ಭಾರತೀಯ ರೈಲ್ವೇ ಇಲಾಖೆಯು ಪರಿಸರ ಮತ್ತು ಪ್ರಯಾಣಿಕ ಸ್ನೇಹಿ, ಕಡಿಮೆ ವೆಚ್ಚದಾಯಕದಂತಹ ಹಲವು ಉಪಕ್ರಮಗಳನ್ನು ಕೈಗೊಳ್ಳುವತ್ತ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಬೃಹತ್ ವಿದ್ಯುದೀಕರಣ, ನೀರು ಮತ್ತು ಕಾಗದ ಸಂರಕ್ಷಣೆಯಿಂದ ಹಿಡಿದು ರೈಲ್ವೆ ಹಳಿಗಳಲ್ಲಿ ಪ್ರಾಣಿಗಳು ಗಾಯಗೊಳ್ಳದಂತೆ ಉಳಿಸುವ ಯೋಜನೆಗಳ ಮೂಲಕ ಇನ್ನಷ್ಟು ಪರಿಸರ ಸ್ನೇಹಿ ಕ್ರಮಗಳನ್ನು ಭಾರತೀಯ ರೈಲ್ವೆ ಕೈಗೊಳ್ಳುತ್ತಿದೆ. ಈ ಮೂಲಕ ವಿಶ್ವದ ಅತ್ಯಂತ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯನ್ನಾಗಿ ರೂಪಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ.
ರೈಲ್ವೆ ವಿದ್ಯುದ್ದೀಕರಣ ಕೈಗೊಂಡಿರುವುದರಿಂದ ಮಾಲಿನ್ಯವು 2014 ರ ನಂತರ ಸುಮಾರು ಹತ್ತು ಪಟ್ಟು ಕಡಿಮೆಯಾಗಿದೆ. ರೈಲ್ವೆ ಇಲಾಖೆಯು 2023ರವರೆಗೆ ಬ್ರಾಡ್ ಗೇಜ್ ಮಾರ್ಗದಲ್ಲಿ ಶೇ 100ರಷ್ಟು ವಿದ್ಯುದೀಕರಣವನ್ನು ಸಾಧಿಸುವ ಮೂಲಕ ಆರ್ಥಿಕ ಉಳಿತಾಯವನ್ನು ಸಾಧಿಸುವ ಯೋಜನೆಯನ್ನು ಸಹ ರೈಲ್ವೆ ಇಲಾಖೆ ಹಾಕಿಕೊಂಡಿದೆ. ಬ್ರಾಡ್ ಗೇಜ್ ಮಾರ್ಗಗಳಲ್ಲಿ ಹೆಡ್-ಆನ್-ಜನರೇಷನ್ ವ್ಯವಸ್ಥೆಗಳು, ಜೈವಿಕ ಶೌಚಾಲಯಗಳು ಮತ್ತು ಎಲ್ಇಡಿ ದೀಪಗಳನ್ನು ಇನ್ನಷ್ಟು ಹೆಚ್ಚಿಸಲು ರೈಲ್ವೆ ಇಲಾಖೆ ಯೋಜಿಸುತ್ತಿದೆ.
ಸರಕು ಸಾರಿಗೆ ರೈಲುಗಳು ಕಡಿಮೆ ಇಂಗಾಲವನ್ನು ಹೊರಸೂಸುವ ರೀತಿ ಹಲವು ಬದಲಾವಣೆಗಳನ್ನು ರೈಲ್ವೆ ಇಲಾಖೆ ತರುತ್ತಿದೆ. ಈ ಮೂಲಕ ಸರಕು ರೈಲುಗಳು ಹಸಿರು ಸಾರಿಗೆ ಜಾಲವಾಗಿ ಮಾರ್ಪಡಲಿದ್ದು, ಹೆಚ್ಚು ಶಕ್ತಿ-ಸಮರ್ಥ ಮತ್ತು ಇಂಗಾಲ ಸ್ನೇಹಿ ತಂತ್ರಜ್ಞಾನಗಳನ್ನು ಹೊಂದಲು ರೈಲ್ವೆ ಇಲಾಖೆ ಬದಲಾವಣೆಗಳನ್ನು ತರುತ್ತಿದೆ.
