ನಿನ್ನೆ ಮೊನ್ನೆಯಷ್ಟೇ ವಾರಣಾಸಿ ಗ್ಯಾನವಾಪಿ ಮಸೀದಿ ದೇಶವ್ಯಾಪಿ ಸುದ್ದಿ ಮಾಡಿತ್ತು. ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲೇ ಇರುವ ಗ್ಯಾನವಾಪಿ ಮಸೀದಿಯನ್ನು ತೆರವುಗೊಳಿಸಬೇಕು. ಮಸೀದಿಯ ಜಾಗ ಸಂಪೂರ್ಣವಾಗಿ ಕಾಶೀ ವಿಶ್ವನಾಥ ದೇವಾಲಯಕ್ಕೆ ಸೇರಿದ್ದೆಂದು ವಾರಾಣಾಸಿಯ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ಆಧಾರದ ಮೇಲೆ ವಾರಾಣಾಸಿಯ ಸಿವಿಲ್ ಕೋರ್ಟ್ ಮಸೀದಿ ಜಾಗದ ಉತ್ಖನನಕ್ಕೆ ಪುರಾತತ್ವ ಇಲಾಖೆಗೆ ಆದೇಶ ನೀಡಿತ್ತು. ಗ್ಯಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ಮಂದಿರ ಮುಂದಿನ ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ಪ್ರಕರಣದಂತೆಯೇ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾದರೆ ಇನ್ನೂ ಯಾವ ಮಂದಿರ ಮಸೀದಿಗಳು ಇದೇ ಹಾದಿಗೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಇಲ್ಲಿದೆ.
ಶ್ರೀ ರಾಮ ಮಂದಿರ- ಬಾಬರಿ ಮಸೀದಿ
ಹಿಂದೂಗಳ ಪ್ರಕಾರ 1528ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿ ಇದ್ದ ಸ್ಥಳದಲ್ಲಿ ಬಾಬ್ರಿ ಮಸೀದಿಯ ಕಟ್ಟಲಾಯಿತು. ಮೊಘಲ್ ಅರಸ ಬಾಬರ್ ರಾಮ ಮಂದಿರವನ್ನು ಕೆಡವಿ ಅದೇ ಸ್ಥಳದಲ್ಲಿ ಕಟ್ಟಿದ ಮಸೀದಿಯೇ ಬಾಬ್ರಿ ಮಸೀದಿ ಹೇಳಲಾಗುತ್ತದೆ. ಬಾಬರ್ಗಿಂತಲೂ ಹಿಂದೆ ಆಗಿಹೋಗಿದ್ದ ರಾಜನೋರ್ವ ರಾಮ ಮಂದಿರವನ್ನು ಕೆಡವಿದ ಎಂದು ಸಹ ಹೇಳಲಾಗುತ್ತದೆ. 1950ರಿಂದಲೇ ಈ ಮಸೀದಿಯ ಬಾಗಿಲನ್ನು ಹಾಕಲಾಗಿತ್ತು. ಮುಂದೆ ಇಡಿ ದೇಶದ ರಾಜಕೀಯಾತ್ಮಕ ವಿವಾದದ ಕೇಂದ್ರಬಿಂದುವೂ ಆಯಿತೆನ್ನಿ. ದೇಶಾದ್ಯಂತ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದ ಬಿಜೆಪಿಗೆ ಬಾಬ್ರಿ ಮಸೀದಿ ಪ್ರಮುಖ ಅಸ್ತ್ರವಾಯಿತು.
