Mann Ki Baat: ಕೊರೊನಾ 2ನೇ ಅಲೆ ತಾಳ್ಮೆ ಪರೀಕ್ಷಿಸುತ್ತಿದೆ, ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಡೋಣ: ಪ್ರಧಾನಿ ನರೇಂದ್ರ ಮೋದಿ

|

Updated on: Apr 25, 2021 | 12:26 PM

ದೇಶದ ಹಳ್ಳಿಯ ಜನರು ಕೊರೊನಾ ವಿರುದ್ಧ ಜಾಗೃತರಾಗಿದ್ದಾರೆ. ಕೊವಿಡ್​-19 ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ. ಅಲ್ಲಿನ ಜನರು ತಮ್ಮ ಹಳ್ಳಿಗಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುತ್ತಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದರು.

Mann Ki Baat: ಕೊರೊನಾ 2ನೇ ಅಲೆ ತಾಳ್ಮೆ ಪರೀಕ್ಷಿಸುತ್ತಿದೆ, ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಡೋಣ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್ ಮೂಲಕ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ಕೊರೊನಾ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿರುವ ಸಂದರ್ಭದಲ್ಲಿ ತಮ್ಮ 76ನೇ ಮನ್​​ ಕೀ ಬಾತ್​ ನಲ್ಲಿ ಕೂಡ ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡಿದರು. ಕೊವಿಡ್​ ಸೋಂಕು ನಮ್ಮೆಲ್ಲರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಮೊದಲನೇ ಅಲೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿತ್ತು. ಆದರೆ ಈಗ ನಾವು ಮತ್ತೆ ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶವಾಸಿಗಳೇ, ಕೊರೊನಾ ಸೋಂಕಿನ ವಿರುದ್ಧ ಗೆಲ್ಲಬೇಕಾಗಿದೆ. ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾನು ವಿವಿಧ ವಲಯಗಳ ತಜ್ಞರೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದೇನೆ. ಔಷಧ ಕ್ಷೇತ್ರ, ಲಸಿಕೆ ಉತ್ಪಾದಕರು, ಆಕ್ಸಿಜನ್​ ಉತ್ಪಾದನಾ ಘಟಕ ನಡೆಸುತ್ತಿರುವವರು, ಆರೋಗ್ಯ ವಲಯದ ಬಗ್ಗೆ ತಿಳಿದವರು ಕೇಂದ್ರ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ. ಈ ಬಾರಿ ತಜ್ಞರು ನೀಡುವ ವೈಜ್ಞಾನಿಕ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ಕೊರೊನಾವನ್ನು ಮಣಿಸಬೇಕು. ನಮ್ಮ ಸರ್ಕಾರ ಜವಾಬ್ದಾರಿಗಳನ್ನು ನಿಭಾಯಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ನರೇಂದ್ರ ಮೋದಿ ತಿಳಿಸಿದರು.

ನಮ್ಮ ದೇಶದ ವೈದ್ಯರು, ಆರೋಗ್ಯ ಸಿಬ್ಬಂದಿ, ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಅದ್ಭುತ ಹೋರಾಟ ನಡೆಸುತ್ತಿದ್ದಾರೆ. ಕಳೆದ ವರ್ಷ ಅವರು ಗಳಿಸಿದ ಎಲ್ಲ ರೀತಿಯ ಅನುಭವಗಳನ್ನೂ ಪ್ರಯೋಗಿಸುತ್ತಿದ್ದಾರೆ. ದೇಶದ ಜನರು ಕೊರೊನಾ ಬಗ್ಗೆ ಯಾವುದೇ ಗಾಳಿಸುದ್ದಿಯನ್ನೂ ನಂಬಿ ಗಾಬರಿಯಾಗಬಾರದು. ನಿಮ್ಮ ಕುಟುಂಬದ ವೈದ್ಯರು, ಹತ್ತಿರದ ಡಾಕ್ಟರ್ಸ್​ ಜತೆ ಮಾತನಾಡಿ, ಸರಿಯಾದ ಮಾಹಿತಿ ತೆಗೆದುಕೊಳ್ಳಿ. ಅಗತ್ಯವಿದ್ದರೆ ಅವರನ್ನು ಸಂಪರ್ಕಿಸಿ. ಕೊರೊನಾ ಬಂದ ತಕ್ಷಣ ಯಾವ ಕಾರಣಕ್ಕೂ ಹೆದರಬೇಡಿ ಎಂದು ಧೈರ್ಯ ತುಂಬಿದರು. ಹಾಗೇ, ಕೆಲವು ವೈದ್ಯರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ವಾಟ್ಸ್​ಆ್ಯಪ್​, ಫೋನ್​ ಕಾಲ್ ಮೂಲಕ ರೋಗಿಗಳಿಗೆ ಕೌನ್ಸಿಲಿಂಗ್​ ಮಾಡುತ್ತಿದ್ದಾರೆ. ಅನೇಕ ಆಸ್ಪತ್ರೆಗಳು ತಮ್ಮ ವೆಬ್​​ಸೈಟ್​ನಲ್ಲಿ ಕೂಡ ಕೊರೊನಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ನಿಜಕ್ಕೂ ಇದೆಲ್ಲ ಶ್ಲಾಘನೀಯ ವಿಚಾರಗಳು ಎಂದು ಹೇಳಿದರು.

