ಗುಡಿಹಳ್ಳಿ ನಾಗರಾಜ ಬರಹ | ರಂಗಸಂಗೀತದ ಮೇರು ಪರಮಶಿವನ್​ಗೆ ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 01, 2021 | 3:48 PM

ರಂಗ ಸಂಗೀತದ ದಿಗ್ಗಜ ಆರ್.ಪರಮಶಿವಯ್ಯ ಸಂಪೂರ್ಣ ಬದುಕು ನಡೆಸಿ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಅವರ ಹಾರ್ಮೋನಿಯಂ ಗಾಯನ ಸದಾಕಾಲ ರಂಗಾಸಕ್ತರ ಹೃದಯದಲ್ಲಿರುತ್ತದೆ. ಅವರ ಕಲಾ ಜೀವನದ ಯಾತ್ರೆಯನ್ನು ಹಿರಿಯ ರಂಗಕರ್ಮಿ ಗುಡಿಹಳ್ಳಿ ನಾಗರಾಜ ಅವರು ವಿವರಿಸಿದ್ದಾರೆ.

ಗುಡಿಹಳ್ಳಿ ನಾಗರಾಜ ಬರಹ | ರಂಗಸಂಗೀತದ ಮೇರು ಪರಮಶಿವನ್​ಗೆ ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲ
ಮುಂಬೈ ಕರ್ನಾಟಕ ಸಂಘದಲ್ಲಿ ಮಾತನಾಡುತ್ತಿರುವ ಆರ್.ಪರಮಶಿವನ್
Follow us on

‘ರಂಗಸಂಗೀತ’ ವೃತ್ತಿ ರಂಗಭೂಮಿಯ ಅಂತರ್ಜಲ. ಅಷ್ಟೇ ಅಲ್ಲ, ರಂಗಭೂಮಿಯ ಪಾಲಿಗೆ ಸದಾ ಝುಳುಝುಳು ಹರಿಯುವ ಜೀವನದಿ. ನಾಟಕಗಳ ಜೀವಸೆಲೆ. ಆ ನದಿಗುಂಟ ದೀರ್ಘನಡಿಗೆ ಹಾಕಿದ ಆರ್. ಪರಮಶಿವನ್ ಅವರಿ​ಗೆ ಅದರ ಬಾಗು-ಬಳಕು ಚೆನ್ನಾಗಿ ಗೊತ್ತಿತ್ತು. ಪರಮಶಿವನ್ ಹಾರ್ಮೋನಿಯಂ ಪರಿಣಿತರು, ಪಿಟೀಲು ನಿಷ್ಣಾತರು, ವೀಣೆಯ ವಿದ್ವಾಂಸರು, ಸಾರಂಗಿ ಒಲಿಸಿಕೊಂಡಿದ್ದವರು. ಹತ್ತಾರು ವಾದ್ಯಗಳಲ್ಲಿ ಪಡೆದ ವಿದ್ವತ್ತನ್ನು ರಂಗಗೀತೆಗಳ ಉನ್ನತಿಗೆ ಬಳಸಿದರು. ಜತೆಗೆ ಉತ್ತಮ ಹಾಡುಗಾರರೂ ಆಗಿದ್ದರು.

ಇದರ ಜೊತೆಜೊತೆಗೆ ರಂಗಗೀತೆಗಳ ಕುರಿತ ಅವರ ಸ್ಮರಣಶಕ್ತಿಯದು ಮತ್ತೊಂದು ತೂಕ. ಹಳೇ ಮೈಸೂರು ಭಾಗದ ರಂಗಗೀತೆಗಳ ರಾಗ ಸಂಯೋಜನೆ ಅವರ ಬೆರಳ ತುದಿಯಲ್ಲಿದ್ದರೆ; ಹಾಡಿನ ಸಾಹಿತ್ಯ ನಾಲಿಗೆ ಮೇಲಿತ್ತು. ಪರಮಶಿವನ್ ಮತ್ತು ಹಿರಿಯ ದಿಗ್ಗಜರಿಂದ ಕೇಳಿ ಪಡೆದ ಹಾಗೂ ಲಿಖಿತ ರೂಪದಲ್ಲಿ ದೊರೆತ 1240 ಹಾಡುಗಳನ್ನು ಪೌರಾಣಿಕ ನಾಟಕಗಳ ಪರಿಚಾರಕ ಎಚ್.ಎಸ್.ಗೋವಿಂದೇಗೌಡರು ಸಂಗ್ರಹಿಸಿ ಸ್ವರ ಪ್ರಸ್ತಾರದೊಂದಿಗೆ ಹೊರತಂದಿದ್ದಾರೆ. ಸಾವಿರಕ್ಕೂ ಮಿಕ್ಕಿದ ಹಳೆಯ ರಂಗಗೀತೆಗಳ ಸಿಡಿಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅರ್ಧದಷ್ಟು ಹಾಡುಗಳನ್ನು ಆರ್. ಪರಮಶಿವನ್ ಅವರೇ ಹಾಡಿದ್ದರು.