ವಿವಾದಿತ ಜಾಗದಲ್ಲಿ ಉತ್ಖನನ ನಡೆಸಲು ಅಲಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಇಲಾಖೆಗೆ ಆದೇಶಿಸಿತು. ಸಮಗ್ರ ತನಿಖೆ ನಡೆಸಿದ ನಂತರ, ‘ಒಟ್ಟಾರೆಯಾಗಿ ಗಮನಿಸಿದರೆ, ವಿವಾದಿತ ಕಟ್ಟಡದ ಅಡಿಯಲ್ಲಿದ್ದ ಬೃಹತ್ ಕಟ್ಟಡದ ಪುರಾತತ್ವ ಸಾಕ್ಷ್ಯಗಳನ್ನು ಪರಿಗಣಿಸಿದರೆ, ಹತ್ತನೆಯ ಶತಮಾನದಿಂದ ಆರಂಭಿಸಿ ವಿವಾದಿತ ಕಟ್ಟಡ ನಿರ್ಮಾಣವಾಗುವವರೆಗಿನ ರಾಚನಿಕ ಹಂತಗಳ ನಿರಂತರತೆ, ಶಿಲೆ, ಅಲಂಕೃತ ಇಟ್ಟಿಗೆಗಳು ಹಾಗೂ ವಿರೂಪಗೊಂಡ ಗಂಡು-ಹೆಣ್ಣಿನ ಮೂರ್ತಿಯನ್ನು ಪರಿಗಣಿಸಿದರೆ, ಇವು ಉತ್ತರ ಭಾರತದ ದೇವಸ್ಥಾನಗಳಲ್ಲಿ ಕಂಡುಬರುವ ಗುಣಲಕ್ಷಣಗಳಿರುವ ಅವಶೇಷಗಳನ್ನು ಸೂಚಿಸುತ್ತವೆ’ ಎಂದು ಪುರಾತತ್ವ ಇಲಾಖೆ ವರದಿ ಸಲ್ಲಿಸಿತು.‘
ಇದೇ ಮಸೀದಿಯಿಂದಲೆ ದೇಶ ರಾಜಕೀಯ ತಿರುವನ್ನು ಕಂಡಿತು. 1992ರಂದು ಸಾವಿರಾರು ಕರ ಸೇವಕರು ಮಸೀದಿಯನ್ನು ಕೆಡವಿ ಧ್ವಂಸಗೊಳಿಸಿದರು. ವಿವಿಧ ನ್ಯಾಯಾಲಯಗಳಲ್ಲಿ 134 ವರ್ಷಗಳ ಸುದೀರ್ಘಾವಧಿಯ ವಿಚಾರಣೆಯ ನಂತರ ಸರ್ವೋಚ್ಛ ನ್ಯಾಯಾಲಯದವರೆಗೂ ಹೋದ ಈ ಪ್ರಕರಣ ಕೊನೆಗೂ ಒಂದು ಮಟ್ಟಿಗಿನ ಸುಖಾಂತ್ಯ ಕಂಡಿತು ಎಂದೇ ಹೇಳಬೇಕು. 2019ರ ನವೆಂಬರ್ 19ರಂದು ಸುಪ್ರೀಂಕೋರ್ಟ್ ನಿಡಿದ ಆದೇಶದ ಪ್ರಕಾರ, ಇದೀಗ ಅದೇ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರತಿವಾದಿ ಸುನ್ನಿ ವಕ್ಫ್ ಬೋರ್ಡ್ಗೆ ಪ್ರತ್ಯೇಕ ಮಸೀದಿ ಕಟ್ಟಲು 5 ಎಕರೆ ಜಾಗ ನೀಡಲಾಗಿದೆ.
ಶ್ರೀ ಕೃಷ್ಣಜನ್ಮಭೂಮಿ ಮಥುರಾ- ಶಾಹಿ ಮಸೀದಿ
ಶ್ರೀ ರಾಮನಂತೆಯೇ ಹಿಂದೂಗಳ ಪಾಲಿಗೆ ಶ್ರೀ ಕೃಷ್ಣನೂ ಪೂಜನೀಯ. ಉತ್ತರ ಪ್ರದೇಶದ ಮಥುರಾ ನಗರ ಶ್ರೀ ಕೃಷ್ಣನ ಜನ್ಮಭೂಮಿ ಎಂದು ಪ್ರಸಿದ್ಧಿ ಪಡೆದಿದೆ. ಕೃಷ್ಣನ ಮೊಮ್ಮಗ ವಜ್ಯ 5 ಸಾವಿರ ವರ್ಷಗಳ ಹಿಂದೆ ಶ್ರೀ ಕೃಷ್ಣ ಮಂದಿರ ನಿರ್ಮಿಸಿದ್ದಾನೆ ಎಂಬ ನಂಬಿಕೆಯಿದೆ. ಆದರೆ ಅದು ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದೇ ಪುರಾಣಗಳು ಹೇಳುತ್ತವೆ. ಈ ದೇಗುಲಕ್ಕೆ ಕೇಶವ್ ದಿಯೋ ಎಂದೂ ಕರೆಯಲಾಗುತ್ತದೆ. ಮೊಘಲ್ ಅರಸ ಔರಂಗಜೇಬ್ ಶ್ರೀ ಕೃಷ್ಣ ದೇಗುಲವನ್ನು ಕೆಡವಿ ಶಾಹಿ ಈದ್ಗಾ ಮಸೀದಿ ಕಟ್ಟಿದ್ದ. ನಂತರ ಅನೇಕಾನೇಕ ರಾಜಕೀಯ- ಸಾಮಾಜಿಕ ಹೋರಾಟಗಳ ನಂತರ 1965ರಲ್ಲಿ ಈಗ ಕಾಣಲ್ಪಡುವ ದೇಗುಲವನ್ನು ನಿರ್ಮಿಸಲಾಯಿತು. ಆದರೆ ನಿಜವಾದ ಕೃಷ್ಣ ಜನ್ಮಸ್ಥಳದಲ್ಲಿ ಔರಂಗಜೇಬ್ ಕಟ್ಟಿದ ಮಸೀದಿ ಹಿಂದೂ ದೇಗುಲದ ಶೈಲಿಯನ್ನೇ ಹೋಲುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಕೃಷ್ಣ ಹುಟ್ಟಿದ ಕಾರಾಗೃಹ, ಕತ್ತಲು ಮುಂತಾದ ಅಂಶಗಳು ಮಸೀದಿಯ ರಚನೆಯ ಶೈಲಿಯಲ್ಲಿ ಕಾಣಿಸುತ್ತವಂತೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೃಷ್ಣ ಜನ್ಮಭೂಮಿಯ ಮಸೀದಿ ವಿವಾದಕ್ಕೀಡಾಗುವ ಸಾಧ್ಯತೆ ಅತಿ ಹೆಚ್ಚಾಗಿದೆ.
ಪಶ್ಚಿಮ ಬಂಗಾಲದ ಅದಿನಾ ಮಸೀದಿ
ಪಶ್ಚಿಮ ಬಂಗಾಲದ ಪಂಡುವಾದಲ್ಲಿ ಇರುವ ಅದಿನಾ ಮಸೀದಿಯನ್ನು ನಿರ್ಮಿಸಿದಾತ ಸಿಕಂದರ್ ಷಾ. ಅಲ್ಲಿ ಆ ಹಿಂದೆ ಇದ್ದ ಹಿಂದೂ ದೇವಾಲಯದ ಮೇಲೆ ಕ್ರಿಸ್ತಶಕ 1358- 90ರ ಮಧ್ಯೆ ಆತ ಮಸೀದಿ ನಿರ್ಮಿಸಿದ. ಇವತ್ತಿಗೆ ಭಾರತದ ಅತಿ ದೊಡ್ಡ ಮಸೀದಿಗಳ ಪೈಕಿ ಇದೂ ಒಂದು ಎನಿಸಿಕೊಂಡಿದೆ. ಹಿರಿಯರು ಹೇಳುವಂತೆ, ಇದು ಮೂಲತಃ ಶಿವನ ದೇವಾಲಯ ಆಗಿತ್ತು. ಆದರೆ ನಂತರದಲ್ಲಿ ಇಲ್ಲಿನ ಮೂರ್ತಿಯನ್ನು ಒಡೆದು, ಮಸೀದಿಯಾಗಿ ಪುನರ್ ನಿರ್ಮಿಸಲಾಯಿತು. ಈ ಮಸೀದಿಯ ದ್ವಾರಗಳು, ಹೊರ ಆವರಣದ ಗೋಡೆಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳು ಹಲವನ್ನು ಈಗಲೂ ಕಾಣಬಹುದು. ಅಷ್ಟೇ ಅಲ್ಲ, ಮಸೀದಿಯ ಒಳಭಾಗದಲ್ಲೂ ಹಿಂದೂ ಕೆತ್ತನೆ ಮತ್ತು ರಚನೆಗಳಿವೆ. ಪಶ್ಚಿಮ ಬಂಗಾಲದಲ್ಲಿ ಇರುವ ಅತ್ಯುತ್ತಮ ವಾಸ್ತುಶಿಲ್ಪಗಳಲ್ಲಿ ಈ ಮಸೀದಿಯೂ ಒಂದು.
