ಕೋಲಾರ: ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದು ತಲೆತಲಾಂತರದಿಂದ ಸಾಬೀತಾಗುತ್ತಲೇ ಇದೆ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನ ಕಥೆ ಕೇಳಿದ ನಮಗೆ ಮಾರ್ಕಂಡಪುರದ ಮಹಿಳೆಯರ ಮಾದರಿ ಸ್ಪೂರ್ತಿಯಾಗುತ್ತದೆ.
ಕೋಲಾರದ ಕೆಲವೆಡೆ ಅಂತರ್ಜಲವೇ ಬತ್ತಿಹೋಗಿದೆ. ಮಾರ್ಕಂಡಪುರವೂ ಅಂತದ್ದೇ ಒಂದು ಗ್ರಾಮ. ಗ್ರಾಮದ ಜನರು ಕುಡಿಯಲೂ ನೀರಿಲ್ಲದೆ ಊರು ಬಿಡುವ ಸ್ಥಿತಿಗೆ ತಲುಪಿದ್ದರು. ಕಳೆದ ಎಂಟು ವರ್ಷಗಳಿಂದ ಮಳೆಯನ್ನೇ ಕಾಣದೆ ಕೃಷಿ ಮಾಡುವುದು ಅಸಾಧ್ಯವೆಂಬ ಸ್ಥಿತಿಗೆ ತಲುಪಿತ್ತು. ಗ್ರಾಮಸ್ಥರು ಮಾಡಲು ಏನೂ ತೋಚದೇ ತಲೆ ಮೇಲೆ ಕೈಹೊತ್ತು ಕುಳಿತರು. ಆದರೆ, ಗ್ರಾಮದ ಮಹಿಳೆಯರು ಧೃತಿಗೆಡಲಿಲ್ಲ.
ನೀರಿಲ್ಲದಿದ್ದರೇನು..ಹಾಲು ಬೆಳೆಯಬಹುದಲ್ಲ!?
ಕೃಷಿ ಮಾಡಲಾಗದೇ ದಿಕ್ಕೆಟ್ಟು ಕೂತಿದ್ದ ಪುರುಷರಿಗೆ ಮಹಿಳೆಯರ ಬದುಕು ನಡೆಸುವ ಇನ್ನೊಂದು ಆಯಾಮ ತೋರಿಸಿದರು. ಮಹಿಳೆಯರೇ ಸೇರಿಕೊಂಡು, ಸ್ವಸಹಾಯ ಗುಂಪು ನಿರ್ಮಿಸಿದರು. ಮನೆಯ ಜಾನುವಾರಿಗೆ ಕೈಮುಗಿದು ಹೈನುಗಾರಿಕೆ ಪ್ರಾರಂಭಿಸಿದರು.
ಅಂದು 50 ಲೀಟರ್ ಹಾಲಿನಿಂದ ಆರಂಭವಾದ ಸಂಘ ಇಂದು 500 ಲೀ ಹಾಲು ಉತ್ಪಾದನೆ ಮಾಡುತ್ತಿದೆ. ನಿರಂತರ ಶ್ರಮ ಮತ್ತು ಆಸಕ್ತಿಗೆ ಜಿಲ್ಲೆಯೇ ಮಾರ್ಕಂಡಪುರದತ್ತ ತಿರುಗಿನೋಡುತ್ತಿದೆ. ಮಹಿಳೆಯರೇ ನಡೆಸುತ್ತಿರುವ ಸಹಕಾರಿ ಸಂಘ ಇತರ ಗ್ರಾಮಗಳಿಗೂ ಮಾದರಿಯಾಗಿದೆ.
ಇಲ್ಲಿ ಮಹಿಳೆಯರೇ ಬಾಸ್
ಹಸು ಮೇಯಿಸಿ, ಹಾಲು ಕರೆದು, ಪೇಟೆಯಿಂದ ದನಕರುಗಳಿಗೆ ಮೇವು ತರುವುದರಿಂದ ಹಿಡಿದು ಡೈರಿಗೆ ಹಾಲು ಹಾಕಿ, ತಿಂಗಳಿಗೆ ಸಂಬಳ ಎಣಿಸುವವರೆಗೂ ಎಲ್ಲಾ ಕೆಲಸಗಳನ್ನೂ ಮಹಿಳೆಯರೇ ನಿರ್ವಹಿಸುತ್ತಾರೆ. ಸಂಘದ ಮೂಲಕ ಬಡ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನ ಕಲ್ಪಿಸಿ, ಆರ್ಥಿಕವಾಗಿ ಸಬಲರಾಗುವಂತೆ ಮಾಡಲಾಗಿದೆ.
ಇಡೀ ಕುಟುಂಬವನ್ನು ಪೋಷಿಸಬಲ್ಲ ಶಕ್ತಿ ಮಹಿಳೆಗಿದೆ ಎಂಬುದಕ್ಕೆ ತಾಜಾ ನಿದರ್ಶನವಾಗಿ ಮಾರ್ಕಂಡಪುರದ ಮಹಿಳೆಯರು ನಮ್ಮೆದುರಿಗಿದ್ದಾರೆ. ಇತರ ಗ್ರಾಮಗಳ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.
-ರಾಜೇಂದ್ರ ಸಿಂಹ