ತಮ್ಮ ಸಾಮರ್ಥ್ಯದಿಂದ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ: ಜೆಪಿ ನಡ್ಡಾ

| Updated By: Rakesh Nayak Manchi

Updated on: Nov 14, 2023 | 5:41 PM

ಬಿ.ವೈ.ವಿಜಯೇಂದ್ರ ಅವರು ತಮ್ಮ ಸಾಮರ್ಥ್ಯದಿಂದಾಗಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಪಕ್ಷದ ಆಸ್ತಿ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಅವರ ಕಾರ್ಯನಿರ್ವಹಣೆಯಿಂದ ಬಿಜೆಪಿಗೆ ಲಾಭವಾಗಿದ್ದು, ಪಕ್ಷಕ್ಕೆ ತಾವು ದೊಡ್ಡ ಆಸ್ತಿ ಎಂದು ಸಾಬೀತುಪಡಿಸಿದ್ದಾಗಿ ಹೇಳಿದ್ದಾರೆ.

ತಮ್ಮ ಸಾಮರ್ಥ್ಯದಿಂದ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ: ಜೆಪಿ ನಡ್ಡಾ
ಜೆಪಿ ನಡ್ಡಾ ಮತ್ತು ಬಿವೈ ವಿಜಯೇಂದ್ರ
Follow us on

ನವದೆಹಲಿ, ನ.14: ಬಿ.ವೈ.ವಿಜಯೇಂದ್ರ (B.Y.Vijayendra) ಅವರು ತಮ್ಮ ಸಾಮರ್ಥ್ಯದಿಂದಾಗಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಪಕ್ಷದ ಆಸ್ತಿ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ (J.P. Nadda) ಹೇಳಿದ್ದಾರೆ. ಅವರ ಕಾರ್ಯನಿರ್ವಹಣೆಯಿಂದ ಬಿಜೆಪಿಗೆ ಲಾಭವಾಗಿದ್ದು, ಪಕ್ಷಕ್ಕೆ ತಾವು ದೊಡ್ಡ ಆಸ್ತಿ ಎಂದು ಸಾಬೀತುಪಡಿಸಿದ್ದಾಗಿ ಹೇಳಿದ್ದಾರೆ.

ದೈನಿಕ್ ಜಾಗರಣ್ ಹಿಂದಿ ದಿನಪತ್ರಿಕೆಯ ರಾಜಕೀಯ ಸಂಪಾದಕರಾದ ಅಶುತೋಷ್ ಝಾ ಅವರಿಗೆ ನವೆಂಬರ್ 14 ರಂದು ನೀಡಿದ ಸಂದರ್ಶನದಲ್ಲಿ ಜೆಪಿ ನಡ್ಡಾ ಅವರು ಈ ಹೇಳಿಕೆ ನೀಡಿದ್ದಾರೆ.

ಪ್ರಶ್ನೆ: (ರಾಜ್ಯಾಧ್ಯಕ್ಷರು ಯಾರು ಎಂದು) ಎಲ್ಲರೂ ಬಹುನಿರೀಕ್ಷಿಸುತ್ತಿದ್ದ ಸಮಯದಲ್ಲಿ, ಕರ್ನಾಟಕದಲ್ಲಿ ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ನಿರ್ಧಾರದ ಹಿಂದೆ ಏನು ಸಂದೇಶ ಅಡಗಿದೆ?

ಉತ್ತರ: ವಿಜಯೇಂದ್ರರವರು ತಮ್ಮ ಸಾಮರ್ಥ್ಯದ ಮೂಲಕ ಈ ನಾಯಕತ್ವವನ್ನು ಗಳಿಸಿದ್ದಾರೆ ಎನ್ನುವುದೇ ಅದರ ಮೊದಲ ಸಂದೇಶ. ಪಕ್ಷ ಸಂಘಟನೆಗೆ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದಲ್ಲದೆ, ಅವರ ಕಾರ್ಯನಿರ್ವಹಣೆಯಿಂದ ಬಿಜೆಪಿಗೆ ಲಾಭವಾಗಿದ್ದು, ಪಕ್ಷಕ್ಕೆ ತಾವು ದೊಡ್ಡ ಆಸ್ತಿ ಎಂದು ಅವರು ಸಾಬೀತುಪಡಿಸಿದ್ದಾರೆ. ಯುವ ನಾಯಕರಾಗಿರುವ ವಿಜಯೇಂದ್ರ ಅವರ ನೇಮಕವು, ಬಿಜೆಪಿಯು ಶ್ರಮಶೀಲ ಯುವಶಕ್ತಿಯನ್ನು ಗೌರವಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಇದನ್ನೂ ಓದಿ: ಬಿವೈ ವಿಜಯೇಂದ್ರಗೆ ದಕ್ಕಿದ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ: ಬಸನಗೌಡ ಪಾಟೀಲ್ ಯತ್ನಾಳ್ ಮೌನಕ್ಕೆ ಶರಣು

ಪ್ರಶ್ನೆ: ಈ ನೇಮಕಾತಿಯ ನಂತರ ಕರ್ನಾಟಕದ ಸಂಘಟನೆಯಲ್ಲಿ ದೊಡ್ಡ ಪರಿವರ್ತನೆಯನ್ನು ನಾವು ನಿರೀಕ್ಷಿಸಬಹುದೇ?