ಈ ಕಟ್ಟಡದ ರಚನೆಯಲ್ಲಿ ಹಿಂದೂ ಪ್ರಭಾವ ಇರುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಒಂದು ಕಲ್ಲಿನ ಸ್ಲ್ಯಾಬ್ನಲ್ಲಿ ಗಣೇಶ ಕಂಡುಬಂದರೆ, ಮತ್ತೊಂದರಲ್ಲಿ ನಟರಾಜ ವಿಗ್ರಹ ಇದೆ. ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಇರುವ ಪ್ರವೇಶ ದ್ವಾರದಲ್ಲಿ ಹಲವು ಸಾಕ್ಷ್ಯಗಳು ಕಾಣಸಿಗುತ್ತವೆ. ಮಸೀದಿಯ ಒಳಭಾಗದಲ್ಲಿ ಕಲ್ಲಿನ ಕೆತ್ತನೆ ಕೆಲಸಗಳು ಕೂಡ ಈ ಮಸೀದಿ ಮೂಲ ಕಟ್ಟಡ ದೇವಾಲಯ ಆಗಿತ್ತು ಅನ್ನೋದನ್ನೇ ಸೂಚಿಸುತ್ತವೆ. ಇನ್ನು ಈ ಮಸೀದಿಯ ಹೆಸರಾದ ಅದೀನಾ ಎಂಬುದು ಆದಿನಾಥ ಎಂಬ ಆ ಪರಶಿವನ ಹೆಸರಿನಿಂದಲೇ ಬಂದಿದ್ದು ಅಂತಲೂ ಹೇಳಲಾಗುತ್ತದೆ.
ಭದ್ರಕಾಳಿ ದೇವಾಲಯ- ಜಾಮಾ ಮಸೀದಿ
ಜಾಮಾ ಮಸೀದಿಯನ್ನು 1424ರಲ್ಲಿ ಅಹ್ಮದಾಬಾದ್ನಲ್ಲಿ (ಮೂಲತಃ ಇದರ ಹೆಸರು ಕರ್ಣಾವತಿ) ನಿರ್ಮಿಸಲಾಯಿತು. ಇದನ್ನು ನಿರ್ಮಿಸಿದಾತ ಅಹ್ಮದ್ ಷಾ 1. ಇದು ಮೂಲತಃ ಹಿಂದೂ ದೇವತೆ ಭದ್ರಕಾಳಿ ದೇವಾಲಯ ಆಗಿತ್ತು. ಅಹ್ಮದಾಬಾದ್ ನಗರದ ಮೂಲ ಹೆಸರು ಭದ್ರಾ, ಕರ್ಣಾವತಿ, ರಾಜ್ನಗರ್, ಅಸವಲ್ ಹೀಗೆ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಹೆಸರಿತ್ತು. ಭದ್ರಾ ಅನ್ನೋ ಹೆಸರು ಆ ದೇವತೆ ಹೆಸರ ಮೇಲೆ ಬಂದಿದ್ದು. ಆ ದೇವಾಲಯವನ್ನು ಕಟ್ಟಿಸಿದಾತ ಮಾಳ್ವಾದ ರಜಪೂತ್ ಪರ್ಮರ್ ರಾಜ. ಆತ 9ರಿಂದ 14ನೇ ಶತಮಾನದ ಮಧ್ಯೆ ಈ ಪ್ರದೇಶವನ್ನು ಆಳುತ್ತಿದ್ದ. ಅಹ್ಮದಾಬಾದ್ನ ಜಾಮಾ ಮಸೀದಿ ಮೂಲತಃ ಭದ್ರಕಾಳಿ ದೇವಾಲಯ.
ಈ ದೇವಾಲಯ ಸಮುಚ್ಚಯದಲ್ಲಿನ ನೂರು ಕಂಬಗಳಲ್ಲಿ ಕಮಲದ ಹೂವಿನ ಕೆತ್ತನೆ, ಮಂಡಲಗಳು, ಆನೆ, ಕುಂಡಲಿನಿ ಶಕ್ತಿಯನ್ನು ಪ್ರತಿನಿಧಿಸುವ ಸರ್ಪಗಳು, ನೃತ್ಯ ಮಾಡುತ್ತಿರುವ ಚಿತ್ರಗಳು, ಗಂಟೆ ಮುಂತಾದವು ಕಂಡುಬಂದಿವೆ. ಒಂದು ವೇಳೆ ಈ ಮಸೀದಿಯನ್ನು ಪ್ರಾರ್ಥನೆ ಉದ್ದೇಶಕ್ಕೆ ಅಂತಲೇ ನಿರ್ಮಿಸಿದ್ದರೆ ಅಷ್ಟೊಂದು ಕಂಬಗಳನ್ನು ನಿರ್ಮಿಸುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಎದುರಾಗುತ್ತದೆ. ಬಹುತೇಕ ಕಂಬಗಳು ಹಿಂದೂ ದೇಗುಲದ ಶೈಲಿಯಲ್ಲೇ ಇವೆ. ಮಸೀದಿಗಳಲ್ಲಿ ಸಾಮಾನ್ಯವಾಗಿ ದೊಡ್ಡ ಹಜಾರ ಇರುತ್ತದೆ. ನಮಾಜ್ ಮಾಡುವುದಕ್ಕೆ ಮಧ್ಯೆ ಏನೂ ಅಡೆತಡೆ ಇಲ್ಲದಂತೆ ವಿಶಾಲವಾಗಿರುತ್ತದೆ. ಅದೇ ಹಿಂದೂ ದೇವಾಲಯಗಳಲ್ಲಿ ಕಂಬಗಳನ್ನು ಕೆತ್ತಲಾಗಿರುತ್ತದೆ. ಪುರಾಣ, ವೇದ, ಇತಿಹಾಸಗಳಾದ ರಾಮಾಯಣ, ಮಹಾಭಾರತಗಳ ವಿವರಣೆ ಇರುತ್ತವೆ.
