ಡೆಹ್ರಾಡೂನ್: ಕೊವಿಡ್ 19 ಸೋಂಕಿನಿಂದ ಮೃತಪಟ್ಟ ರೋಗಿಯ ಮೊಬೈಲ್ನ್ನು ಆತ ದಾಖಲಾಗಿದ್ದ ಆಸ್ಪತ್ರೆಯ ನರ್ಸ್ ಕದ್ದು, ಅರೆಸ್ಟ್ ಆದ ಘಟನೆ ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ನಡೆದಿದೆ.
ಮೇ 18ರಂದು ಅಮನ್ದೀಪ್ ಗಿಲ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಮೃತಪಟ್ಟಿದ್ದಾರೆ. ಆದರೆ ಅವರ ಮೊಬೈಲ್ ಕಳವಾಗಿದೆ ಎಂದು ಹೇಳಿದ್ದರು. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆಸ್ಪತ್ರೆಗೆ ಭೇಟಿಕೊಟ್ಟ ಸಂದರ್ಭದಲ್ಲಿ ನರ್ಸ್ ಒಪ್ಪಿಕೊಂಡಿದ್ದಳು.
ಮೊಬೈಲ್ನ್ನು ತಾನೇ ಕದ್ದು, ಅದನ್ನು ಸ್ನೇಹಿತೆಗೆ ಕೊಟ್ಟಿದ್ದೇನೆ ಎಂದಿದ್ದಳು. ಪೊಲೀಸರು ತನಿಖೆ ನಡೆಸಿದ ಬಳಿಕ ಫೋನ್ನ್ನು ಸಲ್ಮಾನ್ ಅಹ್ಮದ್ ಎಂಬಾತ ಬಳಕೆ ಮಾಡುತ್ತಿರುವುದು ತಿಳಿದು ಬಂತು. ಆತನನ್ನು ಹಿಡಿದು ವಿಚಾರಿಸಿದಾಗ ನನಗೆ ಈ ಮೊಬೈಲ್ನ್ನು ರುಕೈಯಾ ಎಂಬುವಳಿಂದ ತೆಗೆದುಕೊಂಡಿದ್ದಾಗಿ ಹೇಳಿದ್ದ. ಅಲ್ಲಿಗೆ ನರ್ಸ್ ರುಕೈಯಾ ಮೊಬೈಲ್ ಕದ್ದು ತನ್ನ ಗೆಳೆಯ ಸಲ್ಮಾನ್ಗೆ ಕೊಟ್ಟಿದ್ದು ಸಾಬೀತಾಗಿತ್ತು.
ಆದರೆ ರುಕೈಯಾ ವಿಚಾರಣೆಯ ನಂತರ ಮತ್ತೊಂದು ಸತ್ಯವೂ ಹೊರಬಂತು. ಬರೀ ಮೃತ ರೋಗಿಗಳ ಮೊಬೈಲ್ ಅಷ್ಟೇ ಅಲ್ಲ, ಈ ಖಾಸಗಿ ಆಸ್ಪತ್ರೆಯಿಂದ ರೆಮ್ಡಿಸಿವಿರ್ ಸೇರಿ ಹಲವು ಔಷಧಿಗಳನ್ನೂ ಕದ್ದು ಸಾಗಿಸಿದ್ದೇನೆ. ಆದರೂ ಯಾರೂ ಏನೂ ಹೇಳಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ. ಇನ್ನು ಈ ಆಸ್ಪತ್ರೆಯಿಂದ ನಮಗೆ ಯಾವುದೇ ದೂರು ಬರಲಿಲ್ಲ ಎಂದು ರಾಜ್ಪುರ್ ಠಾಣೆಯ ಪೊಲೀಸ್ ಅಧಿಕಾರಿ ರಾಕೇಶ್ ಶಾ ಕೂಡ ತಿಳಿಸಿದ್ದಾರೆ. ಸದ್ಯಕ್ಕೆ ಈ ನರ್ಸ್ನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಇದನ್ನೂ ಓದಿ: ಸ್ಟಿರಾಯ್ಡ್ ನೀಡುತ್ತಿರುವುದರಿಂದ ಬ್ಲ್ಯಾಕ್ ಫಂಗಸ್ ಹೆಚ್ಚಳ: ಆರೋಗ್ಯ ಸಚಿವ ಡಾ. ಸುಧಾಕರ್