ಸೋಲಿನ ಆಘಾತದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

| Updated By: Rakesh Nayak Manchi

Updated on: Aug 08, 2023 | 7:03 PM

ಹೆಚ್​ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಸೇರಿದಂತೆ ಸರ್ಕಾರ ಶಾಸಕರು, ಸಚಿವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಅದರಂತೆ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

ಸೋಲಿನ ಆಘಾತದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು
ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಆಗಸ್ಟ್ 8: ಮಾಜಿ ಸಿ.ಎಂ. ಹೆಚ್​.ಡಿ. ಕುಮಾರಸ್ವಾಮಿ (H. D. Kumaraswamy) ಅವರ ಆರೋಪಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ನೀವು ನನ್ನ ವಿರುದ್ಧ ಮಾಡುತ್ತಿರುವ ವೈಯಕ್ತಿಕ ಮಟ್ಟದ ಆರೋಪಗಳು, ಭಾಷೆ ಗಮನಿಸಿದರೆ ಸೋಲಿನ ಆಘಾತದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ಶೀಘ್ರವಾಗಿ ಗುಣಮುಖರಾಗಿ ಎಂದಷ್ಟೇ ನಾನು ಹಾರೈಸಬಲ್ಲೆ ಎಂದರು.

ನೀವು ಪ್ರಸ್ತಾಪಿಸಿರುವ ಶಾಸಕರ ಪತ್ರದ ನಕಲಿ ಮತ್ತು ಅಸಲಿ ವಿಚಾರದ ಬಗ್ಗೆ ತನಿಖೆ ನಡೆಸಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ತನಿಖೆಯಿಂದ ಹೊರಬೀಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ಪತ್ರ ವೈರಲ್ ಆದ ನಂತರ ಶಾಸಕರು ಇದು ನಕಲಿ ಪತ್ರ ಎಂದು ಹೇಳಿಕೆ ನೀಡುತ್ತಿದ್ದ ಬಗ್ಗೆ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ಟೀಕಿಸಿದ್ದರು.

ನಿಮ್ಮ ಸಚಿವರ ವಿರುದ್ಧ ನಿಮ್ಮ ಕಾಂಗ್ರೆಸ್ ಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ ‘ನಕಲಿರಾಮ’ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ಆ ನಕಲಿ ಪತ್ರ ‘ಅಸಲಿ’ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ನಿಮ್ಮ 18 ನಿಮಿಷದ ವಿಡಿಯೋ ಇದರಲ್ಲಿದೆ: ಪೆನ್​ಡ್ರೈವ್​ ತೋರಿಸಿದ್ದ ಕುಮಾರಸ್ವಾಮಿಗೆ ಎಂ ಲಕ್ಷ್ಮಣ ತಿರುಗೇಟು

ಕುಮಾರಸ್ವಾಮಿ ವಿರುದ್ಧ ವ್ಯಂಗ್ಯ ಪೋಸ್ಟರ್

ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಗೈಯುತ್ತಿರುವ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಸಿಎಂ ಆಫ್ ಕರ್ನಾಟಕ ಎಂಬ ಫೇಸ್​ಬುಕ್ ಖಾತೆಯಲ್ಲಿ ವ್ಯಂಗ್ಯದ ಪೋಸ್ಟ್ ಮಾಡಲಾಗಿದೆ. ಮಗುವಿನ ಚಿತ್ರಕ್ಕೆ ಕುಮಾರಸ್ವಾಮಿ ಫೋಟೋ ಹಾಕಿ ವ್ಯಂಗ್ಯವಾಗಿ ಪೋಸ್ಟ್ ಹಾಕಲಾಗಿದೆ.

ಪೋಸ್ಟ್ ಒಂದರಲ್ಲಿ “ಸಾಂದರ್ಭಿಕ ಶಿಶು ಚೈಲ್ಡ್ ಕುಮಾರ” ಎಂದು ಬರೆಯಲಾಗಿದ್ದು, ಹಿಟ್ ಆ್ಯಂಡ್ ರನ್ ಆರೋಪ ಮಾಡುವುದರಲ್ಲಿ ಕುಮಾರನಿಗೆ ಕುಮಾರನೇ ಸಾಟಿ ಎಂದು ಬರೆಯಲಾಗಿದೆ. “ಚೈಲ್ಡ್ ಕುಮಾರ, ಕೈಗೆ ಸಿಕ್ಕಿದ್ದೆಲ್ಲ ಡಮಾರು” ಎಂಬ ಪೋಸ್ಟ್​ನಲ್ಲಿ, ಸಿಎಂ ಕುರ್ಚಿ ಸಿಗದ ಹತಾಶ ಸಾಂದರ್ಭಿಕ ಶಿಶುವಿನ ಹುರುಳಿಲ್ಲದ ಆರೋಪಗಳಿಗೆ ಕೊನೆಯಿದ್ದಂತೆ ಕಾಣುತ್ತಿಲ್ಲ ಎಂದು ಬರೆಯಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Tue, 8 August 23