ಮೂಲ ಭದ್ರಾ ಕೋಟೆ ಶಿಥಿಲಾವಸ್ಥೆಯಲ್ಲಿ ಈಗಲೂ ಇದೆ. ಜಾಮಾ ಮಸೀದಿ ಭದ್ರಾ ಕೋಟೆಯ ಹೊರಭಾಗದಲ್ಲಿ ಇದೆ. ಅಹ್ಮದಾಬಾದ್ ಹೆಸರು ಬಂದಿದ್ದು ಮುಝಾಫರೀದ್ ವಂಶಸ್ಥನಾದ ಅಹ್ಮದ್ ಷಾ 1 ಹೆಸರಿನಿಂದ. ಆತ ಕರ್ಣಾವತಿಯನ್ನು 1411ರಲ್ಲಿ ವಶಪಡಿಸಿಕೊಂಡ. ಆತ ಗುಜರಾತ್ ಸಾಮ್ರಾಜ್ಯದ ಹೊಸ ರಾಜಧಾನಿಯಾಗಿ ಅಹ್ಮದಾಬಾದ್ ಅನ್ನು ರೂಪಿಸಿದ. ಸಬರಮತಿಯ ಪೂರ್ವ ದಂಡೆಯ ಮೇಲೆ ಭದ್ರಾ ಕೋಟೆಯನ್ನು ನಿರ್ಮಾಣ ಮಾಡಿದ.
ವಿಜಯ್ ದೇವಸ್ಥಾನ- ಬಿಜಮಂಡಲ್ ಮಸೀದಿ
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಿಂದ 60 ಕಿಲೋಮೀಟರ್ ದೂರದಲ್ಲಿದೆ ವಿದಿಶಾ ನಗರ. ಈ ನಗರವು ಬಿಜಮಂಡಲ್ ಮಸೀದಿ ಮತ್ತು ಇತಿಹಾಸಕ್ಕೆ ಖ್ಯಾತಿಯಾಗಿದೆ. ಭಾರತದಲ್ಲಿ ಇಸ್ಲಾಮಿಕ್ ರಾಜರ ಆಳ್ವಿಕೆ ವೇಳೆಯಲ್ಲಿ ಹಲವಾರು ಹಿಂದೂ ದೇವಾಲಯಗಳು ನಾಶವಾಗಿಮ ಮಸೀದಿಗಳಾಗಿ ಬದಲಾದವು. ಅದೇ ರೀತಿಯಲ್ಲೇ ಬಿಜಮಂಡಲ್ ಮಸೀದಿ ಕೂಡ ಆಗಿದೆ. ಅಲ್ಲಿನ ಹಿಂದೂ ದೇವಾಲಯವನ್ನು ಕೊಳ್ಳೆ ಹೊಡೆದು, ನಾಶ ಮಾಡಿ, ಹಾಳುಗೆಡವಿದ ನಂತರ ಮಸೀದಿಯಾಗಿ ಬದಲಿಸಲಾಗಿದೆ. ಆ ಮಸೀದಿಗೆ ಕಚ್ಚಾ ವಸ್ತುಗಳಾಗಿ ಕೆಡವಿದ ದೇವಾಲಯದ ವಸ್ತುಗಳನ್ನೇ ಬಳಸಲಾಗಿದೆ.
