ಭಾರತದಲ್ಲಿ ವ್ಲಾದಿಮಿರ್ ಪುಟಿನ್: ರಷ್ಯಾ-ಭಾರತ ದ್ವಿಪಕ್ಷೀಯ ಸಂಬಂಧಕ್ಕಿದೆ ಶತಮಾನಗಳ ಇತಿಹಾಸ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 06, 2021 | 4:56 PM

ಭಾರತ ಹಾಗೂ ರಷ್ಯಾ ನಡುವಿನ ಭಾಂಧವ್ಯಕ್ಕೆ ಸುದೀರ್ಘ ಇತಿಹಾಸವೇ ಇದೆ. ಎರಡು ದೇಶಗಳ ಸುದೀರ್ಘ ಭಾಂಧವ್ಯದ ಮೇಲೆ ಬೆಳಕು ಚೆಲ್ಲುವ ವಿಶೇಷ ಲೇಖನ ಇಲ್ಲಿದೆ ನೋಡಿ.

ಭಾರತದಲ್ಲಿ ವ್ಲಾದಿಮಿರ್ ಪುಟಿನ್: ರಷ್ಯಾ-ಭಾರತ ದ್ವಿಪಕ್ಷೀಯ ಸಂಬಂಧಕ್ಕಿದೆ ಶತಮಾನಗಳ ಇತಿಹಾಸ
ನರೇಂದ್ರ ಮೋದಿ ಮತ್ತು ವ್ಲಾದಿಮಿರ್ ಪುಟಿನ್
Follow us on

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೆಹಲಿಗೆ ಭೇಟಿ ನೀಡಿದ್ದಾರೆ. ರಷ್ಯಾದೇಶ ಯಾವಾಗಲೂ ಭಾರತದ ಮಿತ್ರರಾಷ್ಟ್ರವಾಗಿಯೇ ವರ್ತಿಸಿದೆ. ಸಂಕಷ್ಟ ಕಾಲದಲ್ಲಿ ಭಾರತದ ರಕ್ಷಣೆ, ನೆರವಿಗೆ ನಿಲ್ಲುತ್ತಿದ್ದುದು ಇದೇ ರಷ್ಯಾ. ಆದರೆ, ಈಗ ಬದಲಾದ ಜಾಗತಿಕ ರಾಜಕೀಯದ ಸನ್ನಿವೇಶದ ಹಿನ್ನಲೆಯಲ್ಲಿ ಭಾರತದೊಂದಿಗಿನ ತನ್ನ ಭಾಂಧವ್ಯ ಗಟ್ಟಿಕೊಳಿಸಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೆಹಲಿಗೆ ಭೇಟಿ ನೀಡಿದ್ದಾರೆ. ಭಾರತ ಹಾಗೂ ರಷ್ಯಾ ನಡುವಿನ ಭಾಂಧವ್ಯಕ್ಕೆ ಸುದೀರ್ಘ ಇತಿಹಾಸವೇ ಇದೆ. ಎರಡು ದೇಶಗಳ ಸುದೀರ್ಘ ಭಾಂಧವ್ಯದ ಮೇಲೆ ಬೆಳಕು ಚೆಲ್ಲುವ ವಿಶೇಷ ಲೇಖನ ಇಲ್ಲಿದೆ ನೋಡಿ. ಭಾರತದ ಪಾಲಿನ ಅಪತ್ಬಾಂಧವ ರಾಷ್ಟ್ರವೆಂದರೆ, ಅದು ರಷ್ಯಾ. ಇದಕ್ಕೆ ಇತಿಹಾಸದಲ್ಲಿ ಅನೇಕ ನಿದರ್ಶನಗಳಿವೆ. ಆಮೆರಿಕ, ಇಂಗ್ಲೆಂಡ್‌, ಪ್ರಾನ್ಸ್​ನಂಥ ದೇಶಗಳು ಭಾರತದ ವಿರುದ್ಧ ನಿಂತಾಗಲೂ ರಷ್ಯಾ ಮಾತ್ರ ಭಾರತದ ಬೆಂಬಲ, ರಕ್ಷಣೆ, ನೆರವಿಗೆ ನಿಂತಿದೆ. 1971ರಲ್ಲಿ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಆಗಿನ ಪೂರ್ವ ಪಾಕಿಸ್ತಾನವಾದ ಬಾಂಗ್ಲಾದೇಶದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಯುದ್ಧ ಆರಂಭವಾಗಿತ್ತು.