ಉತ್ತರ: ನಾವು ಯಾವಾಗಲೂ ಧನಾತ್ಮಕ ಬದಲಾವಣೆ ಮತ್ತು ಸುಧಾರಣೆಯನ್ನು ಪ್ರತಿಪಾದಿಸಿದ್ದೇವೆ. ಈ ನೇಮಕಾತಿಯು ಸಕಾರಾತ್ಮಕ ಬೆಳವಣಿಗೆಗಳನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ ಮತ್ತು ನೀವು ಪಕ್ಷದ ಕರ್ನಾಟಕ ಘಟಕದಲ್ಲಿ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಇದಕ್ಕೆ ಸ್ಥಳೀಯ ನಾಯಕರನ್ನು ಕಡೆಗಣಿಸಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ಜೆಪಿ ನಡ್ಡಾ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಯಿತು.

ಪ್ರಶ್ನೆ: ನಿಮ್ಮ ಅಧ್ಯಕ್ಷ ಅವಧಿಯಲ್ಲಿ ಹಲವು ಚುನಾವಣೆಗಳು ನಡೆದಿವೆ. ಹಲವೆಡೆ ಪಕ್ಷ ಗೆದ್ದಿದೆ. ಕೆಲವೆಡೆ ಸೋತಿದೆ. ಕರ್ನಾಟಕದಲ್ಲಿ ಸ್ಥಳೀಯ ನಾಯಕರನ್ನು ನಿರ್ಲಕ್ಷಿಸುವುದು ಸೋಲಿಗೆ ಕಾರಣವಾಯ್ತಾ ಎಂದು ನಿಮಗೆ ಅನಿಸುತ್ತದೆಯೇ?

ಇದನ್ನೂ ಓದಿ: ಹಿರಿಯ ನಾಯಕರಿಗೆ ಅಸಮಾಧಾನವಿಲ್ಲ, ಎಲ್ಲರನ್ನೂ ಭೇಟಿಯಾಗಿ ಆಶೀರ್ವಾದ ಪಡೆಯುವೆ: ಬಿವೈ ವಿಜಯೇಂದ್ರ, ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ

ಉತ್ತರ: ಈ ಪ್ರಶ್ನೆ ತಪ್ಪಾಗಿದೆ. ನಾವು ಯಾರನ್ನೂ ಕಡೆಗಣಿಸುವುದಿಲ್ಲ. ವಿಷಯವು ತಂತ್ರವಾಗಿದೆ. ಯಾವ ತಂತ್ರವು ಉಪಯುಕ್ತವಾಗಿದೆ ಎಂಬುದನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಾವು ಎಲ್ಲಾ ಪ್ರಮುಖ ನಾಯಕರನ್ನು ಚುನಾವಣಾ ಪ್ರಚಾರದ ಮುಖ್ಯ ಭಾಗವಾಗಿ ಮಾಡುತ್ತೇವೆ. ನಮ್ಮ ರಾಜ್ಯದ ಎಲ್ಲಾ ದೊಡ್ಡ ನಾಯಕರ ಕಾರ್ಯಕ್ರಮಗಳನ್ನು ನೋಡಿ, ಅವರು ಎಲ್ಲೆಂದರಲ್ಲಿ ಹೋಗುತ್ತಿದ್ದಾರೆ, ತಮ್ಮನ್ನು ಮಾತ್ರವಲ್ಲದೆ ಇತರರನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

ಇದೇ ರೀತಿ ಪಂಚರಾಜ್ಯ ಚುನಾವಣೆಗಳ ಬಗ್ಗೆಯೂ ಜೆಪಿ ನಡ್ಡಾ ಅವರನ್ನು ಕೇಳಲಾಯಿತು. ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಪ್ರಧಾನಿ ಮೋದಿಯವರ ಭರವಸೆಗಳ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

ಪ್ರತೀ ಚುನಾವಣೆಯಲ್ಲೂ ಮೋದಿ ಹೆಸರು ಹೇಳಿ ಮತ ಪಡೆಯಲಾಗುತ್ತಿದೆ, ರಾಜ್ಯಗಳಲ್ಲಿ ನಾಯಕತ್ವದ ಕೊರತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೆಪಿ ನಡ್ಡಾ, ಯಾವುದೇ ರಾಜ್ಯದ ಚುನಾವಣೆ ಗೆಲ್ಲುವುದಕ್ಕಷ್ಟೇ ಪ್ರಧಾನಿಯ ವ್ಯಾಪ್ತಿ ಸೀಮಿತವಾಗಿಲ್ಲ. ಪ್ರತಿಯೊಂದು ರಾಜ್ಯದಲ್ಲೂ ಪ್ರಬಲ ನಾಯಕರಿದ್ದಾರೆ. ಅವರು ಜನರ ಬಳಿ ಹೋಗುತ್ತಿದ್ದಾರೆ. ಆದರೆ ಜನರಿಗೆ ಪ್ರಧಾನಿ ಮೇಲೆ ಅಪಾರ ಪ್ರೀತಿ ಇದೆ. ಅಭಿವೃದ್ಧಿ ಆಗುತ್ತೆ ಅಂತ ಮೋದಿಜೀ ಅವರೇ ಜನರಿಗೆ ಹೇಳಿದ್ದಾರೆ, ಇದು ಮೋದಿಯವರ ಗ್ಯಾರಂಟಿ. ಅವರು ನಮ್ಮ ನಾಯಕ ಎಂದಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