ಇವತ್ತಿಗೆ ಬಿಜಮಂಡಲ ತನ್ನೆಲ್ಲ ಗತ ವೈಭವವನ್ನು ಕಳೆದುಕೊಂಡಿದೆ. ಮೊಘಲರ ಮತ್ತು ಇಸ್ಲಾಮಿಕ್ ದಾಳಿಕೋರರ ದಾಳಿಗೆ ಸಿಕ್ಕ ನಲುಗಿದ ಕುರುಹಂತೆ ಅಸಹಾಯಕವಾಗಿ ನಿಂತಿದೆ. ದೇವತೆ ಚರ್ಚಿಕಾಗೆ ಮೀಸಲಾಗಿದ್ದ ದೇವಾಲಯ ಕೆಡವಿದ್ದರಿಂದ ಉಳಿದ ಕಚ್ಚಾ ವಸ್ತುಗಳನ್ನು ಬಳಸಿ ಈ ಮಸೀದಿ ನಿರ್ಮಾಣವಾಗಿದೆ. ಇದನ್ನು ಈ ಹಿಂದೆ ಪರ್ಮರ್ ರಾಜರು ನಿರ್ಮಿಸಿದ್ದರು. ಇಲ್ಲಿರುವ ಒಂದು ಕಂಬದಲ್ಲಿನ ಕೆತ್ತನೆಯ ಪ್ರಕಾರ, ಮೂಲ ದೇವಾಲಯವು ವಿಜಯ ದೇವತೆಗೆ ಮೀಸಲಾಗಿತ್ತು. ಅದು ವಿಜಯದ ಸಂಕೇತವಾಗಿತ್ತು. ಮಾಳ್ವದ ರಾಜ ನರವರ್ಮನ್ ಇದನ್ನು ನಿರ್ಮಿಸಿದ್ದ ಎಂಬ ಪ್ರಸ್ತಾವ ಇದೆ. ಇದನ್ನು ಭಾರತೀಯ ಪುರಾತತ್ವ ಇಲಾಖೆ ಈ ಸ್ಥಳದಲ್ಲಿ ಸ್ಪಷ್ಟಪಡಿಸಿದೆ. ಬಿಜ ಅಥವಾ ಬಿಜಯ ಅಂದರೆ ಮೂಲದೇವತೆ ವಿಜಯ ರಾಣಿ ಎಂದರ್ಥ. ಬಿಜಮಂಡಲ್ ಅಥವಾ ಬಿಜಯ ಮಂದಿರ್ ಎಂಬುದು ಹಿಂದೂ ದೇವತೆಗೆ ಮೀಸಲಾದದ್ದು.
1658ರಿಂದ 1707ರಲ್ಲಿ ಔರಂಗಜೇಬ್ ಈ ದೇವಾಲಯವನ್ನು ಲೂಟಿ ಮಾಡಿ, ಹಾಳುಗೆಡವಿದ್ದ. ಅಮೂಲ್ಯವಾದ ಮೂರ್ತಿಗಳನ್ನು ಉತ್ತರ ದಿಕ್ಕಿನಲ್ಲಿ ಹೂತುಹಾಕಿದ್ದ. ಆ ನಂತರ ದೇವಾಲಯವನ್ನು ಮಸೀದಿಯಾಗಿ ಬದಲಿಸಿದ್ದ. ಮುನ್ನೂರು ವರ್ಷಗಳ ಕಾಲ ಮಸೀದಿಯಾಗಿಯೇ ಇತ್ತು. ಈಗ ಭಾರತೀಯ ಪುರಾತತ್ವ ಇಲಾಖೆಯು ಸ್ಮಾರಕ ಎಂದು ಇದರ ಸಂರಕ್ಷಣೆ ಮಾಡುತ್ತಿದೆ. ಈದ್ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ, ದೊಡ್ಡ ಸಮಾರಂಭಗಳಲ್ಲಿ ಪ್ರಾರ್ಥನಾ ಮಂದಿರವಾಗಿ ಬಳಕೆ ಆಗುತ್ತಿದೆ.
ಇದನ್ನೂ ಓದಿ: ‘ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಸುತ್ತೀರಿ?‘: ಸುಪ್ರೀಂಕೋರ್ಟ್
ಅಯೋಧ್ಯೆ ಮತ್ತು ಕಾಶಿಯಂತೆ ಮಥುರಾದಲ್ಲೂ ಮಂದಿರ-ಮಸೀದಿ ವಿವಾದ, ಉತ್ಖನನ ನಡೆಸಲು ಕೋರ್ಟ್ ಆದೇಶ
(Krishna Janmbhumi and Shahi Masjid land dispute and many other land dispute cases likes to took to Supreme court soon)