ಆಗ ಜೋರ್ಡಾನ್, ಇರಾನ್, ಟರ್ಕಿ, ಫ್ರಾನ್ಸ್ ದೇಶಗಳು ತಮ್ಮ ಯುದ್ಧ ವಿಮಾನಗಳನ್ನು ಪಾಕಿಸ್ತಾನದ ಪರವಾಗಿ ಕಳಿಸಿದ್ದವು. ಆಮೆರಿಕ ಮತ್ತು ಇಂಗ್ಲೆಂಡ್‌ ದೇಶಗಳು ಪಾಕಿಸ್ತಾನಕ್ಕೆ ನೈತಿಕ ಬೆಂಬಲ ನೀಡುವ ಜೊತೆಗೆ ನೌಕಾಪಡೆಯನ್ನೂ ಕಳಿಸಲು ಮುಂದಾಗಿದ್ದವು. ಬ್ರಿಟನ್​ನ ಯುದ್ಧನೌಕೆಗಳು ಪಶ್ಚಿಮ ಕರಾವಳಿಯಲ್ಲಿ ಭಾರತೀಯ ನೌಕಾಪಡೆೆಗೆ ಸವಾಲು ಹಾಕಿದ್ದವು. ಆಮೆರಿಕ ಯುದ್ದನೌಕೆಗಳು ಬಂಗಾಳ ಕೊಲ್ಲಿ ಹತ್ತಿರಕ್ಕೆ ಬಂದಿದ್ದವು. ಭಾರತಕ್ಕೆ ಏಕಕಾಲಕ್ಕೆ ಅನೇಕ ರಾಷ್ಟ್ರಗಳಿಂದ ಸವಾಲು ಎದುರಾಗಿತ್ತು. ಈ ಎಲ್ಲ ಸವಾಲುಗಳನ್ನು ಆಗ ಮೆಟ್ಟಿ ನಿಲ್ಲುವುದು ಭಾರತಕ್ಕೆ ಪ್ರತಿಷ್ಠೆ ಹಾಗೂ ದೊಡ್ಡ ಸವಾಲಿನ ವಿಷಯವಾಗಿತ್ತು. ಇಂಥ ಸ್ಥಿತಿಯಲ್ಲಿ ಭಾರತಕ್ಕೂ ಪ್ರಬಲವಾದ ಸ್ನೇಹಿತರ ಅಗತ್ಯವೂ ಇತ್ತು. ಆಗ ಭಾರತ ತನ್ನ ಪರಮ ಮಿತ್ರರಾಷ್ಟ್ರಗಳಿಗೆ ತುರ್ತು ನೆರವು ಕೋರಿ ಸಂದೇಶ ಕಳಿಸಿತ್ತು. ಆಗ ಭಾರತದ ನೆರವಿಗೆ ಬಂದ ರಾಷ್ಟ್ರವೆಂದರೆ ರಷ್ಯಾ ಮಾತ್ರ. ರಷ್ಯಾ ಭಾರತದ ನೆರವಿಗೆ ತನ್ನ ನೌಕಾಪಡೆಯನ್ನು ಕಳಿಸಿತು. ಅಣ್ವಸ್ತ್ರ ಹೊತ್ತ ಜಲಾಂತರ್ಗಾಮಿ ನೌಕೆಗಳನ್ನು ಕಳಿಸಿತ್ತು. ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಭಾರತದ ಜಲಪ್ರದೇಶವನ್ನು ಸುತ್ತುವರಿದು, ಆಮೆರಿಕಾ, ಇಂಗ್ಲೆಂಡ್‌ನ ಯುದ್ಧನೌಕೆಗಳು ಭಾರತದ ಜಲಪ್ರದೇಶ ಪ್ರವೇಶ ಮಾಡದಂತೆ ರಕ್ಷಣೆ ನೀಡಿದ್ದವು. ಈ ಮೂಲಕ ನೇರವಾಗಿ ಭಾರತದೊಂದಿಗೆ ಆಮೆರಿಕ-ಇಂಗ್ಲೆಂಡ್‌ನ ನೌಕಾಪಡೆಗಳ ನಡುವಿನ ಘರ್ಷಣೆಯನ್ನು ತಪ್ಪಿಸಿತ್ತು. ರಷ್ಯಾ ಯಾವಾಗಲೂ ಭಾರತದ ನಂಬಿಕಸ್ಥ ಸ್ನೇಹಿತ ರಾಷ್ಟ್ರ. ಆಮೆರಿಕಾ ಯಾವಾಗಲೂ ಭಾರತದ ಹಿತಾಸಕ್ತಿಯನ್ನು ಕಡೆಗಣಿಸಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಲೇ ಬಂದಿದೆ.