ಮೈಸೂರಿನ ಕೃಷ್ಣಮೂರ್ತಿ-ರುಕ್ಮಿಣಮ್ಮ ದಂಪತಿಯ ಪುತ್ರರಾಗಿ 1931ರಲ್ಲಿ ಜನಿಸಿದ ಪರಮಶಿವನ್ ಇಳಿವಯಸ್ಸಿನಲ್ಲೂ ಕ್ರಿಯಾಶೀಲವಾಗಿದ್ದರು. ಪರಮಶಿವನ್ ಅವರ ಅಕ್ಕ ಆರ್.ನಾಗರತ್ನಮ್ಮ ಮತ್ತು ತಂಗಿ ಆರ್. ಮಂಜುಳಾ ಸ್ತ್ರೀ ನಾಟಕ ಮಂಡಳಿಯಲ್ಲಿದ್ದ ಹೆಸರಾಂತ ನಟಿಯರು. ಎಂಟು ವರ್ಷದ ಬಾಲಕರಿದ್ದಾಗಲೇ ಎಂ.ಜಿ.ಮರಿರಾವ್ ಕಂಪನಿಯನ್ನು ಪರಮಶಿವನ್ ಸೇರಿದರು. ಕೆ. ಹಿರಣ್ಣಯ್ಯ ಮಿತ್ರಮಂಡಳಿ, ಚಾಮುಂಡೇಶ್ವರಿ ಕಂಪನಿ, ಸ್ತ್ರೀ ನಾಟಕ ಮಂಡಳಿಗಳಲ್ಲಿ ಹಾರ್ಮೋನಿಯಂ ಪರಮಶಿವನ್ ಎಂದೇ ಹೆಸರುವಾಸಿಯಾಗಿದ್ದರು. ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿ ಮುತ್ತುರಾಜ್​ಗೆ (ಡಾ.ರಾಜ್​ಕುಮಾರ್) ಆಂಜನೇಯ ಪಾತ್ರ ನಿರ್ವಹಿಸಲು ರಂಗಗೀತೆಗಳನ್ನು ಆರ್.ಪರಮಶಿವನ್ ಅವರೇ ಹೇಳಿಕೊಟ್ಟಿದ್ದರು.

ಆರ್. ಪರಮಶಿವನ್​ ಅವರ ಜೀವನ ಚರಿತ್ರೆ ಬರೆಯುವ ಜವಾಬ್ದಾರಿಯನ್ನು ಕರ್ನಾಟಕ ನಾಟಕ ಅಕಾಡೆಮಿ ನನಗೆ ವಹಿಸಿತ್ತು. ಇದೇ ಕಾರ್ಯಕ್ಕಾಗಿ ಕೆಲವು ದಿನ ಅವರ ಜೊತೆ ಕುಳಿತರೂ ಕೊನೆಗೂ ಆ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಾಟಕ ರಂಗಕ್ಕೆ ಕೊಡಲು ಸಾಧ್ಯವಾದ ಎಲ್ಲವನ್ನೂ ಕೊಟ್ಟಿದ್ದ ಆರ್. ಪರಮಶಿವನ್​ಗೆ ಇನ್ನಷ್ಟು ಮನ್ನಣೆ ದೊರೆಯಬೇಕಿತ್ತು. ಆದರೆ ಈ ಕುರಿತು ಅವರಿಗೆ ಕಿಂಚಿತ್ ಬೇಸರವೂ ಇರಲಿಲ್ಲ. ಸಂಪೂರ್ಣ ಜೀವನ ನಡೆಸಿದ ಆರ್.ಪರಮಶಿವನ್​ ಸಾವಿನಿಂದ ನಮ್ಮ ನಾಟಕ ರಂಗದ ಹಳೆಯ ಮತ್ತು ಅತ್ಯಂತ ಪ್ರಮುಖ ಕೊಂಡಿಯೊಂದು ಕಳಚಿದೆ.

ಗುಡಿಹಳ್ಳಿ ನಾಗರಾಜ

ಲೇಖಕರ ಪರಿಚಯ: ಆರ್.  ಪರಮಶಿವಯ್ಯ ಅವರ ಜತೆ 30 ವರ್ಷಗಳ ಆಪ್ತ ಒಡನಾಟ ಹೊಂದಿದ್ದ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ, ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಆಳವಾದ ಅಧ್ಯಯನ ಮಾಡಿದ್ದಾರೆ.

ರಂಗ ಸಂಗೀತದ ಮೇರು ಪ್ರತಿಭೆ ‘ಹಾರ್ಮೋನಿಯಂ’ ಆರ್‌.ಪರಮಶಿವನ್ ನಿಧನ

Published On - 3:47 pm, Fri, 1 January 21