ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದೆರೆಡು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ. ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಕಂಪನಿಯನ್ನ ಯಂಗ್ ಇಂಡಿಯಾ ಕಂಪನಿಯು ಖರೀದಿಸಿದ ಪ್ರಕರಣದಲ್ಲಿ ಆಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಆದರೇ, ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಇ.ಡಿ. ಸಮನ್ಸ್ ನೀಡಿದೆ. ಆದರೇ, ಸೋನಿಯಾಗಾಂಧಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋವಿಡ್ ಇರುವ ಸೋನಿಯಾ ಇ.ಡಿ. ವಿಚಾರಣೆಗೆ ಬರುತ್ತಾರಾ?
ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಕಂಪನಿಯನ್ನು ಬರೀ 50 ಲಕ್ಷ ರೂಪಾಯಿ ಬಂಡವಾಳ ಹೊಂದಿದ್ದ ಯಂಗ್ ಇಂಡಿಯಾ ಕಂಪನಿಯು 2010ರಲ್ಲಿ ಖರೀದಿಸಿದೆ. ಆದರೇ, ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಕಂಪನಿಯ ಬಳಿ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿ ಆಸ್ತಿಯೇ ಇತ್ತು. ಹೀಗಾಗಿ 2 ಸಾವಿರ ಕೋಟಿ ರೂಪಾಯಿ ಆಸ್ತಿ ಇರುವ ಕಂಪನಿಯನ್ನು ಕೇವಲ 50 ಲಕ್ಷ ರೂಪಾಯಿ ಬಂಡವಾಳ ಹೊಂದಿದ್ದ ಯಂಗ್ ಇಂಡಿಯಾ ಕಂಪನಿಯು ಖರೀದಿಸಿದ್ದು ಹೇಗೆ ಎಂಬುದು ಅವ್ಯವಹಾರದ ತಿರುಳು.
ಎಜೆಎಲ್ ಕಂಪನಿಯ ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದೆರೆಡು ದಿನಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿರನ್ನು ವಿಚಾರಣೆ ನಡೆಸಿದ್ದಾರೆ. ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಂಬರ್ ಒನ್ ಆರೋಪಿ. ಸೋನಿಯಾಗಾಂಧಿ ಅವರಿಗೂ ಇ.ಡಿ. ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಹೊಸದಾಗಿ ಸಮನ್ಸ್ ನೀಡಿದ್ದಾರೆ. ಜೂನ್ 23 ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ. ಆದರೇ, ಸೋನಿಯಾ ಗಾಂಧಿ ಅವರಿಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಸೋನಿಯಾ ಗಾಂಧಿ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಗಳಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನ್ 23ರೊಳಗೆ ಸೋನಿಯಾಗಾಂಧಿ ಕೊರೊನಾದಿಂದ ಗುಣಮುಖರಾದರೇ, ಇ.ಡಿ. ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬಹುದು. ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿ ಸಿದ್ದವಾಗಿದ್ದಾರೆ ಎಂದೇ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕೊರೊನಾ ಹೊರತುಪಡಿಸಿ ಬೇರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೇ, ಜೂನ್ 23 ರಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ.
ಹೀಗಾಗಿ ಮತ್ತಷ್ಟು ಕಾಲಾವಕಾಶ ಕೊಡಿ ಎಂದು ಸೋನಿಯಾಗಾಂಧಿ, ಇ.ಡಿ. ಅಧಿಕಾರಿಗಳನ್ನು ಕೇಳಬಹುದು. ಈಗ ಮುಖ್ಯವಾಗಿ ಪುತ್ರ ರಾಹುಲ್ ಗಾಂಧಿರನ್ನು ವಿಚಾರಣೆ ನಡೆಸುತ್ತಿರುವ ಇ.ಡಿ. ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡಿಕೊಂಡು ಇ.ಡಿ. ಎದುರು ವಿಚಾರಣೆಗೆ ಹಾಜರಾಗಬೇಕೇ ಬೇಡವೇ ಎಂಬ ಬಗ್ಗೆಯೂ ಸೋನಿಯಾ ಗಾಂಧಿ ನಿರ್ಧಾರ ಕೈಗೊಳ್ಳಬಹುದು. ರಾಹುಲ್ ಗಾಂಧಿರನ್ನು ವಿಚಾರಣೆ ಬಳಿಕ ಬಂಧಿಸಿದರೇ, ತಾವೇನು ಮಾಡಬೇಕು ಎಂಬುದನ್ನು ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುವರು.