ರಸ್ತೆ ಸಾರಿಗೆಗಿಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಸರಕು ಸೇವೆ ಸಾಗಣೆ ಮಾಡಬಲ್ಲ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಅಭಿವೃದ್ಧಿಪಡಿಸಿದೆ. ಕೊವಿಡ್ನಂತಹ ದುರಿತ ಕಾಲದಲ್ಲಿ ಆಹಾರ, ತರಕಾರಿ, ಹಣ್ಣು ಮುಂತಾದ ಜೀವನಾವಶ್ಯಕ ವಸ್ತುಗಳ ಜತೆ ,ಮೆಡಿಕಲ್ ಆಕ್ಸಿಜನ್ ಸರೆಬರಾಜನ್ನು ಸಹ ಭಾರತೀಯ ರೈಲ್ವೆ ಸಾಗಣೆ ಮಾಡಿದೆ. ಏಪ್ರಿಲ್ 2021ರಿಂದಮೇ 2021ರವರೆಗೆ ಭಾರತೀಯ ರೈಲ್ವೆ 73 ಲಕ್ಷ ಟನ್ಗಳಷ್ಟು ಆಹಾರ ವಸ್ತುಗಳನ್ನು ಭಾರತೀಯ ರೈಲ್ವೆ ರವಾನಿಸಿದೆ. 241 ಮೆಡಿಕಲ್ ಆಕ್ಸಿಜನ್ ರೈಲುಗಳನ್ನು ಓಡಿಸಿದೆ. 922 ಟ್ಯಾಂಕರ್ಗಳನ್ನು ಅಗತ್ಯವಿರುವ ಸ್ಥಳಗಳಿಗೆ ರವಾನಿಸಿದೆ. ಒಟ್ಟು 15,046 ಟನ್ಗಳಷ್ಟು ಮೆಡಿಕಲ್ ಆಕ್ಸಿಜನ್ಗಳನ್ನು ರವಾನಿಸಿದೆ.
ಅಷ್ಟೇ ಅಲ್ಲದೇ, ರೈಲುಗಳನ್ನು ಪರಿಸರ ಸ್ನೇಹಿಯನ್ನಾಗಿ ರೂಪಿಸಲೂ ಇಲಾಖೆ ಶ್ರಮಿಸುತ್ತಿದೆ. ಇದನ್ನು ಸಾಧಿಸಲು 39 ವರ್ಕ್ಶಾಪ್ಗಳು, 7 ಉತ್ಪಾದನಾ ಘಟಕಗಳು, 8 ಸ್ಥಳೀಯ ಘಟಕಗಳು, ಗ್ರೀನ್ಗೋ ಸರ್ಟಿಫಿಕೇಟ್ ಪಡೆದುಕೊಂಡಿವೆ.
ಇದಲ್ಲದೇ, ಕಳೆದ ಎರಡು ವರ್ಷಗಳಲ್ಲಿ 600 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳ ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ಐಎಸ್‌ಒ 14001 ಕ್ಕೆ ಪ್ರಮಾಣೀಕರಿಸಲಾಗಿದೆ. ಜತೆಗೆ ಇನ್ನೂ ಹೆಚ್ಚಿನ ಐಎಸ್‌ಒ ಪ್ರಮಾಣೀಕರಣಕ್ಕಾಗಿ ಒಟ್ಟು 718 ನಿಲ್ದಾಣಗಳನ್ನು ಗುರುತಿಸಲಾಗಿದೆ.
ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದ, ಯುನೈಟೆಡ್ ನೇಶನ್ನ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಗಳಂತಹ ಸರ್ಕಾರದ ಗುರಿಗಳನ್ನು ಸಾಧಿಸಲು ರೈಲ್ವೆ ಇಲಾಖೆ ಪ್ರಯತ್ನಿಸುತ್ತಿದೆ. ಸಾವಿರಾರು ಎಂಜಿನಿಯರ್ಗಳು, ತಂತ್ರಜ್ಞರು ಮತ್ತು ಇಲಾಖೆಯ ಎಲ್ಲ ವಿಭಾಗದ ಸಿಬ್ಬಂದಿ ಭಾರತೀಯ ರೈಲ್ವೆಯನ್ನು ಇನ್ನಷ್ಟು ಪರಿಸರ ಮತ್ತು ಪ್ರಯಾಣಿಕ ಸ್ನೇಹಿಯನ್ನಾಗಿ ಮಾರ್ಪಡಿಸಲು ಶ್ರಮಿಸುತ್ತಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Kerala budget: ಕೇರಳ ಬಜೆಟ್ನಲ್ಲಿ ₹20,000 ಕೋಟಿ ಕೊವಿಡ್ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವ ಬಾಲಗೋಪಾಲ್
ಕೊವಿಡ್ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯತ್ಗೂ 50 ಸಾವಿರ ಅನುದಾನ ಬಿಡುಗಡೆ: ಸಿಎಂ ಯಡಿಯೂರಪ್ಪ
(Indian Railway in the way of largest green railways in the world)
Published On - 7:48 pm, Fri, 4 June 21