ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಷಯ ಹರಿದಾಡುತ್ತಿದೆ. ಎರಡು ಹನಿ ಲಿಂಬೆ ರಸವನ್ನು ಮೂಗಿನ ಹೊಳ್ಳೆಗೆ ಹಾಕಿದರೆ ಕೊರೊನಾ ಸೋಂಕಿನಿಂದ ಪಾರಾಗಬಹುದು ಎಂಬ ಸಂದೇಶ ಅದು. ಹೀಗೆ ಮೂಗಿನಲ್ಲಿ ಎರಡು ಹನಿ ಲಿಂಬೆ ರಸ ಹಾಕಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಆಕ್ಸಿಜನ್ ಪ್ರಮಾಣವೂ ಹೆಚ್ಚುತ್ತದೆ. ಈ ಮೂಲಕ ಕೊರೊನಾದಿಂದ ಬೇಗನೇ ಪಾರಾಗಬಹುದು ಎಂಬ ವಿವರಗಳುಳ್ಳ ಪೋಸ್ಟ್ ತುಂಬ ವೈರಲ್ ಆಗುತ್ತಿದೆ. ಅದರಲ್ಲೂ ವ್ಯಕ್ತಿಯೋರ್ವ ತಾನು ಲಿಂಬೆ ರಸವನ್ನು ಮೂಗಿಗೆ ಬಿಟ್ಟುಕೊಂಡೇ ಕೊರೊನಾದಿಂದ ಪಾರಾಗಿದ್ದೇನೆ ಎಂದು ಹೇಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇನ್ನು ಈ ವಿಚಾರದ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ಒಂದು ಸ್ಪಷ್ಟತೆಯಿಲ್ಲ. ಮೂಗಿನ ಹೊಳ್ಳೆಗೆ ಲಿಂಬೆ ರಸ ಹಾಕುವುದು ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಿಲ್ಲ .
ಹಾಗಂತ ಲಿಂಬೆಯಿಂದ ಆರೋಗ್ಯಕ್ಕೆ ತುಂಬ ಉಪಯೋಗ ಇದೆ. ಆದರೆ ಕೊವಿಡ್ 19 ಸೋಂಕಿತರಿಗೆ ಲಿಂಬುವನ್ನು ಅತ್ಯುತ್ತಮ ಔಷಧವಾಗಿ ಯಾವುದೇ ವೈದ್ಯರೂ ಇದುವರೆಗೆ ಪರಿಗಣಿಸಿಲ್ಲ. ಈ ರೋಗಕ್ಕೆ ವೈದ್ಯಕೀಯ ಲೋಕ ಬೇರೆಯದ್ದೇ ಸ್ವರೂಪದ ಔಷಧಗಳನ್ನು ಕೊಡುತ್ತದೆ. ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ಲಿಂಬೆರಸದ ಬಗ್ಗೆ ಚರ್ಚೆ ಹೆಚ್ಚಾದ ಬೆನ್ನಲ್ಲೇ ಪಿಐಬಿ ಫ್ಯಾಕ್ಟ್ಚೆಕ್ ನಡೆಸಿದೆ. ಲಿಂಬೆ ರಸ ಮೂಗಿನಹೊಳ್ಳೆಗೆ ಹಾಕಿಕೊಂಡರೆ ಕೊರೊನಾ ಸೋಂಕು ಕಡಿಮೆಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ. ಹಾಗೇ ಲಿಂಬೆ ರಸವನ್ನು ಮೂಗಿನ ಹೊಳ್ಳೆಗೆ ಬಿಟ್ಟಾಕ್ಷಣ ಕೊರೊನಾ ಸೋಂಕು ನಿವಾರಣೆಯಾಗುವುದಿಲ್ಲ. ಇದು ಕೊವಿಡ್ 19ಗೆ ಚಿಕಿತ್ಸೆ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಪಿಐಬಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫ್ಯಾಕ್ಟ್ಚೆಕ್ ಪೋಸ್ಟ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಎರಡು ಹನಿ ಲಿಂಬೆರಸ ಕೊರೊನಾ ವೈರಸ್ನ್ನು ಕೊಲ್ಲುತ್ತದೆ ಎಂದು ಹೇಳಲಾಗಿದೆ. ಆದರೆ ಇದೊಂದು ಫೇಕ್ ವಿಡಿಯೋ. ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಟ್ವೀಟ್ ಮಾಡಿದೆ.
ಇಂಥ ಪ್ರಯೋಗಗಳನ್ನು ಮಾಡಬೇಡಿ
ಇನ್ನು ಕೊರೊನಾ ಸೋಂಕಿತರು ಮನೆಯಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡಬಾರದು ಎಂದು ಮುಂಬೈನ ಆಸ್ಪತ್ರೆಯೊಂದರ ವೈದ್ಯ ಡಾ. ಚಂದ್ರವೀರ್ ಸಿಂಗ್ ಹೇಳಿದ್ದಾರೆ. ಲಿಂಬೆಯಲ್ಲಿ ವಿಟಮಿನ್ ಸಿ ಇರುತ್ತದೆ. ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಹಾಗಂತ ಅದರ ಹನಿಯನ್ನು ಮೂಗಿನಲ್ಲಿ ಬಿಡಬಾರದು. ಇದು ಮೂಗಿನ ಲೋಳೆಪೊರೆಯನ್ನು ಹಾನಿಮಾಡುತ್ತದೆ ಮತ್ತು ಸೈನಟೈಸ್ಗೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
सोशल मीडिया पर साझा किए जा रहे वीडियो में दावा किया जा रहा है कि नाक में नींबू का रस डालने से #कोरोनावायरस तुरंत ही खत्म हो जाएगा#PIBFactCheck:- वीडियो में किया गया दावा #फर्जी है। इसका कोई वैज्ञानिक प्रमाण नहीं है कि नाक में नीबू का रस डालने से #Covid19 को खत्म किया जा सकता है pic.twitter.com/cXpqzk0dCK
— PIB Fact Check (@PIBFactCheck) May 1, 2021