ಈ ವರ್ಷದಲ್ಲಿ ಎರಡನೇ ಬಾರಿಗೆ ಪುಟಿನ್ ವಿದೇಶ ಪ್ರವಾಸ
ಭಾರತ-ರಷ್ಯಾದ ಈ ಸಂಬಂಧ, ಬಾಂಧವ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಾಗಿದ್ದಾರೆ. 21ನೇ ಭಾರತ-ರಷ್ಯಾ ವಾರ್ಷಿಕ ಸಭೆಯ ಭಾಗವಾಗಿ ಪುಟಿನ್-ಮೋದಿ ಭೇಟಿಯಾಗುತ್ತಿದ್ದಾರೆ. ಈ ವರ್ಷ ಎರಡನೇ ಬಾರಿಗೆ ವ್ಲಾದಿಮಿರ್ ಪುಟಿನ್ ರಷ್ಯಾದಿಂದ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಜೂನ್ ತಿಂಗಳಲ್ಲಿ ಜಿನೆವಾದಲ್ಲಿ ಆಮೆರಿಕ ಅಧ್ಯಕ್ಷ ಜೋ ಬೈಡೆನ್​ರನ್ನು ಭೇಟಿಯಾಗಿದ್ದರು. ಈಗ ಭಾರತಕ್ಕೆ ಬಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಆದರೆ ಜಿ-20 ಶೃಂಗಸಭೆ, ಹವಾಮಾನ ಬದಲಾವಣೆಯ ಬಗ್ಗೆ ಆಸ್ಟ್ರೇಲಿಯಾದಲ್ಲಿ ನಡೆದ COP26 ಸಭೆಗಳಿಗೆ ಪುಟಿನ್ ಹೋಗಿರಲಿಲ್ಲ. ಭಾರತದೊಂದಿಗಿನ ಗಟ್ಟಿ ಭಾಂಧವ್ಯದ ಕಾರಣದಿಂದ ಈ ವರ್ಷದಲ್ಲಿ 2ನೇ ಬಾರಿಗೆ ಪುಟಿನ್ ವಿದೇಶ ಪ್ರವಾಸ ಕೈಗೊಂಡು ಭಾರತಕ್ಕೆ ಬಂದಿದ್ದಾರೆ. 2019ರಲ್ಲಿ ದೆಹಲಿಗೆ ಪುಟಿನ್ ಬಂದಾಗ, ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ವಾಗತಿಸಿದ್ದರು.

ಭಾರತ-ರಷ್ಯಾ ನಡುವೆ ಶತಮಾನಗಳ ಭಾಂಧವ್ಯ
ಭಾರತ-ರಷ್ಯಾದ ನಡುವಿನ ಸಂಬಂಧ, ಬಾಂಧವ್ಯಕ್ಕೆ ಕೇವಲ 50 ವರ್ಷವಲ್ಲ, ಶತಮಾನಗಳಷ್ಟು ಹಳೆಯ ಇತಿಹಾಸವಿದೆ. ಭಾರತದ ವ್ಯಾಪಾರಿಗಳು ಶತಮಾನಗಳ ಹಿಂದೆಯೂ ರಷ್ಯಾದ ಮಾಸ್ಕೋ ಮೂಲಕ ಜಗತ್ತು ಸುತ್ತುತ್ತಿದ್ದರು. ರಷ್ಯಾದ ಪ್ರವಾಸಿಗಳು ಕೂಡ ಭಾರತದ ನಗರಗಳಿಗೆ ಭೇಟಿ ನೀಡುತ್ತಿದ್ದರು. ರಷ್ಯಾದ ಕೊನೆಯ ರಾಣಿ ಕ್ಯಾಥರೀನ್ ಗ್ರೇಟ್ ಭಗವದ್ಗೀತೆಯನ್ನು ಭಾಷಾಂತರ ಮಾಡಿ, ರಷ್ಯನ್ ಭಾಷೆಯಲ್ಲಿ ಪ್ರಕಟಿಸಿದ್ದರು. 19ನೇ ಶತಮಾನದಲ್ಲಿ ಟಸರ್ ಪೌಲ್, ಬ್ರಿಟಿಷ್ ಭಾರತವನ್ನು ಪ್ರವೇಶಿಸಿ, ಬ್ರಿಟಿಷರನ್ನು ದುರ್ಬಲಗೊಳಿಸಲು ಸಂಚು ರೂಪಿಸಿದ್ದರು. 