ಪ್ರಯಾಗ್ರಾಜ್: ಇನ್ನು ಮೂರು-ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಹಾಕಲು ವ್ಯವಸ್ಥೆ ಮಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಉತ್ತರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಟೆಂಡರ್ ಮೂಲಕ ವ್ಯಾಕ್ಸಿನ್ ಖರೀದಿ ಮಾಡುವುದು ಸುದೀರ್ಘ ಪ್ರಕ್ರಿಯೆ ಎಂದೂ ಹೇಳಿದೆ.
ರಾಜ್ಯದಲ್ಲಿ ಕೊವಿಡ್ 19 ವಿರುದ್ಧದ ಹೋರಾಟ, ನಿಯಂತ್ರಣಕ್ಕೆ ಸರ್ಕಾರದ ಸಿದ್ಧತೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಇಬ್ಬರು ನ್ಯಾಯಾಧೀಶರುಳ್ಳ ಪೀಠ, ಉತ್ತರ ಪ್ರದೇಶ ಸರ್ಕಾರ ತ್ವರಿತಗತಿಯಲ್ಲಿ ಲಸಿಕೆ ಖರೀದಿ ಮಾಡಿ, ನಾಗರಿಕರಿಗೆ ನೀಡಲು ಶುರು ಮಾಡಬೇಕು. ಹಾಗಾದರೆ ಮಾತ್ರ ಇನ್ನು 2-4 ತಿಂಗಳಲ್ಲಿ ರಾಜ್ಯದ ಎಲ್ಲರಿಗೂ ಸಂಪೂರ್ಣವಾಗಿ ಲಸಿಕೆ ನೀಡಬಹುದಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.
ಲಸಿಕೆಗಳ ಖರೀದಿ, ಸಂಗ್ರಹಕ್ಕೆ ಸಂಬಂಧಪಟ್ಟಂತೆ ನೀವು ಯಾವ ಯೋಜನೆಗಳನ್ನು ರೂಪಿಸಿಕೊಂಡಿದ್ದೀರಿ, ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಕೊವಿಡ್ 19 ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳು, ಚೈನ್ ಬ್ರೇಕ್ ಮಾಡಲು ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿಯುಳ್ಳ ಒಂದು ಅಫಿಡಿವಿಟ್ನ್ನು ಮುಂದಿನ ವಿಚಾರಣೆಯೊಳಗೆ ಸಲ್ಲಿಸಬೇಕು ಎಂದು ಹೈಕೋರ್ಟ್, ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಜೀವರಕ್ಷಕ ಔಷಧಿಗಳು, ಪಲ್ಸ್ ಆಕ್ಸಿಮೀಟರ್, ಆಕ್ಸಿಜನ್ ಸಿಲಿಂಡರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೀಗೆ ವಶಪಡಿಸಿಕೊಂಡಿರುವ ಉಪಕರಣಗಳನ್ನು ಶೀಘ್ರವೇ ಬಳಕೆಗೆ ಮುಕ್ತಗೊಳಿಸಿ. ಮುಂದೆ ಕೂಡ ಯಾವುದೇ ಇಂಥ ಪ್ರಕರಣಗಳು ನಡೆದರೂ, ಪೊಲೀಸರು ವಶಪಡಿಸಿಕೊಂಡ ಒಂದೇ ವಾರದಲ್ಲಿ ಅದನ್ನು ಬಳಕೆಗೆ ಮುಕ್ತಗೊಳಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಇನ್ನು ಪಂಚಾಯತ್ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳಾಗಿ ಪಾಲ್ಗೊಂಡಿದ್ದ ಶಿಕ್ಷಕರು ಮೃತಪಟ್ಟ ವಿಚಾರದ ಬಗ್ಗೆ ಸಲ್ಲಿಕೆಯಾದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್, ಚುನಾವಣೆ ಸಂದರ್ಭದಲ್ಲಿ ಎಲ್ಲ ರೀತಿಯ ಕೊವಿಡ್ 19 ನಿಯಂತ್ರಣಾ ಶಿಷ್ಟಾಚಾರಗಳನ್ನು ಪಾಲಿಸಲಾಗಿತ್ತೇ ಎಂಬುದನ್ನು ಪರಿಶೀಲನೆ ಮಾಡುವ ಅಗತ್ಯವಿದ್ದು, ನಮಗೆ ಸಿಸಿಟಿವಿ ಫೂಟೇಜ್ ಹಾಗೂ ಮೃತ ಚುನಾವಣಾ ಅಧಿಕಾರಿಗಳ ನಿಖರ ಸಂಖ್ಯೆ ಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ತಿಳಿಸಿದೆ. ವಿಚಾರಣೆಯನ್ನು ಮೇ 11ಕ್ಕೆ ಮುಂದೂಡಿದೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಮೇ.11ರ ಒಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು: ಆರೋಗ್ಯ ಇಲಾಖೆ
ಕಡಪಾ ಕ್ವಾರಿಯಲ್ಲಿ ಮಹಾ ದುರಂತ; 10 ಕಾರ್ಮಿಕರು ದುರ್ಮರಣ, ಸಾವಿನ ಸಂಖ್ಯೆ ಏರುವ ಸಾಧ್ಯತೆ