ಇ.ಡಿ. ಸಮನ್ಸ್ ಪ್ರಕಾರ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದರೇ, ಬಂಧನದ ಭೀತಿ ಇದ್ದಾಗ, ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ಇದೆ. ಹೀಗಾಗಿ ಸೋನಿಯಾ ಗಾಂಧಿ ಅವರು, ವಿಚಾರಣೆಗೆ ಹೋದಾಗ ತಮ್ಮನ್ನು ಬಂಧಿಸಬಹುದು, ಹೀಗಾಗಿ ತಮಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಎಂದು ಕೋರಿ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ನಿರೀಕ್ಷಣಾ ಜಾಮೀನು ಪಡೆದು ಇ.ಡಿ. ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರೇ, ಆಗ ಇ.ಡಿ. ಅಧಿಕಾರಿಗಳಿಗೆ ಬಂಧಿಸಲು ಆಗಲ್ಲ.
ಆದರೇ, ಸೋನಿಯಾ ಪುತ್ರ ರಾಹುಲ್ ಮಾತ್ರ ನಿರೀಕ್ಷಣಾ ಜಾಮೀನು ಪಡೆಯದೇ ಸದ್ಯ ಇ.ಡಿ. ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಜೈಲಿಗೆ ಕಳಿಸಿದರೂ, ಜೈಲಿಗೆ ಹೋಗಲು ರಾಹುಲ್ ಸಿದ್ದವಾಗಿರಬಹುದು. ಆದರೇ, ಸೋನಿಯಾಗಾಂಧಿಗೆ ಈಗ 75 ವರ್ಷ ವಯಸ್ಸು. ಕಳೆದ 10 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ನಿರೀಕ್ಷಣಾ ಜಾಮೀನು ಪಡೆಯುವ ಬಗ್ಗೆ ಆಲೋಚಿಸಬಹುದು. ಇಲ್ಲವೇ ಜೈಲಿಗೆ ಹೋಗುವುದರಿಂದ ರಾಜಕೀಯ ಅನುಕಂಪ ಗಳಿಸಬಹುದು ಎಂಬ ಪ್ಲ್ಯಾನ್ ಇದ್ದರೇ, ನಿರೀಕ್ಷಣಾ ಜಾಮೀನು ಪಡೆಯದೇ ಇ.ಡಿ. ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬಹುದು.
ಸದ್ಯ ಯಂಗ್ ಇಂಡಿಯಾ ಕಂಪನಿಯ ಖಚಾಂಚಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ನೇಮಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಂದೆರೆಡು ತಿಂಗಳ ಹಿಂದೆ ಇ.ಡಿ. ಅಧಿಕಾರಿಗಳು ಸಮನ್ಸ್ ನೀಡಿ ವಿಚಾರಣೆ ನಡೆಸಿದ್ದರು. ಆಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿಲ್ಲ. ಹೀಗಾಗಿ ಈಗ ರಾಹುಲ್, ಸೋನಿಯಾರನ್ನು ಇ.ಡಿ. ಬಂಧಿಸಲ್ಲ. ವಿಚಾರಣೆ ನಡೆಸಿ ಮನೆಗೆ ಕಳಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಎಲ್ಲವೂ ಈಗ ಇ.ಡಿ. ತನಿಖಾಧಿಕಾರಿ ಕೈಯಲ್ಲಿ ಇದೆ.
ಒಂದು ವೇಳೆ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗದೇ, ತನಿಖೆಗೆ ಅಸಹಕಾರ ನೀಡಿದರೇ, ತನಿಖಾಧಿಕಾರಿ ಆರೋಪಿಯಾಗಿರುವ ಸೋನಿಯಾ ಗಾಂಧಿರನ್ನು ಬಂಧಿಸಿಯೇ ವಿಚಾರಣೆ ನಡೆಸುವ ತೀರ್ಮಾನ ಕೈಗೊಳ್ಳಬಹುದು. ತನಿಖೆಗೆ ಸಹಕಾರ ನೀಡಿದರೇ, ಬಂಧನದಿಂದ ತಪ್ಪಿಸಿಕೊಳ್ಳಬಹುದು. ಎರಡೂ ಅವಕಾಶಗಳು ಸೋನಿಯಾಗಾಂಧಿ ಮುಂದೆ ಇವೆ.
ಹಗರಣದ ಹೂರಣ ಏನು?