1922ರಲ್ಲಿ ಸೋವಿಯತ್ ಯೂನಿಯನ್ ರಚನೆಯಾಯಿತು. ರಷ್ಯಾದ ಆಗಿನ ನಾಯಕ ಸ್ಟಾಲಿನ್, ಭಾರತದ ಶಾಂತಿಯುತ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ಕ್ರಾಂತಿಕಾರಿ ಶಕ್ತಿಗಳ ವಿರುದ್ಧದ ಏಜೆಂಟ್ ಎಂದು ಗಾಂಧೀಜಿ, ನೆಹರೂ ಅವರನ್ನು ಕರೆದಿದ್ದರು. ಗಾಂಧಿ, ನೆಹರು ಹೋರಾಟಗಳು ಏಕಸ್ವಾಮ್ಯ ಬಂಡವಾಳಶಾಹಿಯನ್ನು ಜೀವಂತವಾಗಿ ಇಟ್ಟುಕೊಳ್ಳುವ ಗುರಿ ಹೊಂದಿದೆ ಎಂದೇ ರಷ್ಯಾದ ಕಮ್ಯೂನಿಸ್ಟ್ ನಾಯಕ ಸ್ಟಾಲಿನ್ ಪ್ರತಿಪಾದಿಸುತ್ತಿದ್ದರು.

1947ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಾಗಲೂ ಸ್ಟಾಲಿನ್ ಪ್ರತಿಕೂಲ ನಿಲುವನ್ನೇ ಹೊಂದಿದ್ದರು. 1953ರಲ್ಲಿ ಸ್ಟಾಲಿನ್ ನಿಧನದ ಬಳಿಕೆ ಭಾರತ-ರಷ್ಯಾ ನಡುವೆ ಉತ್ತಮ ಬಾಂಧವ್ಯ ಆರಂಭವಾಯಿತು. 1955ರಲ್ಲಿ ರಷ್ಯಾದ ಆಗಿನ ಅಧ್ಯಕ್ಷ ನಿಕಿತಾ ಕ್ರಶ್ನೇವ್ ಭಾರತಕ್ಕೆ ಭೇಟಿ ನೀಡಿ, ಭಾರತ-ರಷ್ಯಾ ನಡುವೆ ಆರ್ಥಿಕ ಸಹಕಾರ, ಮೈತ್ರಿಗೆ ಅಡಿಗಲ್ಲು ಹಾಕಿದ್ದರು. ಮುಂದಿನ ಆರು ವರ್ಷಗಳ ಕಾಲ ರಷ್ಯಾ ದೇಶವು ಸ್ಟಾಲಿನ್ ನೀತಿ, ತೀರ್ಮಾನ, ಒಲವುಗಳಿಗೆ ವಿರುದ್ಧವಾದ ತೀರ್ಮಾನಗಳನ್ನು ತೆಗೆದುಕೊಂಡಿತ್ತು. ರಷ್ಯಾ ದೇಶವು ಜಮ್ಮು ಕಾಶ್ಮೀರದಲ್ಲಿ ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಿತು. ಪೋರ್ಚುಗೀಸರ ವಶದಲ್ಲಿದ್ದ ಗೋವಾದಲ್ಲಿ ಭಾರತದ ಸಾರ್ವಭೌಮತ್ವವನ್ನು ರಷ್ಯಾ ಎತ್ತಿ ಹಿಡಿಯಿತು. ಅದೇ ವೇಳೆ ರಷ್ಯಾ-ಚೀನಾ ನಡುವೆ ಬಿರುಕು ಮೂಡಿತು. ಚೀನಾ ದೇಶ ರಷ್ಯಾವನ್ನು ಅನುಮಾನದಿಂದ ನೋಡಲಾರಂಭಿಸಿತು. ರಷ್ಯಾದ ಅಧ್ಯಕ್ಷ ಕ್ರಶ್ನೇವ್​ ಚೀನಾದ ನೀತಿಗಳನ್ನು ಅನುಮಾನದಿಂದ ನೋಡಿದ್ದರು. ಚೀನಾದ ನಾಯಕ ಮಾವೋ ರಷ್ಯಾದೊಂದಿಗೆ ಸಂಬಂಧ ಕಡಿದುಕೊಳ್ಳಲು ತೀರ್ಮಾನಿಸಿದ್ದರು. 