ಪ್ರಸ್ತುತ ಉತ್ತಮ ಬೆಳೆ ಇದ್ದರೂ ರೈತರು ಸಾಲ ಮಾಡುತ್ತಿದ್ದಾರೆ. ರೈತರನ್ನು ನಿರಂತರವಾಗಿ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿರುವ ಕಾರಣಗಳಲ್ಲಿ ಡಾಲರ್ ಆಸೆಯೂ ಒಂದಾಗಿದೆ. ಕಳೆದ ವರ್ಷ ಪಂಜಾಬ್ (Punjab) ರಾಜ್ಯವು ಪ್ರತಿ ರೈತ ಸರಾಸರಿ ಎರಡು ಲಕ್ಷ ಮೂರು ಸಾವಿರ ರೂಪಾಯಿ ಸಾಲದೊಂದಿಗೆ ದೇಶದಲ್ಲಿ ಮೂರನೇ ಸ್ಥಾನದಲ್ಲಿತ್ತು. ಆದರೆ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪಂಜಾಬ್‌ನ ರೈತ ದೇಶದಲ್ಲೇ ಅತಿ ಹೆಚ್ಚು ಸಾಲಗಾರನಾಗಿದ್ದಾನೆ. ಸದ್ಯ ಪಂಜಾಬ್ ರೈತನೊಬ್ಬ ಸರಾಸರಿ 2 ಲಕ್ಷ 95 ಸಾವಿರ ರೂಪಾಯಿ ಸಾಲ ಹೊಂದಿದ್ದಾನೆ.
ಪಂಜಾಬ್‌ನಲ್ಲಿ ಹುಟ್ಟಿದ ಮಗು ಬೆಳೆದಂತೆ ವಿದೇಶಕ್ಕೆ ಹೋಗುವ ಅವನ ಕನಸು ಕಾಣುತ್ತದೆ. ಈ ಪೈಕಿ ಹೆಚ್ಚಿನವರು ರೈತರ ಮಕ್ಕಳೇ ಆಗಿದ್ದಾರೆ. ತಮ್ಮ ಮಕ್ಕಳ ವಿದೇಶದ ಕನಸನ್ನು ನನಸು ಮಾಡಲು ರೈತ ಪಾಲಕರೂ ಹಿಂದೆ ಸರಿಯುವುದಿಲ್ಲ. ಮನೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಏನನ್ನೂ ಮಾಡಲು ಸಿದ್ಧರಿರುತ್ತಾರೆ.
ಅದರಂತೆ, ರೈತ ಪಾಲಕರು ಬ್ಯಾಂಕ್‌ಗಳು, ಲೇವಾದೇವಿದಾರರು ಅಥವಾ ಇತರ ಖಾಸಗಿ ಹಣಕಾಸು ಸಂಸ್ಥೆಗಳಿಂದ ದೊಡ್ಡ ಪ್ರಮಾಣದ ಬಡ್ಡಿಯೊಂದಿಗೆ ಸಾಲ ಪಡೆದುಕೊಳ್ಳುತ್ತಾರೆ. ಆ ಮೂಲಕ ಮಕ್ಕಳ ಬದುಕನ್ನ ಹಸನಾಗಿಸಲು ಪೋಷಕರು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಅಲ್ಲದೆ, ಇದನ್ನು ತೀರಿಸಲು ಪ್ರತಿ ವರ್ಷ ಬೆವರು ಸುರಿಸಿ ಬೆಳೆದ ಬೆಳೆಯನ್ನು ಸಾಲದಾತರಿಗೆ ನೀಡುತ್ತಾರೆ.
ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ವರದಿಯ ಪ್ರಕಾರ, 1997 ರಲ್ಲಿ ಸರಾಸರಿ 5,700 ಕೋಟಿ ರೂ.ಗಳಿದ್ದ ರೈತರ ಒಟ್ಟು ಸಾಲವು 2002 ರಲ್ಲಿ 9,886 ಕೋಟಿ ರೂ.ಗೆ ಏರಿಕೆಯಾಗಿತ್ತಯ. ಈ ಸಾಲದ ಮೊತ್ತವು 2005 ರಲ್ಲಿ 21,064 ಕೋಟಿ ರೂ. ಮತ್ತು 2015ರಲ್ಲಿ 35,000 ಕೋಟಿ ರೂ.ಗೆ ಏರಿಕೆಯಾಗಿತ್ತು. ಕಳೆದ ಎಂಟು ವರ್ಷಗಳಲ್ಲಿ ಈ ಅಂಕಿ ಅಂಶವು 74 ಸಾವಿರ ಕೋಟಿಗೆ ಏರಿಕೆಯಾಗಿದೆ.
