INDW vs AUSW: ಹರ್ಮನ್-ಜೆಮಿಮಾ ಕೆಚ್ಚೆದೆಯ ಹೋರಾಟಕ್ಕೆ ಮನಸೋತ ಭಾರತೀಯರು: ಫೋಟೋ ನೋಡಿ
Harmanpreet Kaur and Jemimah Rodrigues: ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡರೂ ಹರ್ಮನ್ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗಸ್ ಆಡಿದ ಆಟಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮನಸೋತರು.
1 / 8
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳೆ ಟಿ20 ವಿಶ್ವಕಪ್ನಲ್ಲಿ ಫೈನಲ್ಗೇರಲು ಭಾರತ ಮಹಿಳಾ ತಂಡ ವಿಫಲವಾಗಿದೆ. ನ್ಯೂಲೆಂಡ್ಸ್ನ ಕೇಪ್ಟೌನ್ನಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಗುರುವಾರ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಹರ್ಮನ್ ಪಡೆಯ ವಿಶ್ವಕಪ್ ಗೆಲ್ಲುವ ಕನಸು ನುಚ್ಚುನೂರಾಯಿತು.
2 / 8
ಕೊನೆಯ ಓವರ್ ವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಗೆಲುವಿಗಾಗಿ ಹೋರಾಟ ನಡೆಸಿತು. ಅದರಲ್ಲೂ 28 ರನ್ಗೆ 3 ವಿಕೆಟ್ ಕಳೆದುಕೊಂಡ ಸಂದರ್ಭ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗಸ್ ಜೊತೆಯಾಗಿ ಇನ್ನಿಂಗ್ಸ್ ಕಟ್ಟಿದ ರೀತಿ ಅದ್ಭುತವಾಗಿತ್ತು.
3 / 8
4ನೇ ಓವರ್ ಹೊತ್ತಿಗೆ ಜೊತೆಯಾದ ಕೌರ್-ಜೆಮಿಮಾ 10.2 ಓವರ್ ವರೆಗೂ ಆಡಿದರು. 69 ರನ್ಗಳ ಕಾಣಿಕೆ ನೀಡಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಪ್ರತಿಯೊಂದು ಎಸೆತದಲ್ಲೂ ರನ್ ಹುಡುಕಿದ ಇವರು ಡಾಟ್ ಮಾಡಿದ್ದು ಕೇವಲ 2 ಎಸೆತಗಳನ್ನು ಮಾತ್ರ. ಇವರಿಬ್ಬರ ಕೆಚ್ಚೆದೆಯ ಹೋರಾಟಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮನಸೋತರು.
4 / 8
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಓಪನರ್ಗಳಾದ ಬೆತ್ ಮೂನಿ ಮತ್ತು ಅಲಿಸ್ಸಾ ಹೀಲಿ ಭರ್ಜರಿ ಆರಂಭ ಒದಗಿಸಿ ಅರ್ಧಶತಕದ ಜೊತೆಯಾಟ ಆಡಿದರು. ಹೀಲಿ 26 ಎಸೆತಗಳಲ್ಲಿ 25 ರನ್ ಗಳಿಸಿದರೆ, ಮೂನಿ 37 ಎಸೆತಗಳಲ್ಲಿ 54 ರನ್ ಸಿಡಿಸಿದರು.
5 / 8
ನಾಯಕಿ ಮೆಗ್ ಲ್ಯಾನಿಂಗ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಇವರು 34 ಎಸೆತಗಳಲ್ಲಿ 49 ರನ್ ಚಚ್ಚಿ ಅಜೇಯರಾಗಿ ಉಳಿದರು. ಆಶ್ಲೀಗ್ ಗಾರ್ಡ್ನರ್ ಕೇವಲ 18 ಎಸೆತಗಳಲ್ಲಿ 31 ರನ್ ಕಲೆಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಭಾರತ ಪರ ಶಿಖಾ ಪಾಂಡೆ 2 ವಿಕೆಟ್ ಪಡೆದರು.
6 / 8
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪ್ರಮುಖ ಪಂದ್ಯದಲ್ಲೇ ಶಫಾಲಿ ವರ್ಮಾ (9), ಸ್ಮೃತಿ ಮಂಧಾನ (2) ಹಾಗೂ ಯಸ್ತಿಕಾ ಬಾಟಿಯಾ (4) ಬೇಗನೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಈ ಸಂದರ್ಭ ತಂಡಕ್ಕೆ ಆಸರೆಯಾದ ನಾಯಕಿ ಹರ್ಮನ್ ಹಾಗೂ ಜೆಮಿಮಾ ಗೆಲುವಿಗೆ ಹೋರಾಡಿದರು.
7 / 8
ಜೆಮಿಮಾ 24 ಎಸೆತಗಳಲ್ಲಿ 43 ರನ್ ಗಳಿಸಿದರೆ, ಹರ್ಮನ್ 34 ಎಸೆತಗಳಲ್ಲಿ 54 ರನ್ ಗಳಿಸಿ ರನೌಟ್ಗೆ ಬಲಿಯಾದರು. ಕೌರ್ ಕ್ರೀಸ್ನಲ್ಲಿ ಇರುವ ವರೆಗೆ ಗೆಲುವು ಭಾರತದ ಕಡೆಯೇ ಇತ್ತು. ಆದರೆ, ಇವರ ನಿರ್ಗಮನದ ಬೆನ್ನಲ್ಲೇ ರಿಚ್ಚಾ ಘೊಷ್ (12) ಕೂಡ ಔಟಾಗಿದ್ದು ಮತ್ತಷ್ಟು ಹೊಡೆತ ಬಿದ್ದಿತು.
8 / 8
ಕೊನೆಯ 2 ಓವರ್ಗಳಲ್ಲಿ ಭಾರತದ ಗೆಲುವಿಗೆ 20 ರನ್ಗಳು ಬೇಕಿತ್ತು. ಆದರೆ, ಅನುಭವಿ ಬ್ಯಾಟರ್ಗಳೆಲ್ಲ ಪೆವಿಲಿಯನ್ ಸೇರಿದ್ದರಿಂದ ಗೆಲುವು ಸಾಧ್ಯವಾಗಲಿಲ್ಲ. ದೀಪ್ತಿ ಶರ್ಮಾ ಅಜೇಯ 20 ರನ್ ಕಲೆಹಾಕಿದರೂ ಸಾಕಾಗಲಿಲ್ಲ. ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಸೋಲುಂಡಿತು. ಆಸೀಸ್ 5 ರನ್ಗಳ ರೋಚಕ ಜಯದೊಂದಿಗೆ ಫೈನಲ್ಗೇರಿದೆ.
Published On - 7:08 am, Fri, 24 February 23