1962ರಲ್ಲಿ ಭಾರತ-ಚೀನಾದ ನಡುವೆ ಯುದ್ಧ ನಡೆದಾಗ ರಷ್ಯಾ ತಟಸ್ಥವಾಗಿ ಇರುವ ತೀರ್ಮಾನ ತೆಗೆದುಕೊಂಡಿತ್ತು. 1962ರಲ್ಲಿ ರಷ್ಯಾ, ಚೀನಾವನ್ನು ಬೆಂಬಲಿಸಲಿಲ್ಲ. ಇದಾದ ಬಳಿಕ ಭಾರತ ರಷ್ಯಾವನ್ನು ಹೆಚ್ಚಾಗಿ ನಂಬತೊಡಗಿತು. ಇಂದಿರಾಗಾಂಧಿ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಆಮೆರಿಕಾ ಭಾರತವನ್ನು ಬೆಂಬಲಿಸಲಿಲ್ಲ. ಆದರೆ, ರಷ್ಯಾ ಸರ್ಕಾರ ಭಾರತಕ್ಕೆ ಬೆಂಬಲ ನೀಡಿತ್ತು. ಸೋವಿಯತ್ ರಷ್ಯಾ ಒಕ್ಕೂಟ ಒಡೆದುಹೋದ ಬಳಿಕವೂ ದ್ವಿಪಕ್ಷೀಯ ಭಾಂಧವ್ಯಕ್ಕೆ ಯಾವುದೇ ತೊಂದರೆಯಾಗಲಿಲ್ಲ. ರಾಜೀವ್ ಗಾಂಧಿ ಕಾಲದಲ್ಲೂ ಭಾರತ-ರಷ್ಯಾ ನಡುವೆ ಉತ್ತಮ ಭಾಂಧವ್ಯವೇ ಮುಂದುವರಿಯಿತು. ಎರಡೂ ದೇಶಗಳ ಸಂಬಂಧದಲ್ಲಿ ಏರಿಳಿತ ಇದೆ ನಿಜ. ಆದರೆ, ಸುಮಧುರವಾಗಿ ಮುಂದುವರಿದಿದೆ.

ವಹಿವಾಟು ವಿಸ್ತರಣೆಯ ಗುರಿ
ಭಾರತ ಹಾಗೂ ರಷ್ಯಾದ ನಡುವೆ 2017ರಲ್ಲಿ 8.1 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರ, ವಾಣಿಜ್ಯ ವ್ಯವಹಾರ ನಡೆದಿವೆ. ಭಾರತವು 2.6 ಶತಕೋಟಿ ಡಾಲರ್​ನಷ್ಟು ರಫ್ತು ಮಾಡಿದ್ದರೆ, ರಷ್ಯಾದಿಂದ ಭಾರತ 5.48 ಶತಕೋಟಿ ಡಾಲರ್ ಸಾಮಗ್ರಿಗಳನ್ನು ಅಮದು ಮಾಡಿಕೊಂಡಿದೆ. 2025ರ ವೇಳೆಗೆ ಭಾರತ-ರಷ್ಯಾ ದ್ವಿಪಕ್ಷೀಯ ವ್ಯಾಪಾರ, ವಾಣಿಜ್ಯವನ್ನು 25 ಶತಕೋಟಿ ಡಾಲರ್​ಗೆ ಏರಿಸುವ ಗುರಿ ಹೊಂದಿವೆ. ರಾಜಕೀಯವಾಗಿಯೂ ಭಾರತ-ರಷ್ಯಾ ಅನೇಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಹಭಾಗಿಯಾಗಿವೆ. ವಿಶ್ವಸಂಸ್ಥೆ, ಜಿ-20, ಬ್ರಿಕ್ಸ್, ಶಾಂಘೈ ಸಹಕಾರ ಸಂಘಟನೆಯ ಒಕ್ಕೂಟದಲ್ಲಿ ಭಾರತ-ರಷ್ಯಾ ಸದಸ್ಯ ರಾಷ್ಟ್ರಗಳಾಗಿವೆ. ಶಾಂಘೈ ಸಹಕಾರ ಸಂಘಟನೆಗೆ ಭಾರತ ಸೇರ್ಪಡೆಯಾಗಲು ರಷ್ಯಾವೇ ಕಾರಣ. ಚೀನಾವನ್ನು ಕೌಂಟರ್ ಮಾಡಲು ಶಾಂಘೈ ಸಹಕಾರ ಸಂಘಟನೆಗೆ ಭಾರತ ಸೇರ್ಪಡೆಯಾಗುವಂತೆ ರಷ್ಯಾ ನೋಡಿಕೊಂಡಿದೆ.

