಪಿತಾಹಮ ಎಂದು ಕರೆಯಲ್ಪಡುವ ಇವರು ಒಬ್ಬ ಇಂಜಿನಿಯರ್ ಆಗಿ ರಾಷ್ಟ್ರ ನಿರ್ಮಾಣದ ಅಭಿವೃದ್ಧಿಯ ಕಾರ್ಯದಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಹೈದರಾಬಾದ್​​​ನಲ್ಲಿ ಪ್ರವಾಹ ನಿಯಂತ್ರಣ ವ್ಯವಸ್ಥೆ, ಮೈಸೂರಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು ಮುಂತಾದ ಸಾಮಾನ್ಯ ಜನರಿಗೆ ಉಪಯುಕ್ತವಾಗುವಂತಹ ಕಾರ್ಯಗಳಿಂದ ಹಿಡಿದು, ಮೈಸೂರು ಸೋಪ್ ಫ್ಯಾಕ್ಟರಿ, ಉಕ್ಕಿನ ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಹಾಗಾಗಿ ಇಂಜಿನಿಯರಿಂಗ್ ಕ್ಷೇತ್ರ, ಶಿಕ್ಷಣ ಹಾಗೂ ರಾಷ್ಟ್ರದ ಅಭಿವೃದ್ಧಿಯ ಕಾರ್ಯದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಶ್ಲಾಘಿಸಲು ಪ್ರತಿವರ್ಷ ಸೆಪ್ಟೆಂಬರ್ 15 ಅಂದರೆ ವಿಶ್ವೇಶ್ವರಯ್ಯನವರ ಜನ್ಮ ದಿನದಂದು ಭಾರತದಲ್ಲಿ ರಾಷ್ಟ್ರೀಯ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.

ಇಂಜಿನಿಯರ್ ದಿನದ ಆಚರಣೆಯ ಇತಿಹಾಸ:

ಭಾರತದ ಪ್ರಮುಖ ಅಣೆಕಟ್ಟುಗಳು, ಜಲಾಶಯಗಳು ಮತ್ತು ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಪಾತ್ರ ಮಹತ್ವದ್ದಾಗಿದೆ. ಮುಖ್ಯ ಇಂಜಿನಿಯರ್ ಆಗಿ ಅವರು ಹೈದರಾಬಾದ್​​​ನಲ್ಲಿ ಪ್ರವಾಹ ನಿಯಂತ್ರಣ ವ್ಯವಸ್ಥೆ ಮತ್ತು ಮೈಸೂರಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟುಗಳಂತಹ ಹಲವಾರು ಜನಸ್ನೇಹಿ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗೂ ಮೈಸೂರು ಸೋಪ್ ಫ್ಯಾಕ್ಟರಿ, ಉಕ್ಕಿನ ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದೇಶಕ್ಕಾಗಿ ಇವರ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ 1955 ರಲ್ಲಿ ಭಾರತ ಸಕಾರ್ರವು ಸರ್. ಎಂ. ವಿಶ್ವೇಶ್ವರಯ್ಯನವರಿಗೆ ಭಾರತ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಹೀಗೆ ರಾಷ್ಟ್ರ ನಿರ್ಮಾಣದ ಅಭಿವೃದ್ಧಿಯ ಕಾರ್ಯದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಶ್ಲಾಘಿಸಲು, 1968 ರಲ್ಲಿ ಭಾರತ ಸರ್ಕಾರವು ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನವಾದ ಸೆಪ್ಟೆಂಬರ್ 15 ರಂದು ರಾಷ್ಟ್ರೀಯ ಇಂಜಿನಿಯರ್ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ನಮ್ಮ ದೇಶದ ಅಭಿವೃದ್ಧಿಯ ಕಾರ್ಯದಲ್ಲಿ ಪ್ರತಿಯೊಬ್ಬ ಇಂಜಿನಿಯರ್ ಗಳ ಕೊಡುಗೆಯನ್ನು ಗೌರವಿಸಲು ಇಂಜಿನಿಯರ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ:ದೇಶ ಕಟ್ಟಿದ ಎಂಜಿನಿಯರ್​ಗಳನ್ನು ಅಭಿನಂದಿಸೋಣ

ಇಂಜಿನಿಯರ್ ದಿನದ ಆಚರಣೆಯ ಉದ್ದೇಶ ಮತ್ತು ಮಹತ್ವ:

ನಮ್ಮ ಸಮಾಜದ ಅಭಿವೃದ್ಧಿಯ ಕಾರ್ಯದಲ್ಲಿ ಇಂಜಿನಿಯರ್​​​ಗಳ ಪಾತ್ರ ಬಹು ಮುಖ್ಯವಾದದ್ದು. ರಸ್ತೆಗಳು, ಸೇತುವೆಗಳಿಂದ ಹಿಡಿದು ಕಟ್ಟಡಗಳು ಮತ್ತು ವಿವಿಧ ರೀತಿಯ ಯಂತ್ರಗಳನ್ನು ರೂಪಿಸುವವರೆಗೆ ನಾವು ಅವಲಂಬಿಸಿರುವ ಪ್ರತಿಯೊಂದು ಮೂಲಸೌಕರ್ಯವನ್ನು ವಿನ್ಯಾಸಗೊಳಿಸುವಲ್ಲಿ ಇಂಜಿನಿಯರ್​​​ಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರು ನಮ್ಮ ಜೀವನವನ್ನು ಸರಾಗಗೊಳಿಸುವ ಹಲವು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇಂತಹ ಇಂಜಿನಿಯರ್ ಗಳನ್ನು ಮತ್ತು ಅವರ ಕೊಡುಗೆಯನ್ನು ಗೌರವಿಸುವ ಸಲುವಾಗಿ ರಾಷ್ಟ್ರೀಯ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.

ವರದಿಗಳ ಪ್ರಕಾರ, ಭಾರತವು ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಇಂಜಿನಿಯರ್ ಗಳನ್ನು ಹೊಂದಿರುವ ದೇಶವಾಗಿದೆ. ಅಲ್ಲದೆ ಇಂಜಿನಿಯರಿಂಗ್ ಮತ್ತು ಐಟಿ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವೆಂದು ಪರಿಗಣಿಸಲಾಗಿದೆ. ಇಂಜಿನಿಯರ್​​ಗಳನ್ನು ಆಧುನಿಕ ಸಮಾಜದ ಬೆನ್ನೆಲುಬು ಎಂದು ಪರಿಗಣಿಸಲಾಗುತ್ತದೆ. ಇಂಜಿನಿಯರ್ ಗಳಿಲ್ಲದೆ ದೇಶದ ಅಭಿವೃದ್ಧಿ ಅಸಾದ್ಯ. ಹೀಗೆ ಈ ದಿನದ ಆಚರಣೆಯು ವಿಶೇಷವಾಗಿ ಯುವಜನತೆಗೆ ಈ ಕಾರ್ಯಕ್ಷೇತ್ರಕ್ಕೆ ಬರಲು ಮತ್ತು ದೇಶದ ಅಭಿವೃದ್ಧಿ ಕಾರ್ಯಕ್ಕೆ ಕೊಡುಗೆ ನೀಡಲು ಪ್ರೇರೇಪಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: