ಲಡಾಖ್​​ನಲ್ಲಿ ಭಾರತ-ಚೀನಾ ಸೇನಾಪಡೆ ನಡುವೆ ಮತ್ತಷ್ಟು ಸಂಘರ್ಷ ಸಾಧ್ಯತೆ: ವರದಿ

| Updated By: ರಶ್ಮಿ ಕಲ್ಲಕಟ್ಟ

Updated on: Jan 27, 2023 | 5:10 PM

ಜೂನ್ 2020 ರಲ್ಲಿ ಗಲ್ವಾನ್ ಕಣಿವೆ ಲಡಾಖ್‌ನಲ್ಲಿ ನಡೆದ ಭೀಕರ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟವು. ಇದು ದಶಕಗಳಲ್ಲಿ ಎರಡು ದೇಶಗಳ ನಡುವೆ ನಡದ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷವಾಗಿದೆ.

ಲಡಾಖ್​​ನಲ್ಲಿ ಭಾರತ-ಚೀನಾ ಸೇನಾಪಡೆ ನಡುವೆ ಮತ್ತಷ್ಟು ಸಂಘರ್ಷ ಸಾಧ್ಯತೆ: ವರದಿ
ಪ್ರಾತಿನಿಧಿಕ ಚಿತ್ರ
Follow us on

ಲಡಾಖ್‌ನಲ್ಲಿನ (Ladakh) ಗಡಿಯಲ್ಲಿ  ಬೀಜಿಂಗ್ (Beijing) ಮಿಲಿಟರಿ ಮೂಲಸೌಕರ್ಯವನ್ನು ಹೆಚ್ಚಿಸಿರುವುದರಿಂದ ಭಾರತ ಮತ್ತು ಚೀನಾದ (China) ಸೈನಿಕರ ನಡುವೆ ಹೆಚ್ಚಿನ ಚಕಮಕಿಗಳು ನಡೆಯಬಹುದು ಎಂದು ಪೊಲೀಸ್ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಜನವರಿ 20 ರಿಂದ 22 ರವರೆಗೆ ನಡೆದ ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಲಡಾಖ್ ಪೊಲೀಸರ ಹೊಸ, ಗೌಪ್ಯ ಸಂಶೋಧನಾ ಪ್ರಬಂಧ ಸಲ್ಲಿಸಲಾಗಿತ್ತು ಎಂದು ವರದಿ ಹೇಳಿದೆ. ಜೂನ್ 2020 ರಲ್ಲಿ ಗಲ್ವಾನ್ ಕಣಿವೆ ಲಡಾಖ್‌ನಲ್ಲಿ ನಡೆದ ಭೀಕರ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟವು. ಇದು ದಶಕಗಳಲ್ಲಿ ಎರಡು ದೇಶಗಳ ನಡುವೆ ನಡದ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷವಾಗಿದೆ.ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಸರಣಿಯ ಪರಿಣಾಮವಾಗಿ, ಪಾಂಗೊಂಗ್ ಲ್ಸೊದ ಉತ್ತರ ಮತ್ತು ದಕ್ಷಿಣ ದಂಡೆಗಳಲ್ಲಿ ಮತ್ತು ಗೋಗ್ರಾ ಪ್ರದೇಶದಲ್ಲಿ ಉಭಯ ಪಕ್ಷಗಳು ಸೇನಾ ತುಕಡಿಗಳ ಹಿಂಪಡೆತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದವು.

ಕಳೆದ ಸೆಪ್ಟೆಂಬರ್‌ನಲ್ಲಿ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್ ಪ್ರದೇಶದಲ್ಲಿನ ಗಸ್ತು ಕೇಂದ್ರದಲ್ಲಿ 15 ರಿಂದ ಭಾರತ ಮತ್ತು ಚೀನಾದ ಮಿಲಿಟರಿಗಳು ನಿರ್ಗಮನವನ್ನು ನಡೆಸಿದ್ದವು. ಡಿಸೆಂಬರ್‌ನಲ್ಲಿ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಎರಡು ಕಡೆಯ ನಡುವೆ ಹೊಸ ಘರ್ಷಣೆ ಸಂಭವಿಸಿದ್ದು ಯಾವುದೇ ಸಾವು ಸಂಭವಿಸಿಲ್ಲ.

ಗಡಿ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರು ಸಂಗ್ರಹಿಸಿದ ಗುಪ್ತಚರ ಮತ್ತು ವರ್ಷಗಳಲ್ಲಿ ಭಾರತ-ಚೀನಾ ಮಿಲಿಟರಿ ಉದ್ವಿಗ್ನತೆಯ ಮಾದರಿಯನ್ನು ಆಧರಿಸಿ ಈ ಮೌಲ್ಯಮಾಪನವನ್ನು ಮಾಡಲಾಗಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.

ಈ ಬಗ್ಗೆ ಭಾರತೀಯ ಸೇನೆಯು ಪ್ರತಿಕ್ರಿಯಿಸಲಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಸಮ್ಮೇಳನದಲ್ಲಿ ಸಲ್ಲಿಸಿದ ಮೌಲ್ಯಮಾಪನವು ಮಹತ್ವದ್ದಾಗಿದೆ ಎಂದು ಅದು ಹೇಳಿಕೊಂಡಿದೆ. ಚೀನಾದ ವಿದೇಶಾಂಗ ಸಚಿವಾಲಯ ಕೂಡಾ ಪ್ರತಿಕ್ರಿಯಿಸಲಿಲ್ಲ ಎಂದು ವರದಿ ಹೇಳಿದೆ.

ಚೀನಾದಲ್ಲಿನ ದೇಶೀಯ ಒತ್ತಾಯ ಮತ್ತು ಈ ಪ್ರದೇಶದಲ್ಲಿ ಅವರ ಆರ್ಥಿಕ ಹಿತಾಸಕ್ತಿಗಳನ್ನು ಗಮನಿಸಿದರೆ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ತನ್ನ ಮಿಲಿಟರಿ ಮೂಲಸೌಕರ್ಯವನ್ನು ನಿರ್ಮಿಸುವುದನ್ನು ಮುಂದುವರೆಸುತ್ತದೆ ಮತ್ತು ಚಕಮಕಿಗಳು ಆಗಾಗ್ಗೆ ನಡೆಯುತ್ತವೆ. ಇದು ಮಾದರಿಯನ್ನು ಅನುಸರಿಸಬಹುದು ಅಥವಾ ಅನುಸರಿಸದಿರಬಹುದು” ಎಂದು ವರದಿ ಹೇಳಿದೆ.

ನಾವು ಚಕಮಕಿಗಳು ಮತ್ತು ಉದ್ವಿಗ್ನತೆಗಳ ಮಾದರಿಯನ್ನು ವಿಶ್ಲೇಷಿಸಿದರೆ, 2013-2014 ರಿಂದ ಪ್ರತಿ 2-3 ವರ್ಷಗಳ ಮಧ್ಯಂತರದೊಂದಿಗೆ ತೀವ್ರತೆಯು ಹೆಚ್ಚಾಗಿದೆ. ಚೀನಾದ ಕಡೆಯಿಂದ ಬೃಹತ್ ಮೂಲಸೌಕರ್ಯವನ್ನು ನಿರ್ಮಿಸುವುದರೊಂದಿಗೆ ಎರಡೂ ಸೇನೆಗಳು ಪರಸ್ಪರರ ಪ್ರತಿಕ್ರಿಯೆಯನ್ನು ಪರೀಕ್ಷಿಸುತ್ತಿವೆ ಎಂದು ವರದಿ ಹೇಳಿದೆ.
ಭಾರತ ಮತ್ತು ಚೀನಾ 3,500 ಕಿ.ಮೀ ಗಡಿಯನ್ನು ಹಂಚಿಕೊಂಡಿದ್ದು, ಇದು 1950 ರಿಂದ ವಿವಾದದಲ್ಲಿದೆ. 1962 ರಲ್ಲಿ ಇದಕ್ಕಾಗಿ ಯುದ್ಧ ನಡೆದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