ಈ ಎಲ್ಲ ಪ್ರಶ್ನೆಗಳಿಗೂ ಸೋನಿಯಾ ಗಾಂಧಿ ಇ.ಡಿ. ವಿಚಾರಣೆ ವೇಳೆ ಉತ್ತರಿಸಬೇಕಾಗುತ್ತೆ. ತಮ್ಮ ವಕೀಲರಿಂದ ಕಾನೂನು ಸಲಹೆ ಪಡೆದು ಅದರಂತೆ ಸೋನಿಯಾಗಾಂಧಿ ಪ್ರಶ್ನೆಗಳಿಗೆ ಉತ್ತರ ನೀಡಬಹುದು.
ಆದರೇ, ಈ ಆರೋಪಗಳಿಗೆ ಕಾಂಗ್ರೆಸ್ ನಾಯಕರು ಪ್ರತ್ಯುತ್ತರ ನೀಡಿದ್ದಾರೆ. ಎಜೆಎಲ್ ಕಂಪನಿಯನ್ನು ಯಂಗ್ ಇಂಡಿಯಾ ಕಂಪನಿ ಖರೀದಿಸಿದ ಮೇಲೆ ಎಜೆಎಲ್ ನ ಯಾವುದೇ ಆಸ್ತಿಗಳನ್ನು ಮಾರಿಲ್ಲ. ಎಜೆಎಲ್ ಕಂಪನಿಯ ಷೇರುಗಳನ್ನು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಪಕ್ಷ ಹೊಂದುವಂತಿರಲಿಲ್ಲ. ಹೀಗಾಗಿ ಹೊಸ ಕಂಪನಿಯಾಗಿ ಯಂಗ್ ಇಂಡಿಯಾ ಕಂಪನಿಯನ್ನು ಹುಟ್ಟು ಹಾಕಿ ಯಂಗ್ ಇಂಡಿಯಾ ಕಂಪನಿಯೇ ಎಜೆಎಲ್ ಷೇರುಗಳನ್ನು ಖರೀದಿಸಿದೆ ಎಂದು ಕಾಂಗ್ರೆಸ್ ನಾಯಕರು ಸಮರ್ಥನೆ ನೀಡುತ್ತಿದ್ದಾರೆ.
ಯಂಗ್ ಇಂಡಿಯಾ ಬೈಲಾ ಪ್ರಕಾರ, ಸದಸ್ಯರಾರ ಟಿಎ, ಡಿಎ ಕೂಡ ಪಡೆಯಲು ಅವಕಾಶವಿಲ್ಲ. ರಾಹುಲ್ , ಸೋನಿಯಾ ಯಂಗ್ ಇಂಡಿಯಾದಿಂದ ಯಾವುದೇ ಆರ್ಥಿಕ ಲಾಭ ಪಡೆದಿಲ್ಲ. ಎಜೆಎಲ್ ಮತ್ತು ಯಂಗ್ ಇಂಡಿಯಾ ಕಂಪನಿಗಳು ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರ ವೈಯಕ್ತಿಕ ಆಸ್ತಿಗಳಲ್ಲ. ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಎಜೆಎಲ್ ನಡಿ ಇದ್ದ ನ್ಯಾಷನಲ್ ಹೆರಾಲ್ಡ್, ನವಜೀವನ್, ಉರ್ದುವಿನ ಕ್ವಾಮಿ ಅವಾಜ್ ಪತ್ರಿಕೆಗಳನ್ನು ಮುನ್ನಡೆಸಲು ಕಾಂಗ್ರೆಸ್ ಪಕ್ಷದಿಂದ ಹಣಕಾಸಿನ ಸಹಾಯ ಮಾಡಲಾಗಿತ್ತು. ಮೂರು ಪತ್ರಿಕೆಗಳು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ, ಜಾತ್ಯಾತೀತತೆ ಪ್ರಚಾರ ಮಾಡುವ ಪತ್ರಿಕೆಗಳು. ಹೀಗಾಗಿ ಈ ಪತ್ರಿಕೆಗಳನ್ನು ಉಳಿಸಿ, ಬೆಳೆಸಲು ಕಾಂಗ್ರೆಸ್ ಬಡ್ಡಿರಹಿತ ಸಾಲ ನೀಡಿದೆ ಎಂದು ಕಾಂಗ್ರೆಸ್ ನಾಯಕರು ತಮ್ಮ ಜವಾಬು ನೀಡಿದ್ದಾರೆ.
Published On - 7:08 pm, Tue, 14 June 22