ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಲೆ ಅವರಿಗೆ ವಿಶ್ವಾಸ ಇಲ್ಲ ಅನ್ನಿಸುತ್ತದೆ. ಬೆಂಗಳೂರನ್ನು ಎಟಿಎಂ ಮಾಡಿಕೊಳ್ಳಲು ಇವರೇ ಫೀಲ್ಡಿಗೆ ಇಳಿದಿದ್ದಾರೆ. ಅಮಿತ್ ಶಾ, ಪ್ರಧಾನಿ ಮೋದಿ ಮಾತು ಪಕ್ಕಾ ನಿಜ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಆರ್.ಅಶೋಕ್ (R Ashoka) ಕಿಡಿಕಾರಿದರು. ಸುರ್ಜೇವಾಲ ಸಭೆ ಬಗ್ಗೆ ಗವರ್ನರ್ಗೆ ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲ ಸಭೆ ಮಾಡಿದರೆ ನಮ್ಮ ಸಂಸದರು ಎಲ್ಲಿಗೆ ಹೋಗಬೇಕು? ರಣದೀಪ್ ಸಿಂಗ್ ಸುರ್ಜೇವಾಲ ಯಾವ ಸಚಿವರು ಎಂದು ಪ್ರಶ್ನೆ ಮಾಡಿದ್ದಾರೆ.
ಬಿಬಿಎಂಪಿಯನ್ನು ಕಾಂಗ್ರೆಸ್ ಕಚೇರಿ ಮಾಡಲು ಸಚಿವರು ಹೊರಟಿದ್ದಾರೆ. ರಾಜ್ಯಕ್ಕೆ ಸಂಬಂಧಿಸದ ವ್ಯಕ್ತಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. BBMP ಚುನಾವಣೆ, ವಾರ್ಡ್ ವಿಂಗಡಣೆ ಬಗ್ಗೆ ಸುರ್ಜೇವಾಲ ಚರ್ಚಿಸಿದ್ದಾರೆ.
ಮುಖ್ಯ ಕುರ್ಚಿಯಲ್ಲೇ ಕುಳಿತು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಸುರ್ಜೇವಾಲ ಏನೇ ಹೇಳಿದ್ದಾರೆ ಎಂಬುದಕ್ಕೆ ಪೂರಕ ದಾಖಲೆಗಳಿವೆ. ಸುಮ್ಮನೆ ಅವರು ಬಂದು ಹೋಗೋಕೆ ಏನು ನಾಟಕದ ಕಂಪನಿಯೇ? ಕಾಂಗ್ರೆಸ್ನವರಿಗೆ ಅಧಿಕಾರದ ಮದ ಏರಿದೆ ಎಂದು ತೀವ್ರ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಉಚಿತ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿದ್ದರಾಮಯ್ಯ
ನಾವೇ ಶಾಶ್ವತ ಅಂದುಕೊಂಡಿದ್ದಾರೆ. ನಾಲ್ಕು ದಿನಕ್ಕೆ ಈ ರೀತಿ ಮದ ಬಂದಿದೆ. ಅಧಿಕಾರಿಗಳು ಸುರ್ಜೇವಾಲಾ ಬಂದಾಗ ಎದ್ದು ಹೋಗಬೇಕಿತ್ತು. ಇದರಲ್ಲಿ ಅಧಿಕಾರಿಗಳ ಲೋಪ ಕೂಡ ಇದೆ. ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಅಕ್ಕಿ ಕೊಡಲು ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ನವರಿಗೆ ಮೊದಲು ಜ್ಞಾನ ಇರಲಿಲ್ವಾ. ಇನ್ಮುಂದೆ ಏನೇ ಆದರೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಕೇಂದ್ರದಿಂದ ಅಕ್ಕಿ ಪಡೆಯುತ್ತೇವೆ ಅಂತಾ ಗ್ಯಾರಂಟಿಯಲ್ಲಿ ಬರೆಯಬೇಕಿತ್ತು. ಇನ್ನೊಂದು ವರ್ಷಕ್ಕೆ ರಾಜ್ಯ ದಿವಾಳಿ ಆಗುತ್ತದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಷರತ್ತು: ಅಸಮಾಧಾನ ಹೊರಹಾಕಿದ ಸ್ವಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ
ಈಗಲೇ ಬರೆದಿಟ್ಟುಕೊಳ್ಳಿ, ಎಲ್ಲಾ ದರ ಹೆಚ್ಚಳವಾಗುತ್ತದೆ. ಪೆಟ್ರೋಲ್, ಡೀಸಲ್, ಕುಡಿಯುವ ನೀರು,
ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ ಗ್ಯಾರಂಟಿ. 15-20% ಸ್ಟ್ಯಾಂಪ್ ಡ್ಯೂಟಿ ಏರಿಕೆ ಆಗುತ್ತದೆ. ಇದೆಲ್ಲಾ ಹೆಚ್ಚಾದ ಮೇಲೆ ತರಕಾರಿ, ದವಸ, ಧಾನ್ಯ ಹೆಚ್ಚಳ ಮಾಡುತ್ತಾರೆ. ಈ ಮೂಲಕ 2000 ಕೊಟ್ಟು, ಅದಕ್ಕಿಂತ ಹೆಚ್ಚು ವಸೂಲಿ ಮಾಡುತ್ತಾರೆ.
ಡಿ.ಕೆ. ಶಿವಕುಮಾರ್ ಅವರೊಬ್ಬರಿಗೇ ತಲೆ ಇರುವುದು. ಅವರು ಪಕ್ಕಾ ಬ್ಯುಸಿನೆಸ್ ಮ್ಯಾನ್. ಕೊಟ್ಟಂತೆಯೂ ಆಗಬೇಕು, ಕಿತ್ತುಕೊಂಡಂತೆಯೂ ಆಗಬೇಕು. ಎಣ್ಣೆ ಹೊಡೆಯುವವರು ಈಗಲೇ ಕುಡಿದುಬಿಡಿ. ನಾಳೆ ಅದರ ದರವೂ ಹೆಚ್ಚಳ ಆಗುತ್ತದೆ. ಮೊದಲು ಎಣ್ಣೆ ಹೊಡೆದ ಮೇಲೆ ಕಿಕ್ ಹೊಡೆಯುತ್ತಿತ್ತು. ಇನ್ನು ಬಾಟಲ್ ನೋಡಿದ್ರೆ ಕಿಕ್ ಹೊಡೆಯುತ್ತದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:31 pm, Wed, 14 June 23