ರಷ್ಯಾದಿಂದ ಶೇ 68ರಷ್ಟು ಮಿಲಿಟರಿ ಶಸ್ತ್ರಾಸ್ತ್ರ ಖರೀದಿ
ಇನ್ನು ರಕ್ಷಣಾ ಕ್ಷೇತ್ರದಲ್ಲೂ ರಷ್ಯಾದ ಮಿಲಿಟರಿ ಉತ್ಪನ್ನಗಳಿಗೆ ಭಾರತ ಎರಡನೇ ಅತಿದೊಡ್ಡ ಮಾರುಕಟ್ಟೆ, ಖರೀದಿದಾರ ದೇಶ. ಭಾರತ ತನ್ನ ಮಿಲಿಟರಿ ಸಾಮಗ್ರಿಗಳ ಪೈಕಿ ಶೇ 68 ರಷ್ಟನ್ನು ರಷ್ಯಾದಿಂದ ಅಮದು ಮಾಡಿಕೊಳ್ಳುತ್ತಿದೆ. ಆಮೆರಿಕಾದಿಂದ ಭಾರತ ಶೇ14 ರಷ್ಟನ್ನು ಮಾತ್ರ ಅಮದು ಮಾಡಿಕೊಳ್ಳುತ್ತಿದೆ. ಇಸ್ರೇಲ್​ನಿಂದ ಭಾರತವು ತನ್ನ ರಕ್ಷಣಾ ಸಾಮಗ್ರಿಗಳ ಪೈಕಿ ಶೇ 7.2 ರಷ್ಟುನ್ನು ಅಮದು ಮಾಡಿಕೊಳ್ಳುತ್ತಿದೆ. ‘ಇಂಡೊ-ರಷ್ಯನ್ ಇಂಟರ್ ಗವರ್ನಮೆಂಟಲ್ ಕಮಿಷನ್ ಮೂಲಕ ಭಾರತ ಹಾಗೂ ರಷ್ಯಾದ ಎಲ್ಲ ಇಲಾಖೆಗಳು ಪರಸ್ಪರ ಸಹಕಾರ, ಬಾಂಧವ್ಯ ಹೊಂದಿವೆ. ಇತ್ತೀಚೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಹೇಳಿರುವಂತೆ, ರಷ್ಯಾದ ಬಿಡಿಭಾಗಗಳು ಇಲ್ಲದೆ ನಮ್ಮ ಹಡಗುಗಳು ಸಮುದ್ರದಲ್ಲಿ ಸಂಚರಿಸಲ್ಲ. ನಮ್ಮ ವಿಮಾನಗಳು ಆಕಾಶದಲ್ಲಿ ಹಾರಾಟ ನಡೆಸಲ್ಲ.

ಭಾರತ-ರಷ್ಯಾ ಜಂಟಿಯಾಗಿ ಅನೇಕ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಿವೆ. ಬ್ರಹ್ಮೋಸ್ ಮಿಸೈಲ್, ಸುಖೋಯ್ ಯುದ್ಧ ವಿಮಾನ, ಕಮ್ಮೋವ್ ಹೆಲಿಕಾಪ್ಟರ್​ಗಳನ್ನು ಭಾರತ-ರಷ್ಯಾ ಜಂಟಿಯಾಗಿ ಅಭಿವೃದ್ದಿಪಡಿಸಿವೆ. ಭಾರತವು ರಷ್ಯಾದಿಂದ ಟಿ-90 ಭೀಷ್ಮ ಯುದ್ದ ಟ್ಯಾಂಕ್ ಖರೀದಿಸಿದೆ. ಅಕುಲ್-2 ಜಲಾಂತರ್ಗಾಮಿ ಅಣ್ವಸ್ತ್ರ ನೌಕೆ, ಐಎನ್ಎಸ್ ವಿಕ್ರಮಾದಿತ್ಯ ನೌಕೆಗಳನ್ನು ರಷ್ಯಾದಿಂದ ಭಾರತ ಪಡೆದಿದೆ.

ಏರ್ ಡಿಫೆನ್ಸ್ ಸಿಸ್ಟಮ್ಸ್ ಖರೀದಿ
ಎಲ್ಲಕ್ಕಿಂತ ಮುಖ್ಯವಾಗಿ ಇದೇ ತಿಂಗಳಲ್ಲಿ ರಷ್ಯಾ ದೇಶವು ಭಾರತಕ್ಕೆ ಎಸ್‌-400 ಏರ್ ಡಿಫೆನ್ಸ್ ಸಿಸ್ಟಮ್ಸ್ ನೀಡುತ್ತಿದೆ. ಭಾರತದ ನಗರಗಳಿಗೆ ಶತ್ರುಗಳ ಕ್ಷಿಪಣಿ ದಾಳಿಯಿಂದ ಇದು ರಕ್ಷಣೆ ನೀಡುತ್ತದೆ. ಭಾರತದ ದೆಹಲಿ, ಮುಂಬೈನಂಥ ನಗರಗಳನ್ನು ಅಣ್ವಸ್ತ್ರ ದಾಳಿಯಿಂದ ರಕ್ಷಿಸುವ ಸಾಮರ್ಥ್ಯ ಎಸ್‌-400 ಸಿಸ್ಟಮ್ಸ್​ಗೆ ಇದೆ. ಸುಮಾರು 36 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತವು ರಷ್ಯಾದಿಂದ ಎಸ್‌-400 ಏರ್ ಡಿಫೆನ್ಸ್ ಸಿಸ್ಟಮ್ಸ್ ಖರೀದಿಸುತ್ತಿದೆ. ಈ ಖರೀದಿ ಒಪ್ಪಂದವನ್ನು ಅಮೆರಿಕ ವಿರೋಧಿಸುತ್ತಿದೆ. ಆಮೆರಿಕಾ ದೇಶ ತನ್ನಿಂದಲೇ ಭಾರತವು ಏರ್ ಡಿಫೆನ್ಸ್ ಸಿಸ್ಟಮ್ಸ್ ಖರೀದಿಸಬೇಕೆಂದು ಒತ್ತಡ ಹಾಕುತ್ತಿದೆ. ಆದರೆ, ಭಾರತವು ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ.

ಭಾರತಕ್ಕೆ ಚೀನಾ, ಪಾಕಿಸ್ತಾನದ ವೈಮಾನಿಕ ದಾಳಿಯನ್ನು ತಡೆಯಲು ಎಸ್‌-400 ಏರ್ ಡಿಫೆನ್ಸ್ ಸಿಸ್ಟಮ್ಸ್ ಅಗತ್ಯ ಇದೆ. ಆದರೆ, ಆಮೆರಿಕಾ, ಭಾರತವು ತನ್ನ ಮಿಲಿಟರಿ ಶಸ್ತ್ರಾಸ್ತ್ರಗಳಿಗಾಗಿ ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕೆಂದು ಒತ್ತಡ ಹೇರುತ್ತಿದೆ. ಆಮೆರಿಕಾವು ತನ್ನ ವಿರೋಧಿಗಳನ್ನು ಹಣಿಯಲೆಂದೇ ಜಾರಿಗೆ ತಂದಿರುವ ಕಾಟ್ಸಾ ಕಾಯ್ದೆಯ (Countering Adviceries Through Sanction Act – CAATSA) ಮೂಲಕ ತನ್ನ ಎದುರಾಳಿಯಾಗಿರುವ ರಷ್ಯಾ ಸೇರಿದಂತೆ ಇರಾನ್, ಉತ್ತರ ಕೊರಿಯಾದಂಥ ಶತ್ರು ರಾಷ್ಟ್ರಗಳನ್ನು ಎದುರಿಸಲು ಮುಂದಾಗಿದೆ. ಅಂಥ ದೇಶಗಳ ಜೊತೆಗೆ ಮಿಲಿಟರಿ ವ್ಯಾಪಾರ ನಡೆಸುವ ರಾಷ್ಟ್ರಗಳ ಮೇಲೆ ಆರ್ಥಿಕ ನಿರ್ಬಂಧ ವಿಧಿಸುವುದು ಈ ಕಾಯ್ದೆಯ ಉದ್ದೇಶ. ಟರ್ಕಿ ದೇಶವು ರಷ್ಯಾದಿಂದ ಎಸ್‌-400 ಏರ್ ಡಿಫೆನ್ಸ್ ಸಿಸ್ಟಮ್ಸ್ ಖರೀದಿಸಿದ್ದಕ್ಕಾಗಿ ಟರ್ಕಿ ಮೇಲೆ ಆಮೆರಿಕಾ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಆದರೆ, ಟರ್ಕಿಯ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿದ್ದಷ್ಟೇ ಸುಲಭವಾಗಿ ಈಗಿನ ಸ್ಥಿತಿಯಲ್ಲಿ ಭಾರತದ ಮೇಲೆ ಆರ್ಥಿಕ ನಿರ್ಬಂಧ ವಿಧಿಸುವುದು ಆಮೆರಿಕಾಗೂ ಸುಲಭವಿಲ್ಲ. ಭಾರತವು ಈಗ ಆಮೆರಿಕಾದ ಸ್ಟ್ರಾಟಜಿಕ್ ಪಾರ್ಟನರ್ ಹಾಗೂ ಆಮೆರಿಕಾದ ಉತ್ಪನ್ನಗಳಿಗೆ ಭಾರತವೇ ಅತಿ ದೊಡ್ಡ ಮಾರುಕಟ್ಟೆ. ಹೀಗಾಗಿ ಆರ್ಥಿಕ ನಿರ್ಬಂಧ ವಿಧಿಸದೇ, ಭಾರತಕ್ಕೆ ಕಾಟ್ಸಾ ಕಾಯಿದೆಯಿಂದ ವಿನಾಯಿತಿ ನೀಡುವುದೊಂದೇ ಆಮೆರಿಕಾದ ಮುಂದಿರುವ ಮಾರ್ಗ.