ತಪ್ಪದೆ ಲಸಿಕೆ ಪಡೆಯಿರಿ
ಕೊರೊನಾ ಬಿಕ್ಕಟ್ಟು ಮಿತಿಮೀರಿದೆ. ಈ ಹೊತ್ತಲ್ಲಿ ಲಸಿಕೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಕೊರೊನಾ ಲಸಿಕೆ ಬಗ್ಗೆ ರೂಮರ್​​ಗಳನ್ನು ನಂಬಬೇಡಿ. ಧೈರ್ಯದಿಂದ ಪಡೆಯಿರಿ ಎಂದು ಪ್ರಧಾನಿ ದೇಶದ ಜನರಿಗೆ ಸಲಹೆ ನೀಡಿದರು. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಉಚಿತವಾಗಿ ರಾಜ್ಯ ಸರ್ಕಾರಗಳಿಗೆ ಕೊರೊನಾ ಲಸಿಕೆ ಕಳಿಸಿದೆ. ಇನ್ನು ಮೇ 1ರಿಂದ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಉಚಿತ ಲಸಿಕಾ ಅಭಿಯಾನವನ್ನು ರಾಜ್ಯ ಸರ್ಕಾರಗಳು ವಿಸ್ತರಿಸಬೇಕು. ತಮ್ಮ ರಾಜ್ಯದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಕ್ರಮ ವಹಿಸಬೇಕು ಎಂದು ಎಂದು ನರೇಂದ್ರ ಮೋದಿ ಹೇಳಿದರು. ಹಾಗೇ, ಕೇಂದ್ರದ ಉಚಿತ ಲಸಿಕೆ ಅಭಿಯಾನ ಹೀಗೆ ಮುಂದುವರಿಯಲಿದೆ ಎಂದೂ ತಿಳಿಸಿದರು.

ಗ್ರಾಮಗಳಲ್ಲಿ ಅರಿವುಮೂಡಿದೆ
ದೇಶದ ಹಳ್ಳಿಯ ಜನರು ಕೊರೊನಾ ವಿರುದ್ಧ ಜಾಗೃತರಾಗಿದ್ದಾರೆ. ಕೊವಿಡ್​-19 ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ. ಅಲ್ಲಿನ ಜನರು ತಮ್ಮ ಹಳ್ಳಿಗಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುತ್ತಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದರು. ಹಾಗೇ, ದೇಶದ ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್​, ವೆಂಟಿಲೇಟರ್​, ಔಷಧಗಳ ಪೂರೈಕೆ ಹೆಚ್ಚಿಸಲು ಹಗಲಿರುಳೂ ಶ್ರಮಿಸಲಾಗುತ್ತದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಗೆಲ್ಲುವ ಆತ್ಮವಿಶ್ವಾಸ ಇದೆ ಎಂದರು. ಹಾಗೇ, ಲಸಿಕೆಯನ್ನು ತಪ್ಪದೆ ತೆಗೆದುಕೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ: Ramya Divya Spandana: ರಕ್ಷಿತ್​ ಶೆಟ್ಟಿ ಜೊತೆ ರಮ್ಯಾ ಮದುವೆ ಆಗ್ಬೇಕು; ಫ್ಯಾನ್ಸ್​ ಬಯಕೆಗೆ ಉತ್ತರ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್​

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ; ಬಸವರಾಜ ಬೊಮ್ಮಾಯಿ