
ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023 ರಲ್ಲಿ ಹರ್ಮನ್ಪ್ರೀತ್ ಕೌರ್ ನಾಯತ್ವದ ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಕೇಪ್ಟೌನ್ನ ನ್ಯೂಲೆಂಡ್ಸ್ನಲ್ಲಿ ನಡೆದ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಮಹಿಳೆಯರು 7 ವಿಕೆಟ್ಗಳಿಂದ ಗೆದ್ದು ಬೀಗಿದರು.

ಜೆಮಿಯಾ ರೋಡ್ರಿಗಸ್ (Jemimah Rodrigues) ಅವರ ಆಕರ್ಷಕ ಅರ್ಧಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಮ್ಯಾಚ್ ವಿನ್ನಿಂಗ್ ಆಟವಾಡಿದ ಇವರು ಕೇವಲ 38 ಎಸೆತಗಳಲ್ಲಿ ಅಜೇಯ 53 ರನ್ ಸಿಡಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಜವೆರಿಯಾ ಖಾನ್ (8) ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 42 ಆಗುವ ಹೊತ್ತಿಗೆ 12 ರನ್ ಗಳಿಸಿದ್ದ ಮುನೀಬಾ ಅಲಿ ಔಟಾದರೆ, ನಿದಾ ದರ್ ಬಂದ ಬೆನ್ನಲ್ಲೇ ಶೂನ್ಯಕ್ಕೆ ನಿರ್ಗಮಿಸಿದರು. ಅಮೀನ್ ಆಟ 11 ರನ್ಗೆ ಅಂತ್ಯವಾಯಿತು.

ಹೀಗೆ ಪಾಕ್ 68 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ನಾಯಕಿ ಬಿಸ್ಮಾ ಮರೂಫ್ ಜೊತೆಯಾದ ಆಯೇಶಾ ನಸೀಂ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಕೊನೆಯ ವರೆಗೂ ಆಡಿದ ಈ ಜೋಡಿ ಭಾರತೀಯ ಬೌಲರ್ಗಳನ್ನು ಕಾಡಿದರು. ಮರೂಫ್ 55 ಎಸೆತಗಳಲ್ಲಿ 7 ಫೋರ್ನೊಂದಿಗೆ ಅಜೇಯ 68 ರನ್ ಚಚ್ಚಿದರೆ, ನಸೀಂ ಕೇವಲ 25 ಎಸೆತಗಳಲ್ಲಿ 2 ಫೊರ್, ಸಿಕ್ಸರ್ನೊಂದಿಗೆ 43 ರನ್ ಬಾರಿಸಿ ಅಜೇಯರಾಗಿ ಉಳಿದರು.

ಪಾಕಿಸ್ತಾನ ಮಹಿಳಾ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ಭಾರತ ಪರ ರಾಧಾ ಯಾದವ್ 2, ದೀಪ್ತಿ ಶರ್ಮಾ ಹಾಗೂ ಪೂಜಾ ತಲಾ 1 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಶೆಫಾಲಿ ವರ್ಮಾ ಜೊತೆಗೂಡಿ ಯಸ್ತಿಕಾ ಭಾಟಿಯ (17) 38 ರನ್ಗಳ ಕೊಡುಗೆ ನೀಡಿದರು. ಶಫಾಲಿ 33 ರನ್ ಗಳಿಸಿದರು. ನಾಯಕಿ ಹರ್ಮನ್ಪ್ರೀತ್ ಕೌರ್ 16 ರನ್ ಗಳಿಸಿದರು. ಒಂದು ಹಂತದಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಭರ್ಜರಿ ಅಟವಾಡಿದ ಜೆಮಿಯಾ ಸೋಲಿನ ಅಪಾಯದಿಂದ ತಂಡವನ್ನು ಪಾರು ಮಾಡಿದರು. ಇವರಿಗೆ ರಿಚ್ಚಾ ಘೋಷ್ ಉತ್ತಮ ಸಾಥ್ ನೀಡಿದರು.

ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೆಮಿಯಾ ಹಾಗೂ ರಿಚ್ಚಾ ಇನ್ನೂ ಒಂದು ಓವರ್ ಬಾಕಿ ಇರುವಂತೆ ಗೆಲುವು ತಂದಿಟ್ಟರು. ಭಾರತ 19 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿ 7 ವಿಕೆಟ್ಗಳಿಂದ ಗೆದ್ದು ಬೀಗಿತು ಜೆಮಿಯಾ 38 ಎಸೆತಗಳಲ್ಲಿ 8 ಫೋರ್ನೊಂದಿಗೆ ಅಜೇಯ 53 ಹಾಗೂ ರಿಚ್ಚಾ 20 ಎಸೆತಗಳಲ್ಲಿ 5 ಫೋರ್ನೊಂದಿಗೆ ಅಜೇಯ 31 ರನ್ ಸಿಡಿಸಿದರು.