ಭಾರತದ ಪ್ರಧಾನಿ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯಲ್ಲಿ ಸಹಜವಾಗಿಯೇ ಎಸ್‌-400 ಏರ್ ಡಿಫೆನ್ಸ್ ಖರೀದಿ, ಚೀನಾ, ಆಮೆರಿಕಾದ ವಿಚಾರಗಳು ಪ್ರಸ್ತಾಪವಾಗಿರುತ್ತಾವೆ. ರಷ್ಯಾ ಈಗ ಚೀನಾದ ಮೇಲೆ ಆರ್ಥಿಕವಾಗಿ ಅವಲಂಬಿತವಾಗುತ್ತಿದೆ. ರಷ್ಯಾ, ಚೀನಾದ ಸಮಾನ ಶತ್ರು ಅಂದರೇ, ಆಮೆರಿಕಾ. ಆದರೇ, ಎರಡು ದೇಶಗಳು ಬೇರೆ ಬೇರೆ ದಿಕ್ಕಿನಲ್ಲಿ ಹೋರಾಟ ಮಾಡುತ್ತಿವೆ. ಮಧ್ಯ ಏಷ್ಯಾದಲ್ಲಿ ಚೀನಾದ ಮಿಲಿಟರಿ ಶಕ್ತಿ ಹೆಚ್ಚಾಗುತ್ತಿದೆ. ಚೀನಾ ಬೆಳೆದಷ್ಟು ರಷ್ಯಾದ ಪ್ರಭಾವ, ಶಕ್ತಿ ಕುಗ್ಗುತ್ತೆ. ಆಮೆರಿಕಾ ಕೂಡ ಪ್ರಮುಖ ರಾಷ್ಟ್ರಗಳನ್ನು ತನ್ನ ಮೈತ್ರಿ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುತ್ತಿದೆ. ಆಮೆರಿಕಾ, ಜಪಾನ್ , ಆಸ್ಟ್ರೇಲಿಯಾ ದೇಶಗಳ ಕ್ವಾಡ್ ರಾಷ್ಟ್ರಗಳ ಕೂಟದಲ್ಲಿ ಭಾರತ ಸದಸ್ಯ ರಾಷ್ಟ್ರವಾಗಿದೆ. ಚೀನಾ ಮಹತ್ವಾಂಕ್ಷೆಯ ರಾಷ್ಟ್ರವಾಗಿದೆ. ಹೀಗಾಗಿ ಇಂಥ ಸ್ಥಿತಿಯಲ್ಲಿ ಭಾರತವನ್ನು ತನ್ನ ಸ್ನೇಹಿತ ರಾಷ್ಟ್ರವಾಗಿ ಉಳಿಸಿಕೊಳ್ಳುವುದು ರಷ್ಯಾಗೂ ಮುಖ್ಯ. ಕೇವಲ ತನ್ನ ಮಿಲಿಟರಿ ಶಸ್ತ್ರಾಸ್ತ್ರ ಖರೀದಿದಾರನಾಗಿಯೇ ನೋಡದೇ, ಮಿತ್ರನಾಗಿ ಭಾರತವನ್ನು ಉಳಿಸಿಕೊಳ್ಳಲು ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​; ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿ
ಇದನ್ನೂ ಓದಿ: ಅಫ್ಘಾನಿಸ್ತಾನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ

Published On - 4:55 pm, Mon, 6 December 21