ಇದನ್ನೂ ಓದಿ: 76ನೇ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಆಹ್ವಾನಿತರಾಗಿ ಮಂಡ್ಯದ ರೈತನಿಗೆ ಪಿಎಂಒ ಆಹ್ವಾನ
ಈ ಅಂಕಿಅಂಶಗಳು ಸಹಕಾರಿ ಬ್ಯಾಂಕ್‌ಗಳದ್ದಾಗಿದೆ. ಇದಲ್ಲದೇ ಕಮಿಷನ್ ಏಜೆಂಟ್ ಮತ್ತು ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ರೈತರು ಸಾಲ ಪಡೆಯುತ್ತಾರೆ. ಈ ಸಾಲವೂ ಸೇರಿದರೆ ಒಂದೂವರೆ ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಪಂಜಾಬ್‌ನ ಪ್ರತಿ ರೈತನಿಗೆ 2.95 ಲಕ್ಷ ರೂಪಾಯಿ ಸಾಲು ಇದ್ದು, ಇದು ರಾಷ್ಟ್ರೀಯ ಸರಾಸರಿ ಸಾಲ 74,121 ರೂಪಾಯಿಗಳಿಗಿಂತ ಹೆಚ್ಚು.
ರೈತರು ಅತಿ ಹೆಚ್ಚು ಸಾಲ ಮಾಡುವ ರಾಜ್ಯಗಳಲ್ಲಿ ಪಂಜಾಬ್ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗುಜರಾತ್ ಇದೆ. ಈ ರಾಜ್ಯದಲ್ಲಿ ಪ್ರತಿ ರೈತರ ಸರಾಸರಿ ಸಾಲ 2.28 ಲಕ್ಷ ರೂ. ಇದೆ. ಮೂರನೇ ಸ್ಥಾನದಲ್ಲಿರುವ ಹರಿಯಾಣ ರಾಜ್ಯದ ಪ್ರತಿ ರೈತನಿಗೆ ಸರಾಸರಿ 2.11 ಲಕ್ಷ ರೂ. ಸಾಲ ಇದೆ. ನಾಲ್ಕನೇ ಸ್ಥಾನದಲ್ಲಿರುವ ಆಂಧ್ರಪ್ರದೇಶದ ಪ್ರತಿ ರೈತನಿಗೆ ಸರಾಸರಿ 1.72 ಲಕ್ಷ ರೂ. ಸಾಲ ಇದೆ.
ಕಳೆದ ವರ್ಷ ಲೋಕಸಭೆಯಲ್ಲಿ ಕೃಷಿ ಸಚಿವ ನರೇಂದ್ರ ತೋಮರ್ ಮಂಡಿಸಿದ ಅಂಕಿ ಅಂಶಗಳಲ್ಲಿ ಆಂಧ್ರಪ್ರದೇಶದ ಪ್ರತಿ ರೈತನ ಸರಾಸರಿ ಸಾಲ 2,45,554 ರೂ. ಆಗಿತ್ತು. ಈ ರಾಜ್ಯ ಅಗ್ರಸ್ಥಾನದಲ್ಲಿದ್ದಾಗ ಪಂಜಾಬ್ ಮೂರನೇ ಸ್ಥಾನದಲ್ಲಿತ್ತು. ಪಂಜಾಬ್‌ನ ಒಬ್ಬ ರೈತನಿಗೆ ಎರಡು ಲಕ್ಷದ ಮೂರು ಸಾವಿರ ರೂಪಾಯಿ ಸಾಲ ಇತ್ತು. ಆದರೆ ಒಂದೇ ವರ್ಷದಲ್ಲಿ ಪಂಜಾಬ್ 3ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ಕುಸಿದಿದೆ.
ಫೆಬ್ರವರಿ 2016 ರಿಂದ 2023 ರವರೆಗೆ, ಪಂಜಾಬ್‌ನಿಂದ 11 ಲಕ್ಷ ಮಕ್ಕಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಆಹಾರ ಮತ್ತು ವಸತಿ ಮತ್ತು ಬಾಡಿಗೆ ಸೇರಿದಂತೆ ವಾರ್ಷಿಕ ಸರಾಸರಿ 15 ರಿಂದ 30 ಲಕ್ಷ ರೂ. ಅವಶ್ಯಕವಾಗಿದೆ. ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ಸರಾಸರಿ 15 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ನಾವು ಊಹಿಸಿದರೆ, ಪ್ರತಿ ವರ್ಷ 15 ಸಾವಿರ ಕೋಟಿ ರೂಪಾಯಿಗಳು ಪಂಜಾಬ್‌ನಿಂದ ಶುಲ್ಕದ ರೂಪದಲ್ಲಿ ಹೋಗುತ್ತಿವೆ.
ಬಿಕೆಯು ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಅವರ ಪ್ರಕಾರ, ರಾಜ್ಯದಲ್ಲಿ ಸುಮಾರು 85 ಪ್ರತಿಶತದಷ್ಟು ರೈತರು ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ಈ ಭೂಮಿಯಲ್ಲಿ ಬೆಳೆ ಬೆಳೆಯಲು ಕೂಡ ಅಷ್ಟೇ ಸಾಲದ ಹೊರೆ ಹೊರಬೇಕು. ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಇತ್ಯಾದಿಗಳ ಖರೀದಿಯೂ ಒಳಗೊಂಡಿರುತ್ತದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ನ ವರದಿಗೂ ಮುನ್ನವೇ ಲೋಕಸಭೆಯಲ್ಲಿ ವರದಿಯೊಂದನ್ನು ಮಂಡಿಸಲಾಗಿದೆ. ಅದರಂತೆ, ಪಂಜಾಬ್‌ನಲ್ಲಿ 2017 ರಿಂದ 2021ರ ವರೆಗೆ ಸಾಲದ ಹೊರೆ ತಾಳಲಾರದೆ 1,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತರಲ್ಲದೆ ಕೃಷಿ ಕಾರ್ಮಿಕರ ಸ್ಥಿತಿಯೂ ಹದಗೆಟ್ಟಿದೆ. ಪಟಿಯಾಲ ಮೂಲದ ಅರ್ಥಶಾಸ್ತ್ರಜ್ಞರ ಚಿಂತಕರ ಚಾವಡಿಯು ಕಳೆದ ವರ್ಷ ನಡೆಸಿದ ಅಧ್ಯಯನವು ಪಂಜಾಬ್‌ನ ಕೃಷಿ ಕಾರ್ಮಿಕರ ವಾರ್ಷಿಕ ಆದಾಯದ 24,000 ರೂ.ಗಿಂತ ನಾಲ್ಕು ಪಟ್ಟು ಸಾಲವನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ರಾಜ್ಯದಲ್ಲಿ 2015 ರಿಂದ 2019 ರ ವರೆಗೆ 898 ರೈತ ಕಾರ್ಮಿಕರು ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ರೈತರು ಮತ್ತು ರೈತ ಕಾರ್ಮಿಕರನ್ನು ಸಾಲದ ಸುಳಿಯಿಂದ ಪಾರು ಮಾಡಲು ಚುನಾವಣೆಗಳು ಸಮೀಪಿಸುತ್ತಿದ್ದಂತೆ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಕಾಲಕಾಲಕ್ಕೆ ಹಲವಾರು ಭರವಸೆಗಳನ್ನು ನೀಡುತ್ತವೆ. ಆದರೆ ಚುನಾವಣೆಯ ನಂತರ, ಭರವಸೆಗಳನ್ನು ಮರೆತು ರಾಜಕೀಯ ಬೇಳೆ ಬೇಯಿಸುವಲ್ಲಿ ನಿರತವಾಗಿರುತ್ತವೆ. ಅದಾಗ್ಯೂ, ಪ್ರಸ್ತುತ ಆಮ್ ಆದ್ಮಿ ಸರ್ಕಾರವು ಚುನಾವಣಾ ಭರವಸೆಗಳನ್ನು ಈಡೇರಿಸುವ ಸಲುವಾಗಿ ಪ್ರಯತ್ನಿಸುತ್ತಿದೆ.
ಪಂಜಾಬ್‌ನ ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಲ ಮನ್ನಾ ಯೋಜನೆಯ ಫಲಿತಾಂಶಗಳನ್ನು ನಾವು ನೋಡುವುದಾದರೆ, ರೈತರ ಭವಿಷ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೃಷಿ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಪರಿಣಾಮಕಾರಿ ಮತ್ತು ಸಮರ್ಥ ಕ್ರಮಗಳ ಅಗತ್ಯವಿದೆ.
ಪರಿಸರ ಸ್ನೇಹಿ ಮತ್ತು ಹೆಚ್ಚು ಇಳುವರಿ ಕೊಡುವ ಬೆಳೆಗಳತ್ತ ರೈತರನ್ನು ಪ್ರೋತ್ಸಾಹಿಸುವುದು, ಅಂತರ್ಜಲ ಕುಸಿತವನ್ನು ನಿಯಂತ್ರಿಸುವುದು ಮತ್ತು ಗದ್ದೆ ನಿರ್ವಹಣೆ ಸೇರಿದಂತೆ ಇನ್ನಿತರ ಸೂಕ್ತ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳುತ್ತಿದೆ. ಆದರೆ ಸರ್ಕಾರದ ಈ ಕ್ರಮಗಳು ರೈತರ ಭವಿಷ್ಯ ಎಷ್ಟರಮಟ್ಟಿಗೆ ಬದಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